ಬೀದರ: ಲಾಕ್ ಡೌನ್ ಕಟ್ಟುನಿಟ್ಟು ಜಾರಿ ಸೇರಿದಂತೆ ಜಿಲ್ಲಾಡಳಿತವು ಎಲ್ಲ ಕ್ರಮಗಳನ್ನು ಇನ್ನಷ್ಟು ಚುರುಕುಗೊಳಿಸುವುದರಿಂದ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣ ಸಾಧ್ಯ ಎನ್ನುವ ಪ್ರಮುಖ ಸಲಹೆಯನ್ನು ಜಿಲ್ಲೆಯ ಶಾಸಕರು ನೀಡಿದ್ದಾರೆ.
ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಶಾಸಕರು ಸಲಹೆ ನೀಡಿದರು. ನಮ್ಮನ್ನು ಅಪಾಯದಿಂದ ಪಾರು ಮಾಡಬಲ್ಲ ಗುಣಮಟ್ಟದ ಮಾಸ್ಕ್ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಬೇಕು. ಲಾಕ್‌ಡೌನ್ ಬಿಗಿಗೊಳಿಸಿದಾಗಲೇ ನಾವು ಕೋವಿಡ್-19 ಸಂಕಟದಿಂದ ಪಾರಾಗಬಹುದು ಎಂಬುದಕ್ಕೆ ಎಲ್ಲ ಶಾಸಕರು ಧ್ವನಿಗೂಡಿಸಿದರು.
ಸೋಂಕಿತರಿಗೆ ಚಿಕಿತ್ಸೆ ನೀಡುವ ಮತ್ತು ಶಂಕಿತರನ್ನು ಪತ್ತೆ ಹಚ್ಚುವ ವೈದ್ಯರು ಮತ್ತು ಸಿಬ್ಬಂದಿಗೆ ಅಗತ್ಯ ವೈದ್ಯಕೀಯ ಸೌಕರ್ಯ ಕಲ್ಪಿಸಬೇಕು. ಅವರ ಸುರಕ್ಷತೆಗೆ ಒತ್ತು ಕೊಡಬೇಕು. ಲಾಕ್‌ಡೌನ್ ಆದೇಶ ಪಾಲನೆಯಿಂದ ಬಳಲುತ್ತಿರುವ ಜಿಲ್ಲೆಯಲ್ಲಿನ ನಿರಾಶ್ರಿತರು, ಕಡು ಬಡವರಿಗೆ ಆಹಾರ ಧಾನ್ಯ ಪೂರೈಸುವುದಕ್ಕೆ ಜಿಲ್ಲಾಡಳಿತ ಮೊದಲಾದ್ಯತೆ ನೀಡಬೇಕು ಎಂದು ಶಾಸಕರು ಸಲಹೆ ಮಾಡಿದರು.
ಮನೆಯೊಳಗಿರುವುದೊಂದೇ ಕೋವಿಡ್ ಕಾಯಿಲೆಗಿರುವ ಮದ್ದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿರುವ ಆಶಾ ಕಾರ್ಯಕರ್ತೆಯರು, ಆಸ್ಪತ್ರೆಯಲ್ಲಿ ರೋಗಿಗಳ ಜೊತೆಗಿರುವ ವೈದ್ಯರು-ಸಿಬ್ಬಂದಿ, ಲಾಕ್ ಡೌನ್ ಪಾಲನೆಯಲ್ಲಿ ತೊಡಗಿರುವ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ನಿತ್ಯವೂ ಮನೆ ಹೊರಗಿದ್ದು, ಜನ ಸೇವೆಯಲ್ಲಿದ್ದಾರೆ. ಇವರಿಗೆ ಗುಣಮಟ್ಟದ ಮಾಸ್ಕ್ಗಳು ಸಿಕ್ಕಿವೆಯೇ? ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರತ ಸಿಬ್ಬಂದಿಗೆ ವೈದ್ಯಕೀಯ ಉಪಕರಣ ಮತ್ತು ಊಟ, ನೀರು ಇನ್ನಿತರ ಆಹಾರ ಸಿಗತ್ತಿದೆಯೇ? ಎಂದು ಸಾರ್ವಜನಿಕರು ನಮ್ಮನ್ನು ಕೇಳುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಇಲ್ಲಿವರೆಗೆ ಏನೇನು ಕ್ರಮವಹಿಸಿದೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕು ಎಂದು ಶಾಸಕರು ಕೇಳಿದರು.
ಕೊರೊನಾ ನಿಯಂತ್ರಣ ಮತ್ತು ಅದು ಹರಡದಂತೆ ತೆಗೆದುಕೊಳ್ಳಬೇಕಾದ ಎಲ್ಲ ಕ್ರಮಗಳನ್ನು ಜಿಲ್ಲಾಡಳಿತ ಅಚ್ಚುಕಟ್ಟಾಗಿ ತೆಗೆದುಕೊಂಡಿದೆ. ನಿತ್ಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗುತ್ತದೆ. ಮಾಸ್ಕ್ಗಳು, ಸ್ಯಾನಿಟೈಸರ್, ಇನ್ನಿತರ ಅಗತ್ಯ ವೈದ್ಯಕೀಯ ಕಿಟ್‌ಗಳು ಈಗ ಲಭ್ಯವಿವೆ. ಆರೋಗ್ಯ ಅಧಿಕಾರಿಗಳು, ಬ್ರಿಮ್ಸ್ ನಿರ್ದೇಶಕರ ಜತೆಯೂ ಸಭೆ ನಡೆಸಿ ವೈದ್ಯಕೀಯ ಸೌಕರ್ಯಗಳ ಲಭ್ಯತೆ ಮತ್ತು ಕೊರತೆ ಮಾಹಿತಿ ಪಡೆದು, ಅಗತ್ಯ ಇರುವುದನ್ನು ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ. ಚೆಕ್‌ಪೋಸ್ಟ್ ಸೇರಿದಂತೆ ಎಲ್ಲ ಕಡೆಗೆ ಅಗತ್ಯ ಸೌಕರ್ಯ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಹಲವಾರು ಬಾರಿ ನಿರ್ದೇಶನ ನೀಡಲಾಗಿದೆ ಎಂದು ಡಿಸಿ ಡಾ| ಮಹಾದೇವ ಪ್ರತಿಕ್ರಿಯಿಸಿದರು.
ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಸಂಸದ ಭಗವಂತ ಖೂಬಾ, ಶಾಸಕರಾದ ರಾಜಶೇಖರ ಪಾಟೀಲ, ಈಶ್ವರ ಖಂಡ್ರೆ, ಬಂಡೆಪ್ಪ ಖಾಶೆಂಪುರ, ರಹೀಂ ಖಾನ್, ಬಿ. ನಾರಾಯಣರಾವ್, ರಘುನಾಥ ಮಲ್ಕಾಪುರೆ, ವಿಜಯಸಿಂಗ್, ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ, ಸಿಇಒ ಗ್ಯಾನೇಂದ್ರಕುಮಾರ, ಎಸ್‌ಪಿ ಡಿ.ಎಲ್. ನಾಗೇಶ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.