ಕಥೆಗಳಿರಲಿ, ಕಾದಂಬರಿಗಳಿರಲಿ, ಚಿತ್ರಗಳಿರಲಿ ಅಥವಾ ಹಾಡುಗಳಿರಲಿ. ಜಗತ್ತಿನಲ್ಲಿ ಯಾವುದೇ ಮನಸೆಳೆಯುವಂತಹ ಸಂಗತಿಗಳಿದ್ದರೆ, ಅವುಗಳ ಮುಂದೆ ‘ಅಂದವಾದ’ ಎನ್ನುವ ವಿಶೇಷಣವನ್ನು ಸೇರಿಸಿ ಕರೆಯುವುದನ್ನ ನೀವೆಲ್ಲ ಕೇಳಿರುತ್ತೀರಿ. ಈಗ ಯಾಕೆ ಈ ‘ಅಂದವಾದ’ ವಿಶೇಷಣದ ಬಗ್ಗೆ ಮಾತು ಅಂತೀರಾ? ಅದಕ್ಕೊಂದು ಕಾರಣವಿದೆ. ಇಲ್ಲೊಂದು ಚಿತ್ರತಂಡ ತಮ್ಮ ಚಿತ್ರಕ್ಕೇ ‘ಅಂದವಾದ’ ಎನ್ನುವ ಶೀರ್ಷಿಕೆಯನ್ನಿಟ್ಟಿದೆ.
ಹೌದು, ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ ಈ ಚಿತ್ರದ ಹೆಸರೇ ‘ಅಂದವಾದ’. ಕಳೆದ ಒಂದೂವರೆ ವರ್ಷದ ಹಿಂದೆ ಸೆಟ್ಟೇರಿದ್ದ ಈ ಚಿತ್ರ ಸದ್ಯ ತನ್ನ ಚಿತ್ರೀಕರಣವನ್ನು ಪೂರ್ಣಗೊಳಿಸಿ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ನವನಟ ಜಯ್ ಮತ್ತು ಅನೂಷಾ ರಂಗನಾಥ್ ‘ಅಂದವಾದ’ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಲಪತಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ‘ಅಂದವಾದ’ ಚಿತ್ರತಂಡ ತನ್ನ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿದೆ.
ನಟ ಕಂ ನಿರ್ದೇಶಕ ರಿಷಭ್ ಶೆಟ್ಟಿ, ನೆ.ಲ ನರೇಂದ್ರ ಬಾಬು, ನಿರ್ಮಾಪಕ ಯೋಗಿ ದ್ವಾರಕೀಶ್, ಸಂಗೀತ ನಿರ್ದೇಶಕ ಗುರುಕಿರಣ್, ನಟ ಕೆ.ಎಸ್ ಶ್ರೀಧರ್ ಮೊದಲಾದವರು ಹಾಜರಿದ್ದು, ‘ಅಂದವಾದ’ ಚಿತ್ರದ ಹಾಡುಗಳನ್ನು ಹೊರತಂದು ಚಿತ್ರತಂಡಕ್ಕೆ ಶುಭ ಕೋರಿದರು.
ಇದೇ ವೇಳೆ ಮಾತನಾಡಿದ ನಿರ್ದೇಶಕ ಚಲಪತಿ, ‘ಚಿತ್ರದ ಹೆಸರಿನಲ್ಲಿರುವಂತೆ ಒಂದು ಅಂದವಾದ ಪ್ರೇಮಕಥೆ ಚಿತ್ರದಲ್ಲಿದೆ. ಹೊಸ ಕಲಾವಿದರ ಅಂದವಾದ ಅಭಿನಯ, ಅಷ್ಟೇ ಅಂದವಾದ ಹಾಡುಗಳು, ಪ್ರೇಕ್ಷಕರ ಮನರಂಜನೆಗೆ ಏನೇನು ಬೇಕೋ ಅದೆಲ್ಲವೂ ಚಿತ್ರದಲ್ಲಿದೆ. ಜೊತೆಗೊಂದು ಸಂದೇಶವೂ ಚಿತ್ರದಲ್ಲಿದೆ. ಇಂದಿನ ಯುವಜನತೆ ಮತ್ತು ಪ್ರೇಕ್ಷಕರ ಅಭಿರುಚಿ ಎರಡನ್ನೂ ಗಮನದಲ್ಲಿಟ್ಟುಕೊಂಡು ಒಂದೊಳ್ಳೆ ಚಿತ್ರ ಮಾಡಿದ್ದೇವೆ’ ಎಂದರು.
ಚಿತ್ರದಲ್ಲಿ ತಮ್ಮ ಪಾತ್ರವನ್ನು ಪರಿಚಯಿಸಿಕೊಂಡ ನಾಯಕ ನಟ ಜಯ್, ‘ಸುಂದರ ಹುಡುಗಿಯೊಬ್ಬಳನ್ನು ಪ್ರೀತಿಸುವ ಮುಗ್ಧ ಹುಡುಗನ ಪಾತ್ರ ನನ್ನದು. ಅವಳು ಹೇಳುವ ಕಟ್ಟು ಕಥೆ, ಸುಳ್ಳನ್ನು ನಂಬುವ ಹುಡುಗ ಕೊನೆಗೆ ಏನಾಗುತ್ತಾನೆ ಅನ್ನೋದೆ ನನ್ನ ಪಾತ್ರ. ಉಳಿದದ್ದನ್ನು ಚಿತ್ರದಲ್ಲೇ ನೋಡಬೇಕು’ ಎಂದರು. ಚಿತ್ರದ ನಾಯಕಿ ಅನೂಷಾ ರಂಗನಾಥ್ ಮಾತನಾಡಿ, ‘ಚಿತ್ರದಲ್ಲಿ ಒಂದೊಳ್ಳೆ ಪಾತ್ರ ಸಿಕ್ಕಿದೆ. ಮುಗ್ಧ ಹುಡುಗನೊಬ್ಬನನ್ನು ಹೇಗೆಲ್ಲ ಯಾಮಾರಿಸುತ್ತೇನೆ ಅನ್ನೋದು ನನ್ನ ಪಾತ್ರ. ಕೊನೆಯಲ್ಲಿ ಏನಾಗುತ್ತದೆ ಎನ್ನುವುದು ಚಿತ್ರದ ಕ್ಲೈಮ್ಯಾಕ್ಸ್. ಇಡೀ ಚಿತ್ರ ಹೆಸರೇ ಹೇಳುವಂತೆ ಅಂದವಾಗಿ ಮೂಡಿಬಂದಿದೆ. ಆಡಿಯನ್ಸ್‌ಗೂ ಇಷ್ಟವಾಗುವುದೆಂಬ ನಂಬಿಕೆ ಇದೆ’ ಎಂದರು.
‘ಅಂದವಾದ’ ಚಿತ್ರದ ಹಾಡುಗಳಿಗೆ ವಿಕ್ರಮ್ ವರ್ಮನ್ ಸಂಗೀತ ಸಂಯೋಜನೆಯಿದ್ದು, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಹೃದಯ ಶಿವ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ‘ಮಧುಶ್ರೀ ಗೋಲ್ಡನ್ ಫ್ರೇಮ್ಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಡಿ.ಆರ್ ಮಧು ಜಿ. ರಾಜ್ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಹರೀಶ್ ಎನ್.ಸೊಂಡೆಕೊಪ್ಪ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ ಕಾರ್ಯವಿದೆ.
ಸದ್ಯ ತನ್ನ ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿರುವ ‘ಅಂದವಾದ’ ಚಿತ್ರತಂಡ ಮುಂದಿನ ತಿಂಗಳ ಅಂತ್ಯಕ್ಕೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.