Advertisement

Beauty Tips: ತ್ವಚೆಯ ಸೌಂದರ್ಯಕ್ಕೆ ಟೊಮೆಟೋ ಬಳಕೆ

04:10 PM Aug 16, 2023 | Team Udayavani |

ಸೌಂದರ್ಯ ಪ್ರಜ್ಞೆ ಇರುವವರು ತ್ವಚೆಗೆ ಪ್ರಾಮುಖ್ಯತೆ ಕೊಡಲೇಬೇಕು. ಇಂದಿನ ಕಾಲದಲ್ಲಿ ಮಹಿಲೆಯರು ಮಾತ್ರವಲ್ಲದೇ ಪುರುಷರು ಕೂಡಾ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಆದರೆ ಅದಕ್ಕೆ ಬೇಕಾದ ವಿಧಾನಗಳನ್ನು ಅನುಸರಿಸಲು ಹಿಂದೇಟು ಹಾಕುವವರೆ ಜಾಸ್ತಿ.

Advertisement

ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗೆ ಈಗಾಗಲೇ ಹಲವು ಟಿಪ್ಸ್‌ ಗಳನ್ನು ಹಂಚಿಕೊಳ್ಳಲಾಗಿದೆ. ಆದರೆ ಇದೀಗ ಅಡುಗೆಗೆ ಬಳಸುವ ಟೊಮೆಟೋ ಉಪಯೋಗಿಸಿಕೊಂಡು ತ್ವಚೆಯ ಕಾಂತಿಯನ್ನು ಯಾವೆಲ್ಲಾ ರೀತಿಯಾಗಿ ಕಾಪಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೂಣ. ತ್ವಚೆ ಸಮಸ್ಯೆ ತೊಡೆದು ಹಾಕಲು ಟೊಮೆಟೋ ಉಪಯೋಗಿಸುವುದು ಉತ್ತಮ ಆಯ್ಕೆ ಎನ್ನಬಹುದು.

ಕೆಲ ವಾರಗಳ ಹಿಂದೆ ಟೊಮೆಟೋ ಬೆಲೆ ಹೆಚ್ಚಾಗಿದ್ದು, ಕಳೆದ ವಾರಕ್ಕೆ ಹೋಲಿಸಿದರೆ ಈಗ ಬೆಲೆ ತುಸು ಕಡಿಮೆಯಾಗಿದೆ. ಟೊಮೆಟೋವನ್ನು ಅಡುಗೆಗೆ ಸರಿಯಾಗಿ ಉಪಯೋಗಿಸದಂತಹ ಪರಿಸ್ಥಿತಿ ಇತ್ತು. ಟೊಮೆಟೋ ಬೆಲೆ ಕಡಿಮೆಯಾಗುತ್ತಿರುವಂತೆ ಅದರಿಂದಾಗುವ ಕೆಲ ಉಪಯೋಗಗಳ ಬಗ್ಗೆ ತಿಳಿದುಕೊಳ್ಳೋಣ.

ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳಾದ ಮೊಡವೆ, ಮುಖದಲ್ಲಿ ಹೆಚ್ಚುವರಿ ಎಣ್ಣೆ, ಟ್ಯಾನಿಂಗ್ ನಂತಹ ಸಮಸ್ಯೆಗಳನ್ನು ದೂರ ಮಾಡಲು ಟೊಮೆಟೋ ಉಪಕಾರಿ. ನೈಸರ್ಗಿಕವಾಗಿ ನಾವು ಟೊಮೆಟೋ ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳಬೇಕು.

ಟೊಮೆಟೋವನ್ನು ಅಡುಗೆ ಪದಾರ್ಥಗಳಿಗೆ ಮಾತ್ರವಲ್ಲದೇ ಹಸಿಯಾಗಿಯೂ ತಿನ್ನಬಹುದು. ಹಸಿ ಟೊಮೆಟೋವನ್ನು ಸಲಾಡ್ ಮಾಡಿಕೊಂಡು ತಿನ್ನಬಹುದು. ಟೊಮೆಟೋದಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು, ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಅದರೊಂದಿಗೆ ಕೂದಲ ಆರೋಗ್ಯಕ್ಕೆ,  ಸೌಂದರ್ಯವರ್ಧಕವಾಗಿಯೂ ಬಳಸಬಹುದು.

Advertisement

ದಿನ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಟೊಮೆಟೋ ಸೇವಿಸಿದರೆ ತೂಕ ಕಡಿಮೆಯಾಗುತ್ತದೆ.

ತುಟಿ ಒಡೆಯುವ ಸಮಸ್ಯೆ:

ಹಸಿ ಟೊಮೆಟೋ ಸೇವನೆಯಿಂದ ದೇಹಕ್ಕೆ ವಿಟಮಿನ್ ‘ಸಿ’ ದೊರೆತು ತುಟಿ ಒಣಗುವುದಿಲ್ಲ ಮತ್ತು ಒಡೆಯುವುದಿಲ್ಲ.

ಬ್ಲ್ಯಾಕ್ ಹೆಡ್ಸ್ ಸಮಸ್ಯೆಗೆ:

ಟೊಮೆಟೋ ತೆರೆದ ರಂಧ್ರಗಳನ್ನು ಕೂಡಿಸುವ ಕೆಲಸ ಮಾಡುತ್ತದೆ. ಟೊಮೆಟೋವನ್ನು ಅರ್ಧಕ್ಕೆ ಕತ್ತರಿಸಿ ಮುಖದ ಮೇಲೆ ಉಜ್ಜಿ 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಇದರಿಂದ ಕಪ್ಪು ಚುಕ್ಕೆ ತೆಗೆದು ಹಾಕಲು ಸಹಾಯ ಮಾಡುತ್ತದೆ.

ಮೊಡವೆ ತೆಗೆದು ಹಾಕಲು:

ಮುಖದಲ್ಲಿ ಮೊಡವೆಗಳು, ರಂಧ್ರ ಮತ್ತು ಕಲೆಗಳು ಕಾಣಿಸಿಕೊಂಡರೆ ಟೊಮೆಟೋ ರಸಕ್ಕೆ ಮುಲ್ತಾನಿಮಿಟ್ಟಿ ಹುಡಿ ಬೆರೆಸಿ ಮುಖಕ್ಕೆ ಲೇಪಿಸಬೇಕು. ನಂತರ ಅರ್ಧ ಗಂಟೆಯ ಬಳಿಕ ತೊಳೆಯಬೇಕು. ದಿನನಿತ್ಯ ಹೀಗೆ ಮಾಡುವುದರಿಂದ ಮುಖದ ಅಂದ ವೃದ್ಧಿಯಾಗುತ್ತದೆ. ಮೊಡವೆಗಳು, ಕಲೆಗಳು ಕಡಿಮೆಯಾಗುತ್ತಾ ಬರುತ್ತದೆ.

ಎಣ್ಣೆ ಚರ್ಮ:

ಚರ್ಮದಲ್ಲಿರುವ ಎಣ್ಣೆ ನಿಯಂತ್ರಿಸಲು ಟೊಮೆಟೊವನ್ನು ಅರ್ಧಕ್ಕೆ ಕತ್ತರಿಸಿ ಮುಖದ ಮೇಲೆ ಉಜ್ಜಿಕೊಂಡು 5 -10 ನಿಮಿಷಗಳ ಹಾಗೆ ಬಿಟ್ಟು ನಂತರ ನೀರಿನಿಂದ ತೊಳೆಯಬೇಕು.

ಚರ್ಮ ಕಾಂತಿಗೆ:

ಟೊಮೆಟೋ ರಸಕ್ಕೆ ಸ್ವಲ್ಪ ರೋಸ್‌ವಾಟರ್, ಒಂದು ಚಮಚ ಶ್ರೀಗಂಧದ ಪುಡಿ, 6-8 ಹನಿ ನಿಂಬೆರಸ ಬೆರೆಸಿ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಬೇಕು. ಹೀಗೆ ಮಾಡುವುದರಿಂದ ಚರ್ಮ ಕಾಂತಿಯುತವಾಗುತ್ತದೆ.

ತ್ವಚೆ ಬೆಳ್ಳಗಾಗಲು:

ಬೇಯಿಸಿದ ಟೊಮೆಟೋವನ್ನು ಕಿವುಚಿ ಅದಕ್ಕೆ ಸ್ವಲ್ಪ ತುಳಸಿ ರಸ ಹಾಗೂ ಪನ್ನೀರು ಸೇರಿಸಿ ಮುಖಕ್ಕೆ ಲೇಪಿಸಿದರೆ ತ್ವಚೆ ಬೆಳ್ಳಗಾಗಲು ಸಹಾಯ ಮಾಡುತ್ತದೆ.

ಟೊಮೆಟೋ ರಸಕ್ಕೆ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿದರೆ ತ್ವಚೆ ಬಿಳಿ ಬಣ್ಣ ಪಡೆಯಲು ಸಹಕಾರಿ.

ಈ ಟೋಮೆಟೋ ಫೇಸ್‌ ಪ್ಯಾಕ್‌ ಗಳಿಂದ ನಿಂದ ವಯಸ್ಸಾದಂತೆ ಕಾಣುವುದರಿಂದಲೂ ತಪ್ಪಿಸಿಕೊಳ್ಳಬಹುದು. ಟೊಮೆಟೋದಲ್ಲಿ ವಯಸ್ಸಾಗುವಿಕೆ ತಡೆಯುವ ಗುಣದೊಂದಿಗೆ ಮುಖದ ಕಲೆ, ಸುಕ್ಕುಗಳು ಇತ್ಯಾದಿಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.

ಕೈಗಳು ಮೃದುವಾಗಲು:

ಟೊಮೆಟೋ ರಸ ಹಾಗೂ ನಿಂಬೆರಸವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ ನಾಲ್ಕು ಹನಿ ಗ್ಲಿಸರಿನ್ ಬೆರೆಸಿ ಅಂಗೈಗಳಿಗೆ ಹಚ್ಚಬೇಕು. ನಂತರ ಅರ್ಧ ಗಂಟೆ ಬಳಿಕ ತೊಳೆದರೆ ಕೈಗಳು ಮೃದುವಾಗುತ್ತದೆ.

ಡೆಡ್ ಸ್ಕಿನ್ ತೊಡೆದು ಹಾಕಲು:

ಧೂಳು ಮತ್ತು ಚರ್ಮದ ಎಣ್ಣೆಯಂಶ ಮಿಶ್ರಣವಾಗಿ ಜೀವಕೋಶಗಳು ಸತ್ತುಹೋಗುತ್ತವೆ. ಇದರಿಂದ ತ್ವಚೆ ಹಾಳಾಗುವ ಸಂಭವ ಇರುತ್ತದೆ. ಇದಕ್ಕೆ ಚರ್ಮದ ಮೇಲೇ ನೇರವಾಗಿ ಟೊಮೆಟೋ ತಿರುಳನ್ನು ಮುಖದ ಮೇಲೆ ಉಜ್ಜಿಕೊಳ್ಳಬೇಕು. 5-10 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಬೇಕು.

ಚರ್ಮ ಹೊಳೆಯಲು:

ಟೊಮೆಟೋ ತಿರುಳಿಗೆ 2 ಚಮಚ ಮುಲ್ತಾನಿ ಮಿಟ್ಟಿ, 1 ಚಮಚ ತಾಜಾ ಪುದೀನಾ ಪೇಸ್ಟ್ ಮಿಶ್ರಣ ಮಾಡಿ ಫೇಸ್‌ ಪ್ಯಾಕ್‌ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಮುಖದಲ್ಲಿರುವ ಆ ಮಿಶ್ರಣ ಒಣಗಿದ ನಂತರ ತಣ್ಣೀರಿನಿಂದ ಮುಖ ತೊಳೆಯಬೇಕು. ಈ ಫೇಸ್ ಪ್ಯಾಕ್ ಪ್ರತಿ ದಿನ ಹಚ್ಚಿಕೊಂಡರೆ ಉತ್ತಮ ಫಲಿತಾಂಶ ಪಡೆಯಬಹುದು.

ಬಿಸಿಲಿನ ಬೇಗೆ:

ಬಿಸಿಲಿನ ಬೇಗೆಯಿಂದ ಚರ್ಮವನ್ನು ಕಾಪಾಡಲು ಟೊಮೆಟೋ ರಸಕ್ಕೆ ಮಜ್ಜಿಗೆ ಬೆರೆಸಿ ಮುಖಕ್ಕೆ ಹಚ್ಚಿ 10-15 ನಿಮಿಷಗಳ ನಂತರ ನೀರಿನಿಂದ ಮುಖ ತೊಳೆಯಬೇಕು. ಟೊಮೆಟೋದಲ್ಲಿ ವಿಟಮಿನ್-ಸಿ ಮತ್ತು ವಿಟಮಿನ್-ಎ ಇರುವುದರಿಂದ ತ್ವಚೆಗೆ ಫ್ರೆಶ್ ಮತ್ತು ಫೇರ್ ಲುಕ್ ನೀಡುವುದರ ಜೊತೆಗೆ ಬಿಸಿಲಿನ ಬೇಗೆ ಹೋಗಲಾಡಿಸಲು ಸಹಾಯ ಮಾಡುತ್ತದೆ.

*ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next