Advertisement

ಬರಿದಾಗ್ತಿದೆ ಕಾರಂಜಾ-ಮುಂದಿದೆ ಜಲಕ್ಷಾಮ

04:46 PM Feb 14, 2020 | Naveen |

ಬೀದರ: ಬೇಸಿಗೆ ಮುನ್ನವೇ ಜಿಲ್ಲೆಯ ಜೀವನಾಡಿ ಆಗಿರುವ ಕಾರಂಜಾ ಜಲಾಶಯದ ಒಡಲು ಬರಿದಾಗುತ್ತಿದೆ. ಮಳೆಯ ತೀವ್ರ ಅಭಾವದಿಂದಾಗಿ ಜಲಾಶಯ ಮರುಭೂಮಿಯಂತಾಗುತ್ತಿದ್ದು, ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಜಲಕ್ಷಾಮದ ಭೀಕರತೆ ಸಾರುತ್ತಿದೆ. ಮುಂಗಾರು ಮಳೆ ಅಭಾವ ಎದುರಿಸಿರುವ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಾದರೂ ವರ್ಷಧಾರೆ ಆಗಬಹುದೆಂಬ ಜನರ ನಿರೀಕ್ಷೆ ಹುಸಿಯಾಗಿದೆ. ಉತ್ತಮ ಬೆಳೆಗಳಿಗೆ ಸಾಕಾಗುವಷ್ಟು ಮಾತ್ರ ಮಳೆ ಸುರಿದಿದೆ. ಆದರೆ, ಮಳೆ ಕೊರತೆಯಿಂದ ರೈತರ ಭೂಮಿಗೆ ನೀರುಣಿಸುವ, ಜನರ ನೀರಿನ ದಾಹ ಇಂಗಿಸುವ ಕಾರಂಜಾ ಜಲಾಶಯ ಖಾಲಿಯಾಗುತ್ತಿದೆ. ದಿನ ಕಳೆದಂತೆ ನೀರಿನ ಮಟ್ಟ ತೀವ್ರ ಕುಸಿಯುತ್ತಿದ್ದು, ಆತಂಕಕ್ಕೀಡು ಮಾಡಿದೆ.

Advertisement

ಜಲಾಶಯದಲ್ಲಿದೆ 0.565 ಟಿಎಂಸಿ ನೀರು: ಕಾರಂಜಾ ಜಲಾಶಯ ಒಟ್ಟು 782 ಚದರ ಕಿ.ಮೀ ಅಚ್ಚುಕಟ್ಟು ಪ್ರದೇಶ ಹೊಂದಿದ್ದು, ಅದರಲ್ಲಿ ಕರ್ನಾಟಕದ ಬೀದರ ಜಿಲ್ಲೆ 565 ಚ.ಕಿ.ಮೀ ಮತ್ತು ತೆಲಂಗಾಣ 217 ಚ.ಕಿ.ಮೀ ಸೇರಿದೆ. 7.69 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಕಾರಂಜಾ ಜಲಾಶಯದಲ್ಲಿ
7 ಟಿಎಂಸಿ ಅಡಿ ನೀರು ಹಿಡಿದಿಟ್ಟುಕೊಳ್ಳಬಹುದು. ಸದ್ಯ ಜಲಾಶಯದಲ್ಲಿ 0.940 ಟಿಎಂಸಿ ನೀರು ಲಭ್ಯವಿದ್ದು, ಅದರಲ್ಲಿ ಕೇವಲ 0.565 ಟಿಎಂಸಿ (ಅರ್ಧ ಟಿಎಂಸಿ) ಅಡಿ ಮಾತ್ರ ಬಳಕೆಗೆ ಯೋಗ್ಯವಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ 2.12 ಟಿಎಂಸಿ ಅಡಿ ನೀರು ಜಲಾಶಯದಲ್ಲಿತ್ತು.

ನೀರಾವರಿ ಯೋಜನೆಯಾಗಿರುವ ಕಾರಂಜಾ ಈಗ ಕೃಷಿಗಿಂತ ಹೆಚ್ಚು ಕುಡಿಯುವ ನೀರಿಗೆ ಸೀಮಿತವಾಗುತ್ತಿದೆ. ಜಲಾಶಯದಿಂದ ಬೀದರ ನಗರ, ಹುಮನಾಬಾದ, ಚಿಟಗುಪ್ಪ ಪಟ್ಟಣ, ಕಮಠಾಣಾ ಸೇರಿದಂತೆ ಇವುಗಳ ಸುತ್ತಲಿನ 30ಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಕಳೆದೆರಡು ವರ್ಷದಿಂದ ಉತ್ತಮ ಮಳೆ ಆಗದಿರುವುದರಿಂದ ಈ ಹಿಂದೆ ಸಂಗ್ರಹವಾದ ನೀರನ್ನೇ ಈವರೆಗೆ ಬಳಕೆ ಮಾಡಲಾಗುತ್ತಿದೆ. ಕಾಲುವೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದ್ದು, ಸದ್ಯ ಕುಡಿಯುವ ನೀರಿಗಾಗಿ ದಿನಕ್ಕೆ 2 ಸೆ.ಮೀ ನೀರು ಬಿಡಲಾಗುತ್ತಿದೆ. ಈ ನೀರು ಮುಂದಿನ ಎರಡ್ಮೂರು ತಿಂಗಳಿಗಷ್ಟೇ ಸಾಕಾಗಲಿದ್ದು, ಮುಂಗಾರು ಪೂರ್ವ
ಮಳೆಯಾಗದಿದ್ದರೆ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಲಿದೆ.

ಕಾರಂಜಾಗೆ ಹರಿದು ಬಂದಿಲ್ಲ ನೀರು: ಕಳೆದ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾದರೂ ಕಾರಂಜಾ ಜಲಾಶಯಕ್ಕೆ ನೀರು ಹರಿದು ಬಂದಿಲ್ಲ. ಹಿಂದಿನ ವರ್ಷ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಬೇಸಿಗೆ ಸಮಯದಲ್ಲಿ ನೀರಿನ ಕೊರತೆ ಹೆಚ್ಚಾಗಿ ಕಾಡಲಿಲ್ಲ. ಆದರೆ, ಈ ಬಾರಿ ಬೇಸಿಗೆ ಶುರುವಾಗುವ ಮುನ್ನವೇ ಡ್ಯಾಂನಲ್ಲಿ ನೀರಿನ ಮಟ್ಟ ಕುಸಿದಿರುವುದು ಜಲ ಕಂಟಕ ಎದುರಾಗುವ ಸಾಧ್ಯತೆ ದಟ್ಟವಾಗಿಸಿದೆ.

ಜಲಾಶಯದಲ್ಲಿ ನೀರಿನ ಕೊರತೆ ಕುರಿತಂತೆ ಕಾರಂಜಾ ಅಧಿಕಾರಿಗಳು ಈಗಾಗಲೇ ಶಾಸಕರುಗಳ ಜತೆ ಚರ್ಚೆ ನಡೆಸಿ ಮನವರಿಕೆ ಮಾಡಿದ್ದಾರೆ. ಜಲಮೂಲ ಸಂರಕ್ಷಣೆಗೆ ಜಿಲ್ಲಾಡಳಿತ ಒತ್ತು ನೀಡಿ, ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಕೊಳವೆಬಾವಿಗಳ ದುರಸ್ತಿ, ಟ್ಯಾಂಕರ್‌ ಗಳ ಮೂಲಕ ನೀರು ಸರಬರಾಜಿಗಾಗಿ ಅಗತ್ಯ ತಯಾರಿ ಮಾಡಿಕೊಳ್ಳಬೇಕಿದೆ.

Advertisement

ಕಾರಂಜಾ ಜಲಾಶಯ 7.69 ಟಿಎಂಸಿ ಅಡಿ ನೀರು ಸಂಗ್ರಹಣೆ ಸಾಮರ್ಥ್ಯ ಹೊಂದಿದ್ದು, ಏಳು ಟಿಎಂಸಿ ನೀರು ಹಿಡಿದಿಡಬಹುದು. ಸದ್ಯ ಜಲಾಶಯದಲ್ಲಿ 0.940 ಟಿಎಂಸಿ ನೀರಿನ ಲಭ್ಯವಿದ್ದು, ಅದರಲ್ಲಿ ಕೇವಲ 0.565 ಟಿಎಂಸಿ (ಅರ್ಧ ಟಿಎಂಸಿ) ಮಾತ್ರ ಬಳಕೆ ಯೋಗ್ಯವಾಗಿದೆ. ಮುಂಗಾರಿನಲ್ಲಿ ಉತ್ತಮ ಮಳೆಯಾದರೂ ಜಲಾಶಯಕ್ಕೆ ನೀರು ಹರಿದುಬಂದಿಲ್ಲ. ನೀರಿನ ಮಟ್ಟ ಇಳಿಯುತ್ತಿರುವುದರಿಂದ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಜಲಕ್ಷಾಮ ಎದುರಾಗುವ ಸಾಧ್ಯತೆ ಇದೆ.
ಆನಂದಕುಮಾರ ಪಾಟೀಲ,
ಎಇಇ, ಕಾರಂಜಾ ಜಲಾಶಯ

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next