ಬಾಯಾರು: ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಪ್ರಸಿದ್ಧ ಹವ್ಯಾಸಿ ವೇಷಧಾರಿ, ಹೊಸ ಪೀಳಿಗೆಯೊಂದನ್ನು ಸಮರ್ಥವಾಗಿ ರೂಪಿಸಿದ ಹಿಮ್ಮೇಳ-ಮುಮ್ಮೇಳದ ಅರಿವುಳ್ಳ ಸಮರ್ಥ ಯಕ್ಷಗಾನ ನಾಟ್ಯಗುರು ಬಾಯಾರು ರಮೇಶ್ ಶೆಟ್ಟಿ 60ರ ಹೊಸ್ತಿಲಿನಲ್ಲಿದ್ದು, ಅವರನ್ನು ಎರಡು ದಿನಗಳ ಸಂಭ್ರಮದ ಕಾರ್ಯಕ್ರಮದೊಂದಿಗೆ ಅಭಿನಂದಿಸಲು ಶಿಷ್ಯರು ಮತ್ತು ಅಭಿಮಾನಿ ಆಪ್ತರು ನಿರ್ಧರಿಸಿದ್ದಾರೆ.
“ಯಕ್ಷ ರಮೇಶ-60ರ ಹೆಜ್ಜೆ’ ಎಂಬ ಹೆಸರಿನಲ್ಲಿ ಕಾರ್ಯಕ್ರಮಗಳು ಜರಗಲಿದ್ದು, ಈ ಸಂಬಂಧ ಮುಳಿಗದ್ದೆ ಹೆದ್ದಾರಿ ಮಿತ್ರಮಂಡಳಿಯಲ್ಲಿ ಸಮಾಲೋಚನಾ ಸಭೆ ನಡೆಯಿತು.
ಅಭಿನಂದನ ಸಮಿತಿಗೆ ಕುರಿಯ ಗೋಪಾಲಕೃಷ್ಣ ಶಾಸ್ತ್ರಿ ಅಧ್ಯಕ್ಷರಾಗಿ, ನ್ಯಾಯವಾದಿ ಪೆರುವೋಡಿ ರಾಮಕೃಷ್ಣ ಭಟ್ ಪ್ರಧಾನ ಕಾರ್ಯದರ್ಶಿ ಮತ್ತು ಹರಿಣಾಕ್ಷ ಬಿ. ಬಾಯಾರು ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ವಿಸ್ತೃತವಾದ ಸಮಿತಿ ರಚನೆ ಶೀಘ್ರವೇ ನಡೆಯಲಿದೆ.
ಮಂಗಳೂರು, ಸುರತ್ಕಲ್, ಪುತ್ತೂರು, ಬಂಟ್ವಾಳ, ಸಹಿತ ನಾಡಿನ ಹಲವೆಡೆ ಬಾಯಾರು ರಮೇಶ ಶೆಟ್ಟರ ನೂರಾರು ಶಿಷ್ಯ ಬಳಗವಿದ್ದು, ಈ ಪೈಕಿ ಅನೇಕರು ಇಂದು ವೃತ್ತಿ-ಹವ್ಯಾಸಿ ರಂಗ, ಮಹಿಳಾ ರಂಗದ ಪ್ರಸಿದ್ಧ ಕಲಾವಿದರಾಗಿದ್ದಾರೆ. ಅಭಿನಂದನ ಸಮಾರಂಭದಲ್ಲಿ 2 ದಿನವೂ ರಮೇಶ ಶೆಟ್ಟರ ಸಮಗ್ರ ಶಿಷ್ಯ ಬಳಗದ ಯಕ್ಷಗಾನ ಪ್ರದರ್ಶನಗಳ ಪ್ರತಿಭಾ ವೈವಿಧ್ಯ ದರ್ಶನವಾಗಲಿದೆ. ಅಲ್ಲದೆ ಬಾಯಾರು ರಮೇಶ ಶೆಟ್ಟರು ಛಾಪೊತ್ತಿದ ವೇಷಗಳ ತುಣುಕು ಪ್ರದರ್ಶನವಾಗಲಿದೆ. ಕಾರ್ಯಕ್ರಮದ ಸಿದ್ಧತೆ ಆರಂಭಗೊಂಡಿದ್ದು, ನಾಡಿನೆಲ್ಲೆಡೆ ಇರುವ ರಮೇಶ ಶೆಟ್ಟರ ಶಿಷ್ಯರು-ಅಭಿಮಾನಿಗಳ ನೆರವಿನಿಂದ ಸಮಾರಂಭ ಯಶಸ್ವಿಗೊಳಿಸಲು ಉದ್ದೇಶಿಸಲಾಗಿದೆ.
ಈ ಸಂಬಂಧ ಮುಳಿಗದ್ದೆ ಮಿತ್ರಮಂಡಳಿ ಯಲ್ಲಿ ಕುರಿಯ ಗೋಪಾಲಕೃಷ್ಣ ಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನ್ಯಾಯವಾದಿ ಪೆರುವೋಡಿ ರಾಮಕೃಷ್ಣ ಭಟ್, ಕಣಿಪುರ ಯಕ್ಷಗಾನ ಮಾಸಪತ್ರಿಕೆ ಸಂಪಾದಕ ಎಂ.ನಾ. ಚಂಬಲ್ತಿಮಾರ್, ಭಾಗವತ ಜಿ.ಕೆ. ನಾವಡ, ಉದಯಕುಮಾರ್ ಅಮ್ಮೇರಿ, ಶೇಖರ ಶೆಟ್ಟಿ ಬಾಯಾರು, ದಿನೇಶ, ಮುರಳಿ ಬಾಯಾರು, ಮುತ್ತಪ್ಪ ಮೊದಲಾದವರು ಪಾಲ್ಗೊಂಡು ಸಲಹೆ ಸೂಚನೆಗಳನ್ನಿತ್ತರು.