Advertisement

ಅ.2ರೊಳಗೆ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಲಿ

12:55 PM Jun 23, 2017 | Team Udayavani |

ಮೈಸೂರು: ಗಾಂಧಿ ಜಯಂತಿಯೊಳಗೆ ಮೈಸೂರು ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ ತಾಕೀತು ಮಾಡಿದರು.

Advertisement

ಗುರುವಾರ ಜಿಪಂ ಕಿರು ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಕುಡಿಯುವ ನೀರು ಸರಬರಾಜು, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಶೌಚಾಲಯಗಳ ನಿರ್ಮಾಣ ಮತ್ತು ಇಲಾಖೆಯ ಇತರೆ ಯೋಜನೆಗಳ ಕಾಮಗಾರಿಗಳ ಭೌತಿಕ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಬಯಲು ಶೌಚ ಮುಕ್ತ ಕರ್ನಾಟಕವನ್ನಾಗಿಸುವ ಉದ್ದೇಶದಿಂದ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ವಿಶೇಷ ಒತ್ತು ನೀಡಿದ್ದರೂ ಜನರು ಮುಂದೆ ಬರುತ್ತಿಲ್ಲ. ಜನರ ಮರ್ಯಾದೆ ಕಾಪಾಡಲು ಸರ್ಕಾರವೇ ಹಣ ಕೊಟ್ಟು, ಬಯಲು ಬಹಿರ್ದೆಸೆಯಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಿದರೂ ಜನರು ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಮುಂದೆ ಬರುತ್ತಿಲ್ಲ ಎಂದು ವಿಷಾದಿಸಿದರು.

ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಬಲಗೊಳಿಸುವ ಉದ್ದೇಶದಿಂದ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಸ್ವತ್ಛ ಭಾರತ್‌ ನಿರ್ಮಾಣ ಯೋಜನೆ ಮೂಲಕ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಅಗತ್ಯ ಹಣಕಾಸಿನ ನೆರವನ್ನೂ ನೀಡಿದೆ ಎಂದರು.

ನಾಲ್ಕು ವರ್ಷಗಳ ಹಿಂದೆ ರಾಜ್ಯದಲ್ಲಿ ಒಟ್ಟಾರೆ ವೈಯಕ್ತಿಕ ಶೌಚಾಲಯಗಳ ಪ್ರಮಾಣ ಶೇ.34ರಷ್ಟಿತ್ತು. ಇಂದು ಶೇ.74ಕ್ಕೆ ತಲುಪಿದೆ. ಆದರೂ ಉತ್ತರ ಕರ್ನಾಟಕ ಭಾಗದಲ್ಲಿ ಇಂದಿಗೂ ವೈಯಕ್ತಿಕ ಶೌಚಾಲಯಗಳ ಪ್ರಮಾಣ ಶೇ.34 ರಿಂದ ಶೇ.37ರಷ್ಟು ಮಾತ್ರವಿದೆ ಎಂದು ತಿಳಿಸಿದರು.

Advertisement

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಶಿವಶಂಕರ್‌ ಮಾತನಾಡಿ, ಜಿಲ್ಲೆಯಲ್ಲಿ 1 ಲಕ್ಷದ 927 ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದ್ದು, ಈವರೆಗೆ 7589 ಶೌಚಾಲಯ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ. ಇನ್ನೂ 97870  ಶೌಚಾಲಯ ನಿರ್ಮಾಣಕ್ಕೆ ಕಾರ್ಯಾದೇಶ ನೀಡಬೇಕಿದೆ. 2012ರಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣದ ಉದ್ದೇಶದಿಂದ ಮಾಡಿದ ಸಮೀಕ್ಷೆಯಲ್ಲಿನ ಲೋಪದಿಂದ ಗುರಿ ಸಾಧನೆ ಕಷ್ಟವಾಗುತ್ತಿದೆ.

ಆದರೂ ಈ ಕಾರ್ಯವನ್ನು ಸವಾಲಾಗಿ ಸ್ವೀಕರಿಸಿದ್ದು, ಹುಣಸೂರು ತಾಲೂಕಿನಲ್ಲಿ ಶೇ.92.87, ತಿ.ನರಸೀಪುರ ತಾಲೂಕು ಶೇ.67.21, ಮೈಸೂರು ತಾಲೂಕಿನಲ್ಲಿ ಶೇ.73.66 ಹಾಗೂ ಪಿರಿಯಾಪಟ್ಟಣ ತಾಲೂಕಿನಲ್ಲಿ ಶೇ.77.99 ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ನಾಲ್ಕುಗಳನ್ನು ವಿಶೇಷವಾಗಿ ಪರಿಗಣಿಸಿ ಅಕ್ಟೋಬರ್‌ 2ರೊಳಗೆ ಬಯಲು ಬಹಿರ್ದೆಸೆ ಮುಕ್ತ ತಾಲೂಕಾಗಿ ಘೋಷಣೆ ಮಾಡಲು ಶ್ರಮಿಸುವುದಾಗಿ ಹೇಳಿದರು.

ಬಹು ಗ್ರಾಮ ಕುಡಿಯುವ ನೀರು ಯೋಜನೆಗಳ ಕಾಮಗಾರಿಗೆ ವೇಗ ನೀಡಿ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ನಂಜಯ್ಯನಮಠ ತಿಳಿಸಿದರು. ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣಗೊಳಿಸಲು ಕನಿಷ್ಠ 200 ಕೋಟಿ ಅನುದಾನ ಅಗತ್ಯವಿದೆ.

ಈ ವರ್ಷ ಈ ಅನುದಾನ ನೀಡಿದರೆ ಬಾಕಿ ಉಳಿದಿರುವ 15 ಯೋಜನೆಗಳನ್ನು ಪೂರ್ಣಗೊಳಿಸಬಹುದು ಎಂದು ಜಿಪಂ ಸಿಇಒ ಶಿವಶಂಕರ್‌ ಸಮಿತಿಯ ಗಮನ ಸೆಳೆದರು. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರ ಜತೆ ಚರ್ಚಿಸಿ ಹಣಕಾಸು ಕೊರತೆ ಆಗದಂತೆ ಹಂತ ಹಂತವಾಗಿ ಬಿಡುಗಡೆಗೆ ಕ್ರಮವಹಿಸುವುದಾಗಿ ನಂಜಯ್ಯನ ಮಠ ಭರವಸೆ ನೀಡಿದರು.

ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಸಂಬಂಧ ಸಹಕಾರ ಇಲಾಖೆಯ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷರು, ಜು.31ರೊಳಗೆ ಘಟಕ ಸ್ಥಾಪನೆ ಮಾಡದಿದ್ದಲ್ಲಿ ಸಹಕಾರ ಇಲಾಖೆಗೆ ನೀಡಲಾಗಿರುವ ಹಣ ವಾಪಸ್‌ ಪಡೆಯುವುದಾಗಿ ಎಚ್ಚರಿಕೆ ನೀಡಿದರು.

ತಿ.ನರಸೀಪುರ ತಾಲೂಕಿನ ಹೊರಳಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿಲ್ಲದ ಪರಿಣಾಮ ಜನರು ವಾಂತಿ, ಬೇಧಿ, ಮಂಡಿ ನೋವಿನ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಈ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಅಳವಡಿಸಲು ಕ್ರಮ ಕೈಗೊಳ್ಳಿ ಎಂದು ತಿಳಿಸಿದರು. ಸಮಿತಿ ಸದಸ್ಯರಾದ ಆರ್‌.ಆರ್‌.ತಿಪ್ಪೆ$àಸ್ವಾಮಿ, ಎ.ಆರ್‌.ಸುಧಾಮಣಿ ಇತರರು ಇದ್ದರು.

ಸದಸ್ಯೆ ತಾಕೀತು: ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 2 ರೂ. ಕಾಯಿನ್‌ ಹಾಕಿದರೆ 20 ಲೀಟರ್‌ ನೀರು ಬರುವ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, 2 ಲೀಟರ್‌ ಬಾಟಲಿಯಲ್ಲಿ ತುಂಬಿಸಿಕೊಂಡು ಹೋಗುವವರಿಂದ 18 ಲೀಟರ್‌ ಶುದ್ಧ ನೀರು ಪೋಲಾಗುತ್ತಿದೆ. ಇದಕ್ಕಾಗಿ ಘಟಕಗಳಲ್ಲಿನ ತಾಂತ್ರಿಕತೆ ಸರಿಪಡಿಸಬೇಕಿದೆ ಎಂದು ಸಮಿತಿ ಸದಸ್ಯೆ ಎ.ಆರ್‌.ಸುಧಾಮಣಿ ತಾಕೀತು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next