ಬೀದರ: ರಾಷ್ಟ್ರೀಯ ಪಲ್ಸ್ ಪೋಲಿಯೋ-2020 ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲ ಮಕ್ಕಳಿಗೂ ಲಸಿಕೆ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಞಾನೇಂದ್ರಕುಮಾರ ಗಂಗವಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ 2020 ಕಾರ್ಯಕ್ರಮದ ಜಿಲ್ಲಾ ಸಂಚಾಲನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಜೆಸ್ಕಾಂ, ಸಾರಿಗೆ ಇಲಾಖೆ ಹಾಗೂ ನಗರಸಭೆಯ ಅಧಿಕಾರಿಗಳು ಅಗತ್ಯ ಸಹಕಾರ ನೀಡಿ ನೂರು ಪ್ರತಿಶತ ಪ್ರಗತಿ ಸಾಧಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬೂತ್ ಹಾಗೂ ಮನೆ ಮನೆ ಭೇಟಿ ನೀಡುವ ಮೂಲಕ ಲಸಿಕಾಕರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಶಿಕ್ಷಣ ಇಲಾಖೆಯವರು ಮಕ್ಕಳನ್ನು ಬೂತ್‌ಗೆ ಕರೆತರಲು ಹಾಗೂ ಲಸಿಕಾಕರಣದ ಮುನ್ನಾದಿನ ಹಾಗೂ ಲಸಿಕಾಕರಣದ ದಿನ ಜಾಥಾ ಮೂಲಕ ಪ್ರಚಾರಾಂದೋಲನ ನಡೆಸಬೇಕು. ಮಾಧ್ಯಮಗಳ ಮೂಲಕವೂ ಕಾರ್ಯಕ್ರಮದ ಬಗ್ಗೆ ಪ್ರಚಾರ ನೀಡಬೇಕು. ಗ್ರಾಮ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮೈಕ್‌ಗಳ ಮೂಲಕ ಲಸಿಕಾ ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದು ತಿಳಿಸಿದರು.
ಕಲಬುರಗಿ ಸರ್ವೇಕ್ಷಣಾ ವೈದ್ಯಾಧಿಕಾರಿ ಡಾ|ಅನೀಲಕುಮಾರ ತಾಳಿಕೋಟೆ ಮಾತನಾಡಿ, ಭಾರತವು ಈಗಾಗಲೇ ಪೊಲಿಯೋ ಮುಕ್ತ ದೇಶವಾಗಿದ್ದರೂ ಪಕ್ಕದ ಪಾಕಿಸ್ತಾನ, ಅಪಘಾನಿಸ್ತಾನ ದೇಶಗಳು ಪೋಲಿಯೋ ಬಾ ಧಿತ ಪ್ರದೇಶಗಳಾಗಿದ್ದು, ಅಲ್ಲಿಂದ ವೈರಸ್ ಬರುವ ಸಾಧ್ಯತೆಗಳಿರುವುದರಿಂದ ನಮ್ಮಲ್ಲಿ ಇಂದಿಗೂ ಪೊಲಿಯೋ ಕಾರ್ಯಕ್ರಮ ಚಾಲ್ತಿಯಲ್ಲಿದೆ ಎಂದು ಹೇಳಿದರು.
ಸಭೆಯಲ್ಲಿ ಪಲ್ಸ್ ಪೊಲಿಯೋ ಲಸಿಕಾ ಕಾರ್ಯಕ್ರಮದ ಪ್ರಚಾರ ಸಾಮಾಗ್ರಿಗಳಾದ ಭಿತ್ತಿಪತ್ರ ಹಾಗೂ ಬ್ಯಾನರ್‌ಗಳನ್ನು ಬಿಡುಗಡೆ ಮಾಡಲಾಯಿತು. ಡಿಎಚ್‌ಒ ಡಾ|ವಿ.ಜಿ.ರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ರತಿಕಾಂತ ಸ್ವಾಮಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ರವೀಂದ್ರ ಸಿರ್ಸಗಿ, ಜಿಲ್ಲಾ ಸರ್ವೇಕ್ಸಣಾಧಿಕಾರಿ ಡಾ| ಕೃಷ್ಣಾ ರೆಡ್ಡಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ| ಇಂದುಮತಿ ಪಾಟೀಲ, ಜಿಲ್ಲಾ ಕ್ಷಯರೋಗ ನಿಯಂತ್ರಣಾ ಧಿಕಾರಿ ಡಾ| ದೀಪಾ ಖಂಡ್ರೆ, ಜಿಲ್ಲಾ ಕುಷ್ಠರೋಗ ನಿಯಂತ್ರಣಾ ಧಿಕಾರಿ ಡಾ| ರಾಜಶೇಖರ ಪಾಟೀಲ, ಜಿಲ್ಲಾ ಆರೋಗ್ಯ ಶಿಕ್ಷಣಾ ಧಿಕಾರಿ ಸಂಗಪ್ಪ ಕಾಂಬಳೆ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿ ಕಾರಿ ಶ್ರಾವಣ ಜಾಧವ, ಶಿವಶಂಕರ ಬೆಳಮಗಿ, ಜಿಲ್ಲಾ ಲಸಿಕಾಕರಣ ಮೇಲ್ವಿಚಾರಕರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.