Advertisement

ಬೆಡ್‌ಶೀಟ್‌ ಕದ್ದವರಿಗಿಲ್ಲ ಶಿಕ್ಷೆ

05:27 PM Mar 10, 2018 | |

ಮಂಡ್ಯ: ಶ್ರವಣಬೆಳಗೊಳದಲ್ಲಿ ಬೆಡ್‌ಶೀಟ್‌, ದಿಂಬು ಕದ್ದು ಸಿಕ್ಕಿಹಾಕಿಕೊಂಡ ಪೊಲೀಸ್‌ ಪೇದೆಗಳಿಗೆ ಶಿಕ್ಷೆ ನೀಡಲು ಕ್ರಮ ವಹಿಸದ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಪೊಲೀಸ್‌ ಪೇದೆಯೊಬ್ಬನ ಮೇಲೆ ದುರ್ವರ್ತನೆ ಆರೋಪದ ಮೇಲೆ ಅಮಾನತು ಶಿಕ್ಷೆಗೊಳಪಡಿಸಿರುವ ಸಂಗತಿ ಬೆಳಕಿಗೆ ಬಂದಿದೆ.

Advertisement

ದ್ವಂದ್ವ ನೀತಿ: ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ರಾಮಕೃಷ್ಣ ಅಮಾನತುಗೊಂಡ ಪೇದೆ. ಮದ್ದೂರು ತಾಲೂಕು ಕೆ.ಎಂ.ದೊಡ್ಡಿ ಪೊಲೀಸ್‌ ಠಾಣೆಯ ದಫೇದಾರ್‌ಗಳಾದ ಶ್ರೀನಿವಾಸ್‌ ಮತ್ತು ಯೋಗಣ್ಣ ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ ಕಂಬಳಿ ಕದ್ದು ಸಿಕ್ಕಿಬಿದ್ದಿದ್ದರು. ಕರ್ತವ್ಯದಲ್ಲಿ ದುರ್ನಡತೆ ಯಿಂದ ವರ್ತಿಸಿರುವ ಬಗ್ಗೆ ಫೆ.8ರಂದೇ ತಿಳಿಸಿದ್ದರು. ಇದಕ್ಕೆ ಕ್ರಮ ಜರುಗಿಸದಿರುವುದು ಇಲಾಖೆ ದ್ವಂದ್ವ ನೀತಿಗೆ ಕಾರಣವಾಗಿದೆ.

ಸಂದೇಶ ರವಾನೆ: ಮಹಾಮಸ್ತಕಾಭಿಷೇಕದ ಬಂದೋಬಸ್ತ್ ಕರ್ತವ್ಯಕ್ಕೆ ಶ್ರೀನಿವಾಸ್‌ ಮತ್ತು ಯೋಗಣ್ಣ ಅವರನ್ನು ನಿಯೋಜಿಸಲಾಗಿತ್ತು. ಶ್ರವಣಬೆಳಗೊಳಗದ ಪೊಲೀಸ್‌ ನಗರದಲ್ಲಿ ವಸತಿ ಗೃಹದ ಬೆಡ್‌ಶೀಟ್‌ ಮತ್ತು ದಿಂಬುಗಳನ್ನು ಕಳವು ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದರು. 

ಕರ್ತವ್ಯದಲ್ಲಿದ್ದುಕೊಂಡು ದುರ್ವರ್ತನೆ ಪ್ರದರ್ಶಿಸಿದರೆಂಬ ಕಾರಣಕ್ಕೆ ಅವರನ್ನು ಫೆ.8ರಂದೇ ಹಾಸನ ಜಿಲ್ಲಾ
ಪೊಲೀಸ್‌ ಅಧೀಕ್ಷಕರು ಕರ್ತವ್ಯದಿಂದ ಬಿಡುಗಡೆ ಮಾಡಿ ಮಂಡ್ಯ ಜಿಲ್ಲಾ ಪೊಲೀಸ್‌ ಅಧೀಕ್ಷಕರಿಗೆ ಸಂದೇಶ ರವಾನಿಸಿದ್ದರು.

ಆರೋಪ: ದುರ್ನಡತೆ ಪ್ರದರ್ಶಿಸಿದ ಪೊಲೀಸ್‌ ಪೇದೆಗಳಾದ ಶ್ರೀನಿವಾಸ್‌ ಮತ್ತು ಯೋಗಣ್ಣ ಅವರನ್ನು ಇಂದಿಗೂ ಕರ್ತವ್ಯದಲ್ಲಿ ಉಳಿಸಿಕೊಂಡಿದ್ದು, ಅನಾರೋಗ್ಯ ಕಾರಣಕ್ಕೆ ರಜೆ ಕೇಳಿದ ರಾಮಕೃಷ್ಣ ಅವರನ್ನು ಇದಕ್ಕೆ ಪ್ರಶ್ನೆ
ಮಾಡಿದರೆಂಬ ಒಂದೇ ಕಾರಣಕ್ಕೆ ದುರ್ನಡತೆ ಆರೋಪದಡಿ ಅಮಾನತು ಮಾಡಲಾಗಿದೆ.

Advertisement

ರಾಮಕೃಷ್ಣರ ವರ್ತನೆ ದುರ್ನಡತೆಯಾದಲ್ಲಿ ಹಾಸಿಗೆ ದಿಂಬು ಕದ್ದವರದ್ದು ಯಾವ ನಡತೆ ಎಂದು ಇಲಾಖೆಯವರೇ ಪ್ರಶ್ನೆ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. 

ಶಿಸ್ತುಕ್ರಮ ಕಡ್ಡಾಯ: ಶ್ರವಣಬೆಳಗೊಳದಲ್ಲಿ ಬೆಡ್‌ಶೀಟ್‌, ದಿಂಬು ಕಳವು ಮಾಡಲು ಯತ್ನಿಸಿದ ಶ್ರೀನಿವಾಸ ಮತ್ತು ಯೋಗಣ್ಣನವರ ವಿರುದ್ಧವೂ ಶಿಸ್ತು ಕ್ರಮ ಜರುಗಿಸುತ್ತೇವೆ. ನಮಗೆ ಹಾಸನ ಪೊಲೀಸ್‌ ಅಧೀಕ್ಷಕರಿಂದ ವರದಿ ಬರಬೇಕಿದೆ. ಅಲ್ಲಿಂದ ಬರುವ ವರದಿ ಆಧರಿಸಿ ವಿಚಾರಣೆ ನಡೆಸಿ ಬಳಿಕ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷಕಿ ಜಿ. ರಾಧಿಕಾ ಸ್ಪಷ್ಟಪಡಿಸಿದರು. 

ಪೇದೆ ರಾಮಕೃಷ್ಣ ಅವರು ಅನಧಿಕೃತ ರಜೆ ಹಾಗೂ ಮೇಲಧಿಕಾರಿಗಳೊಂದಿಗೆ ದುರ್ವರ್ತನೆ ಪ್ರದರ್ಶಿಸಿದ್ದಾರೆ. ಇದು ಒಮ್ಮೆ ನಡೆದಿರುವ ಘಟನೆಯಲ್ಲ. ಹಲವು ಬಾರಿ ಇದೇ ವರ್ತನೆ ನಡೆಸಿದ್ದರಿಂದ ಅಮಾನತುಪಡಿಸಲಾಗಿದೆ.
ಜಿ.ರಾಧಿಕಾ , ಜಿಲ್ಲಾ ಪೊಲೀಸ್‌ ಅಧೀಕ್ಷಕಿ 

ಮಹಿಳೆಯರೊಂದಿಗೆ ಪೊಲೀಸರ ಅನುಚಿತ ವರ್ತನೆ 
 ಪಾಂಡವಪುರ: ಅಗಲಿದ ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯನವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಿದ್ದ ವೇಳೆ ಅವರಿಗೆ ಮನವಿ ಕೊಡಲು ಯತ್ನಿಸಿದ ಮಹಿಳೆಯರನ್ನು ದೂರ ತಳ್ಳಿ ಪೊಲೀಸರು ದೌರ್ಜನ್ಯ ಪ್ರದರ್ಶಿಸಿದ್ದಾರೆ.
 
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಂದೇ ಪೊಲೀಸರು ಮಹಿಳೆಯರೊಂದಿಗೆ ದರ್ಪ ಪ್ರದರ್ಶಿಸುವ
ಮೂಲಕ ಅಮಾನವೀಯವಾಗಿ ನಡೆದು ಕೊಂಡಿದ್ದಾರೆ. ಪೊಲೀಸರ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ನಡೆದ ಪುಟ್ಟಣ್ಣಯ್ಯ ಶ್ರದ್ಧಾಂಜಲಿ  ಕಾರ್ಯಕ್ರಮ ಮುಗಿಸಿ ಕಾರಿನತ್ತ ತೆರಳುತ್ತಿದ್ದ
ವೇಳೆ, ಲೋಕಾಯುಕ್ತರಿಗೆ ಯುವಕನೊಬ್ಬ ಚಾಕು ಹಾಕಿದ ಪ್ರಕರಣವನ್ನು ಮುಂದಿಟ್ಟು ಕೊಂಡು ಇಬ್ಬರು ಮಹಿಳೆಯರು ಭದ್ರತೆ ನೆಪದಲ್ಲಿ ಮನವಿ ಕೊಡಲು ಮುಂದಾದ ಮಹಿಳೆಯರಿಗೆ ಈ ಅವಸ್ಥೆ ಎದುರಾಗಿದೆ.

ಮನವಿ ಕೊಡುವ ವೇಳೆ ಸಿಎಂ ಅವರತ್ತ ತಿರುಗಿಯೂ ನೋಡದೆ ಕಾರಿನಲ್ಲಿ ಕುಳಿತರು. ಆದರೆ ಅಲ್ಲೇ ಇದ್ದ ಪೊಲೀಸರು ಇಬ್ಬರೂ ಮಹಿಳೆಯರ ರಟ್ಟೆ ಹಿಡಿದು ದೂರಕ್ಕೆ ನೂಕಿದರು. ಅಲ್ಲದೆ, ಇದೇ ವೇಳೆ ಮನವಿ ನೀಡಲು ಮುಂದಾದ ವೃದ್ಧರೊಬ್ಬರ ಕುತ್ತಿಗೆ ಹಿಡಿದು ಬಹುದೂರ ಕರೆದುಕೊಂಡು ಹೋಗಿ ದರ್ಪ ಪ್ರದರ್ಶಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next