Advertisement

ದೊಡ್ದಾಟದ ಹುಲಿಗೆ ರಂಗ ಪ್ರಶಸಿ

12:13 PM Jan 06, 2020 | Team Udayavani |

ಬೀದರ: ವೃತ್ತಿಯಲ್ಲಿ ಕೃಷಿಕ- ಶಿಕ್ಷಕರಾಗಿ ಬದುಕಿನುದ್ದಕ್ಕೂ ರಂಗ ಕಲೆಯನ್ನು ಪ್ರವೃತ್ತಿಯನ್ನಾಗಿ ಮೈಗೂಡಿಸಿಕೊಂಡಿರುವ ಜಿಲ್ಲೆಯ ಹಿರಿಯ ಜೀವಿ ಗುರುನಾಥ ಕೋಟೆ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ರಂಗ ಪ್ರಶಸ್ತಿ ಸಂದಿದೆ.

Advertisement

ದೊಡ್ಡಾಟದ “ಹುಲಿ’ ಎಂದೇ ಗುರುತಿಸಿಕೊಂಡಿರುವ ಕೋಟೆ, ಇಳಿ ವಯಸ್ಸಿನಲ್ಲೂ ದೊಡ್ಡಾಟ ಆಡಿಸುವ ಆಕಾಂಕ್ಷೆ ಹೊಂದಿದ್ದಾರೆ. ಔರಾದ ತಾಲೂಕಿನ ಜೀರ್ಗಾ(ಬಿ) ಗ್ರಾಮದ ಗುರುನಾಥ ಕೋಟೆ ದೊಡ್ಡಾಟದ ರಂಗ ಕಲೆ ಮೂಲಕ ಗ್ರಾಮದ ಖ್ಯಾತಿಯನ್ನು ರಾಜ್ಯಕ್ಕೆ ಬಿತ್ತರಿಸಿದ್ದಾರೆ. 16 ವರ್ಷದ ಬಾಲಕನಾಗಿದ್ದಾಗಲೇ ಕಲೆಯ ಅಭಿರುಚಿ ಬೆಳೆಸಿಕೊಂಡು ಬಂದಿರುವ ಕೋಟೆ, ಹಲವು ದಶಕಗಳಿಂದ ದೊಡ್ಡಾಟ ಆಡುತ್ತಾ, ತಂಡಗಳಿಗೆ ಆಡಿಸುತ್ತ ರಂಗಭೂಮಿಯನ್ನೇ ತಮ್ಮ ಉಸಿರಾಗಿಸಿಕೊಂಡಿದ್ದಾರೆ. 86 ವರ್ಷದ ಹಿರಿಯ ಜೀವಿಗೆ ಕಲೆ ಆಸಕ್ತಿ ಮಾತ್ರ ಕಡಿಮೆಯಾಗಿಲ್ಲ ಎಂಬುದು ವಿಶೇಷ.

ವೃತ್ತಿಯಿಂದ ರೈತರಾಗಿರುವ ಗುರುನಾಥ ಶಿಕ್ಷಕರಾಗಿಯೂ ಕೆಲಸ ಮಾಡಿದ್ದಾರೆ. ನಂತರ ಅವರನ್ನು ಸೆಳೆದದ್ದು ದೊಡ್ಡಾಟ. ಗ್ರಾಮದಲ್ಲಿ ನಡೆಯುತ್ತಿದ್ದ ದೊಡ್ಡಾಟ ವೀಕ್ಷಣೆಯಿಂದ ಆಸಕ್ತಿ ಬೆಳೆಸಿಕೊಂಡ ಅವರು, ನಂತರ ತಾವೇ ನಾಟಕಗಳಲ್ಲಿ ಅಭಿನಯಿಸುತ್ತ ಬಂದು, ತದನಂತರ ತಾವೇ ಆಡಿಸುತ್ತಾ (ನಿರ್ದೇಶನ) ಕಲೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ರಂಗ ಪ್ರಯೋಗಕ್ಕಾಗಿ ತಮ್ಮೂರಲ್ಲಿ ಹಿಂದೆ ದೊಡ್ಡಾಟದ ಒಂದು ಪಡೆಯನ್ನೂ ತಯಾರಿಸಿರುವುದು ವಿಶೇಷ.

“ಗಿರಿಜಾ ಕಲ್ಯಾಣ’ ಸವಾಲು: ದೊಡ್ಡಾಟದಲ್ಲಿ “ಗಿರಿಜಾ ಕಲ್ಯಾಣ’ ಪ್ರಯೋಗಕ್ಕೆ ಹೆಚ್ಚು ಒಲವು ಹೊಂದಿದ್ದಾರೆ. ದಕ್ಷಬ್ರಹ್ಮ, ಶಂಭುಕಾಸುರ ಮತ್ತು ದೈತ್ಯ ಎಂಬ ಮೂರು ದೊಡ್ಡಾಟಗಳನ್ನು ಆಡಿಸುವುದರಲ್ಲಿ ಪರಿಣತಿ ಹೊಂದಿದ್ದಾರೆ. ಅನ್ಯಾಯ, ದೌರ್ಜನ್ಯದ ಪ್ರತೀಕವಾಗಿರುವ ಅಸುರನನ್ನು ಸಂಹರಿಸುವ ಮೂಲಕ ಸತ್ಯ, ನ್ಯಾಯಕ್ಕೆ ಅಂತಿಮ ಜಯ ಎಂಬುದು ಈ ನಾಟಕದ ಕಥಾ ಹಂದರ. ಈ ದೊಡ್ಡಾಟ ಆಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇದಕ್ಕಾಗಿ ಸುಮಾರು 25 ಕಲಾವಿದರ ತಂಡ, ಏಳೆಂಟು ತಿಂಗಳ
ಸಿದ್ಧತೆ ಬೇಕು. ಸಂಭಾಷಣೆಗಳನ್ನು ಹೇಳಲು ಗಟ್ಟಿ ಧ್ವನಿ ಇರಬೇಕು. ಅಷ್ಟು ದಿನ ಕಾಲ ಧ್ವನಿ ಕೆಡದಂತೆ ಎಣ್ಣೆ ಮತ್ತಿರ ಆಹಾರ ಸೇವನೆ ಬಿಡಬೇಕಾಗುತ್ತದೆ.

ಯಕ್ಷಗಾನದ ಪ್ರತಿರೂಪದಂತಿರುವ ದೊಡ್ಡಾಟ ಇಂದು ಸಾಗರದಾಚೆ ತನ್ನ
ಪ್ರಯೋಗಗಳನ್ನು ಮಾಡಬೇಕಿತ್ತು. ಆದರೆ, ಪ್ರೋತ್ಸಾಹದ ಕೊರತೆಯಿಂದ ಕಲೆ ಸಂಪೂರ್ಣ ನಶಿಸಿ ಹೋಗಿದೆ. ದೊಡ್ಡಾಟ ಆಡಿಸುವವರು, ಆಡುವವರು ಇಲ್ಲ. ಹಿಂದೆ ತಂಡಗಳನ್ನು ಕಟ್ಟಿ ಗ್ರಾಮಗಳಲ್ಲಿ, ಜಿಲ್ಲಾ ಕೇಂದ್ರ ಬೀದರನಲ್ಲಿ ಪ್ರಯೋಗ ಮಾಡಿದ್ದೇನೆ. ಕಲೆಯನ್ನು ಜೀವಂತವಾಗಿಡಲು ಸರ್ಕಾರ, ಅಕಾಡೆಮಿಗಳ ಮುಂದೆ ಸಾಕಷ್ಟು ಕಾಡಿಬೇಡಿದ್ದರೂ ಫಲ ಸಿಗಲಿಲ್ಲ. ದೊಡ್ಡಾಟ ಆಡಿಸಲು ಆಸಕ್ತಿವುಳ್ಳವರಿಗೆ ತರಬೇತಿ ನೀಡಲು ನಾನು ಸಿದ್ಧನಿದ್ದರೂ ಯಾರೂ ಸಹ ಮುಂದೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗುರುನಾಥ ಕೋಟೆ.

Advertisement

2006ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿಗೆ
ಭಾಜನರಾಗಿರುವ ಗುರುನಾಥ ಅವರಿಗೆ ಹಲವು ಪ್ರಶಸ್ತಿ, ಸಮ್ಮಾನಗಳು ಸಿಕ್ಕಿವೆ.
ಎಲೆಮರೆ ಕಾಯಿಯಂತೆ ದುಡಿಯವ ಇವರಿಗೆ ಈಗ ಪ್ರಸಕ್ತ ವರ್ಷದ ನಾಟಕ ಅಕಾಡೆಮಿಯ ವಾರ್ಷಿಕ ರಂಗ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಪ್ರಶಸ್ತಿಯು
50 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next