ಇವರು ಬಗ್ಗುವುದಿಲ್ಲ ಅನ್ನಿಸಿದಾಗ ವಾರ್ಡನ್ ಏನು ಮಾಡಿದರು ಗೊತ್ತೇ? ಅಶಿಸ್ತಿನ ಹುಡುಗರು ಎಂದು ಷರಾ ಬರೆದು, ಪ್ರಿನ್ಸಿಪಾಲರಿಗೆ ದೂರು ಕೊಟ್ಟುಬಿಟ್ಟರು!
ಕಾಲೇಜು ಜೀವನವೇ ಹಾಗೆ. ಸಂಕ್ರಾಂತಿಯಲ್ಲಿ ಸವಿಯುವ ಎಳ್ಳು ಬೆಲ್ಲದಂತೆ. ಹುಡುಕಿದರೆ, ಕೆಲವೊಮ್ಮೆ ಸಿಹಿಯೂ, ಇನ್ನೂ ಕೆಲವೊಮ್ಮೆ ಕಹಿಯೂ ಇರುತ್ತದೆ. ನೆನಪಿನ ಒಲೆಯ ಮುಂದೆ ಕೂತಾಗ ಹಿತವಾದ ಅನುಭವ. ದಾಡಿ ಬಿಡುವುದು, ನಮ್ಮ ಕಾಲೇಜು ದಿನಗಳಲ್ಲಿ ಫ್ಯಾಷನ್ ಆಗಿಹೋಗಿತ್ತು. ಹೀಗಾಗಿ, ನಾವು ಜಿದ್ದಿಗೆ ಬಿದ್ದವರಂತೆ ದಾಡಿ ಬಿಟ್ಟಿದ್ದೆವು. ಪರಿಣಾಮ, ಒಬ್ಬೊಬ್ಬರ ಮೂತಿ ಸರಿಯಾಗಿ ಕಾಣದೆ ತಿಂಗಳುಗಳೇ ಕಳೆದಿದ್ದವು.
ಈ ದಾಡಿ ನಮ್ಮ ಪಾಲಿಗೆ ಶತ್ರುವಾಗಿ ಕಾಡಿದ್ದು ಕಾಲೇಜಿನಲ್ಲಿ ಅಲ್ಲ, ಹಾಸ್ಟೆಲಿನಲ್ಲಿ. ನಮ್ಮ ಹಾಸ್ಟೆಲ್ ವಾರ್ಡನ್ ತುಂಬಾ ಸ್ಟ್ರಿಕ್ಟ್ ಪ್ರತಿದಿನ ನಮ್ಮ ಮುಖ ನೋಡಿದಾಗ “ಗಡ್ಡ ಬೋಳಿಸ್ರಪ್ಪ, ಸ್ವಲ್ಪ ನಿಮ್ಮ ಮುಖ ಸರಿಯಾಗಿ ನೋಡ್ಬೇಕು’ ಎಂದು ಬೈಯುತ್ತಲೇ ಇದ್ದರು. ನಾವು ಅದನ್ನ ಅಷ್ಟೇ ಕೂಲ್ ಆಗಿ ತೆಗೆದುಕೊಂಡು ಒಂದೂ ಮಾತಾಡದೆ ಮುಂದೆ ಹೋಗುತ್ತಿದ್ದೆವು.
ಒಂದು ದಿನ ಮಾತ್ರ ವಾರ್ಡನ್ ಸಿಟ್ಟಾಗಿ- “ಗಡ್ಡ ತೆಗೆಸದಿದ್ದರೆ ಅಡ್ಮಿಷನ್ ಕ್ಯಾನ್ಸಲ್ ಮಾಡುತ್ತೇನೆ’ ಎಂದು ಖಾರವಾಗಿ ಬೈದರು. ಅಕಸ್ಮಾತ್, ಹೇಳಿದಂತೆಯೇ ಮಾಡಿಬಿಟ್ಟರೆ ಗತಿಯೇನು? ಆಗ ಪೋಷಕರಿಗೆ ಏನು ಉತ್ತರ ಕೊಡೋದು ಅನಿಸಿತು. ಅಂಥದೇನೂ ಆಗಲ್ಲ ಎಂದು ನಮಗೆ ನಾವೇ ಹೇಳಿಕೊಂಡು ಸುಮ್ಮನಾದೆವು. ಇವರು ಬಗ್ಗುವುದಿಲ್ಲ ಅನ್ನಿಸಿದಾಗ ವಾರ್ಡನ್ ಏನು ಮಾಡಿದರು ಗೊತ್ತೇ?
ಅಶಿಸ್ತಿನ ಹುಡುಗರು ಎಂದು ಷರಾ ಬರೆದು, ಪ್ರಿನ್ಸಿಪಾಲರಿಗೆ ದೂರು ಕೊಟ್ಟುಬಿಟ್ಟರು! ಪ್ರಿನ್ಸಿಪಾಲರು- “ವಾರ್ಡನ್ ಹೇಳಿದಂತೆ ಕೇಳದಿದ್ದರೆ ಪರೀಕ್ಷೆಗೆ ಹಾಲ್ ಟಿಕೆಟ್ ಕೊಡಲ್ಲ’ ಅಂದರು. ಆಗ ಮಾಡುವುದೇನು? ನಾವೆಲ್ಲಾ ವಾರ್ಡನ್ ಎದುರು ತಲೆಬಾಗಿ ನಿಲ್ಲಬೇಕಾಯಿತು. ಗಡ್ಡ ತೆಗೆಸುವುದು ಅನಿವಾರ್ಯವಾಯಿತು. ವಾರ್ಡನ್ ಗೆದ್ದವನಂತೆ ಬೀಗಿದರು. ನಾವು ನಕ್ಕೆವು. ಒಳಗೆ, ಗಡ್ಡ ತೆಗೆದ ನೋವು ಇತ್ತು.
* ಮೋಹನ್ ವೈ.ಕೆ. ತೀರ್ಥಹಳ್ಳಿ