Advertisement

ಪ್ರತ್ಯೇಕ ಆರೋಗ್ಯ ತಂಡ, ಶಿಕ್ಷಕರಿಂದ ಸರ್ವೆ: ಡಿಸಿ

10:02 AM Aug 01, 2020 | mahesh |

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸೋಂಕಿತ ವ್ಯಕ್ತಿಯನ್ನು ತತ್‌ಕ್ಷಣವೇ ಆಸ್ಪತ್ರೆ ದಾಖಲಿಸಲು ಅಥವಾ ಕ್ವಾರಂಟೈನ್‌ಗೆ ಒಳಪಡಿಸಲು ಗ್ರಾ.ಪಂ., ವಾರ್ಡ್‌ ಮಟ್ಟದ ಕಮಿಟಿಗೆ ಸೂಕ್ತ ಮಾರ್ಗದರ್ಶನ ನೀಡುವ ಆರೋಗ್ಯ ತಂಡವನ್ನು ನೇಮಿಸಲು ಮತ್ತು ಜಿಲ್ಲೆಯ ವಿವಿಧೆಡೆಯ ಜನರ ಆರೋಗ್ಯ ಸಂಬಂಧಿ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಆಯಾ ಭಾಗದ ಶಿಕ್ಷಕರು, ಉಪನ್ಯಾಸಕರ ಬಳಕೆಗೆ ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ
ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

Advertisement

ಸೋಂಕಿತ ವ್ಯಕ್ತಿ ಶೀಘ್ರ ಆಸ್ಪತ್ರೆಗೆ ಅಥವಾ ಕ್ವಾರಂಟೈನ್‌ಗೆ ಒಳಗಾಗಬೇಕು. ಇದಾದರೆ ಸೋಂಕು ಹರಡುವುದು ಕಡಿಮೆಯಾಗುತ್ತದೆ. ಹೀಗಾಗಿ ವಾರ್ಡ್‌, ಗ್ರಾ.ಪಂ. ಮಟ್ಟದಲ್ಲಿ ಕೊರೊನಾ ಟಾಸ್ಕ್ಪೋರ್ಸ್‌ ಪರಿಣಾಮಕಾರಿಯಾಗಿ ಬಳಕೆ ಮಾಡಬೇಕಿದೆ. ಇದಕ್ಕಾಗಿ ಹಿರಿಯ ವೈದ್ಯರಿಂದ ಸಂಬಂಧಪಟ್ಟ ತಂಡಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಆನ್‌ಲೈನ್‌ ವ್ಯವಸ್ಥೆ ರೂಪಿಸಲಾಗುವುದು ಎಂದವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯಲ್ಲಿ ಪ್ರತೀ ಮನೆಯ ಸರ್ವೆ ನಡೆಸಿ ಅನಾರೋಗ್ಯ ದಿಂದ ಇರುವವರ ಬಗ್ಗೆ ವಿವರ ಪಡೆಯಲಾಗಿದೆ. ಜತೆಗೆ ಇವರ ಜತೆಗೆ ಸಂಪರ್ಕ ಇರಿಸಿಕೊಂಡು ಮುಂದೆಯೂ ವಿವರ ಪಡೆದು ಕೊರೊನಾ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಶಿಕ್ಷಕರ ಬಳಕೆಗೆ ಉದ್ದೇಶಿಸಲಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ಉಪಸ್ಥಿತರಿದ್ದರು.

4,608 ಬೆಡ್‌ ಲಭ್ಯ
ಜಿಲ್ಲೆಯ 61 ಆಸ್ಪತ್ರೆಗಳಲ್ಲಿ 4,608 ಬೆಡ್‌ಗಳು ಲಭ್ಯವಿವೆ. ಇದರಲ್ಲಿ 662 ಭರ್ತಿಯಾಗಿದ್ದು 3,946 ಲಭ್ಯ ಇವೆ. ಅದರಲ್ಲಿ 3,760 ಸಾಮಾನ್ಯ ಬೆಡ್‌ಗಳು, 633
ಆಕ್ಸಿಜನ್‌ ಸಹಿತ ಬೆಡ್‌ಗಳು, 115 ವೆಂಟಿಲೇಟರ್‌ಗಳಿವೆ. ದ.ಕ. ಜಿಲ್ಲೆಗೆ 27,000 ರ್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಕಿಟ್‌ಗಳು ಬಂದಿದ್ದು, 6,000ಕ್ಕೂ ಅಧಿಕ ಟೆಸ್ಟ್‌ ನಡೆಸಲಾಗಿದೆ. ಈ ಪರೀಕ್ಷಾ ಗುರಿ ತಲುಪಲು ಖಾಸಗಿ ಆಸ್ಪತ್ರೆಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲು ಉದ್ದೇಶಿಸಲಾಗಿದೆ.

ಯಾವುದೇ ಆಸ್ಪತ್ರೆಗಳಲ್ಲಿ ಬೆಡ್‌ ಇಲ್ಲ ಎಂದು ರೋಗಿಗಳನ್ನು ವಾಪಸ್‌ ಕಳುಹಿಸಬಾರದು. ಆಸ್ಪತ್ರೆಯಲ್ಲಿ ಎಷ್ಟು ಬೆಡ್‌ಗಳಿವೆ ಎಂಬುದರ ಕುರಿತು ಆನ್‌ಲೈನ್‌ನಲ್ಲಿ ಮಾಹಿತಿಯನ್ನು ಜನರಿಗೆ ನೀಡಲಾಗುವುದು. ಮೊಬೈಲ್‌ ಆ್ಯಪ್‌ ಮೂಲಕ ಈ ಬಗ್ಗೆ ಮಾಹಿತಿ ಪಡೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಬಿಲ್‌ ವಿಚಾರದಲ್ಲಿಯೂ ಜನರಿಗೆ ಯಾವುದೇ ಸಮಸ್ಯೆ ಆಗದಂತೆ ನಿರ್ದೇಶನ ನೀಡಲಾಗುವುದು. ಈಗಿರುವ ದ.ಕ. ಸಹಾಯವಾಣಿಯನ್ನು ಇನ್ನಷ್ಟು ಬಲಪಡಿಸಲಾಗುವುದು.
– ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ. ಜಿಲ್ಲೆ

Advertisement
Advertisement

Udayavani is now on Telegram. Click here to join our channel and stay updated with the latest news.

Next