Advertisement

ಎಳನೀರಿನಲ್ಲಿದೆ ಸೌಂದರ್ಯವರ್ಧಕ

03:25 PM May 05, 2017 | |

ಪ್ರಾಚೀನ ಕಾಲದಿಂದಲೂ ರೋಗನಿವಾರಕ ಹಾಗೂ ಆರೋಗ್ಯವರ್ಧಕವಾಗಿ ಎಳನೀರು ಜನಪ್ರಿಯವಾಗಿದೆ.  ಹಾಂ! ಸೌಂದರ್ಯ ಲೋಕದಲ್ಲೂ ಎಳನೀರಿಗೆ ಮಹತ್ವದ ಸ್ಥಾನವಿದೆ!

Advertisement

ಎಳನೀರಿನ ಸೌಂದರ್ಯವರ್ಧಕಗಳು, ಸೌಂದರ್ಯ ರಕ್ಷಕಗಳ ಕುರಿತಾಗಿ ಅರಿಯೋಣ ಮೊಡವೆ ನಿವಾರಕ ಎಳನೀರಿನ ಲೇಪ
ಹದಿಹರೆಯದಲ್ಲಿ ಕಾಡುವ ಮೊಡವೆ, ಬ್ಲ್ಯಾಕ್‌ಹೆಡ್ಸ್‌ , ವೈಟ್‌ಹೆಡ್ಸ್‌ , ಮೊಡವೆ ಕಲೆಗಳಿಗೆ ಹಲವು ರೀತಿಯಿಂದ ಗೃಹೌಷಧಿ, ಲೇಪ ತಯಾರಿಸಬಹುದು.

ಮೊಡವೆಗೆ ಲೇಪ: ಒಂದು ಗ್ಲಾಸ್‌ ಎಳನೀರಿನಲ್ಲಿ 25 ಗ್ರಾಂ ಅರಸಿನದ ಪೇಸ್ಟ್‌ ಅರೆಯಬೇಕು. ಅದಕ್ಕೆ 3 ಚಮಚ ರಕ್ತಚಂದನದ ಹುಡಿ ಅಥವಾ ಪೇಸ್ಟ್‌ ಬೆರೆಸಬೇಕು. ಇದನ್ನು 2 ದಿನ ಹಾಗೆಯೇ ಬಿಡಬೇಕು. ತದನಂತರ ಸೋಸಿ, ಈ ನೀರನ್ನು ಮುಖಕ್ಕೆ ಲೇಪಿಸಿದರೆ ಮೊಡವೆ, ಬ್ಲ್ಯಾಕ್‌ಹೆಡ್‌, ವೈಟ್‌ಹೆಡ್ಸ್‌  ಇತ್ಯಾದಿ ನಿವಾರಣೆಯಾಗುತ್ತವೆ.

ಎಳನೀರಿನ ಫೇಸ್‌ಪ್ಯಾಕ್‌
ಎಳನೀರು 10 ಚಮಚ, ಶ್ರೀಗಂಧ 3 ಚಮಚ, ಅರಸಿನ 1 ಚಮಚ, ಶುದ್ಧ ಜೇನು 1 ಚಮಚ ಇವೆಲ್ಲವನ್ನೂ ಬೆರೆಸಿ ಫೇಸ್‌ಪ್ಯಾಕ್‌ ಮಾಡಬೇಕು. 20 ನಿಮಿಷಗಳ ಬಳಿಕ ತೊಳೆದರೆ ಇದರಿಂದ ಮೊಗದ ಮೊಡವೆ ಕಲೆ ನಿವಾರಣೆಯಾಗುತ್ತದೆ.
3 ಚಮಚ ಶ್ರೀಗಂಧದ ಬದಲು 5 ಚಮಚ ಗೋಪೀಚಂದನವನ್ನೂ ಬೆರಸಬಹುದು.

ಮೊಡವೆ ಕಲೆ ಹಾಗೂ ಕಪ್ಪು ಕಲೆಗಳ ನಿವಾರಣೆಗೆ
10 ಚಮಚ ಎಳನೀರು, 5 ಚಮಚ ಹಾಲು,  4 ಹನಿ ಆಲಿವ್‌ ತೈಲ ಅಥವಾ ಕೊಬ್ಬರಿ ಎಣ್ಣೆ, ಜೇನು 1 ಚಮಚ, ನಿಂಬೆರಸ 1 ಚಮಚ. ಇವೆಲ್ಲವನ್ನೂ ಬೆರೆಸಿ ಪೇಸ್ಟ್‌ ತಯಾರಿಸಬೇಕು. ಇದನ್ನು ಮುಖಕ್ಕೆ ಲೇಪಿಸಿ, ಫೇಸ್‌ಪ್ಯಾಕ್‌ ಮಾಡಬೇಕು. ಅರ್ಧ ಗಂಟೆ ಬಳಿಕ ಬೆಚ್ಚಗೆ ನೀರಲ್ಲಿ ಮುಖ ತೊಳೆದರೆ ಮೊಡವೆ ಕಲೆ ಹಾಗೂ ಇತರ ಕಪ್ಪು ಕಲೆಗಳು ನಿವಾರಣೆಯಾಗುತ್ತವೆ. ವಾರಕ್ಕೆ 3-4 ಬಾರಿ ಈ ಲೇಪ ಹಿತಕರ.

Advertisement

ಕಪ್ಪು  ಕತ್ತು ಹಾಗೂ ಕೈಕಾಲುಗಳ ಕಲೆಗಳನ್ನು ನಿವಾರಿಸಲೂ ಈ ಲೇಪ ಬಳಸಬಹುದು. ತುಂಬಾ ಒಣ ಚರ್ಮವಿರುವವರು 20 ಚಮಚ ಎಳನೀರು, 10 ಚಮಚ ಹಾಲನ್ನು ಬಳಸಿ ಕೊಬ್ಬರಿ ಎಣ್ಣೆಯನ್ನು 1 ಚಮಚದಷ್ಟು ಮಿಶ್ರ ಮಾಡಬೇಕು. ಗುಲಾಬಿ ಪಕಳೆ ಅರೆದು ಇವೆಲ್ಲವುಗಳೊಂದಿಗೆ ಮಿಶ್ರ ಮಾಡಬೇಕು.ಈ ಮುಖಲೇಪವನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ಬಳಿಕ ಬೆಚ್ಚಗಿನ ನೀರಲ್ಲಿ ಮುಖ ತೊಳೆದರೆ ಮುಖ ಮೃದು ಹಾಗೂ ಸ್ನಿಗ್ಧವಾಗಿ ಹೊಳೆಯುತ್ತದೆ. ಒಣ ಚರ್ಮವಿರುವವರು 2 ದಿನಕ್ಕೊಮ್ಮೆ ಈ ಮುಖ ಲೇಪ ಬಳಸಿದರೆ ಪರಿಣಾಮಕಾರಿ.

ಎಳನೀರಿನ ಹೇರ್‌ಪ್ಯಾಕ್‌
ಎಳನೀರು ಅರ್ಧ ಕಪ್‌ ಹಾಗೂ ಎಳನೀರಿನಲ್ಲಿ ಇರುವ ತಿರುಳು (ತೆಳ್ಳಗಿನ ಎಳನೀರಿನ ಗಂಜಿ) ಇವೆರಡನ್ನೂ ಚೆನ್ನಾಗಿ ಅರೆಯಬೇಕು. ತದನಂತರ ಒಂದು ಬೌಲ್‌ನಲ್ಲಿ  ತೆಗೆದುಕೊಂಡು 10 ಹನಿ ಬಾದಾಮಿ ತೈಲ ಬೆರೆಸಿ ಸ್ವಲ್ಪ ಬಿಸಿ ಮಾಡಬೇಕು. ಇದನ್ನು ಬೆಚ್ಚಗಿರುವಾಗ ಕೂದಲಿಗೆ ಲೇಪಿಸಿ ತದನಂತರ ಬೆಚ್ಚಗಿನ ಬಟ್ಟೆಯಿಂದ ಕೂದಲು ಕಟ್ಟಬೇಕು. ಅರ್ಧಗಂಟೆಯ ಬಳಿಕ ಬೆಚ್ಚಗಿನ ನೀರಲ್ಲಿ  ಕೂದಲು ತೊಳೆಯಬೇಕು. ಇದರಿಂದ ಕೂದಲು ಉದುರುವುದು ನಿವಾರಣೆಯಾಗುತ್ತದೆ. ಹಾಗೂ ಕೂದಲು ಸೊಂಪಾಗಿ ಬೆಳೆಯುತ್ತದೆ.

ಎಳನೀರು ದಾಸವಾಳ ಹಾಗೂ ಕೊಬ್ಬರಿ ಎಣ್ಣೆಯ ಹೇರ್‌ಪ್ಯಾಕ್‌
1 ಕಪ್‌ ಎಳನೀರಿನಲ್ಲಿ 2 ದಾಸವಾಳದ ಹೂಗಳ ಪಕಳೆಗಳನ್ನು ರಾತ್ರಿ ನೆನೆಸಿಡಬೇಕು. ಮರುದಿನ ಬೆಳಿಗ್ಗೆ ಅದನ್ನು ಅರೆದು ತದನಂತರ ಈ ಪೇಸ್ಟ್‌ಗೆ 5 ಚಮಚ ಕೊಬ್ಬರಿ ಎಣ್ಣೆ ಬೆರೆಸಬೇಕು. ಇದನ್ನು ಕೂದಲಿಗೆ ಚೆನ್ನಾಗಿ ಲೇಪಿಸಿ, ಅರ್ಧ ಗಂಟೆಯಿಂದ ಒಂದು ಗಂಟೆ ಬಿಡಬೇಕು. ತದನಂತರ ಬೆಚ್ಚಗಿನ ನೀರಿನಿಂದ ಕೂದಲು ತೊಳೆಯಬೇಕು. ಇದೇ ರೀತಿ ವಾರಕ್ಕೆ ಎರಡು ಬಾರಿ ಲೇಪಿಸಿ ತಲೆಸ್ನಾನ ಮಾಡಿದರೆ ಈ ಹೇರ್‌ಪ್ಯಾಕ್‌ನಿಂದ ಕೂದಲು ಉದುರುವುದು, ಕೂದಲಿನ ತುದಿ ಸೀಳುವುದು ಮೊದಲಾದವು ನಿವಾರಣೆಯಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ. ಕಾಂತಿ ವರ್ಧಿಸುತ್ತದೆ.

– ಡಾ| ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next