ಬೀದರ: ಜಾಗತೀಕರಣ, ಉದಾರೀಕರಣ ಹಾಗೂ ಆಧುನೀಕರಣದ ಕರಿನೆರಳಿನಲ್ಲಿ ಜನಪದ ಭಾಷೆ, ಕಲೆ ಮತ್ತು ಸಂಸ್ಕೃತಿ ಅಳಿಯುತ್ತಿದೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಯಶವಂತ ಕುಚಬಾಳ ಅವರು ತಮ್ಮ ದೇಶಿ ನಾಟಕಗಳನ್ನು ಬೀದರನಲ್ಲಿ ಪ್ರದರ್ಶಿಸಿ ಜನಪದ ನಾಟಕ ಸಂಸ್ಕೃತಿಯನ್ನು ಉಳಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.
ನಗರದ ರಂಗಮಂದಿರದಲ್ಲಿ ಜನಜನಿತ ಕಲಾಪ್ರದರ್ಶನ ಸಂಘ ಹಾಗೂ ಜಿಲ್ಲಾ ಜಾನಪದ ಪರಿಷತ್ತು ಆಶ್ರಯದಲ್ಲಿ ಹಮ್ಮಿಕೊಂಡಿರುವ ನಾಟಕೋತ್ಸವ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಜಾತಿ ಮತ್ತು ಹಣದ ಪ್ರಭಾವದಿಂದ ನಿಜವಾದ ಕಲಾವಿದರನ್ನು ಗುರುತಿಸುವ ಕಾರ್ಯ ಆಗುತ್ತಿಲ್ಲ ಬೇಸರ ವ್ಯಕ್ತಪಡಿಸಿದರು.
ಹಿಂದೆ ಟಿವಿ ಮತ್ತು ಮೊಬೈಲ್ ಇಲ್ಲದ ದಿನಗಳಲ್ಲಿ ಜನಪದ ನಾಟಕ ಮತ್ತು ನೃತ್ಯಗಳಿಗೆ ಬೆಲೆ ಇತ್ತು. ಮನೆಯಿಂದಲೇ ಒಂದು ಹಾಸಿಗೆ ತೆಗೆದುಕೊಂಡು ಹೋಗಿ ರಾತ್ರಿಯಿಡೀ ನಾಟಕ ನೋಡುವ ಜನರು ಇಂದು ಎಲ್ಲವನ್ನು ಉಚಿತವಾಗಿ ನೀಡಿದರೂ ನಾಟಕ ನೋಡುವ ಒಲವು ಕಡಿಮೆ ಮಾಡಿಕೊಂಡಿದ್ದಾರೆ. ಕುಚಬಾಳ ಅವರು ಬೆಂಗಳೂರು ನೀನಾಸಂನಲ್ಲಿ ತರಬೇತಿ ಪಡೆದು ಜಿಲ್ಲೆಯಲ್ಲಿ ಜನಪದ ಸಂಸ್ಕೃತಿ ಪಸರಿಸಬೇಕು ಎಂಬ ಹಂಬಲ ಇಟ್ಟುಕೊಂಡ ನವ ಯುವಕ. ಇಂತಹ ಯುವಕರಿಗೆ ಸರ್ಕಾರ ಮತ್ತು ಸಂಘ-ಸಂಸ್ಥೆಗಳು ಸಹಕರಿಸಬೇಕು. ಹೀಗಾದಾಗ ಮಾತ್ರ ನಮ್ಮ ನಾಡಿನ ಜನಪದ ಸಂಸ್ಕೃತಿ, ಕಲೆ, ಭಾಷೆ ಮತ್ತು ಸೊಗಡು ಉಳಿಸಲು ಸಾಧ್ಯವಾಗುತ್ತದೆ ಎಂದರು.
ನಿವೃತ್ತ ಡಿವೈಎಸ್‌ಪಿ ಶಿವಾನಂದ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಜಾನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಫರ್ನಾಂಡಿಸ್ ಹಿಪ್ಪಳಗಾಂವ ಉಪಸ್ಥಿತರಿದ್ದರು.
ಕಾಶಪ್ಪ ಧನ್ನೂರ, ಲಕ್ಷ್ಮಣರಾವ್ ಕಾಂಚೆ, ಪ್ರಕಾಶ ಕನ್ನಾಳೆ, ಶಿವಶರಣಪ್ಪ ಗಣೇಶಪುರ, ಶ್ರೀಧರ ಜಾಧವ, ಮಹಾರುದ್ರ ಡಾಕುಳಗೆ ಮತ್ತಿತರರು ಇದ್ದರು. ಸಿದ್ಧಾರ್ಥ ಸ್ವಾಗತಿಸಿದರು. ಎಸ್.ಬಿ.ಕುಚಬಾಳ ನಿರೂಪಿಸಿದರು. ವಿಕಾಸ ವಂದಿಸಿದರು. ಯಶವಂತ ಕುಚಬಾಳ ಹಾಗೂ ಸಂಗಡಿಗರಿಂದ “ನಿರುತ್ತರ ಕುಮಾರ’ ಸಾಮಾಜಿಕ ನಾಟಕ ಪ್ರದರ್ಶಿಸಲಾಯಿತು.