Advertisement

ಬಿಂಕದ ಸಿಂಗಾರಿ ಈ ಕೆಂಪು ಸುಂದರಿ.

09:09 AM May 16, 2019 | keerthan |

ಬದಿಯಡ್ಕ : ಎಪ್ರಿಲ್‌ ಮೇ ತಿಂಗಳು ಬಂತೆಂದರೆ ಎಲ್ಲೆಲ್ಲೂ ಜನರ ಹಾಹಾಕಾರ. ಒಂದೆಡೆ ನೀರಿನ ಸಮಸ್ಯೆಯಾದರೆ ಇನ್ನೊಂದೆಡೆ ಸುಡುಬಿಸಿಲಿನ ಸಮಸ್ಯೆ. ಹೊರಗಿಳಿಯಲೂ ಹಿಂದೇಟು ಹಾಕುವ ಸಾಮಾನ್ಯ ಜನರ ಮನದ ಬೇಗುದಿಯನ್ನು ಕ್ಷಣಕಾಲ ತಣಿಸುವ ಶಕ್ತಿ ಇರುವುದು ಎಪ್ರಿಲ್‌ ಮೇ ತಿಂಗಳಲ್ಲಿ ಅರಳುವ ಸುಂದರವಾದ ಹೂಗಳಿಗೆ ಮಾತ್ರ. ಅದರಲ್ಲೂ ಮೇ ಮಾಸದಲ್ಲಿ ಪ್ರಕೃತಿ ಬಣ್ಣ ಬಣ್ಣದ ಹೂಗಳಿಂದ ಕಂಗೊಳಿಸುತ್ತಾಳೆ. ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಬೀಸುವ ಗಾಳಿಗೆ ತಲೆದೂಗುವ ಈ ಚೆಲುವೆಯರು ಬಿಸಿಲಿನ ಬೇಗೆಯನ್ನೇ ಆಶ್ರಯಿಸಿ ನಗು ಚೆಲ್ಲುತ್ತಾರೆ. ಈ ಹೂಗಳ ಮಧ್ಯೆ ತನ್ನ ಬಣ್ಣ ಹಾಗೂ ಆಕೃತಿಯಿಂದ ಸೆಳೆಯುವ ಹೂಗಳಲ್ಲಿ ಮೇ ಪ್ಲವರ್ ಕೂಡಾ ಒಂದು.

Advertisement

ಉರಿಬಿಸಿಲಿಗೆ ಮರಗಳೆಲ್ಲ ಎಲೆ ಉದುರಿಸಿ ಬೋಳಾಗಿ ನಿಂತಾಗ ಭಾರತದಲ್ಲಿ ಮೇ ಪ್ಲವರ್ ಎಂದೇ ಕರೆಯಲ್ಪಡುವ ಗುಲ್‌ ಮೊಹರ್‌ ಮರವು ಮಾತ್ರ ತಣ್ಣಗೆ ಹೂಬಿಟ್ಟು ಕಣ್ಮನ ತಣಿಸುತ್ತದೆ. ಬೆತ್ತಲಾದ ಮರಕ್ಕೆ ಕೆಂಪು ಬಟ್ಟೆ ಹೊದಿಸಿದಂತೆ ಮರದ ತುಂಬಾ ಅರಳಿನಗುವ ಗುಲ್‌ ಮೊಹರ್‌ನ ಚೆಲುವು ಅವರ್ಣನೀಯ. ಹಾಗೆಯೇ ಎಲ್ಲಾ ಮನಸ್ಥಿತಿಯ ಜನರೂ ಒಮ್ಮೆ ಕತ್ತೆತ್ತಿ ನೋಡುವಂತೆ ಮಾಡುವ ಏಕೈಕ ಹೂ ಮೇ ಪ್ಲವರ್ .

ಇದೀಗ ಎಲ್ಲೆಲ್ಲೂ ಕೆಂಪು ಕಡುಕೇಸರಿ ಬಣ್ಣದ ಹೂಗಳಿಂದ ಕಂಗೊಳಿಸುವ ಮರಗಳನ್ನು ಕಾಣಬಹುದು. ರಸ್ತೆಯ ಇಕ್ಕೆಲಗಳಲ್ಲಿ, ಶಾಲೆ ಕಾಲೇಜುಗಳ ಆವರಣದಲ್ಲಿ, ಅರಣ್ಯ ಪ್ರದೇಶಗಳಲ್ಲಿ ಬೀಸುವ ಗಾಳಿಗೆ ಬೆಡಗುಬಿನ್ನಾಣದಿಂದ ನಲಿದಾಡುವ ಮೇ ಪ್ಲವರ್ ಸೌಂದರ್ಯ ಹಾಗೂ ತನ್ನ ಆಕರ್ಷಣೀಯ ಚೆಲುವಿನಿಂದ ಇಡೀ ಪ್ರದೇಶಕ್ಕೆ ಹೊಸರಂಗು ತುಂಬುತ್ತದೆ. ಅಂತೆಯೇ ಬಿಸಿಲಿನ ಬೇಗೆಯಲಿ ಬೇಯುವ ಮನಸಿಗೆ ಸ್ವಲ್ಪ ತಂಪಿನ ಅನುಭವವನ್ನು ನೀಡುತ್ತದೆ. ಕೆಂಬಣ್ಣದ ಹೂವನ್ನು ಮುಡಿದು ಕಂಗೊಳಿಸುವ ಮೇ ಪ್ಲವರ್ ಮರದ ಚೆಲುವನ್ನು ಸೆರೆಹಿಡಿಯದ ಛಾಯಾಗ್ರಾಹಕರಿಲ್ಲಾ, ವರ್ಣಿಸದ ಕವಿ ಹೃದಯಗಳಿಲ್ಲಾ. ಕಣ್ಣಲ್ಲಿ ತುಂಬಿಕೊಳ್ಳದ ನೋಡುಗನಿಲ್ಲಾ.

ಸುಡು ಬಿಸಿಲ ನಡುವೆ ಆಗೊಮ್ಮೆ ಈಗೊಮ್ಮೆ ಇಣುಕಿ ನೋಡುವ ಕಪ್ಪು ಮೋಡಗಳು, ಉದುರಿ ಹೋಗುವ ನಾಲ್ಕು ಹನಿಗಳಂತೆ ಪ್ರಕೃತಿಯ ವಿಸ್ಮಯಗಳಲ್ಲಿ ಇದೂ ಒಂದು. ಬಾನಲ್ಲಿ ರಂಗಿನೋಕುಳಿ ಚೆಲ್ಲಿ ನೆಲದ ಮೇಲೆಲ್ಲಾ ಉದುರಿದ ಹೂದಳಗಳು ಬಿಡಿಸುವ ರಂಗವಲ್ಲಿ. ಹೂಹಾಸಿಗೆಯ ಅಂದ ಮಾತಿಗೆ ನಿಲುಕದು. ಚಿತ್ತಾಕರ್ಷಕ ಹೂಗೊಂಚಲುಗಳ ರಾಶಿ ಕಣ್ಣಿಗೆ ಹಬ್ಬ. ಮಡಗಾಸ್ಕರ್‌ ಮೂಲದ ಈ ಮರ ಕಡಿಮೆ ಎತ್ತರದಲ್ಲಿ ಅಗಲವಾಗಿ ಹರಡಿ ನಿಲ್ಲುತ್ತದೆ. ಗ್ರಾಮೀಣ ಭಾಷೆಯಲ್ಲಿ ಕತ್ತಿಕಾಯಿ ಎಂದು ಕರೆಯುವ ಈ ಮರದ ವೈಜ್ಞಾನಿಕ ಹೆಸರು ಡಿಲೊನಿಕ್ಸ್‌ ರೆಜಿಯ. ಗುಲ್‌ ಮೊಹರ್‌ ಎನ್ನುವುದು ಉರ್ದು ಭಾಷೆಯ ಪದ. ಎಪ್ರಿಲ್‌ ಮೇ ತಿಂಗಳಲ್ಲಿ ಮೊಗ್ಗು ಬಿಡಲು ಪ್ರಾರಂಭವಾಗುತ್ತದೆ. ಕತ್ತಿಯಂತಿರುವ ಕೋಡಿನ ತುಂಬೆಲ್ಲಾ ಬಿತ್ತುಗಳನ್ನು ಕಾಣಬಹುದು.

ಗ್ರಾಮೀಣ ಪ್ರದೇಶದಲ್ಲಿ ಕೆಲವು ಕಡೆ ಈ ಹೂಗಳನ್ನು ಬಳಸಿ ಚಪ್ಪರವನ್ನು ಅಲಂಕರಿಸುವುದೂ ಇದೆ. ಇಲ್ಲಿನ ಮಕ್ಕಳಿಗಂತೂ ಈ ಹೂವಿನ ಮೊಗ್ಗು ಹೂಗಳನ್ನು ಆಟದಲ್ಲಿ ಬಳಸುವುದೇ ಒಂದು ಗಮ್ಮತ್ತು. ಮುಂಜಾನೆ ಹಾಗೂ ಮುಸ್ಸಂಜೆಯ ರವಿಕಿರಣ ಈ ಹೂವಿನಂದವನ್ನು ಇಮ್ಮಡಿಗೊಳಿಸುತ್ತದೆ. ಅಂತೆಯೇ ನಿಸರ್ಗಪ್ರಿಯರಿಗೆ ಕವಿ ಹೃದಯರಿಗೆ ಸದಾ ಪ್ರೇರಣಾಶಕ್ತಿಯೂ ಹೌದು. ಫಳ ಫಳ ಹೊಳೆಯುವ ಕೆಂಪನೆ ಹೂಗಳ ಆಹ್ಲಾದಮಯ ಆಸರೆ ನೀಡುವ ತಂಪಾದ ಅನುಭವ ಹಾಗೂ ಮೈದುಂಬಿ ನರ್ತಿಸುವ ಈ ವೃಕ್ಷಗಳು ಜಗತ್ತಿನೆಲ್ಲ ಸೌಂದರ್ಯವನ್ನು ಹೀರಿಕೊಂಡು ಬಿಂಕದಿಂದ ಬೀಗುವಂತೆ ಭಾಸವಾಗುತ್ತದೆ.

Advertisement

ಅಖೀಲೇಶ್‌ ನಗುಮುಗಂ

Advertisement

Udayavani is now on Telegram. Click here to join our channel and stay updated with the latest news.

Next