ಬೀದರ: ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಎನ್‌ಜಿಒ (ಸರ್ಕಾರೇತರ ಸೇವಾ ಸಂಸ್ಥೆಗಳು)ಗಳ ಸಭೆ ನಡೆಯಿತು.
ಇನ್‌ಫಾರ್ಮೇಶನ್ ಸೆಂಟರ್ (ಎನ್‌ಐಸಿ) ನಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದ 75ಕ್ಕೂ ಹೆಚ್ಚು ಎನ್ ಜಿಒಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಜಿಲ್ಲೆಯಲ್ಲಿ ಕೋವಿಡ್-19 ಕೊರೊನಾ ವೈರಾಣು ನಿಗ್ರಹಕ್ಕೆ ತಾವು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು, ಜಿಲ್ಲಾಡಳಿತಕ್ಕೂ ಸಂಪೂರ್ಣ ಸಹಕಾರ ನೀಡುವುದಾಗಿ ಬಹುತೇಕ ಎಲ್ಲ ಎನ್ ಜಿಒಗಳ ಪ್ರಮುಖರು ತಿಳಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಎಲ್ಲ ತಾಲೂಕುಗಳಲ್ಲಿ ತಹಶೀಲ್ದಾರ್ ಮತ್ತು ಎನ್‌ಜಿಒ ಒಳಗೊಂಡು ಸಮಿತಿ ರಚಿಸಿ ಆಯಾ ಎನ್‌ಜಿಒಗಳ ಕಾರ್ಯಕ್ಷಮತೆ ಪರಿಶೀಲಿಸಿ ಕೋವಿಡ್-19 ಕೋವಿಡ್ ಹರಡುವಿಕೆ ತಡೆಗೆ ರೂಪಿಸುವ ಕಾರ್ಯಕ್ರಮಗಳಿಗೆ ತಮ್ಮ ಸಹಕಾರ ಪಡೆದುಕೊಳ್ಳಲಾಗುವುದು ಎಂದು ಹೇಳಿದರು.
ಕೋವಿಡ್ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಸ್ವಯಂ ಪ್ರೇರಿತವಾಗಿ ಕೆಲಸ ಮಾಡುತ್ತಿರುವ ಬೀದರ ಜಿಲ್ಲೆಯ ಎಲ್ಲ ಎನ್‌ಜಿಓಗಳಿಗೆ ಜಿಲ್ಲಾಡಳಿತದಿಂದ ಅಭಿನಂದನೆ ತಿಳಿಸಿದರು. ಪೊಲೀಸ್ ಇಲಾಖೆ ಸಹಕಾರದೊಂದಿಗೆ ಕೆಲಸ ಮಾಡಲು ಮುಂದೆ ಬರುವ ಎನ್‌ಜಿಒಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಇದೆ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ ಹೇಳಿದರು.
ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತ ಅಕ್ಷಯ ಶ್ರೀಧರ ಹಾಗೂ ಜಿಲ್ಲೆಯ ವಿವಿಧ ಎನ್‌ಜಿಒಗಳ ಮುಖ್ಯಸ್ಥರು ಇದ್ದರು.