Advertisement

ಕರುನಾಡ ಹೆಮ್ಮೆಯ ಪ್ರಾಕೃತಿಕ ಕೊಡುಗೆ  ಕೊಡಗು

04:11 PM Jun 27, 2021 | Team Udayavani |

ಪ್ರವಾಸ ಎಂದರೆ ಪ್ರತಿಯೊಬ್ಬರಿಗೂ ಹಬ್ಬ. ಪ್ರಾಕೃತಿಕ ಸೌಂದರ್ಯವನ್ನು ಸವಿಯುವುದೇ ಒಂದು ಅತ್ಯದ್ಭುತ ಅನುಭವ. ಅಂತಹ ಪ್ರವಾಸ ತಾಣಗಳ ಸಾಲಿನಲ್ಲಿ ಮಡಿಕೇರಿ ಕೂಡ ಒಂದು ಸುಂದರ ಪ್ರವಾಸ ತಾಣ.

Advertisement

ಎತ್ತ ನೋಡಿದರತ್ತ ಹಸುರು ಸೀರೆಯನ್ನು ಉಟ್ಟಿರುವಂತೆ ಕಾಣುವ ವಸುಂಧರೆ, ನಡುವೆ ಹರಿಯುವ ಝರಿಗಳು, ಚಿಲಿಪಿಲಿ ಕಲರವದ ಖಗಗಳು,ಅಲ್ಲಲ್ಲಿ ಧುಮುಕುವ ಜಲಪಾತಗಳು, ಎತ್ತರವಾದ ಮರಗಳು, ಹಸುರು ಹೊದಿಕೆಯಂತೆ ಕಾಣುವ ಕಾಫಿ ತೋಟ… ಈ ಎಲ್ಲ ಅನುಭವ ಪಡೆಯಬೇಕಾದರೆ ನಾವು ಒಮ್ಮೆ ಮಡಿಕೇರಿಗೆ ಭೇಟಿ ಕೊಡಲೇಬೇಕು.

ಕರ್ನಾಟಕದ ಅತೀ ಚಿಕ್ಕ ಜಿಲ್ಲೆ ಎಂದರೆ ಅದು ಕಿತ್ತಳೆಯ ನಾಡು,ದಕ್ಷಿಣ ಭಾರತದ ಸ್ಕಾಟ್‌ಲ್ಯಾಂಡ್‌ ಎಂದೇ ಹೆಸರಾಗಿರುವ ಕೊಡಗು ಜಿಲ್ಲೆ. ಇದು ತನ್ನದೇ ಆದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದೆ. ಪರಿಸರ ಪ್ರೇಮಿಗಳಿಗಂತೂ ಅದರ ಅನುಭವವೊಂದು ಹಬ್ಬವೇ ಸರಿ! ತುಂತುರು ಮಳೆಯಲ್ಲಿ ನಡೆದುಹೋಗುವಾಗ ಅಲ್ಲಲ್ಲಿ ಸಿಗುವ ಪುಟ್ಟ ತಂಗುದಾಣಗಳಲ್ಲಿ ಕೂತು ಒಂದು ಕಪ್‌ ಚಹಾ ಸವಿಯುವಾಗ ಆಗುವ ಆಹ್ಲಾದಕರ ಸ್ವಾದ ನಿಜವಾಗಿಯೂ ವರ್ಣಿಸಲಸದಳ ಮತ್ತು ಅತ್ಯದ್ಭುತ.

ಹಾಗೆ ಮುಂದೆ ಹೋದರೆ ಸಿಗುವ ಮತ್ತೂಂದು ಪ್ರವಾಸಿ ತಾಣವೆಂದರೆ ಅಬ್ಬಿ ಫಾಲ್ಸ್. ಬೆಟ್ಟದ ನಡುವೆ ಮೆಟ್ಟಿಲು ಇಳಿದು ನಾವು ಸಾಗಬೇಕು. ಜಿನುಗುವ ಮಳೆಯಲಿ ಸ್ನೇಹಿತರೆಲ್ಲರೂ ಕೈ ಹಿಡಿದು, ಮೆಟ್ಟಿಲುಗಳನ್ನು ಇಳಿದು ಹೋಗುವಾಗ ಜೋರಾಗಿ ಕಿರುಚುವ ಹಂಬಲ, ಸ್ನೇಹದ ಬಾಂಧವ್ಯವನ್ನು ಬೆಸೆಯುತ್ತಾ, ತಮ್ಮ ನೋವುಗಳನ್ನೆಲ್ಲ ಮರೆಮಾಚಿ, ಎಲ್ಲರೂ ಒಂದೇ ಭಾವದಲ್ಲಿ ಹಾಡಿಗೆ ಜೀವವನ್ನು ತುಂಬುತ್ತಾ, ಹಾಡುತ್ತಾ ಸಾಗುವಾಗ ಒಂದು ಸುಂದರ ರಮಣೀಯ ದೃಶ್ಯ ನಮ್ಮ ಕಣ್ಣಮುಂದೆ ಹಾದು ಹೋಗುತ್ತದೆ. ಧುಮುಕುವ ನೀರಿನಲ್ಲಿ ಇಳಿದು, ಎಲ್ಲರ ಮೇಲೂ ನೀರನ್ನು ಎರಚಿಕೊಂಡು, ಆಟವಾಡುವ ಮಜವೇ ಬೇರೆ.

Advertisement

ಕೊಡಗಿನಲ್ಲಿ ನೋಡಬಹುದಾದ ಇನ್ನೊಂದು ಸುಂದರ ತಾಣವೆಂದರೆ ಅದು ತಲಕಾವೇರಿ. ಕನ್ನಡ ನಾಡಿನ ಜೀವನದಿ ತಲಕಾವೇರಿಯ ಉಗಮ ಸ್ಥಾನ. ಬೆಟ್ಟದ ತುದಿಯಲ್ಲಿ ಪ್ರಕೃತಿಯ ಮಡಿಲಲ್ಲಿ. ಅಗಸ್ತ್ಯ ದೇವಸ್ಥಾನದ ಮುಂದಿರುವ ಒಂದು ಕಲ್ಯಾಣಿಯಲ್ಲಿ ಹುಟ್ಟುವ ಈ ನದಿ ಕೋಟ್ಯಂತರ ಜೀವಗಳಿಗೆ ಜೀವನ ನೀಡಿದೆ. ತಲಕಾವೇರಿಯು ಕೊಡಗಿನ ಒಂದು ತುದಿಯ ಭಾಗದಲ್ಲಿದೆ. ಅಗಸ್ತ್ಯ ದೇವಸ್ಥಾನದ ಮಧ್ಯದಲ್ಲಿ ಚಿಕ್ಕದಾದ ಗರ್ಭಗುಡಿಯನ್ನು ಹೊಂದಿದ್ದು, ಸುತ್ತಲೂ ಬೆಣಚು ಕಲ್ಲಿನಿಂದ ಆವರಿಸಿದೆ. ಸುಂದರವಾದ ಅಮೋಘ ಕೆತ್ತನೆಯಿಂದ ನಿರ್ಮಾಣವಾಗಿದೆ ಹಾಗೂ ಮೆಟ್ಟಿಲುಗಳು ಕೂಡ ತುಂಬಾ ದೊಡ್ಡದಾಗಿದ್ದು, ಓಡಾಡಲು ಸರಾಗವಾಗಿದೆ. ಇದನ್ನು ಬೆಟ್ಟದ ತುದಿಯಿಂದ ನಿಂತು ನೋಡಿದರೆ ಬೆಟ್ಟಗಳ ಸಾಲು, ದಟ್ಟ ಕಾನನ, ಹಸುರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಕರುನಾಡ ಹೆಮ್ಮೆಯ ಪ್ರಾಕೃತಿಕ ತಾಣದ ಕೊಡುಗೆಯಾಗಿರುವ ಕೊಡಗಿನ ರಮಣೀಯ ಸ್ಥಳಗಳಿಗೆ ಒಮ್ಮೆ ನೀವೂ ಭೇಟಿ ನೀಡಿ, ಪ್ರಕೃತಿಯ ಚೆಲುವನ್ನು ಆಸ್ವಾದಿಸಿ, ಜತೆಯಲ್ಲಿ ಪ್ರಕೃತಿಯ ಪರಿಶುದ್ಧತೆಯನ್ನು ಕಾಪಾಡಿ.

 

ಗುರುಪ್ರಸಾದ್‌ ಹಳ್ಳಿಕಾರ್‌

ಸರಕಾರಿ ಪದವಿ ಪೂರ್ವ ಕಾಲೇಜು,

 ಸೀಗೆಹಳ್ಳಿ, ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next