Advertisement
ಸಣ್ಣ ಮಕ್ಕಳು ಅಂಬೆಗಾಲಿಡುವ ಹಂತ ಮೀರಿ ನಡೆದಾಡಲು ಶುರು ಮಾಡುವಾಗ ಹೆತ್ತವರಿಗೆ ಆತಂಕ ಶುರು ಆಗುತ್ತದೆ. ನಾಲ್ಕು ಆಧಾರದ ಮೇಲೆ ನಡೆದಾಡುವಾಗ ಇದ್ದ ಆಯ ಎರಡು ಕಾಲ ಮೇಲೆ ನಡೆಯುವಾಗ ಇರುವುದಿಲ್ಲ. ಅದರಲ್ಲೂ ಅಲ್ಲಿ ಇಲ್ಲಿ ಹತ್ತಿ ಆಯತಪ್ಪಿ ಉರುಳಿ ಬೀಳುವಾಗಲಂತೂ ಗಾಯ ಆಗುವುದನ್ನು ತಪ್ಪಿಸಲು ಆಗುವುದಿಲ್ಲ. ಒಂದೆರಡು ಪೆಟ್ಟು ಬೀಳದೆ ಮಕ್ಕಳು ನಡೆದಾಡುವುದನ್ನು ಕಲಿಯುವುದು ಕಷ್ಟ. ಆದರೂ, ಎಚ್ಚರಿಕೆ ವಹಿಸಬೇಕಾದ ಅಗತ್ಯವಂತೂ ಖಂಡಿತವಾಗಿಯೂ ಇದೆ. ಏಕೆಂದರೆ, ಮಕ್ಕಳಷ್ಟೇ ಅಲ್ಲ, ಮನೆಯಲ್ಲಿ ಹಿರಿಯರಿದ್ದರೆ ಅವರೂ ಏಟು ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಗಾಯಗಳು ಆಗುವುದು ದೇಹದ ಅಂಗಗಳು ಮೂಲೆಗಳಿಗೆ ತಗುಲಿದಾಗ. ಆದ್ದರಿಂದ ಮನೆಯನ್ನು ವಿನ್ಯಾಸ ಮಾಡುವಾಗ ಹಾಗೂ ಕಟ್ಟುವಾಗ, ಮೂಲೆಗಳು ಮೊನಚಾಗಿಲ್ಲದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ.
ಹಾಗೆಂದು ಮೂಲೆಗಳಿಲ್ಲದೇ ಮನೆಯ ವಿನ್ಯಾಸ ಮಾಡಲಾಗುವುದಿಲ್ಲ. ಎರಡು ಗೋಡೆಗಳು ಸೇರುವ ಸ್ಥಳ, ಮರಮುಟ್ಟು ಇಲ್ಲವೇ ಗ್ರಾನೈಟ್, ಮೂಲೆಗಳೊಡನೆಯೇ ಬರುತ್ತವೆ. ಹಾಗಾಗಿ ಮೂಲೆಗಳನ್ನು ದೂಷಿಸದೆ ಅವು ಆದಷ್ಟೂ ಕಡಿಮೆ ಹಾನಿ ಮಾಡುವ ರೀತಿಯಲ್ಲಿ, ಅವನ್ನು ವಿನ್ಯಾಸ ಮಾಡುವುದು ಉತ್ತಮ. ಎಲ್ಲೆಂದರಲ್ಲಿ ಮೊನಚಾದ ಮೂಲೆಗಳು ಇದ್ದರೆ, ನಡೆದಾಡಲು ವಯಸ್ಕರಿಗೂ ತೊಂದರೆ ಆಗಬಹುದು, ಅದರಲ್ಲೂ ಸಣ್ಣ ಮಕ್ಕಳಿಗೆ ಹಾಗೂ ಹಿರಿಯರಿಗೆ ತೊಡಕಾಗಬಹುದು. ಮೂಲೆಗಳನ್ನು ಕಡಿಮೆಗೊಳಿಸುವ ವಿಧಾನಗಳು
ಎಲ್ಲವೂ ಮೂಲೆ ಮಟ್ಟಕ್ಕೆ, ಅಂದರೆ ಒಂದು ಗೋಡೆ ಮತ್ತೂಂದನ್ನು ಸೇರುವಾಗ ಹೊರ ಮೂಲೆಗಳು ನಾವು ನಡೆದಾಡುವ ಸ್ಥಳದಲ್ಲಿ ಇರದಂತೆ ನೋಡಿಕೊಳ್ಳಬೇಕು. ಉದಾಹರಣೆಗೆ, ಕಿಚನ್ ಹಾಗೂ ಡೈನಿಂಗ್ ಮಧ್ಯೆ ಮೂಲೆಯೊಂದಿದ್ದರೆ, ಪ್ರತಿ ಬಾರಿ ಒಂದು ಕಡೆಯಿಂದ ಮತ್ತೂಂದಕ್ಕೆ ಹೋಗುವಾಗ ಅನಿವಾರ್ಯವಾಗಿ ಮೂಲೆ ದಾಟಿಯೇ ಹೋಗಬೇಕು. ಬೆಳಗಿನ ಹೊತ್ತು ಇದು ಹೆಚ್ಚು ತೊಂದರೆ ಕೊಡದಿದ್ದರೂ, ನಿದ್ರೆಗಣ್ಣಿನಲ್ಲಿ, ಕತ್ತಲಿನಲ್ಲಿ ಏಟು ಮಾಡಿಕೊಳ್ಳಬಹುದು. ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಒಳಗಿನ ಮೂಲೆ ಕೈಗೆ ಸುಲಭದಲ್ಲಿ ಎಟುಕುವುದಿಲ್ಲ, ಹಾಗಾಗಿ ಇದನ್ನು ಕತ್ತರಿಸಿ- ಅರ್ಧ ಮೂಲೆ ಅಂದರೆ 45 ಡಿಗ್ರಿಗೆ ತಿರುಗಿಸಿದರೆ, ಆಗ ಕಿಚನ್ ಹೊರಮೂಲೆ ಮೊನಚಾಗಿ ಇರುವುದಕ್ಕೆ ಬದಲು ಮೊಂಡಾಗಿದ್ದು, ತಿರುಗಾಡುವಾಗ ತಾಗುವುದಿಲ್ಲ. ಇದೇ ರೀತಿಯಲ್ಲಿ ಮೂಲೆಗಳನ್ನು ತಿರುಗಿಸಿ, ಗುಂಡಗೆ ಮಾಡಿದರೆ, ಮೈಕೈಗೆ ತಗುಲಿಸಿಕೊಳ್ಳುವುದು ತಪ್ಪುತ್ತದೆ.
Related Articles
ಮಕ್ಕಳು ಬಿದ್ದಾಗ ಅವರಿಗೆ ಸಾಮಾನ್ಯವಾಗಿ ಬಾಗಿಲು ಹಾಗೂ ಅದರ ಚೌಕಟ್ಟು ತಾಗಿ ಗಾಯ ಆಗುವ ಸಾಧ್ಯತೆ ಹೆಚ್ಚು. ಆದುದರಿಂದ ಮರಮುಟ್ಟುಗಳಿಗೆ ಚೂಪು ವಿನ್ಯಾಸ ನೀಡುವ ಬದಲು, ಗುಂಡಗೆ(Curve), ನುಣುಪಾದ ಮೂಲೆಗಳನ್ನು ಹೊಂದಿರುವಂತೆ ಮಾಡಿದರೆ, ಅನಿವಾರ್ಯವಾಗಿ ಬಿದ್ದರೂ ಹೆಚ್ಚು ಗಾಯ ಆಗುವುದಿಲ್ಲ. ಇನ್ನು ಬಾಗಿಲ ಪಕ್ಕದ ಸಿಮೆಂಟಿನ ಮೂಲೆ ತಾಗಿಯೂ ಗಾಯ ಆಗುವ ಸಾಧ್ಯತೆ ಇರುವುದರಿಂದ, ಪ್ಲಾಸ್ಟರ್ ಮಾಡುವಾಗ ಗಾರೆಯವರಿಗೆ ಹೇಳಿ, ತೀರಾ ಮೊನಚಾದ ಮೂಲೆ ಬದಲು, ಸ್ವಲ್ಪ ತಿರುಗಿದಂತೆ, ಅರ್ಧ ಚಂದ್ರಾಕೃತಿಯಲ್ಲಿ ಇರುವಂತೆ ನೋಡಿಕೊಂಡರೆ ಒಳ್ಳೆಯದು.
Advertisement
ಮೂಲೆ ಮೊಂಡಾಗಿದ್ದರೆ…ಕತ್ತಿಯಂತೆ ಇರುವ ಮೂಲೆಗಳನ್ನು ಮಾಡಲು ಗಾರೆಯವರು ಹರಸಾಹಸ ಮಾಡಬೇಕಾಗುತ್ತದೆ. ಮೂಲೆಗಳು ಗೋಡೆಗಳಿಂದ ಸಾಕಷ್ಟು ದೂರ ಇರುವುದರಿಂದ, ಪದೇಪದೆ ಬಿದ್ದು ಹೋಗುವುದರಿಂದ, ಮತ್ತೆ ಮತ್ತೆ ಮೆತ್ತಿ, ಸಿಮೆಂಟ್ ಧೂಳು ನೀಡಿ ಮೂಲೆಯನ್ನು ಚೂಪಾದ ಕೋನದಲ್ಲಿ ರೂಪಿಸಲು ಪ್ರಯತ್ನಿಸುತ್ತಾರೆ. ಆದರೆ ಇದಕ್ಕೆ ಹೋಲಿಸಿದರೆ, ಗುಂಡಗೆ ತಿರುಗುವ ಮೂಲೆಗಳನ್ನು ಮಾಡುವುದು ಸುಲಭ. ಕೆಲಸವೂ ಶೀಘ್ರವಾಗಿ ಮುಗಿದು, ಕೂಲಿಯೂ ಕಡಿಮೆ ಆಗುತ್ತದೆ. ಮನೆ ಕಟ್ಟುವಾಗ ನಾವು ದೊಡ್ಡದೊಡ್ಡ ವಿಷಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡರೆ ಸಾಲದು, ಸಣ್ಣಪುಟ್ಟದು ಎಂದೆನಿಸುವ ಸಾಕಷ್ಟು ವಿಷಯಗಳ ಬಗ್ಗೆಯೂ ಒಂದಷ್ಟು ಸಮಯ ಮೀಸಲಿಟ್ಟು, ಶುರುವಿನಲ್ಲಿ ವಿನ್ಯಾಸದ ನಂತರ ಕಾಳಜಿಯಿಂದ ವಿವಿಧ ವಿವರ- ಡಿಟೇಲ್ಸ್ ಗಳೊಂದಿಗೆ ಕಟ್ಟಿಸಿದರೆ ಮನೆ ಹೆಚ್ಚು ಸುರಕ್ಷಿತವೂ ಆಗುತ್ತದೆ.
ಹೆಚ್ಚಿನ ಮಾಹಿತಿಗೆ ಫೋನ್ 9844132826 ಅನಗತ್ಯ ಮೂಲೆಗಳು ಬೇಡ
ಮೆಟ್ಟಿಲುಗಳು ತೆಳ್ಳಗೆ, ಆಕರ್ಷಕವಾಗಿ ಕಾಣುತ್ತವೆ ಎಂದು “ಚೈನ್ ಲಿಂಕ್’ ಮಾದರಿಯಲ್ಲಿ ಕಟ್ಟಿದರೆ, ಪ್ರತಿ ಮೆಟ್ಟಿಲಿಗೂ ಮೂಲೆಗಳು ಬರುತ್ತವೆ. ಅದು ನಿಜಕ್ಕೂ ಅನಗತ್ಯ. ಚೆನ್ನಾಗಿ ಕಾಣುತ್ತದೆ ಎಂದು ಸುರಕ್ಷತೆಯನ್ನು ನಿರ್ಲಕ್ಷಿಸಬಾರದು. ಮನೆಯಲ್ಲಿ ಮೂಲೆಗಳು ಹೆಚ್ಚಿದಷ್ಟೂ ತಗುಲುವುದು ಹೆಚ್ಚು. ಆದುದರಿಂದ ಮೆಟ್ಟಿಲುಗಳ ಕೆಳಗೆ ಮಾಮೂಲಿ ಹಲಗೆ- ಸ್ಲಾಬ್ ಮಾದರಿಯಲ್ಲಿ ವಿನ್ಯಾಸ ಮಾಡಿಕೊಂಡರೆ, ಹತ್ತಾರು ಅನಗತ್ಯ ಮೂಲೆಗಳು ತಪ್ಪುತ್ತವೆ. ಜೊತೆಗೆ ಮೂಲೆಗಳು ಹೆಚ್ಚಾದಂತೆಲ್ಲ, ಅದರಲ್ಲೂ ಮೆಟ್ಟಿಲ ಕೆಳಗಿನ ಮೂಲೆಗಳಲ್ಲಿ ಜೇಡರ ಹುಳದ ಬಲೆ ಮತ್ತೂಂದರ ಗೂಡು ಕಟ್ಟಲು ಅನುಕೂಲ ಆಗಿ, ಮನೆಯವರಿಗೆ ಸ್ವತ್ಛಗೊಳಿಸುವುದು ಕಷ್ಟ ಆಗುತ್ತದೆ. ಜೊತೆಗೆ ಸ್ವತ್ಛಗೊಳಿಸಲು ಹೋದಾಗಲೂ ಮೂಲೆ ತಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ! ಕರ್ವ್ ಮಾಡುವುದರಿಂದ ಲಾಭವಿದೆ
ಸಾಮಾನ್ಯವಾಗಿ ಕೈಯಲ್ಲಿ ಹಿಡಿದ ವಸ್ತುಗಳು, ಚೀಲದಲ್ಲಿದ್ದ ಗಡುಸಾದ ಪದಾರ್ಥಗಳು ಇತ್ಯಾದಿ ತಗುಲಿ ಮೊನಚಾದ ಮೂಲೆಗಳು ಬೇಗನೆ ಒಡೆದು ಹಾಳಾಗುತ್ತವೆ. ಆದರೆ ಸ್ವಲ್ಪ ತಿರುಗಿದ್ದರೂ ಅಂದರೆ ಸುಮಾರು ಒಂದು ಇಂಚಿನಷ್ಟು ಅರ್ಧಚಂದ್ರಾಕೃತಿಯಲ್ಲಿದ್ದರೂ ಅಷ್ಟೊಂದು ಸುಲಭದಲ್ಲಿ ಒಡೆಯುವುದಿಲ್ಲ. ಇದು ಸಿಮೆಂಟಿನಲ್ಲಿ ಮಾಡಿದ ಮೂಲೆಗಳಿಗೆ ಅನ್ವಯಿಸಿದರೆ, ಮರಮುಟ್ಟುಗಳಲ್ಲಿ ಅರ್ಧ ಇಂಚಿನಷ್ಟು ಮೂಲೆ ತಿರುಗಿದರೆ ಸಾಕಾಗುತ್ತದೆ. ಇದೇ ರೀತಿಯಲ್ಲಿ, ಗ್ರಾನೈಟ್, ಮಾರ್ಬಲ್ ಇತ್ಯಾದಿ ಹಲಗೆಗಳು ಹೊರಚಾಚಿದ್ದರೂ, ಈ ಪೊ›ಜೆಕ್ಷನ್‌ಗಳನ್ನು ಗುಂಡಗೆ ತಿರುಗಿಸಿದರೆ, ಅವುಗಳಿಂದ ಹಾನಿಯಾಗುವುದು ತಪ್ಪುತ್ತದೆ ಜೊತೆಗೆ ಮುರಿದು ಹೋಗುವುದೂ ತಪ್ಪುತ್ತದೆ. ಮೊನಚಾದ ಮೂಲೆಗಳನ್ನು ಸ್ವತ್ಛಗೊಳಿಸುವುದು ಸ್ವಲ್ಪ ಕಷ್ಟ. ಆದರೆ, ಗುಂಡಗೆ ತಿರುಗಿರುವ ಕಡೆ ಸುಲಭದಲ್ಲಿ ಶುದ್ಧಗೊಳಿಸಬಹುದು! -ಆರ್ಕಿಟೆಕ್ಟ್ ಕೆ. ಜಯರಾಮ್