ಧಾರವಾಡ: ಮಳೆಯ ಅನಿಶ್ಚಿತತೆಯಿಂದ ಕೃಷಿಯಲ್ಲಿ ಕೈಸುಟ್ಟುಕೊಂಡ ರೈತರಿಗೆ ಆರ್ಥಿಕ ಸಂಕಷ್ಟದಿಂದ ಹೊರಬರಲು ಜೇನು ಕೃಷಿ ಸಹಾಯಕವಾಗಿದೆ ಎಂದು ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರು ಹೇಳಿದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜಿಪಂ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹಮ್ಮಿಕೊಂಡಿದ್ದ ವೈಜ್ಞಾನಿಕ ಜೇನು ಕೃಷಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡು ಸ್ವಯಂ ಉದ್ಯೋಗ ಕಂಡುಕೊಳ್ಳಬೇಕು. ಜೇನು ಕೃಷಿ ಉತ್ತಮ ಆದಾಯ ತರುವ ಹಾಗೂ ಪ್ರಕೃತಿ ಸ್ನೇಹಿ ಉದ್ಯೋಗವಾಗಿದೆ. ಇದರ ನಿವರ್ಹಣೆ ವೆಚ್ಚ ಕೂಡ ಕಡಿಮೆ. ತೋಟಗಾರಿಕೆ ಇಲಾಖೆ ಹಾಗೂ ಜಿಪಂ ಸಹಯೋಗದಲ್ಲಿ ಪ್ರತಿ ತಾಲೂಕಿನಲ್ಲೂ ಜೇನು ಕೃಷಿ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗುವುದು.
ತೋಟಗಾರಿಕೆ ಇಲಾಖೆಯಿಂದ ಜೇನು ಕೃಷಿ ಮಾಡಲು ಬೇಕಾಗುವ ಪರಿಕರಗಳ ಖರೀದಿಗೆ ಸಹಾಯಧನ ನೀಡಲಾಗುವುದು ಎಂದರು. ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ಡಾ| ರಾಮಚಂದ್ರ ಕೆ. ಮಡಿವಾಳ ಮಾತನಾಡಿ, ಜೇನು ಸಾಕಣೆ ಕೈಗೊಳ್ಳುವ ಪ್ರತಿ ಫಲಾನುಭವಿಗೂ ಜೇನು ಪೆಟ್ಟಿಗೆ, ಸ್ಟಾಂಡ್ ಖರೀದಿಗೆ 1800 ರೂ. ಸಬ್ಸಿಡಿ ನೀಡಲಾಗುತ್ತದೆ.
ಅಲ್ಲದೆ ಪರಿಶಿಷ್ಟ ರೈತರಿಗೆ ಶೇ. 90ರಷ್ಟು ರಿಯಾತಿ ನೀಡಲಾಗುವುದು ಎಂದರು. ಉಳುವಾ ಯೋಗಿ ರೈತ ಉತ್ಪಾದಕ ಸಂಘದ ಅಧ್ಯಕ್ಷ ದ್ಯಾಮಣ್ಣ ರೇವಣ್ಣನವರ, ಜಿಪಂ ಸದಸ್ಯ ನಿಂಗಪ್ಪ ಘಾಟಿನ್, ತಾಪಂ ಸದಸ್ಯೆ ಪೂಜಾ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಂ. ಕುಂದಗೋಳ,
ಹುಬ್ಬಳ್ಳಿ ಎಪಿಎಂಸಿ ಅಧ್ಯಕ್ಷ ಈಶ್ವರ ಕಿತ್ತೂರು, ಬಾಗಲಕೋಟೆ ತೋಟಗಾರಿಕೆ ವಿವಿ ಸಹ ಪ್ರಧ್ಯಾಪಕಿ ಡಾ| ಸುವರ್ಣಾ ಪಾಟೀಲ್, ಹಿರಿಯ ವಿಜ್ಞಾನಿ ನರೇಂದ್ರ ಕುಲಕರ್ಣಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಆರ್.ಟಿ. ಹಿರೇಮಠ, ಹುಬ್ಬಳ್ಳಿ ತೋಟಗಾರಿಕೆ ಸಹಾಯಕ ನಿರ್ದೇಶಕಿ ಶಿಲ್ಪಶ್ರೀ ಇತರರಿದ್ದರು.