Advertisement

ಧೂಪತಮಹಾಗಾಂವ್‌ ಗ್ರಾಪಂನಲ್ಲಿ ನೇತ್ರ ಬ್ಯಾಂಕ್‌!

12:56 PM Feb 12, 2020 | |

ಬೀದರ: ಗ್ರಾಮ ಪಂಚಾಯತನ ಎಲ್ಲ ಗ್ರಾಮಗಳು “ಸೌರ ವಿದ್ಯುತ್‌’ ಬೆಳಕಿನಲ್ಲಿ ಝಗಮಗಿಸಿದ ರಾಜ್ಯದ ಮೊದಲ “ಸೌರ ಗ್ರಾಪಂ’ ಹೆಗ್ಗಳಿಕೆ ಪಡೆದಿರುವ ಔರಾದ ತಾಲೂಕಿನ ಧೂಪತಮಹಾಗಾಂವ್‌ ಈಗ ನೇತ್ರ ಬ್ಯಾಂಕ್‌ ಸ್ಥಾಪಿಸಿ ಅಂಧರ ಬಾಳಲ್ಲಿ ಬೆಳಕು ಮೂಡಿಸುವ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.

Advertisement

ಲಭ್ಯ ಅನುದಾನ ಸದ್ಬಳಕೆ ಮತ್ತು ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಧೂಪತಮಹಾಗಾಂವ್‌ ಗ್ರಾಪಂ ಕಟ್ಟಡದ ಜತೆಗೆ ಎಲ್ಲ ನಾಲ್ಕು ಗ್ರಾಮ ಮತ್ತು ಎರಡು ತಾಂಡಾಗಳು ಸೌರ ವಿದ್ಯುತೀಕರಣಗೊಂಡಿದ್ದು, ಸರ್ಕಾರ ಈ ಸ್ವಾವಲಂಬಿ ಮಾದರಿಯನ್ನು ರಾಜ್ಯದ ಎಲ್ಲ ಗ್ರಾಪಂಗಳಿಗೆ ವಿಸ್ತರಿಸಲು ಸಜ್ಜಾಗಿದೆ.

ಸಮಾಜಮುಖೀ ಕಾರ್ಯದಲ್ಲಿ ಮತ್ತೊಂದು ಹೆಜ್ಜೆಯನ್ನಿಟ್ಟಿರುವ ಧೂಪತಮಹಾಗಾಂವ್‌ ಪಂಚಾಯತ್‌ ಅಂಧರಿಗೆ ಹೊಸ ಬದುಕು ನೀಡಲು ನೂತನ ಯೋಜನೆ ರೂಪಿಸಿದೆ.

ನೇತ್ರ ಬ್ಯಾಂಕ್‌ ಆರಂಭ: ಸರ್ಕಾರದ ಇತರ ಕಚೇರಿಗಳಿಗಿಂತ ಗ್ರಾಪಂಗಳು ಜನರೊಂದಿಗೆ ಹೆಚ್ಚು ಭಾವನಾತ್ಮಕ ಸಂಬಂಧ ಹೊಂದಿರುತ್ತವೆ. ಇದನ್ನು ಮನಗಂಡ ಗ್ರಾಮದ ಪಿಡಿಒ ಶಿವಾನಂದ ಔರಾದೆ, ಸದಸ್ಯರ ಸಭೆಯಲ್ಲಿ “ನೇತ್ರ ಬ್ಯಾಂಕ್‌’ ಸ್ಥಾಪಿಸುವ ಪ್ರಸ್ತಾಪನೆ ಮುಂದಿಟ್ಟಿದ್ದಾರೆ. ಮರಣಾನಂತರ ನಮ್ಮ ಕಣ್ಣುಗಳು ಇಬ್ಬರ ಕತ್ತಲೆ ಬದುಕನ್ನು ಬೆಳಕಾಗಿಸುವಲ್ಲಿ ನೆರವಾಗಬಹುದು.

ಇದು ರಾಜ್ಯದಲ್ಲಿ ಮಾದರಿ ಕೆಲಸ ಆಗಬಹುದೆಂದು ಮನವರಿಕೆ ಮಾಡಿದ್ದಾರೆ. ಗ್ರಾಪಂ ಅಧಿಕಾರಿ, ಸಿಬ್ಬಂದಿಗಳಿಂದಲೇ ಮೊದಲು ಕಣ್ಣು ದಾನಕ್ಕೆ ಚಾಲನೆ ನೀಡುವ ಕುರಿತು ಪ್ರಸ್ತಾಪಿಸಿದ್ದಾರೆ. ವಿನೂತನ ಕಾರ್ಯಕ್ಕೆ ಅಧ್ಯಕ್ಷರಾದಿಯಾಗಿ ಎಲ್ಲ ಸದಸ್ಯರು ಮತ್ತು ಸಿಬ್ಬಂದಿ ಒಪ್ಪಿಗೆ ಸೂಚಿಸಿದಷ್ಟೇ ಅಲ್ಲ ಸ್ವಯಂ ಪ್ರೇರಿತರಾಗಿ ಮೃತ್ಯು ಬಳಿಕ ನೇತ್ರದಾನ ಮಾಡುವ ಬಗ್ಗೆ ಒಪ್ಪಿಗೆ ಪತ್ರ ಬರೆದಿಕೊಟ್ಟಿದ್ದಾರೆ. ಗಣರಾಜ್ಯೋತ್ಸವ ದಿನದಂದು ಜಿಪಂ ಉಪ ಕಾರ್ಯದರ್ಶಿ ಸೂರ್ಯಕಾಂತ ಅವರಿಂದ ನೇತ್ರ ಬ್ಯಾಂಕ್‌ಗೆ ಚಾಲನೆ ನೀಡಿ ಬೆನ್ನು ತಟ್ಟಿದ್ದಾರೆ. ಪಂಚಾಯತನ ಸದಸ್ಯರು, ನೌಕರರ ಕುಟುಂಬದವರು ನೇತ್ರದಾನ ಮಾಡಿದ್ದು, ಇವರ ಪ್ರೇರಣೆಯಿಂದ ಕೇವಲ 15 ದಿನಗಳಲ್ಲಿ ಧೂಪತಮಹಾಗಾಂವ್‌ ಗ್ರಾಮದ 220 ಜನ ಪ್ರಮುಖರು ನೇತ್ರದಾನದ ಬಗ್ಗೆ ಪತ್ರಕ್ಕೆ ಸಹಿ ಹಾಕಿದ್ದಾರೆ.

Advertisement

ಗ್ರಾಪಂ ಕರ ವಸೂಲಿಗಾರರು ಮತ್ತು ವಾಟರ್‌ ಮ್ಯಾನ್‌ಗಳು ಜನರ ಜತೆ ಸಂಪರ್ಕ ಹೊಂದಿರುತ್ತಾರೆ. ಅವರ ಸಹಕಾರದಿಂದ ನೇತ್ರ ಬ್ಯಾಂಕ್‌ ಸ್ಥಾಪಿಸಲಾಗಿದೆ. ಧೂಪತ ಮಹಾಗಾಂವ್‌, ಬಾಬಳಿ, ಮಣಿಗೆಂಪೂರ, ಜೀರ್ಗಾ(ಬಿ) ಗ್ರಾಮಗಳು, ಚಂದ್ರಾನಾಯ್ಕ ತಾಂಡಾದ ಜನರಲ್ಲಿ ನೇತ್ರ ದಾನದ ಬಗ್ಗೆ ಜಾಗೃತಿ ಮೂಡಿಸಿ, ಇನ್ನೆರಡು ತಿಂಗಳಲ್ಲಿ ಕನಿಷ್ಟ ಒಂದು ಸಾವಿರ ಅಂಧರಿಗೆ ಕಣ್ಣು ದಾನ ಮಾಡಿಸಲು ಪಂಚಾಯತ್‌ ಗುರಿ ಹೊಂದಿದೆ.

ನೇತ್ರದಾನಿಗೆ ವಿಮೆ ಸೌಲಭ್ಯ
ಕಣ್ಣು ದಾನ ಮಾಡುವ ಬಡ ಕುಟುಂಬಕ್ಕೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಜೀವನ ಜ್ಯೋತಿ ಮತ್ತು ಜೀವನ ಸುರûಾ ವಿಮಾ ಪಾಲಿಸಿಗಳನ್ನು ಮಾಡಿಸಿಕೊಟ್ಟು, ಪಂಚಾಯತ್‌ ನಿಂದಲೇ ಮೊದಲ ಕಂತಿನ 342 ರೂ. ಪಾವತಿಸುತ್ತಿದೆ. ಗ್ರಾಪಂನ ಜನಪರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಎಲ್ಲ ಗ್ರಾಮಗಳ ಜನ ಇದೀಗ ತಮ್ಮ ಕಣ್ಣು ದಾನ ಮಾಡಲು ಮುಂದಾಗುತ್ತಿದ್ದಾರೆ. ಪಿಡಿಒ ಶಿವಾನಂದ ಸಮಾಜಪರ
ಕೆಲಸಕ್ಕೆ ಅಧ್ಯಕ್ಷೆ ಸವಿತಾ ಬಸವರಾಜ ಮತ್ತು ಉಪಾಧ್ಯಕ್ಷ ನೆಹರು ಬಿರಾದಾರ ಸಾಥ್‌ ನೀಡಿದ್ದಾರೆ.

ಗ್ರಾಪಂನ ಚುನಾಯಿತ ಪ್ರತಿನಿಧಿಗಳು ಮತ್ತು ಸಿಬ್ಬಂದಿಗಳ ಸಹಕಾರದಿಂದ ನೇತ್ರ ಬ್ಯಾಂಕ್‌ ಆರಂಭಿಸಲಾಗಿದೆ. ಈವರೆಗೆ 220 ಜನ ಸ್ವಯಂ ಪ್ರೇರಿತರಾಗಿ ನೇತ್ರದಾನಕ್ಕೆ ಒಪ್ಪಿಗೆ ಪತ್ರ ನೀಡಿದ್ದು, ಪಂಚಾಯತನಿಂದ ಒಂದು ಸಾವಿರ ನೇತ್ರ ದಾನಿಗಳ ಗುರಿ ಹಾಕಿಕೊಳ್ಳಲಾಗಿದೆ. ಆರೋಗ್ಯ ಇಲಾಖೆ ಮತ್ತು ಆರ್‌ಡಿಪಿಆರ್‌ ಇಲಾಖೆ ಸಹಭಾಗಿತ್ವದಲ್ಲಿ ಈ ಮಾದರಿ ರಾಜ್ಯದ 6,022 ಗ್ರಾಪಂಗಳಲ್ಲಿ ಜಾರಿಯಾದರೆ ಸಾವಿರಾರು ಅಂಧರಿಗೆ ಬೆಳಕು ನೀಡಿ ಅಂಧತ್ವ ನಿವಾರಣೆಗೆ ಕೈ ಜೋಡಿಸಿದಂತಾಗುತ್ತದೆ.
ಶಿವಾನಂದ ಔರಾದೆ, ಪಿಡಿಒ

„ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next