Advertisement
ಎಟಿಎಮ್‌ಗಳಲ್ಲಿ ನಮ್ಮ ಖಾತೆಯಿಂದ ಹಣ ಪಡೆಯಲು ಬಳಸುವ ಡೆಬಿಟ್ ಕಾರ್ಡ್ ಅಥವಾ ಎಟಿಎಮ್ ಕಾರ್ಡ್‌ಗಳನ್ನು, ಇ-ವಾಣಿಜ್ಯ, ಇ-ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಹೋಟೆಲ್, ಅಂಗಡಿ ಮೊದಲಾದ ಕಡೆ ಕೂಡಾ ಬಳಸಬಹುದು. ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ 90 ಕೋಟಿ ಡೆಬಿಟ್ ಕಾರ್ಡ್‌ಗಳು ಮತ್ತು 3 ಕೋಟಿ ಕ್ರೆಡಿಟ್ ಕಾರ್ಡ್‌ಗಳು ಬಳಕೆಯಲ್ಲಿವೆ. ಆದರೆ ಸೈಬರ್ ಅಪರಾಧಿಗಳು ಬ್ಯಾಂಕಿನ ಗ್ರಾಹಕರನ್ನು ವಂಚಿಸಿ, ಡೆಬಿಟ್ ಕಾರ್ಡ್ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಮ್ಮ ದೇಶದಲ್ಲಿ ಮೇಲಿಂದ ಮೇಲೆ ವರದಿಯಾಗುತ್ತಿವೆ.
Related Articles
Advertisement
ಎ.ಟಿ.ಎಂ.ಗಿಂತ ಸುರಕ್ಷಿತ: ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎರಡು ಹಂತದ ಸುರಕ್ಷತೆಯನ್ನು ಬಳಸಲಾಗುತ್ತಿರುವುದರಿಂದ, ಡೆಬಿಟ್ ಕಾರ್ಡ್ ಬಳಕೆಗಿಂತ ಇದು ಹೆಚ್ಚು ಸುರಕ್ಷಿತ. ಎಟಿಎಮ್‌ನಲ್ಲಿ ಡೆಬಿಟ್‌ಕಾರ್ಡ್ ಬಳಸುವಾಗ, ಎಟಿಎಮ್ ಪಿನ್ ಸಂಖ್ಯೆಯನ್ನು ಗ್ರಾಹಕರು ಬಳಸುತ್ತಾರೆ. ಡೆಬಿಟ್ ಕಾರ್ಡ್ ಮಾಹಿತಿ ಮತ್ತು ಎಟಿಎಮ್ ಪಿನ್ ಸಂಖ್ಯೆ ಬೇರೆಯವರಿಗೆ ದೊರೆತರೆ, ಅವರು ಕೂಡಾ ಎಟಿಎಮ್‌ಗಳಲ್ಲಿ ಗ್ರಾಹಕರ ಖಾತೆಯಿಂದ ಹಣ ಪಡೆದುಕೊಳ್ಳಬಹುದು.
ಆದರೆ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ, ಬ್ಯಾಂಕ್ ನೀಡುವ ತಂತ್ರಾಂಶವನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರು ಡೌನ್‌ಲೋಡ್ ಮಾಡಿಕೊಳ್ಳಬೇಕು. ಗ್ರಾಹಕರು ಈ ಮೊಬೈಲ್ ಆ್ಯಪ್ ಬಳಸಲು, ನೆಟ್ ಬ್ಯಾಂಕಿಂಗ್‌ನ ಗ್ರಾಹಕ ಐಡಿ ಮತ್ತು ಪಾಸ್‌ವರ್ಡ್ ಬಳಸಬಹುದು ಅಥವಾ ಎಮ್‌ಪಿನ್ (ಮೊಬೈಲ್ ಬ್ಯಾಂಕಿಂಗ್ ಪಿನ್)ಅನ್ನು ಬಳಸಬಹುದು.
ಬ್ಯಾಂಕಿನ ಎಟಿಎಮ್‌ನಲ್ಲಿ ತಮ್ಮ ಖಾತೆಯಿಂದ ಹಣ ಪಡೆಯಲು ಗ್ರಾಹಕರು, 1) ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಡಿಜಿಟಲ್ ಬ್ಯಾಂಕಿಂಗ್ ಆ್ಯಪ್‌ಗೆ ಲಾಗಿನ್ ಆಗಬೇಕು. ತಾವು ಎಷ್ಟು ಹಣವನ್ನು ಎಟಿಎಮ್‌ನಿಂದ ಪಡೆಯಲು ಇಚ್ಛಿಸುತ್ತಿರುವುದಾಗಿ ನಮೂದಿಸಿ, ಹಣ ಪಡೆಯಲು ನಿರ್ದಿಷ್ಟ ಮಾಹಿತಿಯನ್ನು ಮೊಬೈಲ್‌ಆ್ಯಪ್‌ನಲ್ಲಿ ಟೈಪಿಸಬೇಕು. 2) ಬ್ಯಾಂಕು, ಎಸ್‌ಎಮ್‌ಎಸ್ ಮೂಲಕ 6 ಡಿಜಿಟ್‌ಗಳ ಪಿನ್ ನಂಬರನ್ನು ಗ್ರಾಹಕರ ಮೊಬೈಲ್ ಫೋನ್‌ಗೆ ಕಳುಹಿಸುತ್ತದೆ. 3) ಬ್ಯಾಂಕಿನ ಎಟಿಎಮ್‌ನಲ್ಲಿ ಗ್ರಾಹಕರು, ಬ್ಯಾಂಕು ಕಳುಹಿಸಿದ 6 ಡಿಜಿಟ್‌ಗಳ ಪಿನ್ ಸಂಖ್ಯೆ ಬಳಸಿ, ತಮ್ಮ ಖಾತೆಯಿಂದ ಹಣ ಪಡೆಯಬಹುದು. ಈ ವ್ಯವಸ್ಥೆಯನ್ನು ಬಳಸುವಾಗ, ಗ್ರಾಹಕರು ಎರಡು ಪ್ರಮುಖ ವಿಷಯಗಳನ್ನು ಗಮನಿಸಬೇಕು,
1) ಬ್ಯಾಂಕಿನ ಆ್ಯಪ್ ತಂತ್ರಾಂಶದಲ್ಲಿ ಹಣ ಪಡೆಯಲು ಗ್ರಾಹಕರು ನಮೂದಿಸಿದ ಮೊತ್ತ ಮತ್ತು ಎಟಿಎಮ್‌ನಿಂದ ಗ್ರಾಹಕರು ಪಡೆಯಲು ನಮೂದಿಸಿದ ಮೊತ್ತ ಒಂದೇ ಆಗಿರಬೇಕು. 2) ಬ್ಯಾಂಕ್ ಕಳುಹಿಸಿದ 6 ಡಿಜಿಟ್‌ಗಳ ಪಿನ್ ಸಂಖ್ಯೆಯನ್ನು 30 ನಿಮಿಷಗಳ ಒಳಗೆ ಎಟಿಎಮ್‌ನಲ್ಲಿ ಬಳಸಬೇಕು. ಸಮಯ ಮೀರಿದರೆ, ಈ ಪಿನ್ ನಿಷ್ಕ್ರಿಯವಾಗುತ್ತದೆ ಮತ್ತು ಹೊಸ ಪಿನ್‌ಗಾಗಿ ಮತ್ತೂಮ್ಮೆ ಕೋರಿಕೆ ಸಲ್ಲಿಸಬೇಕಾಗುತ್ತದೆ. ಸುಧಾರಣೆಯ ಅಗತ್ಯವಿದೆ: ಇಂಥ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗ್ರಾಹಕರು ಹೆಚ್ಚು ಬಳಸಬೇಕಾದರೆ, ಬ್ಯಾಂಕಿನ ಆ್ಯಪ್ ತಂತ್ರಾಂಶ ಮತ್ತು ಎಟಿಎಮ್ ತಂತ್ರಾಂಶ ಸ್ಥಳೀಯ ಭಾಷೆಯಲ್ಲಿರಬೇಕು. ಉದಾಹರಣೆಗೆ, ಕರ್ನಾಟಕದಲ್ಲಿ ಎಸ್‌ಬಿಐ ಗ್ರಾಹಕರಿಗೆ ನೀಡುವ ಯೋನೋ ಆ್ಯಪ್ ಮತ್ತು ಯೋನೋ ಕ್ಯಾಷ್ ಪಾಯಿಂಟ್ ತಂತ್ರಾಂಶಗಳನ್ನು ಕನ್ನಡ ಭಾಷೆಯಲ್ಲಿ ನೀಡಬೇಕು. ಯೋನೋ ಸೌಲಭ್ಯ ಬಳಸುವಾಗ ಗ್ರಾಹಕರಿಗೆ ಸಮಸ್ಯೆಯಾದರೆ ಬ್ಯಾಂಕಿನ ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ಎನ್ನಲಾಗುತ್ತದೆ. ಇಂಥ ಸಹಾಯವಾಣಿಗೆ ಕರೆ ಮಾಡುವ ಗ್ರಾಹಕರ ಜೊತೆ ಅವರ ಸ್ಥಳೀಯ ಭಾಷೆಯಲ್ಲಿ ಮಾತನಾಡುವ ಸಿಬ್ಬಂದಿಯನ್ನು ಸಹಾಯವಾಣಿಯಲ್ಲಿ ನೇಮಿಸಬೇಕು. ಎಟಿಎಮ್‌ನಿಂದ ಕಾರ್ಡ್ ಇಲ್ಲದೆ ಹಣ ಪಡೆಯುವುದು ಮಾತ್ರವಲ್ಲ, ಯೋನೋ ಬಳಸಿ ಬೇರೆಯವರ ಬ್ಯಾಂಕ್ ಖಾತೆಗೆ ಹಣ ಪಾವತಿಯನ್ನೂ ಮಾಡಬಹುದು. ಆನ್‌ಲೈನ್‌ನಲ್ಲಿ ಬಸ್ಸು, ರೈಲು ಅಥವಾ ವಿಮಾನದ ಟಿಕೆಟ್‌ಗಳನ್ನು ಖರೀದಿಸಬಹುದು, ಹೀಗೆ ಹಲವು ರೀತಿ ಗ್ರಾಹಕರು ಸುರಕ್ಷಿತವಾಗಿ ವ್ಯವಹರಿಸಬಹುದು ನಿಜ. ಆದರೆ ಇಂಥ ಸೌಲಭ್ಯಗಳ ಕುರಿತು ಗ್ರಾಹಕರಿಗೆ ಮಾಹಿತಿ ನೀಡಲು, ಸುರಕ್ಷತೆ ಕುರಿತು ಇರುವ ಅನುಮಾನಗಳನ್ನು ಪರಿಹರಿಸಲು ಮತ್ತು ತರಬೇತಿ ನೀಡಲು ಮೊದಲು ಬ್ಯಾಂಕುಗಳು ಮುಂದಾಗಬೇಕಾಗುತ್ತದೆ. ಎಸ್‌ಬಿಐನ ಮಹಾತ್ವಾಕಾಂಕ್ಷೆಯ ಯೋನೋ ಜನಪ್ರಿಯವಾದಾಗ, ಬೇರೆ ಬ್ಯಾಂಕುಗಳು ಕೂಡಾ ಇಂಥ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ನೀಡಲು ಮುಂದಾಗುತ್ತಾರೆ. * ಉದಯಶಂಕರ ಪುರಾಣಿಕ್