ಬಾಗಲಕೋಟೆ: ಕೊರೊನಾ 2ನೇ ಅಲೆ ಹೆಚ್ಚುತ್ತಿರುವ ಹೊತ್ತಲ್ಲೇ ಖಾಸಗಿ ಆಸ್ಪತ್ರೆಗಳು ಬೆಡ್ ಖಾಲಿ ಇಲ್ಲ ಎಂಬ ನೆಪ ಹೇಳುತ್ತಿರುವ ಪ್ರಸಂಗ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಪ್ರಭಾವ-ಹೆಚ್ಚಿನ ಹಣ ಕೊಟ್ಟರೆ ಮಾತ್ರ ಬೆಡ್ ಸಿಗುತ್ತಿವೆ. ರೆಮ್‌ಡೆಸಿವಿಯರ್ ಔಷಧಕ್ಕೆ ಜಿಲ್ಲೆಯಲ್ಲೂ ಹೆಚ್ಚಿನ ಬೇಡಿಕೆ ಇದ್ದು, ಕೊರೊನಾ ಪಾಸಿಟಿವ್ ಬಂದ್ರೆ ಸಾಕು ಈ ಔಷಧ ಯಾವ ಆಸ್ಪತ್ರೆಯಲ್ಲಿ ಸಿಗುತ್ತದೆಯೋ ಅಲ್ಲಿಯೇ ಸೋಂಕಿತ ವ್ಯಕ್ತಿಯನ್ನು ದಾಖಲಿಸೋಣ ಎಂಬ ವಾದಕ್ಕೆ ಜನರೂ ಬಂದಿದ್ದಾರೆ.
ಕೆಲವರಂತೂ ಸೋಂಕಿತ ವ್ಯಕ್ತಿಯನ್ನು ದಾಖಲು ಮಾಡುವ ಮೊದಲೇ ಆಸ್ಪತ್ರೆಯವರಿಗೆ ಫೋನ್ ಮಾಡಿ ನಿಮ್ಮಲ್ಲಿ ರೆಮ್‌ಡೆಸಿವಿಯರ್ ಔಷಧ ಇದೆಯೋ ಇಲ್ವೋ, ನಾವೇ ತಂದು ಕೊಡಬೇಕಾ, ನೀವೇ ಅರೇಂಜ್ ಮಾಡ್ತಿರಾ ಎಂದೆಲ್ಲ ಕೇಳಿ, ಆ ಬಳಿಕ ಸೋಂಕಿತ ವ್ಯಕ್ತಿಯನ್ನು ದಾಖಲಿಸಲಾಗುತ್ತಿದೆ.
ನಗರದಲ್ಲಿ ಸುಮಾರು ಏಳು ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಆರಂಭಿಸಿದ್ದು, ಅದರಲ್ಲಿ ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆ 550 ಬೆಡ್ ಗಳ ವಿಶೇಷ ವಿಭಾಗವನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಟ್ಟಿದೆ. ಇನ್ನು ಉಳಿದ ಆರು ಆಸ್ಪತ್ರೆಯಲ್ಲಿ ಒಂದು ಆಸ್ಪತ್ರೆ ಅತ್ಯಾಧುನಿಕ ಆಕ್ಸಿಜನ್ ಸೌಲಭ್ಯಯುಳ್ಳ 10 ಬೆಡ್‌ಗಳ ವಿಭಾಗ ಆರಂಭಿಸಿದ್ದು, ಉಳಿದೆಲ್ಲ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ಆರಂಭಿಸಿದ್ದರೂ ಅದಕ್ಕೆ ಬೇಕಾದ ಔಷಧ ಸಂಗ್ರಹ ಇಲ್ಲ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯಲ್ಲಿ ರೆಮ್‌ಡೆಸಿವಿಯರ್ ಅಥವಾ ಇತರೇ ಔಷಧ ಹೆಚ್ಚಿನ ಬೆಲೆಗಾಗಲಿ, ಕಾಳ ಸಂತೆಯಲ್ಲಿ ಮಾರಾಟ ಮಾಡಿದ ಪ್ರಕರಣ ಕಂಡು ಬಂದಿಲ್ಲ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಈ ಔಷಧಿಯನ್ನು ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಸೋಂಕಿತರಿಗೆ ನೀಡಲಾಗುತ್ತಿದೆ ಎಂಬ ಆರೋಪವಿದೆ. ಇದರ ಮೇಲೆ ಜಿಲ್ಲಾಡಳಿತ ಹೆಚ್ಚಿನ ನಿಗಾ ವಹಿಸಿದೆಯಾದರೂ ಈವರೆಗೆ ಅಂತಹ ಪ್ರಕರಣ ಪತ್ತೆಯಾಗಿಲ್ಲ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 450 ಹಾಗೂ ಕುಮಾರೇಶ್ವರ ಆಸ್ಪತ್ರೆಯಲ್ಲಿ 550 ಬೆಡ್ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಬೆಡ್‌ಗಳ ಸೌಲಭ್ಯವಿದೆ. ಸದ್ಯ ಜಿಲ್ಲಾಸ್ಪತ್ರೆ ಸಹಿತ ಎಲ್ಲ ಆಸ್ಪತ್ರೆಯಲ್ಲೂ ಸೋಂಕಿತರು ಪೂರ್ಣವಾಗಿಲ್ಲ. ಆದರೂ ಚಿಕಿತ್ಸೆಗಾಗಿ ಬರುವವರಿಗೆ ಬೆಡ್ ಇಲ್ಲ ಎಂದು ಖಾಸಗಿ ಆಸ್ಪತ್ರೆಯವರು ಹೇಳುತ್ತಿದ್ದಾರೆ.