Advertisement
ಆಫೀಸ್‌ನ ಕೆಲಸ ಬೆಳಗ್ಗೆ ಎಂಟು ಗಂಟೆಗೆ ಶುರು. ಅವಳು ಬೆಳಗ್ಗೆ ಐದಕ್ಕೇ ಎದ್ದು ಒಂದಿಷ್ಟು ಬ್ರೆಡ್ ತಿಂದು ತಯಾರಾಗಲು ಆರಂಭಿಸಬೇಕು. ಮೊದಲು ಉದ್ದ ಕೂದಲನ್ನು ಹೊಳೆಯುವ ಹಾಗೆ ಬಾಚಿ, ಅದು ಅಲ್ಲಾಡದ ಹಾಗೆ ಜೆಲ್ ಸವರಬೇಕು. ನಂತರ ಇಡೀ ಮುಖಕ್ಕೆ ಫೇಸ್‌ಪ್ಯಾಕ್ ಲೇಪನ. ಮುಖ ಹೊಳೆಯುವ ಹಾಗೆ ಹಬೆ ಹಾಯಿಸಿ ಸ್ವತ್ಛಗೊಳಿಸುವಿಕೆ. ತದನಂತರ ಎಲ್ಲಿಯೂ ಒಂದೂ ಕಲೆ ಕಾಣದ ಹಾಗೆ ಮುಖಕ್ಕೆ ಕ್ರೀಂನ ಪದರ. ತೆಳು ಗುಲಾಬಿ ರಂಗು ಕೆನ್ನೆಗೆ ಲೇಪಿಸಿ, ಕಡು ಕೆಂಪು ಬಣ್ಣದ ರಂಗು ತುಟಿಗೆ ಬಳಿಯಬೇಕು. ಹುಬ್ಬನ್ನು ಕಾಮನಬಿಲ್ಲಿನ ಹಾಗೆ ತೀಡಿ, ಕಣ್ಣು ರೆಪ್ಪೆ ಉದ್ದ ಕಾಣಲು ಕೃತಕ ರೆಪ್ಪೆ, ಕನ್ನಡಕ ತೆಗೆದು ಲೆನ್ಸ್… ಮುಗಿಯಿತೇ? ಇಲ್ಲ… ನಂತರ ಹೊಟ್ಟೆ ಕಾಣದಂತೆ, ದೇಹದ ಆಕಾರ ಚೆಂದವಾಗಿ ಕಾಣಲು ಕಾರ್ಸೆಟ್ ಎಂಬ ಸೊಂಟದ ಸುತ್ತ ಬಿಗಿಯಾದ ಒಳ ಉಡುಪು. ಬಿಗಿಯಾದಷ್ಟೂ ಉಸಿರಾಡಲು ಕಷ್ಟ, ಆದರದು ಮುಖ್ಯವಲ್ಲ… ಚೆಂದ ಕಾಣಿಸಬೇಕಲ್ಲವೇ? ಕಡೆಗೆ ಎತ್ತರ ಕಾಣಲು ಹೈಹೀಲ್ಡ್ ಚಪ್ಪಲಿ ಧರಿಸಿ ಕೆಲಸಕ್ಕೆ ಹೊರಟರೆ ರಾತ್ರಿ ತನಕ ಅದೇ ವೇಷ!
ಸುಂದರವಾಗಿ ಕಾಣಬೇಕು ಎಂಬುದು ಮಾನವ ಸಹಜ ಬಯಕೆ. ಅನಗತ್ಯ ಕೊಬ್ಬಿಲ್ಲದ ದೇಹ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಅದರಂತೆ ಹಿತಮಿತವಾದ ಅಲಂಕಾರ ನೋಡಲೂ ಸುಂದರ ಮತ್ತು ಆತ್ಮವಿಶ್ವಾಸಕ್ಕೆ ಪೂರಕ. ಆದರೆ, ಇವೆಲ್ಲವೂ ನಮ್ಮ ವೈಯಕ್ತಿಕ ಆಯ್ಕೆ. ಅಂದರೆ ಹೀಗೇ ಇರಬೇಕು, ಅಥವಾ ಇರಬಾರದು ಎಂಬುದನ್ನು ಇತರರು ಕರಾರು ವಿಧಿಸುವಂತಿಲ್ಲ. ಹಾಗೆ ಸೌಂದರ್ಯ ಎಂಬುದು ಹೆಣ್ಣಿನ ದೇಹ, ಧರ್ಮ, ಅಂಗಸೌಷ್ಟವಕ್ಕೆ ಮಾತ್ರ ಸೀಮಿತವಾದಾಗ ಅದು ನಿಜಕ್ಕೂ ಅನಾರೋಗ್ಯಕರ. ಸಮಾಜದ ಈ ಸಿದ್ಧ ಪರಿಕಲ್ಪನೆಗೆ ಹೊಂದಿಕೊಳ್ಳಲು ಮಹಿಳೆಯರು ತಮ್ಮ ಇಷ್ಟಾನಿಷ್ಟಗಳನ್ನು ಲೆಕ್ಕಿಸದೆ ಎಲ್ಲಕ್ಕೂ ಸಿದ್ಧವಾಗುವ ಪರಿಸ್ಥಿತಿ ಒದಗುತ್ತದೆ. ಕೊರಿಯಾದಲ್ಲಿ ಆಗುತ್ತಿರುವುದು ಇದೇ!
Related Articles
ಹಾಲಿನ ಬಣ್ಣದ ತ್ವಚೆ, ದೊಡ್ಡ ಕಣ್ಣು, ಅಂಡಾಕೃತಿಯ ಸಣ್ಣ ಮುಖ, ಕೆಂಪು ತುಟಿ, ನೀಳ ಕಾಲು ಮತ್ತು ಒಂದಕ್ಕೆ ಒಂಬತ್ತರಷ್ಟು ಪ್ರಮಾಣಬದ್ಧ ದೇಹ (ಮುಖದ ಅಳತೆ ಒಂದಾದರೆ ಉಳಿದ ದೇಹ ಒಂಬತ್ತರಷ್ಟು!).. ಇದು ಅಲ್ಲಿನ ಪುರುಷ ಪ್ರಧಾನ ಸಮಾಜ ವಿಧಿಸಿರುವ ಮತ್ತು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ನಿಯಮ. ಎಷ್ಟರಮಟ್ಟಿಗೆಂದರೆ ವೃತ್ತಿರಂಗದಲ್ಲಿ ಮಹಿಳೆಯರ ಮುಖ್ಯ ಅರ್ಹತೆ ಅವರ ವೃತ್ತಿಕೌಶಲ್ಯವಲ್ಲ, ಅವರ ಫೋಟೋ! ಉನ್ನತ ಹುದ್ದೆ, ಅಧಿಕಾರದಲ್ಲಿರುವವರು ಪುರುಷರೇ. ಹೀಗಾಗಿ ಮಾನದಂಡ ನಿರ್ಧರಿಸುವವರೂ ಅವರೇ. ಮಹಿಳೆಯರಿಗೆ ಸಂದರ್ಶನಗಳಲ್ಲಿ, “ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಿದ್ಧರಿದ್ದೀರಾ?’ ಎಂಬುದೂ ಪ್ರಮುಖ ಪ್ರಶ್ನೆ. ಇವೆಲ್ಲವೂ ಅಬಾಧಿತವಾಗಿ ನಡೆದುಬಂದಿತ್ತು. ಈ ಅಲಂಕಾರದ ಭರಕ್ಕೆ ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಹೈರಾಣಾಗುತ್ತಿದ್ದರು! ಇಷ್ಟು ವರ್ಷ ಸಹಿಸಿದ್ದೇನೋ ನಿಜ. ಆದರೆ, ಸಹನೆ- ತಾಳ್ಮೆಗೂ ಮಿತಿಯಿಲ್ಲವೇ? ಹಾಗೆ ಶುರುವಾದ ಪ್ರತಿರೋಧದ ಕಿಡಿ ಈಗ ಎಲ್ಲೆಡೆ ಹಬ್ಬುತ್ತಿದೆ.
Advertisement
ನಾವಿರೋದೇ ಹೀಗೆ…ಹೊಸ ವರ್ಷದ ಆರಂಭದಲ್ಲಿ ಅಲ್ಲಿನ ಮಹಿಳೆಯರು ಬಂಡೆದ್ದಿದ್ದರು. ಅಲ್ಲಿನ ನಿತ್ಯದ ಹಿಂಸೆಯಿಂದ ಬೇಸತ್ತು ಸಾಮಾಜಿಕ ಜಾಲತಾಣಗಳಲ್ಲಿ, ಮೇಕಪ್ ಇಲ್ಲದೆ ಹಾಕಿದ ಚಿತ್ರ, ವಿಡಿಯೋಗಳು ಆ ದೇಶದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದವು. ಮಹಿಳೆಯರ ಈ ನಡೆಗೆ ಸಹಜವಾಗಿಯೇ ಬೆದರಿಕೆ- ವಿರೋಧಗಳು ವ್ಯಕ್ತವಾದವು. ಆದರೆ, ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಮೇಕಪ್ ಇಲ್ಲದ ತಮ್ಮ ತಮ್ಮ ಭಾವಚಿತ್ರಗಳನ್ನು ಧೈರ್ಯವಾಗಿ ಹಾಕುತ್ತಿದ್ದಾರೆ. ಅಲ್ಲಿನ ಸುದ್ದಿವಾಚಕಿಯೊಬ್ಬರು ಪ್ರಥಮ ಬಾರಿಗೆ ಲೆನ್ಸ್ ತೆಗೆದಿಟ್ಟು ಕನ್ನಡಕ ಧರಿಸಿ ವಾರ್ತೆ ಓದಿದ್ದು ದೊಡ್ಡ ಸಂಗತಿ ಎನಿಸದಿದ್ದರೂ, ಅಲ್ಲಿನ ಸಮಾಜದ ಪರಿಸ್ಥಿತಿ ಗಮನಿಸಿದಾಗ ಅದು ಕೂಡಾ ದೊಡ್ಡ ಸಾಧನೆಯೇ! (ಕ್ಯಾಮೆರಾ ಬೆಳಕು ಗಾಜಿನ ಮೇಲೆ ಪ್ರತಿಫಲಿಸುತ್ತದೆ ಎನ್ನುವುದು ಕಾರಣವಲ್ಲ; ಏಕೆಂದರೆ, ಪುರುಷರು ಕನ್ನಡಕ ಧರಿಸಲು ಯಾವಾಗಲೂ ಅಡ್ಡಿಯಿರಲಿಲ್ಲ!) ಎಸ್ಕೇಪ್ ಫ್ರಮ್ ಕಾರ್ಸೆಟ್
ಕೇವಲ ಪ್ರಸಾಧನಕ್ಕಷ್ಟೇ ಈ ಚಳವಳಿ ಸೀಮಿತವಾಗಿರಲಿಲ್ಲ. ಇದರಿಂದಾಗಿ ತಮ್ಮ ದೇಹದ ಬಗ್ಗೆ ಕೀಳರಿಮೆ ಹೊಂದಿ, ಅದನ್ನು ಪರಿಪೂರ್ಣವಾಗಿಸಲು ಇನ್ನಿಲ್ಲದಂತೆ ಹೆಣಗುತ್ತಿದ್ದ ಮಹಿಳೆಯರೂ ನಿಧಾನವಾಗಿ ಆ ಮನೋಭಾವದಿಂದ ಹೊರಬರುತ್ತಿದ್ದಾರೆ. ಕಾರ್ಸೆಟ್ ಎಂದರೆ ಸೊಂಟಕ್ಕೆ ಬಿಗಿಯಾಗಿ ಕೂರುವ, ಕೈಕಾಲಿನ ಚಲನೆಗೆ ಅಡ್ಡಿಮಾಡುವ ಫ್ರಾಕ್ ದಿರಿಸು. ಅಂಥಾ ಹಿಂಸಾದಾಯಕವಾದ ಕಾರ್ಸೆಟ್ ಅನ್ನು ತ್ಯಜಿಸಿ ಇನ್ನು ಮುಂದೆ ದೇಹಕ್ಕೆ ಹಿತವೆನಿಸುವ ಪ್ಯಾಂಟ್, ಶರ್ಟ್ ಧರಿಸುತ್ತೇವೆ ಎಂಬ ಕೂಗು ಅಲ್ಲಿ ಕೇಳಿಬಂದಿದೆ. “ಎಸ್ಕೇಪ್ ಫ್ರಮ್ ಕಾರ್ಸೆಟ್’ ಎಂಬ ಅಭಿಯಾನವೇ ಶುರುವಾಗಿಬಿಟ್ಟಿದೆ. ಅಲಂಕಾರ, ಉಡುಪಿನಲ್ಲಿ ಸ್ವಾತಂತ್ರ್ಯ; ಇದಿಷ್ಟೇ ಈ ಚಳವಳಿಯ ಉದ್ದೇಶವಲ್ಲ. ತನ್ಮೂಲಕ ಮಹಿಳೆಯನ್ನು ಭೋಗವಸ್ತುವನ್ನಾಗಿ ನೋಡುವ ಸಮಾಜದ ದೃಷ್ಟಿಕೋನ ಬದಲಿಸುವ ಗುರಿ ಇದರದ್ದು. ಹೊಸವರ್ಷದಲ್ಲಿ ಹೊಸದೊಂದು ಹೆಜ್ಜೆ ಸಮಾಜದ ದಿಕ್ಕು ಬದಲಿಸೀತೆ? ಜಗತ್ತಿನೆಲ್ಲೆಡೆ ಅದರ ಗಾಳಿ ಬೀಸೀತೆ? ಗೊತ್ತಿಲ್ಲ! ಬಣ್ಣ ಗಿಣ್ಣ ಜಾನೇ ದೋ…
ನಮ್ಮಲ್ಲೂ ಮುಖದ ಮೇಲೆ ಒಂದು ಮೊಡವೆ ಕಾಣಿಸಿಕೊಂಡರೂ, ಸಣ್ಣ ನೆರಿಗೆ ಮೂಡಿದರೂ ದಿಗಿಲಾಗುವವರಿದ್ದಾರೆ. ಅಯ್ಯೋ, ನಾನು ಎಲ್ಲರಿಗಿಂತ ಕಪ್ಪಿದ್ದೇನೆ ಎಂದು ಕೊರಗುವವರಿದ್ದಾರೆ. ನಮ್ಮ ಮಾರುಕಟ್ಟೆಯ ತಂತ್ರಗಳೂ ಹಾಗೆಯೇ ಇವೆ. ನೋ ಮಾರ್ಕ್ ಕ್ರೀಂ, ಆ್ಯಂಟಿ ಡಾರ್ಕನಿಂಗ್, ಆ್ಯಂಟಿ ಏಜಿಂಗ್… ಹೀಗೆ ಥರಹೇವಾರಿ ಸೌಂದರ್ಯವರ್ಧಕಗಳು, ಸೌಂದರ್ಯದ ನಿಜ ಅರ್ಥವನ್ನೇ ಮರೆಮಾಚುತ್ತವೆ. ಹಾಗಾಗಿ, ಸೌಂದರ್ಯದ ವ್ಯಾಖ್ಯಾನವನ್ನು ಬದಲಿಸಿಕೊಳ್ಳುವ ತುರ್ತು ಅಗತ್ಯವಿದೆ. * ಎತ್ತರ, ದಪ್ಪ, ಬಣ್ಣ ಇದು ಸೌಂದರ್ಯದ ನಿಜ ಮಾನದಂಡವಲ್ಲ.
* ಇನ್ನೊಬ್ಬರ ದೈಹಿಕ ಸೌಂದರ್ಯದ ಜೊತೆ ಎಂದೂ ನಿಮ್ಮನ್ನು ಹೋಲಿಸಿಕೊಳ್ಳದಿರಿ.
* ಬಿಳಿಯ ಬಣ್ಣ ಶ್ರೇಷ್ಠವಲ್ಲ ಎಂಬುದನ್ನು ಮನಗಾಣಿ.
* ನಿಮ್ಮ ಸಂತೋಷಕ್ಕಾಗಿ ಅಲಂಕಾರ ಮಾಡಿಕೊಳ್ಳಬೇಕೇ ಹೊರತು ಯಾರನ್ನೋ ಮೆಚ್ಚಿಸಲು, ಇನ್ಯಾರೊಂದಿಗೂ ಸ್ಪರ್ಧೆಗಿಳಿಯಲು ಅಲ್ಲ.
* ಕೃತಕ ಸೌಂದರ್ಯವರ್ಧಕಗಳಿಗಿಂತ ನೈಸರ್ಗಿಕ ಸೌಂದರ್ಯಕ್ಕೆ ಒತ್ತು ಕೊಡಿ.
* ನಗುವಿಗಿಂತ ಆಭರಣವಿಲ್ಲ; ಸದಾ ಖುಷಿಯನ್ನು ಧರಿಸಿ.
* ವಯಸ್ಸನ್ನು ಮರೆಮಾಚುವ ಜಿದ್ದು ಬೇಡ.
*ಜಾಹೀರಾತಿನಲ್ಲಿ ತೋರಿಸುವುದೆಲ್ಲಾ ನಿಜವಲ್ಲ.
*ದೈಹಿಕ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯಕ್ಕೆ ಆದ್ಯತೆ ಕೊಡಿ. ಡಾ.ಕೆ.ಎಸ್. ಚೈತ್ರಾ