Advertisement

ಜೆಎಚ್‌ಎ-ಆಶಾಗಳಿಗೆ ಅಸುರಕ್ಷತೆ

11:55 AM Apr 09, 2020 | Naveen |

ಬೀದರ: ಅಟ್ಟಹಾಸ ಮೆರೆಯುತ್ತಿರುವ ಕೋವಿಡ್-19  ಸೋಂಕು ಹರಡುವುದನ್ನು ನಿಯಂತ್ರಿಸಲು ಸರ್ಕಾರ ಸಮರೋಪಾದಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಆದರೆ, ಜೀವ ಪಣಕ್ಕಿಟ್ಟು ಕೊರೊನಾ ವಿರುದ್ಧ ಸಮರ ಸಾರುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ಸೂಕ್ತ ಸುರಕ್ಷಾ ಸಾಮಗ್ರಿಗಳನ್ನು ಒದಗಿಸದೇ ನಿರ್ಲಕ್ಷಿಸುತ್ತಿರುವುದು ಅವರಲ್ಲಿ ಅನಾರೋಗ್ಯದ ಭೀತಿ ಹೆಚ್ಚಿಸಿದೆ.

Advertisement

ದೇಶದಲ್ಲಿ ತಲ್ಲಣ ಮೂಡಿಸಿರುವ ಕೊರೊನಾ ಸೋಂಕು ಇದೀಗ ದಿನ ಕಳೆದಂತೆ ತನ್ನ ಕಬಂಧ ಬಾಹು ಚಾಚುತ್ತ ಸಮುದಾಯಿಕವಾಗಿ ಹರಡುವ ಆತಂಕ ತಂದೊಡ್ಡಿದೆ. ಒಂದೇ ದಿನಕ್ಕೆ 10 ಪಾಜಿಟಿವ್‌ ಪ್ರಕರಣ ವರದಿಯಿಂದ ಬೀದರ ಸಹ ರಾಜ್ಯದ ಹಾಟ್‌ಸ್ಪಾಟ್‌ ಜಿಲ್ಲೆಗಳಲ್ಲಿ ಒಂದಾಗಿದೆ. ಸೋಂಕು ವ್ಯಾಪಿಸದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಸೈನಿಕರಂತೆ ಕೊರೊನಾ ವಿರುದ್ಧ ಯುದ್ಧ ಸಾರಿದ್ದಾರೆ. ಆದರೆ, ಆ ಆರೋಗ್ಯ ಸೈನಿಕರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಸರ್ಕಾರ ಕಡೆಗಣಿಸುತ್ತಿರುವುದು ಆತಂಕದ ಜತೆಗೆ ಆಕ್ರೋಶವೂ ವ್ಯಕ್ತವಾಗುತ್ತಿದೆ.

ಮಾಸ್ಕ್-ಕೈಗವಚ-ಸ್ಯಾನಿಟೈಸರ್‌ ಇಲ್ಲ: ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಶುಶ್ರೂಷಕಿಯರಿಗೆ ಅಗತ್ಯ ವೈದ್ಯಕೀಯ ಸಾಮಗ್ರಿ ಪೂರೈಸಲಾಗುತ್ತಿದೆ. ಆದರೆ, ಸೋಂಕಿತರು, ಅವರ ಪ್ರಥಮ-ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವ, ವಿದೇಶದಿಂದ ಬಂದಿರುವ ನಾಗರಿಕರನ್ನು ಮನೆ-ಮನೆಯಲ್ಲಿ ಗುರುತಿಸಿ ಮಾಹಿತಿ ಸಂಗ್ರಹಿಸುವುದು ಮತ್ತು ಅವರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಕಿರಿಯ ಆರೋಗ್ಯ ಸಹಾಯಕ-ಸಹಾಯಕಿಯರು (ಜೆಎಚ್‌ಎ) ಹಾಗೂ ಆಶಾ ಕಾರ್ಯಕರ್ತೆಯರಿಗೆ ವೈರಸ್‌ನಿಂದ ಸುರಕ್ಷತೆಗಾಗಿ ಅಗತ್ಯವಾಗಿರುವ ಮಾಸ್ಕ್, ಕೈಗವಚ ಮತ್ತು ಸ್ಯಾನಿಟೈಸರ್‌ಗಳನ್ನು ಒದಗಿಸಿಲ್ಲ.

ಹೆಚ್ಚುವರಿ ಸಹಾಯಧನವೂ ಇಲ್ಲ: ಜೆಎಚ್‌ಎ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಗುಣಮಟ್ಟದ್ದಲ್ಲದ ಮಾಸ್ಕ್ ಇಲ್ಲವೇ ಬಟ್ಟೆಗಳನ್ನು ಧರಿಸಿಕೊಂಡು ಅಸುರಕ್ಷತೆ ಭೀತಿಯಲ್ಲೇ ಕರ್ತವ್ಯ ನಿರ್ವಹಿಸುವ ದುಸ್ಥಿತಿ ಬಂದೊದಗಿದೆ. ಇನ್ನೂ ಅಲ್ಪ ಪ್ರೋತ್ಸಾಹ ಧನದಲ್ಲಿ ದುಡಿಯುವ ಆಶಾಗಳಿಗೆ ಹೆಚ್ಚುವರಿ ಸಹಾಯಧನವೂ ನೀಡಲಾಗುತ್ತಿಲ್ಲ ಎಂದೆನ್ನಲಾಗಿದ್ದು, ಮಾಸ್ಕ್, ಇತರ ವೆಚ್ಚಗಳನ್ನು ಕೈಯಿಂದ ಖರ್ಚು ಮಾಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕರ ಜೀವನ ರಕ್ಷಣೆಗಾಗಿ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಕಿರಿಯ ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತರಿಗೆ ಅವಶ್ಯಕ ರಕ್ಷಕ ಸಾಮಗ್ರಿ ಪೂರೈಸುವತ್ತ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಚಿತ್ತ ಹರಿಸಬೇಕಿದೆ.

ಬಟ್ಟೆ ಮಾಸ್ಕ್ ಗತಿ!
ಗಡಿ ಜಿಲ್ಲೆಯಲ್ಲಿ ಸುಮಾರು 472 ಜನ ಜೆಎಚ್‌ಎ ಸಿಬ್ಬಂದಿ ಮತ್ತು 1362 ಆಶಾ ಕಾರ್ಯಕರ್ತೆಯರಿದ್ದು, ಎಲ್ಲರೂ ಕೋವಿಡ್-19 ನಿಯಂತ್ರಣ ಕಾರ್ಯದಲ್ಲಿ ತೊಡಗಿದ್ದಾರೆ. ರೋಗಾಣು ಹರಡುವಿಕೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಈ ಆರೋಗ್ಯ ಸಿಬ್ಬಂದಿಗಳಿಗೂ ಎನ್‌-95, ತ್ರಿ ಲೇಯರ್‌ ಮಾಸ್ಕ್, ಆಲ್ಕೋಹಾಲ್‌ ರಹಿತ ಸ್ಯಾನಿಟೈಸರ್‌ ಬಳಕೆ ಅಗತ್ಯವಿದೆ. ಆದರೆ, ಮಾಸ್ಕ್ಗಳ ಕೊರತೆ ಹೆಚ್ಚಾಗಿರುವುದರಿಂದ ಸ್ವಂತ ಖರೀದಿಸುವಂತೆ ಇಲ್ಲವಾದರೆ ಮನೆಯಲ್ಲೇ ಬಟ್ಟೆಗಳಿಂದ ಮಾಸ್ಕ್ಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಹಿರಿಯ ಅ ಧಿಕಾರಿಗಳು ಸೂಚಿಸುತ್ತಿದ್ದಾರೆ ಎನ್ನಲಾಗಿದೆ.

Advertisement

ಕೋವಿಡ್-19 ಸೋಂಕು ಹರಡುವಿಕೆ ತಟೆಗಟ್ಟುವಲ್ಲಿ ಜೆಎಚ್‌ಎ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಜೀವ ಬದಿಗೊತ್ತಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅವರಿಗೆ ಅಗತ್ಯವಾಗಿರುವ ಮಾಸ್ಕ್, ಸ್ಯಾನಿಟೈಸರ್‌, ಕೈಗವಚ ವಿತರಿಸುವಲ್ಲಿ ನಿರ್ಲಕ್ಷ್ಯ ತೋರಲಾಗಿದೆ. ಹಾಗಾಗಿ ಸ್ವಂತ ಖರ್ಚಿನಿಂದ ಮಾಸ್ಕ್ ಖರೀದಿ ಇಲ್ಲವೇ ಬಟ್ಟೆಗಳನ್ನು ಸುತ್ತಿಕೊಂಡು ಕೆಲಸ ಮಾಡುತ್ತಿದ್ದು, ಅವು ನಮಗೆ ಎಷ್ಟು ಸುರಕ್ಷಿತ ಎಂಬ ಆತಂಕ ಕಾಡುತ್ತಿದೆ.
ಹೆಸರು ಹೇಳಲಿಚ್ಛಿಸದ ಜೆಎಚ್‌ಎ
ಸಿಬ್ಬಂದಿ

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next