ಕಾಫಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಹಲವರಿಗೆ ಕಾಫಿ ಇಲ್ಲದೆ ಒಂದು ದಿನ ಕಳೆಯಲು ಸಾಧ್ಯವಿಲ್ಲ ಎಂಬಂತೆ ಇರುತ್ತಾರೆ. ಕಾಫಿ ಅಥವಾ ಟೀ ನಮ್ಮ ಎನರ್ಜಿ ಬೂಸ್ಟರ್ ನಂತೆ ಕಾರ್ಯನಿರ್ವಹಿಸುತ್ತದೆ. ತುಂಬಾ ಜನರಿಗೆ ದಿನದ ಆರಂಭದಲ್ಲಿ ಕಾಫಿ ಅಥವಾ ಟೀ ಕುಡಿಯದೇ ದಿನ ಪ್ರಾರಂಭವಾಗುವುದೇ ಇಲ್ಲ.
ಕಾಫಿ ನಮಗೆ ಕುಡಿಯಲು ಮಾತ್ರವಲ್ಲದೇ, ತ್ವಚೆಗೂ ಹಲವು ರೀತಿಯ ಉಪಯೋಗಗಳು ಇವೆ. ಕಾಫಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಆಂಶ ಚರ್ಮಕ್ಕೆ ಬಹಳ ಉಪಯುಕ್ತವಾಗಿದ್ದು, ಕಾಂತಿಯುತ ಚರ್ಮ ಪಡೆಯಲು ಸಹಾಯಕಾರಿಯಾಗಿದೆ.
ಸೂರ್ಯನ ಕಿರಣಗಳಿಗೆ ಹೆಚ್ಚಾಗಿ ಮೈ ಒಡ್ಡಿಕೊಳ್ಳುವುದರಿಂದ ಚರ್ಮಕ್ಕೆ ಅನೇಕ ರೀತಿಯ ಅಪಾಯಗಳು ಇರುತ್ತದೆ. ಕಾಫಿ ಪುಡಿಯಲ್ಲಿರುವ ಕೆಫೀನ್, ಯುವಿ ಕಿರಣಗಳಿಂದ ನಮ್ಮ ಚರ್ಮವನ್ನು ರಕ್ಷಿಸುತ್ತದೆ. ಚರ್ಮದ ಕೋಶಗಳ ಬೆಳವಣಿಗೆ ಉತ್ತಮವಾಗಿಡುವುದರೊಂದಿಗೆ ತ್ವಚೆಗೆ ಹೊಳಪು ನೀಡುತ್ತದೆ.
ಕಾಫಿಪುಡಿಯನ್ನು ಫೇಸ್ ಪ್ಯಾಕ್, ಫೇಸ್ ಮಾಸ್ಕ್ ಅಥವಾ ಸ್ಕ್ರಬ್ ರೂಪದಲ್ಲಿ ಬಳಸಬಹುದು. ಇದು ಚರ್ಮದ ಅಂದ ಹೆಚ್ಚಿಸಲು ಸಹಾಯ ಮಾಡುತ್ತದೆ. ಕಾಫಿ ಸ್ಕ್ರಬ್ ತ್ವಚೆಗೆ ತುಂಬಾನೇ ಒಳ್ಳೆಯದು ಎಂದು ಹೇಳುವುದು ಏಕೆಂದರೆ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್, ವಿಟಮಿನ್ ಬಿ3, ಕ್ಲೋರೋಜೆನಿಕ್ ಆಮ್ಲ ಇರುವುದರಿಂದ ಇದು ಮುಖದಲ್ಲಿರುವ ಕಪ್ಪು ಕಲೆ, ಮೊಡವೆ ಇವುಗಳನ್ನು ಹೋಗಲಾಡಿಸಿ, ತ್ವಚೆಯಲ್ಲಿ ಕೊಲೆಜಿನ್ ಉತ್ಪತ್ತಿ ಮಾಡುತ್ತದೆ. ಇದರಿಂದ ತ್ವಚೆಯ ಹೊಳಪು ಹೆಚ್ಚಾಗುತ್ತದೆ.
- ಎಕ್ಸ್‌ಫೋಲಿಯೇಟಿಂಗ್ ಸ್ಕ್ರಬ್ :
ಕಾಫಿಯು ನೈಸರ್ಗಿಕ ಎಕ್ಸ್‌ಫೋಲಿಯೇಟಿಂಗ್ ಸ್ಕ್ರಬ್ ಆಗಿದೆ. ಇದು ಚರ್ಮಕ್ಕೆ ತುಂಬಾ ಪರಿಣಾಮಕಾರಿಯಾಗಿದೆ. ಸ್ವಲ್ಪ ಕಾಫಿಪುಡಿ ತೆಗೆದುಕೊಂಡು ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಸೇರಿಸಿ. ನಂತರ ಅದನ್ನು ಮುಖಕ್ಕೆ ಹಚ್ಚಿ ಕೆಲ ಹೊತ್ತು ಮಸಾಜ್ ಮಾಡಿ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
- ಫೇಸ್ ಸ್ಕ್ರಬ್
ಕಾಫಿ ಪುಡಿಯನ್ನು ಫೇಸ್ ಸ್ಕ್ರಬ್ ಆಗಿಯೂ ಬಳಸಬಹುದು. ಸ್ವಲ್ಪ ಕಾಫಿ ಪುಡಿ, ಸ್ವಲ್ಪ ಬ್ರೌನ್ ಶುಗರ್, ಮತ್ತು ಆಲಿವ್ ಎಣ್ಣೆ ಸೇರಿಸಿ ಎಲ್ಲವೂ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ವೃತ್ತಕಾರವಾಗಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಚರ್ಮದ ಮೇಲಿನ ಡೆಡ್ ಸ್ಕಿನ್ ನಿವಾರಣೆಯಾಗುತ್ತದೆ.
- ಕಾಫಿ ಪುಡಿಯ ಸ್ಕ್ರಬ್
2 ಚಮಚ ಕಾಫಿ ಪುಡಿಯನ್ನು ಹಾಲು ಹಾಗೂ ಕೆನೆ ಜೊತೆ ಮಿಶ್ರಣ ಮಾಡಿ ಗಟ್ಟಿಯಾದ ಪೇಸ್ಟ್ ತಯಾರಿಸಿ. ಈ ಸ್ಕ್ರಬ್ ಅನ್ನು ಮುಖಕ್ಕೆ ಹಚ್ಚಿದರೆ ಮುಖದಲ್ಲಿರುವ ರಂಧ್ರಗಳು ಮರೆ ಮಾಚುತ್ತದೆ.
- ಬಾಡಿ ಸ್ಕ್ರಬ್
ಕಾಫಿಪುಡಿ ಚರ್ಮವನ್ನು ಬಿಗಿಗೊಳಿಸುತ್ತದೆ. ಕಾಫಿ, ಬ್ರೌನ್ ಶುಗರ್ ಮತ್ತು ಆಲಿವ್ ಎಣ್ಣೆಯಿಂದ ಪೇಸ್ಟ್ ತಯಾರಿಸಿ ಮೈ-ಕೈಗಳಿಗೆ ಮಸಾಜ್ ಮಾಡಿ. ಪ್ರತಿ ದಿನ ಕೂಡಾ ಸ್ಕ್ರಬ್ ಮಾಡುವುದು ಚರ್ಮಕ್ಕೆ ಉತ್ತಮ.
- ಕಾಫಿ ಫೇಸ್ ಮಾಸ್ಕ್
ಮುಖದ ಸುತ್ತ ಇರುವ ಡೆಡ್ ಸೆಲ್ ತೆಗೆದು ಹಾಕಲು ಕಾಫಿ ಫೇಸ್ ಮಾಸ್ಕ್ ಉತ್ತಮ ಪರಿಹಾರ. ಕಾಫಿ ಪುಡಿಯನ್ನು ಜೇನುತುಪ್ಪ ಅಥವಾ ಮೊಸರಿನೊಂದಿಗೆ ಬೆರೆಸಿ ಫೇಸ್ ಮಾಸ್ಕ್ ನಂತೆ ಮಾಡಿ. ಈಗ ಇದನ್ನು ಮುಖಕ್ಕೆ ಹಚ್ಚಿ ಸುಮಾರು 15 ನಿಮಿಷಗಳ ನಂತರ ಮುಖ ತೊಳೆಯಿರಿ. ಇದರೊಂದಿಗೆ, ಚರ್ಮವನ್ನು ಬಿಗಿಗೊಳಿಸಲು ಮತ್ತು ಅದರ ವಿನ್ಯಾಸವನ್ನು ಸುಧಾರಿಸಲು ಇದು ಬಹಳಷ್ಟು ಸಹಾಯ ಮಾಡುತ್ತದೆ.
- ಕಾಫಿ ಮಾಸ್ಕ್
ಕಾಫಿ ತ್ವಚೆಗೆ ಹೊಳಪು ನೀಡುತ್ತದೆ. ಚರ್ಮ ಹೊಳೆಯುವಂತೆ ಮಾಡಲು ಕಾಫಿ ಮಾಸ್ಕ್ ಟ್ರೈ ಬಳಸುವುದು ಉತ್ತಮ. ಅರ್ಧ ಕಪ್ ಕಾಫಿ ಪುಡಿಗೆ ಹಾಲು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
*ಕಾವ್ಯಶ್ರೀ