Advertisement
“ಅಮ್ಮನಾಗಿ ಮಗುವಿಗೆ ಹಾಲು ಕುಡಿಸುವಾಗ ಸಿಗುವ ಸಂತೋಷ ಯಾವ ಗ್ರ್ಯಾಂಡ್ ಸ್ಲಾಮ್ ವಿಜಯಕ್ಕಿಂತ ಕಡಿಮೆ ಇಲ್ಲ’.ಇದು ಟೆನ್ನಿಸ್ ಡಬಲ್ಸ್‌ನಲ್ಲಿ 6 ಗ್ರ್ಯಾಂಡ್ ಸ್ಲಾಮ್ ಗೆದ್ದ ಸಾನಿಯಾ ಮಿರ್ಜಾಳ ಹೇಳಿಕೆ.
Related Articles
Advertisement
ಸ್ವತ್ಛವಾಗಿ ಬಿಳಿ ದೋತರ ಉಟ್ಟವನು ಮಡಿಲು ಸೇರಿದ. ಸಿಸ್ಟರ್ ಬಂದು, “ಮಗುವಿಗೆ ಹಾಲು ಕುಡಿಸಲು ಪ್ರಯತ್ನಿಸಿ, ಮಗು ಚೀಪಲಿ’ ಎಂದರು. ಮುಖ ಕೆಂಪಗೆ ಮಾಡಿಕೊಂಡು ಅಳುತ್ತಿದ್ದವನನ್ನು ಎದೆಗವಚಿಕೊಂಡಿದ್ದೇ ತಡ, ಚೀಪತೊಡಗಿದ. ಗಪ್ ಚುಪ್, ಅಳುವಿಲ್ಲ! ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುವಂತೆ ಸದ್ದಿಲ್ಲದೆ ಹೀರುತ್ತಿದ್ದಾನೆ. ಇಷ್ಟೆಲ್ಲಾ ಅತ್ತಿದ್ದು ಇದಕ್ಕಾಗಿಯೇ? ಆ ಕ್ಷಣದಿಂದ ನಾನೂ ಬದಲಾದೆ ಅನಿಸಿತು. ಅಲ್ಲಿಯವರೆಗೆ ನಾನೂ ಹುಡುಗಾಟದ ಬುದ್ಧಿಯವಳು, ಹುಟ್ಟು ಗುಣ ಗಟ್ಟ ಹತ್ತಿದರೂ ಬಿಡಲಾರದಂತೆ ಅಂತಾರಲ್ಲ; ಹಾಗೆ. ಮದುವೆಯಾದರೂ ನನ್ನಲ್ಲಿ ಅಂಥ ಬದಲಾವಣೆ ಆಗಿರಲಿಲ್ಲ. ತಾಯಿಯಾಗಿ ಮಗುವಿಗೆ ಹಾಲು ಕುಡಿಸಿದಾಗ ಏನೋ ಜವಾಬ್ದಾರಿ ಬಂದಂತಾಯಿತು. ಅವನು ಕೃಷ್ಣ-ನಾನು ಯಶೋದೆ, ಅವನು ರಾಮ-ನಾನು ಕೌಸಲ್ಯೆ ಹೀಗೆ ಏನೇನೋ ಭಾವನೆಗಳು.
ನನ್ನ ಕೃಷ್ಣ ನಿದ್ದೆ ಮಾಡಿದಾಗ, ಆಸ್ಪತ್ರೆಯ ಹಾಸಿಗೆಯಿಂದ ಇಳಿದು ಸಣ್ಣದಾಗಿ ತಿರುಗಾಟ ಶುರು ಮಾಡಿದೆ. ಪಕ್ಕದ ವಾರ್ಡ್‌ನಲ್ಲಿ ಮಗುವಿನ ಅಳು ತಾರಕಕ್ಕೇರಿತ್ತು. ಹೋಗಿ ನೋಡಿದರೆ, ಮಗು ಹಳದಿ ಬಣ್ಣಕ್ಕೆ ತಿರುಗಿತ್ತು. ಮಗುವಿನ ಅಮ್ಮ ಒಂದೇ ಸಮನೆ ಕಣ್ಣೀರು ಸುರಿಸುತ್ತಿದ್ದಳು. ಮಕ್ಕಳಿಲ್ಲದೆ ಕಂಡ ದೇವರಿಗೆಲ್ಲಾ ಹರಕೆ ಹೊತ್ತು 7-8 ವರ್ಷಗಳ ನಂತರ ಬಸುರಿಯಾಗಿ
ಹೆತ್ತ ಹೆಣ್ಣು ಮಗುವದು. ಆದರೆ ಅಳುವ ಮಗುವಿಗೆ ಕುಡಿಸಲು ಅವಳಲ್ಲಿ ಹಾಲಿಲ್ಲ. ಹಸಿದ ಮಗುವಿನ ಆಕ್ರಂದನ, ಅಮ್ಮನ ಅಸಹಾಯಕತೆಯ ಕಣ್ಣೀರು ನನ್ನನ್ನು ಹಿಡಿದು ನಿಲ್ಲಿಸಿತು. ಇದಕ್ಕೆ ಬೇರೆ ದಾರಿ ಇಲ್ಲವೇ? ಈ ಮಗುವಿಗೆ ನಾನ್ಯಾಕೆ ಯಶೋದೆಯಾಗಬಾರದು ಅನಿಸಿತು. ಆ ಯೋಚನೆಯನ್ನು ವೈದ್ಯರ ಮುಂದಿಟ್ಟೆ. ಡಾಕ್ಟರ್ “ಓಕೆ’ ಎನ್ನುತ್ತಿದ್ದಂತೆ ಮಗು ನನ್ನ ಮಡಿಲು ಸೇರಿತು. ಮರುಕ್ಷಣವೇ ಮಗು ಪಚ್ ಪಚ್ ಶಬ್ದ ಮಾಡುತ್ತಾ ಹಾಲು ಕುಡಿಯಿತು. ಎಷ್ಟು ದಿನದಿಂದ ಹಸಿವಿನಿಂದ ಇದ್ದಳ್ಳೋ? ಮಗುವಿನ ಅಮ್ಮ ಬೆರಗಾಗಿ ಬಿಟ್ಟ ಕಣ್ಣಿನಿಂದ ನೋಡುತ್ತಿದ್ದಳು. ಮಗು ಹಾಲು ಕುಡಿದು, ನನ್ನ ಹೆಗಲ ಮೇಲೆ “ಡರ್’ ಎಂದು ತೇಗಿ ನಿದ್ದೆಗೆ ಜಾರಿದಾಗ ಸಂತೋಷದ ಕಣ್ಣೀರು ಜಿನುಗಿ, ಸಾರ್ಥಕತೆ ಮೂಡಿತು.
ಆಸ್ಪತ್ರೆಯಲ್ಲಿದ್ದ ಎರಡೂರು ದಿನ ನನ್ನ ಮಗನಿಗೆ ಹಾಲು ಕುಡಿಸಿದವಳು ಆ ಮಗುವಿಗೂ ಹಾಲು ಕುಡಿಸಿದೆ. ನಾನೇ ಅದೃಷ್ಟವಂತಳು, ಎರಡು ಮಕ್ಕಳು ಕುಡಿಯುವಷ್ಟು ಹಾಲಿತ್ತು ನನ್ನಲ್ಲಿ. ನನ್ನ ಸಂಬಂಧಿಗಳು, ಯಾರ್ಯಾರದೋ ಮಗುವಿಗೆ ಹಾಲು ಕುಡಿಸಬೇಡ’
ಎಂದು ತಡೆಯುತ್ತಿದ್ದರೂ, ಆ ಮಗುವಿನ ಅಮ್ಮನ ಸಹಾಯಕ್ಕೆ ಹೋಗುವಂತೆ ಒಳಮನಸ್ಸು ಎಚ್ಚರಿಸುತ್ತಲೇ ಇತ್ತು…ಇದು ಸತ್ಯ, ಅವರೇ ಹೊತ್ತು, ಹೆತ್ತು ಮಗುವಿಗೆ ಹಾಲು ಕುಡಿಸುವ ಸಂತೋಷದ ಹತ್ತು ಪಟ್ಟು ಪರರ ಅಸಹಾಯಕ ಮಗುವಿಗೆ ಹಾಲು ಕುಡಿಸಿದಾಗ ಆಗುತ್ತದೆ. -ಗೀತಾ ಕುಂದಾಪುರ