Advertisement
ಪ್ರತಿಷ್ಠಾನ ನಗರದ ಅಧಿಪತಿ ಚಂದ್ರವಂಶದ ನಹುಷ ಚಕ್ರವರ್ತಿ ಬೆಸ್ತನೊಬ್ಬನಿಗೆ ನದಿಯಲ್ಲಿ ಸಿಕ್ಕ ಚ್ಯವನನೆಂಬ ಮಹಾತ್ಮನನ್ನು ತನ್ನಲ್ಲಿದ್ದ ಗೋವುಗಳ ವಿನಿಮಯದಿಂದ ಕೊಂಡುಕೊಂಡವನು. ವಿರಜೆಯೆಂಬ ಪತ್ನಿಯಿದ್ದರೂ, ತನಗಾಗಿಯೆ ಭುವಿಯಲ್ಲಿ ಹುಟ್ಟಿಬಂದ ಶಿವೆಯ ಮಾನಸಪುತ್ರಿಯೆನಿಸಿದ ಅಶೋಕಸುಂದರಿಯನ್ನು ಪಾತಾಳದ ರಕ್ಕಸ ಹುಂಡಾಸುರನ ಸೆರೆಯಿಂದ ಬಿಡಿಸಿ, ತನ್ನವಳನ್ನಾಗಿಸಿಕೊಳ್ಳುತ್ತಾನೆ. ಅತ್ತ ದೇವಲೋಕದಲ್ಲಿ ವಿಲಾಸಿನಿಯರ ನೃತ್ಯವೈಭವದಲ್ಲಿ ಮುಳುಗಿದ್ದ ದೇವೇಂದ್ರನು ತನ್ನನ್ನು ಅವಗಣಿಸಿದ ಎಂಬ ಕಾರಣಕ್ಕೆ ಕುಪಿತರಾದ ಗುರು ಬ್ರಹಸ್ಪತಿಗಳು ತಮ್ಮ ಗುರುಪೀಠವನ್ನು ಬಿಟ್ಟು ತೆರಳಿದಾಗ, ಬರಿದಾದ ಪೀಠಕ್ಕೆ ಮುಂದಿನ ಪೀಠಾಧಿಪತಿಯಾಗಿ ರಾಕ್ಷಸಗುರು ವಿಶ್ವರೂಪನನ್ನು ಓಲೈಸಿ ಕರೆತರಲಾಗುವುದು. ಅಸುರ ಪಕ್ಷಪಾತಿಯಾದ ಗುರು ವಿಶ್ವರೂಪನನ್ನು ದೇವೇಂದ್ರನು ಕೊಂದು ಗುರು ಹತ್ಯೆಯ ಪಾಪಕ್ಕೆ ಗುರಿಯಾಗುತ್ತಾನೆ. ಮುಂದೊಂದು ದಿನ ದೇವೇಂದ್ರನು ವೃತ್ರಾಸುರನನ್ನು ಕೊಂದದ್ದರಿಂದ ಮಿತ್ರಹತ್ಯಾ ಪಾಪಕ್ಕೆ ತುತ್ತಾಗುತ್ತಾನೆ. ಗುರು-ಬ್ರಹ್ಮ-ಮಿತ್ರ ಹತ್ಯಾ ದೋಷ ಪರಿಹಾರಕ್ಕಾಗಿ ದೇವೇಂದ್ರನು ಇಂದ್ರ ಪದವಿಯನ್ನು ತ್ಯಜಿಸಿದ್ದರಿಂದ ಬರಿದಾದ ದೇವಲೋಕದ ಅಮರಪದವಿಗೆ ಭೂಲೋಕದ ನಹುಷನನ್ನು ಬರಮಾಡಿಕೊಳ್ಳಲಾಗುತ್ತದೆ.
Related Articles
Advertisement
ಸ್ವರ್ಗದ ಪೀಠವನ್ನಲಂಕರಿಸುವ ನಹುಷನಾಗಿ ಬಳ್ಕೂರು ಕೃಷ್ಣಯಾಜಿ ಸಮರ್ಥವಾಗಿ ನಿರ್ವಹಿಸಿದರು. ಯುವ ಪ್ರತಿಭೆ ಸುಧೀರ್ ಉಪ್ಪುರ್ ಅವರು ದೇವಲೋಕದ ಅಪ್ಸರಾಂಗನೆಯಾಗಿಯೂ, ನಹುಷನ ರಾಣಿ ವಿರಜೆಯಾಗಿಯೂ ಪಾತ್ರನಿರ್ವಹಿಸಿ, ವಿಭಿನ್ನ ಪಾತ್ರಗಳೆರಡರ ಭಾವ ವ್ಯತ್ಯಾಸವನ್ನು ತೆರೆದಿಟ್ಟರು. ಶಚಿಯ ಪಾತ್ರದಲ್ಲಿ ಕಾಣಿಸಿಕೊಂಡ ಹವ್ಯಾಸಿ ಕಲಾವಿದ ಪ್ರದೀಪ ಸಾಮಗರು ಮನೆತನದ ಬಳುವಳಿಯಾಗಿ ಬಂದ ವಾಕ್ ಶ್ರೀಮಂತಿಕೆಯನ್ನೂ, ಸ್ವಾರ್ಜಿತವಾದ ನಾಟ್ಯ ಶ್ರೀಮಂತಿಕೆಯನ್ನೂ ಮೇಳೈಸಿಕೊಂಡು ಮನಮುಟ್ಟಿದರು.
ಅಜಗರನ ಪಾತ್ರಾಭಿವ್ಯಕ್ತಿಗೆ ಸಮಯದ ಮಿತಿ ತೊಡಕಾದರೂ, ಸಿಕ್ಕ ಅವಕಾಶದಲ್ಲಿಯೆ ರಂಗ ಕಟ್ಟಿಕೊಟ್ಟ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಆಹಾರ್ಯ, ರಂಗಪ್ರಜ್ಞೆ, ಸಹಪಾತ್ರವನ್ನು ಮುನ್ನೆಡೆಸುವ ರೀತಿ ಮೆಚ್ಚುವಂತಹದು. ಮೂರೂರು ಸುಬ್ರಹ್ಮಣ್ಯ ಹೆಗಡೆ ಧರ್ಮರಾಜನಾಗಿ ಧರ್ಮಸೂಕ್ಷ್ಮಗಳನ್ನು ವಿವರಿಸುವಲ್ಲಿ ಸಫಲರಾದರು. ತೊಂಬಟ್ಟು ವಿಶ್ವನಾಥ, ಮೂರೂರು ನಾಗೇಂದ್ರ, ಚಂದ್ರಕುಮಾರ್ ನೀರ್ಜಡ್ಡು, ಆನಂದ ಭಟ್ ಕೆಕ್ಕಾರು, ಪ್ರಣವ್ ಸಿದ್ಧಾಪುರ ಇವರೆಲ್ಲರ ವಿವಿಧ ಪಾತ್ರಗಳು ಪ್ರಸಂಗದ ಯಶಸ್ಸಿಗೆ ಪೂರಕವಾಗಿದ್ದವು.
ಭಾಗವತರುಗಳಾದ ರಾಘವೇಂದ್ರ ಆಚಾರ್ ಜನ್ಸಾಲೆ, ರಾಮಕೃಷ್ಣ ಹೆಗಡೆ,ಹಿಲ್ಲೂರು, ಮದ್ದಲೆ ವಾದಕರಾದ ಸುನಿಲ್ ಭಂಡಾರಿ, ಎನ್.ಜಿ. ಹೆಗಡೆ, ಚಂಡೆವಾದಕರಾದ ಶ್ರೀನಿವಾಸ ಪ್ರಭು ಮತ್ತು ಸುಜನ್ ಹಾಲಾಡಿ ಇವರ ಎಲ್ಲಿಯೂ ಅತಿಯೆನಿಸದ ಅನುಪಮವಾದ ಹಿಮ್ಮೇಳ ಕರ್ಣಾನಂದಕರವಾಗಿತ್ತು.ಬಡಗುತಿಟ್ಟಿನ ಅನನ್ಯವೆನಿಸುವ ತೆರೆ ಒಡ್ಡೋಲಗ, ಯುದ್ಧ ಕ್ರಮಗಳನ್ನು ಸಾಂದರ್ಭಿಕವಾಗಿ ಬಳಸಬಹುದಿತ್ತು. ವೃತ್ರಾಸುರ ಅಥವಾ ವಿರೂಪಾಕ್ಷ ಯಾವೂದಾದರೂ ಒಂದು ರಾಕ್ಷಸ ಪಾತ್ರವು ಪರಂಪರೆಯ ಬಣ್ಣದ ವೇಷದಲ್ಲಿ ಕಾಣಿಸಿಕೊಂಡಿದ್ದರೆ ಪ್ರದರ್ಶನ ಇನ್ನಷ್ಟು ಪೂರ್ಣತೆಯನ್ನು ಕಾಣುತ್ತಿತ್ತು.
ಸುಜಯೀಂದ್ರ ಹಂದೆ ಎಚ್. ಕೋಟ