Advertisement

ದೊಡ್ಡ ಕಂಪೆನಿಗಳಿಂದ ಸಣ್ಣ ಹಳ್ಳಿಯಾದ ಕುತ್ತೆತ್ತೂರು

02:34 PM Aug 24, 2022 | Team Udayavani |

ಸುರತ್ಕಲ್‌: ಪೆರ್ಮುದೆ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಬರುವ ಕುತ್ತೆತ್ತೂರು ಈ ಹಿಂದೆ 1935 ಎಕ್ರೆಯಷ್ಟು ಭೂ ಪ್ರದೇಶ ಹೊಂದಿದ್ದ ದೊಡ್ಡ ಹಳ್ಳಿಯಾಗಿದ್ದರೂ ಇಂದು ಬೃಹತ್‌ ಕಂಪೆನಿಗಳು ನೆಲೆಯೂರಲು ಈ ಹಳ್ಳಿ 100 ಎಕ್ರೆಯಷ್ಟು ಭೂ ಭಾಗವನ್ನು ತ್ಯಾಗ ಮಾಡಿದೆ. ಇದೀಗ ಮತ್ತೆ 383.17 ಎಕರೆ ಭೂಮಿ ಎಂಆರ್‌ಪಿಎಲ್‌ ವಿಸ್ತರಣೆಗೆ ಸ್ವಾಧೀನವಾಗಲಿದೆ. ಒಟ್ಟಾರೆಯಾಗಿ ದೊಡ್ಡ ಕಂಪೆನಿಗಳಿಂದಾಗಿ ಹಳ್ಳಿ ಸಣ್ಣದಾಗಿದೆ.

Advertisement

ಕುತ್ತೆತ್ತೂರು, ಬಾಜಾವು, ಕುಲ್ಲಾರ್‌ ನಲ್ಲಿ ಬಹುತೇಕ ಜನರ ಜೀವಾಳ ಕೃಷಿಯಾಗಿದೆ. ಇಲ್ಲಿ ಅಂದಾಜು 400 ಕುಟುಂಬಗಳಿವೆ. ಎರಡು ಪ್ರಾಥಮಿಕ ಹಿರಿಯ ಶಾಲೆಗಳಿದ್ದರೂ, ಒಂದು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿದೆ. ಇನ್ನೊಂದರಲ್ಲಿ ಬಹುತೇಕ ವಲಸೆ ಕುಟುಂಬಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಪ್ರಾಥಮಿಕ ಉಪ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಎಂಆರ್‌ಪಿಎಲ್‌ ಸಿಎಸ್‌ಆರ್‌ ನಿಧಿಯಿಂದ ಕಟ್ಟಡ ನಿರ್ಮಿಸಿದೆ. ವಾರಕ್ಕೊಮ್ಮೆ ಕಾಟಿಪಳ್ಳ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಲಭ್ಯರಿರುತ್ತಾರೆ. ಉಳಿದಂತೆ ಆರೋಗ್ಯ ಸಹಾಯಕಿ ಮನೆ ಮನೆ ಭೇಟಿ ಹಾಗೂ ಆರೋಗ್ಯ ಕಾಳಜಿಯ ಕಾರ್ಯ ಮಾಡುತ್ತಿದ್ದಾರೆ. ಹಾಲು ಉತ್ಪಾದಕರ ಸಂಘವಿದೆ.

ಬೇಕಿದೆ ಒಳರಸ್ತೆಗಳಿಗೆ ಕಾಯಕಲ್ಪ

ಪ್ರಧಾನ ರಸ್ತೆ ಉತ್ತಮವಾಗಿದೆ. ಒಳರಸ್ತೆಗಳ ಹಲವೆಡೆ ಇಂದಿಗೂ ಮಣ್ಣಿನ ರಸ್ತೆಯಿದ್ದು ಟಾರು ಕಾಣಬೇಕಿದೆ. ಕುಲ್ಲಾರು, ಬಾಜಾವು ಪ್ರದೇಶದಲ್ಲಿ ಒಳರಸ್ತೆಗೆ ಕಾಯಕಲ್ಪ ಆಗಬೇಕಿದೆ.

Advertisement

ಕುಡಿಯುವ ನೀರಿಗಾಗಿ ಹೆಚ್ಚಿನವರು ಸ್ವಂತ ಬಾವಿ ಆಶ್ರಯಿಸಿದ್ದಾರೆ. ಆವಶ್ಯಕತೆ ಉಳ್ಳವರಿಗೆ ಪಂಚಾಯತ್‌ ವತಿಯಿಂದ ನಳ್ಳಿ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ. ಕೋಟ್ಯಂತರ ರೂ. ವೆಚ್ಚ ಮಾಡಿ ಆದಿವಾಸಿ ಸಮುದಾಯ ಭವನ ನಿರ್ಮಿಸಲಾಗಿದೆ. ಪಂಚಾಯತ್‌ ಕಾರ್ಯಕ್ರಮಗಳಿಗೆ ಶಾಲಾ ವಠಾರವನ್ನೇ ಈಗಲೂ ಅವಲಂಬಿಸಲಾಗುತ್ತಿದೆ. ಇಲ್ಲಿ ಸಭಾ ಭವನದ ಅಗತ್ಯವಿದೆ.

ಅಂದು ನಿರ್ಮಲ ಗ್ರಾಮ-ಇಂದು?

ಗ್ರಾಮ ಪಂಚಾಯತ್‌ಗೆ 2007-08 ಸ್ವಚ್ಛತಾ ಆಂದೋಲನದಡಿ ನಿರ್ಮಲ ಗ್ರಾಮ ಪುರಸ್ಕಾರ ನೀಡಲಾಗಿದ್ದರೂ, ಬೃಹತ್‌ ಕಂಪೆನಿಗಳ ಆಗಮನದಿಂದ ವಲಸೆ ಕಾರ್ಮಿಕರ ಒತ್ತಡವೂ ಹೆಚ್ಚಿದ್ದು ಕಂಪೆನಿಗಳ ವಸತಿ ಬಡಾವಣೆ ರಸ್ತೆ ಬದಿಗಳಲ್ಲಿ ತ್ಯಾಜ್ಯ ರಾಶಿ ಕಂಡು ಬರುತ್ತಿದೆ.

ಪ್ರಮುಖ ಬೇಡಿಕೆಗಳು

ಸ್ವಾಧೀನವಾಗುವ ಭೂಮಿಗೆ ಮಾರು ಕಟ್ಟೆ ದರ ನೀಡಬೇಕು, ನಿರ್ವಸಿತರಿಗೆ ಅನ್ಯಾಯವಾಗದಂತೆ ಎಲ್ಲ ಸೌಲಭ್ಯ ಒಳಗೊಂಡ ಪುನರ್‌ ವಸತಿ ಕೇಂದ್ರ, ಯುವ ಸಮೂಹಕ್ಕೆ ಉದ್ಯೋಗ ಕಲ್ಪಿಸುವುದು, ಸಿಎಸ್‌ ಆರ್‌ ನಿಧಿಯನ್ನು ಸ್ಥಳೀಯವಾಗಿ ರಸ್ತೆ, ನೀರು, ವಸತಿ, ಶಾಲೆ, ಆರೋಗ್ಯ, ತ್ಯಾಜ್ಯ ನಿರ್ವಹಣೆ ಘಟಕ ಮತ್ತಿತರ ವ್ಯವಸ್ಥೆಗೆ ಬಳಸುವುದು, ಸಮುದಾಯವ ಭವನ ನಿರ್ಮಾಣ, ಮಾಲಿನ್ಯಕಾರಕ ಸ್ಥಾವರವಿರುವುದರಿಂದ ಆರೋಗ್ಯ ಕೇಂದ್ರ ಸ್ಥಾಪನೆ ಸಹಿತ ಹಲವು ಬೇಡಿಕೆ ಸ್ಥಳೀಯರದ್ದಾಗಿದೆ.

ಕೃಷಿಗೆ ಹೊಡೆತ

ಬೃಹತ್‌ ಕಂಪೆನಿಗಳ ನಿರ್ಮಾಣದಿಂದ ಕುತ್ತೆತ್ತೂರು ಗ್ರಾಮದ ಪ್ರಮುಖ ತೋಡಿನಲ್ಲಿ ಮಾಲಿನ್ಯಯುಕ್ತ ನೀರು ಹರಿದು ಕೃಷಿ ಭೂಮಿಗೆ ಕಂಟಕವಾಗುತ್ತಿದೆ. ಬಿಳಿ ನೊರೆಯಂತಹ ತೈಲ ಮಿಶ್ರಿತ ರಾಸಾಯನಿಕ ನೀರು ಫಲವತ್ತಾದ ಭೂಮಿ ಪಾಳು ಬೀಳಲು ಕಾರಣವಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಇದು ಹಲವು ಗ್ರಾಮಗಳನ್ನು ದಾಟಿ ನಂದಿನಿ ನದಿ ಸೇರುತ್ತದೆ ಎಂಬುದು ಗ್ರಾಮಸ್ಥರ ದೂರು.

ಉದ್ಯೋಗ ನೀಡಿ: ದೇಶದ ಆರ್ಥಿಕತೆಗೆ ಕೊಡುಗೆ ನೀಡಲು ನಾವು ಭೂಮಿ ತ್ಯಾಗ ಮಾಡಿದ್ದೇವೆ. ನಮಗೂ ಸ್ವತ್ಛ ವಾಸದ ಪರಿಸರ, ಹಳ್ಳಿಗೆ ಸುಸಜ್ಜಿತ ಸೌಕರ್ಯವನ್ನು ಮಾನವೀಯ ನೆಲೆಯಲ್ಲಿ ಕಂಪೆನಿ ನೀಡಬೇಕು. ಉದ್ಯೋಗ ನೀಡಬೇಕು. ಇದು ಕೇವಲ ಭರವಸೆಯಾಗದೆ ಅನುಷ್ಠಾನವಾಗಬೇಕು. – ಸುಧಾಕರ ಶೆಟ್ಟಿ, ಗ್ರಾಮಸ್ಥರು

-ಲಕ್ಷ್ಮೀ ನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next