ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಕ್ಯಾತನಮಕ್ಕಿ. ಮೂಡಿಗೆರೆಯಿಂದ ಕ್ಯಾತನಮಕ್ಕಿ 72 ಕಿ.ಮೀ ದೂರದಲ್ಲಿದ್ದು ಮೊದಲು ಮೂಡಿಗೆರೆ ತಾಲೂಕಿನಲ್ಲಿದ್ದ ಈ ಸ್ಥಳ ಈಗ ನೂತನವಾಗಿ ಘೋಷಣೆಯಾದ ಕಳಸ ತಾಲೂಕಿಗೆ ಬರುತ್ತದೆ.
ಹೊರನಾಡು ಶ್ರೀ ಕ್ಷೇತ್ರ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಮೀಪವಿರುವ ಈ ತಾಣಕ್ಕೆ ಶ್ರಂಗೇರಿಗೆ ಸಂಪರ್ಕಿಸುವ ರಸ್ತೆಯಲ್ಲಿ ಸಾಗಬೇಕು. ಕಳಸದಿಂದ ಈ ಸುಂದರ ತಾಣ ತಲುಪಲು 20 ಕಿ.ಮೀ ಕ್ರಮಿಸಬೇಕು. ಬಲಿಗೆ ಜೈನ ಬಸದಿಯ ಸಮಿಪದಲ್ಲಿ ಈ ಕ್ಯಾತನಮಕ್ಕಿ ಸುಂದರ ಪ್ರಕ್ರತಿ ತಾಣ ಸಿಗುತ್ತದೆ.
ಇದನ್ನೂ ಓದಿ:ಅನ್ನ-ಅರಿವು ನೀಡುವುದೇ ನಿಜ ಧರ್ಮ
ಮೊದಲಿಗೆ ಅರಣ್ಯ ಇಲಾಖೆಯ ತಪಾಸಣಾ ಕೇಂದ್ರ ಸಿಗುತ್ತದೆ. ಅಲ್ಲಿ ಪ್ರತಿಯೊಬ್ಬರಿಗೂ 50 ರೂ ಟಿಕೇಟ್ ನಿಗದಿ ಮಾಡಲಾಗಿದೆ. ವಾಹನದ ನಂ ಮತ್ತು ಪ್ರವಾಸಿಗರ ಬಗ್ಗೆ ದಾಖಲೆ ಪುಸ್ತಕದಲ್ಲಿ ನಮೂದಿಸಿ ನಂತರ ನಮ್ಮನ್ನು ಮುಂದೆ ಬಿಡಲಾಗುತ್ತದೆ. ನಂತರ ಆರಂಭವಾಗುವುದೇ ಬಹಳ ಕಡಿದಾದ ರಸ್ತೆಯ ಯಾತ್ರೆ. ಮಳೆ ಬಂದರಂತೂ ಸಾಗಲು ಅಸಾಧ್ಯವಾದ ರಸ್ತೆ, ಕಲ್ಲು ಕೆಸರಿನಿಂದ ಮತ್ತು ಇಳಿಜಾರಿನಿಂದ ಕೂಡಿದ್ದು, ಮುಂದೆ ವಾಹನ ಬಂದರೆ ಜಾಗ ಕೊಡಲು ಅಸಾಧ್ಯವಾದ ರಸ್ತೆಯಲ್ಲಿ ಬಹಳಷ್ಟು ಜಾಗ್ರತೆಯಿಂದ ಸಾಗಬೇಕು. ಇಲ್ಲಿ ಸಾಗಲು ಫೋರ್ ವೀಲ್ ವಾಹನಗಳಷ್ಟೆ ಸಾಧ್ಯ. ಚಾಲನೆಯಲ್ಲಿ ಎಷ್ಟೇ ಹುಷಾರುಗಿದ್ದರೂ ಸಾಲದು, ಚಾಲಕ ಸ್ವಲ್ಪ ಮೈಮರೆತರೂ ದೊಡ್ಡ ಪ್ರಪಾತಕ್ಕೆ ಬೀಳುವ ಸಾಧ್ಯತೆಯೇ ಹೆಚ್ಚು.
ಗುಡ್ಡದ ತುದಿಯಲ್ಲಿ ಸಿಗುವುದು ಮಲೆನಾಡಿನ ಸ್ವರ್ಗ ಕ್ಯಾತನಮಕ್ಕಿ ಸಿಗುತ್ತದೆ ಮೊದಲು ಪ್ರವಾಸಿಗರು ವಾಹನವನ್ನು ವೀವ್ ಪಾಯಿಂಟ್ ಬಳಿ ತೆಗೆದುಕೊಂಡು ಹೋಗಿ ಅಲ್ಲಿನ ರಸ್ತೆ ಹಾಳು ಮಾಡುತ್ತಿದ್ದುರಿಂದ ಅರಣ್ಯ ಇಲಾಖೆ ಸಂಪೂರ್ಣ ಬೇಲಿ ಹಾಕಿದ್ದು, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ನಡೆದು ಸಾಗಬೇಕು, ಮುಖ್ಯರಸ್ತೆಯಿಂದ ಬಾಡಿಗೆಗೆ ಪಿಕಪ್, ಜೀಪ್ ಗಳಿದ್ದು ಇವರಿಗೆ ಇಲ್ಲಿಗೆ ಪ್ರವಾಸಿಗರನ್ನು ಕರೆತಂದು ಅವರನ್ನು ಪುನಃ ಬಿಡುವುದು ಕೆಲಸ. ಬೆಂಗಳೂರು ಬಾಗದ ಪ್ರವಾಸಿಗರಂತು ಬೈಕಿನಲ್ಲಿ ಬಂದು ಎದ್ದು ಬಿದ್ದು ನಿಸರ್ಗದ ಸೌಂದರ್ಯ ಸವಿಯಲು ಬರುತ್ತಿದ್ದಾರೆ. ಕಳಸದ ಸುತ್ತಮುತ್ತಲಿನ ಹೋಂ ಸ್ಟೇಗೆ ಬಂದ ಅತಿಥಿಗಳು ಇಲ್ಲಿಗೆ ಸಂದರ್ಶಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಇದು ರಾಜ್ಯಾದ್ಯಂತ ಪ್ರಖ್ಯಾತಿ ಪಡೆದಿದ್ದು ಹೆಚ್ಚಿನ ಯಾತ್ರಿಕರು ಭೇಟಿ ನೀಡುತ್ತಿದ್ದಾರೆ.
ಇದು ಕುದುರೆಮುಖ ಅರಣ್ಯಕ್ಕೆ ಅಂಟಿಕೊಂಡಿದ್ದು ಪಕ್ಕದ ಶ್ರಂಗೇರಿ, ಕೊಪ್ಪ ತಾಲೂಕಿಗೆ ಸಮೀಪದಲ್ಲಿದೆ, ಇದು ಪ್ರವಾಸಿಗರ ಸ್ವರ್ಗ ಇದನ್ನು ಹಾಗೆ ಕಾಪಾಡಿಕೊಳ್ಳುವುದು ಸಹ ನಮ್ಮ ಕರ್ತವ್ಯ. ಇಲ್ಲಿಗೆ ಬಂದಾಗ ಮೋಜು ಮಸ್ತಿಯಲ್ಲಿ ತೊಡಗದೆ ಬಾಟಲಿ ಪ್ಲಾಸ್ಟಿಕ್ ಬಿಸಡದೆ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಿರುವುದು ಪ್ರವಾಸಿಗರ ಕರ್ತವ್ಯವಾಗಬೇಕಿದೆ.
-ಸಂತೋಷ್