ಭಾಲ್ಕಿ: ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಬೀದರನಲ್ಲಿ ಬುಧವಾರ ನಡೆದ ರ್ಯಾಲಿಯಲ್ಲಿ ತಾಲೂಕಿನ ಸಾವಿರಾರು ಜನರು ಭಾಗವಹಿಸಿದ್ದರು.
ಬುಧವಾರ ಬೆಳಗ್ಗೆ 9:00ಕ್ಕೆ ಪಟ್ಟಣದ ಚನ್ನಬಸವಾಶ್ರಮಕ್ಕೆ ತಾಲೂಕಿನ ಎಲ್ಲ ಹಳ್ಳಿಗಳಿಂದಲೂ ಆಗಮಿಸಿದ ಜನರು, ಗುರುಕುಲ ವಿದ್ಯಾಸಂಸ್ಥೆ, ಡೈಮಂಡ್ ಕಾಲೇಜು, ಸದ್ಗುರು ವಿದ್ಯಾಲಯ, ಗುರುಪ್ರಸನ್ನ ಶಿಕ್ಷಣ ಸಂಸ್ಥೆ, ಸತ್ಯಸಾಯಿ ಶಿಕ್ಷಣ ಸಂಸ್ಥೆ ಸೇರಿದಂತೆ
ಸ್ಥಳೀಯ ಅನೇಕ ಶಿಕ್ಷಣ ಸಂಸ್ಥೆಯ ಬಸ್‌ಗಳಲ್ಲಿ ಬೀದರಿಗೆ ತೆರಳಿದರು.
ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ, ಲಿಂಗಾಯತ ಧರ್ಮದ ಮಠಾಧಿಶರು ಮತ್ತು ಲಿಂಗಾಯತ ಧರ್ಮೀಯ ಗಣ್ಯರು ನೀಡಿದ ಕರೆ ಮೇರೆಗೆ ಭಾಲ್ಕಿಯಿಂದ ಲಿಂಗಾಯತ ಧರ್ಮಿಯರು ಪ್ರಯಾಣ ಬೆಳೆಸುತ್ತಿರುವುದಾಗಿ ಬಸವ ಭಕ್ತರು ತಿಳಿಸಿದರು. ಬಸವ ಭಕ್ತರು ಮತ್ತು ಲಿಂಗಾಯತ ಧರ್ಮೀಯರ ಮನವಿ ಮೇರೆಗೆ ಪಟ್ಟಣದ ಕೆಲವು ಪ್ರತಿಷ್ಠಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಈ ರಜೆಯನ್ನು ರವಿವಾರ ಸೇರಿದಂತೆ ಇತರೆ ರಜಾ ದಿನಗಳಲ್ಲಿ ಸರಿದೂಗಿಸಿಕೊಳ್ಳುವುದಾಗಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯವರು ಶಿಕ್ಷಣ ಇಲಾಖೆಗೆ ಬರೆದು ಕೊಟ್ಟ ಮುಚ್ಚಳಿಕೆಯಲ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ
ಮಾನ್ಯತೆಗಾಗಿ ಬೀದರ ಚಲೋ ರ್ಯಾಲಿಯಲ್ಲಿ ಭಾಲ್ಕಿಯಿಂದ ಸುಮಾರು 30 ರಿಂದ 40 ಸಾವಿರ ಜನರು ತೆರಳಿದ ಬಗ್ಗೆ ಮಾಹಿತಿ ದೊರೆತಿದೆ.