ಮಂಗಳೂರು: ಸಮುದ್ರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಹಾಗೂ ಹವಾಮಾನ ವೈಪರೀತ್ಯದಿಂದ ಮೀನುಗಾರಿಕಾ ಕ್ಷೇತ್ರ ಆಗಸ್ಟ್ ತಿಂಗಳಲ್ಲೇ ಸುಮಾರು 400 ಕೋಟಿ ರೂ. ನಷ್ಟ ಅನುಭವಿಸಿದೆ. 60 ದಿನಗಳ ರಜೆಯ ಬಳಿಕ ಆ.1ರಿಂದ ಈ ವರ್ಷದ ಮೀನುಗಾರಿಕಾ ಋತು ಆರಂಭಗೊಂಡಿತ್ತು. ಆದರೆ ಸಮುದ್ರದಲ್ಲಿ ಆಗಾಗ್ಗೆ ವಾಯುಭಾರ ಕುಸಿತ ಹಾಗೂ ಭಾರೀ ಮಳೆಯ ಪರಿಣಾಮ ಬೋಟುಗಳು ಕೆಲವು ದಿನಗಳು ಮಾತ್ರ ಮೀನುಗಾರಿಕೆ ನಡೆಸಿದ್ದವು. ಇದರಿಂದ ಮೀನುಗಾರಿಕೆ ಹಾಗೂ ಇದಕ್ಕೆ ಹೊಂದಿಕೊಂಡ ಮಂಜುಗಡ್ಡೆ, ಮೀನು ವ್ಯಾಪಾರಿಗಳು, ಸಾಗಣೆದಾರರು ಸಹಿತ ಎಲ್ಲ ಕ್ಷೇತ್ರಗಳಿಗೂ ನಷ್ಟ ಉಂಟಾಗಿದೆ. ಮೀನುಗಾರಿಕೆಗೇ ಸುಮಾರು 250 ಕೋ.ರೂ. ನಷ್ಟವಾಗಿದೆ ಎಂದು ಇಲಾಖೆ ಅಂದಾಜಿಸಿದೆ.
ಮಂಗಳೂರಿಂದ 800 ಟ್ರಾಲ್ ಬೋಟುಗಳು, 75 ಪರ್ಸಿನ್ ಬೋಟುಗಳು ಆ. 1ರಿಂದ ಮೀನುಗಾರಿಕೆ ಆರಂಭಿಸಿದ್ದವು. ಪ್ರತಿ ಬೋಟ್‌ನ್ನು ಮೀನುಗಾರಿಕೆಗೆ ಅಣಿಗೊಳಿಸಲು 8 ಲಕ್ಷ ರೂ. ವೆಚ್ಚವಿದೆ. ಈ ಪೈಕಿ ಟ್ರಾಲ್‌ಬೋಟು 8ರಿಂದ 10 ದಿನಗಳ ಬಳಿಕ ಹಿಂದಿರುಗುತ್ತವೆ. ಸುಮಾರು 5,500ರಿಂದ 6,000 ಲೀಟರ್ ಡೀಸೆಲ್ ಬೇಕು. ಒಂದು ಬಾರಿಗೆ ಅಂದಾಜು 5.5 ಲಕ್ಷ ರೂ.ಮೌಲ್ಯದ ಮೀನು ದೊರೆತರೆ ವೆಚ್ಚವನ್ನು ಸರಿದೂಗಿಸಬಹುದು ಎನ್ನುತ್ತಾರೆ ಮೀನುಗಾರರು.
ಆಗಸ್ಟ್ ನಿಂದ ಅಕ್ಟೋಬರ್‌ವರೆಗೆ ಮೀನುಗಾರರಿಗೆ ಹೆಚ್ಚು ಲಾಭ ತರುವ ಅವಧಿ. ಬಳಿಕ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಚಳಿಗಾಲ ಹಾಗೂ ಸಮುದ್ರದಲ್ಲಿ ಹವಾಮಾನ ವೈಪರೀತ್ಯದಿಂದ ಮೀನು ಲಭ್ಯತೆ ಕಡಿಮೆ ಇರುತ್ತದೆ. ಈ ಅವಧಿಯಲ್ಲಿ ಹೆಚ್ಚಿನ ಮೀನುಗಾರರು ಸಮುದ್ರಕ್ಕಿಳಿಯುವುದಿಲ್ಲ. ಜನವರಿ ಅಂತ್ಯಕ್ಕೆ ಮತ್ತೆ ಮೀನುಗಾರಿಕೆ ಆರಂಭಿಸಿ ಎಪ್ರಿಲ್, ಮೇ ಅಂತ್ಯದವರೆಗೆ ನಡೆಸುತ್ತಾರೆ. ಈ ಬಾರಿ ಸಮುದ್ರ ಶಾಂತವಾಗಿದ್ದಾಗ ಮೀನುಗಾರಿಕೆಗೆ ತೆರಳಿದ ಬೋಟ್‌ಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಕ್ಕಿಲ್ಲ. ಆಗಸ್ಟ್‌ನಲ್ಲಿ ಹೆಚ್ಚು ಲಾಭ ತರುವ ಕಪ್ಪ ಬಂಡಾಸ್ ಹಾಗೂ ಮದಿಮಲ್ ಮೀನು ಲಭ್ಯ. ಆದರೆ ಈ ಬಾರಿ ಅದೂ ಕಡಿಮೆ ಎಂಬುದು ಮೀನುಗಾರರ ಅಳಲು.
ಫಾರ್ಮಾಲಿನ್ ಅಂಶ ಪತ್ತೆಯಾಗಿಲ್ಲ
ಜುಲೈ ತಿಂಗಳಿನಲ್ಲಿ ಮೀನುಗಳಲ್ಲಿ ಫಾರ್ಮಾಲಿನ್ ಅಂಶ ಪತ್ತೆಯಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮೀನುಗಾರಿಕಾ ಇಲಾಖೆ ವಿವಿಧೆಡೆ ಮೀನುಗಳ 7 ಮಾದರಿಗಳನ್ನು ತೆಗೆದು ಮೈಸೂರಿನ ಸಿ.ಎಫ್.ಟಿ.ಆರ್.ಐ. ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಈಗಅವುಗಳ ವರದಿ ಬಂದಿದ್ದು, ಫಾರ್ಮಾಲಿನ್ ಅಂಶ ಪತ್ತೆಯಾಗಿಲ್ಲ ಎನ್ನುತ್ತದೆ ಇಲಾಖೆ ಮಾಹಿತಿ.
ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಆಗಸ್ಟ್‌ನಲ್ಲಿ ಹೆಚ್ಚಿನ ದಿನಗಳಲ್ಲಿ ಬೋಟ್‌ಗಳು ಮೀನುಗಾರಿಕೆಗೆ ತೆರಳದ ಕಾರಣ ಸಾಕಷ್ಟು ನಷ್ಟವಾಗಿದೆ.
-ಮಹೇಶ್, ಮೀನುಗಾರಿಕಾ ಉಪ ನಿರ್ದೇಶಕರು
ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಆಗಸ್ಟ್ ನಲ್ಲಿ 15 ದಿನ ಮಾತ್ರ ಮೀನುಗಾರಿಕೆ ನಡೆಸಲಾಯಿತು. ಆಗಲೂ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಲಭ್ಯವಾಗಿಲ್ಲ.
– ನಿತಿನ್ ಕುಮಾರ್, ಮಂಗಳೂರು ಟ್ರಾಲ್‌ಬೋಟು ಮೀನುಗಾರರ ಸಂಘದ ಅಧ್ಯಕ್ಷ
— ಕೇಶವ ಕುಂದರ್