ಕುಷ್ಟಗಿ: ಸಂಗನಾಳ ಹನುಮಂತ ದೇವರ ಗುಡಿಯ ದೀಪದ ಎಣ್ಣೆಯ ಜಿಡ್ಡು ನೆಕ್ಕಲು ಬಂದ ಜಾಂಬವಂತ ಸೆರೆಯಾದ ಘಟನೆ ನಡೆದಿದೆ.
ಸಂಗನಾಳ ಪಕ್ಕದ ಹನುಮಂತ ದೇವರಿಗೆ ಭಕ್ತರು ದೀಪ ಹಚ್ಚಲು ಎಣ್ಣೆ ಹಾಕುತ್ತಿದ್ದರು. ಇದರ ಎಣ್ಣೆ ಜಿಡ್ಡಿನಾಸೆಗೆ ಕರಡಿ ಒಂದೆರೆಡು ಸಲ ಬಂದು ಹೋಗಿತ್ತು. ಇದರ ಚಲನ-ವಲನ ಗಮನಿಸಿದ್ದ ಅರಣ್ಯ ಇಲಾಖೆ ಹನುಮಂತ ದೇವರ ಗುಡಿಯ ಪಕ್ಕದಲ್ಲಿ ಬೋನಿನ ವ್ಯವಸ್ಥೆ ಮಾಡಿದ್ದರು. ಕರಡಿಗೆ ಪ್ರಿಯವಾದ ಬೆಲ್ಲ, ಎಳ್ಳೆಣ್ಣೆ, ಬಾಳೆಹಣ್ಣು ಬೋನಿನಲ್ಲಿರಿಸಲಾಗಿತ್ತು. ಈ ಆಹಾರದ ಆಸೆಗೆ ಬಂದ ಕರಡಿ ಬೋನಿಗೆ ಬಿದ್ದಿದೆ.
ಕಳೆದ ಸೋಮವಾರ ತಡರಾತ್ರಿ ಹನುಮಸಾಗರ ಉಪ ವಲಯ ವ್ಯಾಪ್ತಿಯ ಮಾಲಗಿತ್ತಿ ಗುಡ್ಡದಲ್ಲಿ ಚಿರತೆ ಸೆರೆಯಾಗಿತ್ತು. ಅದನ್ನು ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಕಳುಹಿಸಲಾಗಿದೆ. ಇದಾದ 24 ಗಂಟೆಯೊಳಗೆ ತಾವರಗೇರಾ ಉಪ ವಲಯ ವ್ಯಾಪ್ತಿಯ ಸಂಗನಾಳ ಸೀಮಾದಲ್ಲಿ ಮೂರ್ನಾಲ್ಕು ವರ್ಷದ ಕರಡಿ ಸೆರೆಯಾಗಿದ್ದು, ಗ್ರಾಮಸ್ಥರ ಆತಂಕ ದೂರ ಮಾಡಿದೆ.
ವಲಯ ಅರಣ್ಯಾಧಿಕಾರಿ ಚೈತ್ರಾ ಮೆಣಸಿನಕಾಯಿ, ಉಪ ವಲಯ ಅರಣ್ಯಾಧಿಕಾರಿ ಹನುಮಂತಪ್ಪ, ಮಹ್ಮದ್ ರಿಯಾಜ್, ಶಿವಶಂಕರ ರೇವಣಕಿ, ಲಾಲಾಸಾಬ್, ಅರಣ್ಯ ರಕ್ಷಕ ಶ ಮಹಾಂತೇಶ ಎಂ. ರಡ್ಡೇರ, ಅರಣ್ಯ ವೀಕ್ಷಕರಾದ ಗಂಗಾಧರ, ಲಕ್ಷ್ಮಣ, ಯಮನಪ್ಪ ಹಾಗೂ ಛತ್ರಪ್ಪ ಅವರ ಕಾರ್ಯಶೀಲತೆಗೆ ಗ್ರಾಮಸ್ಥರು ಭೇಷ್ ಎಂದಿದ್ದಾರೆ.
ಈ ಕುರಿತು ಉಪ ವಲಯ ಅರಣ್ಯಾಧಿಕಾರಿ ರಿಯಾಜ್ ಅಹ್ಮದ್ ಗಣಿ ಪ್ರತಿಕ್ರಿಯಿಸಿ, ಸೆರೆ ಸಿಕ್ಕ ಈ ಕರಡಿಯ ಚಲನ-ವಲನ ಕಂಡು ಈ ವ್ಯಾಪ್ತಿಯ ಜನರು ಭಯಭೀತರಾಗಿದ್ದರು. ಯಾರಿಗೂ ತೊಂದರೆ, ಬೆಳೆಹಾನಿ ಮಾಡಿರಲಿಲ್ಲ. ಇದೀಗ ಸ್ಥಳೀಯರ ಆತಂಕ ದೂರವಾಗಿದೆ ಎಂದು ಹೇಳಿದರು.