ಧಾರವಾಡ: ಆಕಾರ, ಕೇಶ ವಿನ್ಯಾಸಗಳಿಂದಲೇ ಗಮನ ಸೆಳೆಯುವ ವಿದೇಶಿ ತಳಿಯ ಶ್ವಾನಪ್ರಿಯರಿಗೊಂದು ಖುಷಿ ಸುದ್ದಿ. ವಿದೇಶಿ ತಳಿಗಳಿಗೆ ಪೈಪೋಟಿ ನೀಡುವಂತಹ ದೇಸಿ ತಳಿಯೊಂದನ್ನು ಕೃಷಿ ವಿವಿ ಗುರುತಿಸಿದೆ.
ಕೃಷಿ ಮೇಳದ ಜಾನುವಾರು ಪ್ರದರ್ಶನದಲ್ಲಿ ರವಿವಾರ ನಡೆದ ಶ್ವಾನ ಪ್ರದರ್ಶನದಲ್ಲಿ ಬಲು ಅಪರೂಪದ ಈ ವಿಶಿಷ್ಟ ತಳಿಯ ಶ್ವಾನಗಳೆರಡು ಪ್ರದರ್ಶನಗೊಂಡಿದೆ. ಕುರಿಗಾಹಿಗಳಿಂದ ಆಡು ಭಾಷೆಯಲ್ಲಿ ಕಡ್ಡಿ ನಾಯಿಯೆಂದು ಕರೆಯುವ ಈ ತಳಿಯ ಶ್ವಾನವನ್ನು “ಕರಡಿ ನಾಯಿ’ಯನ್ನಾಗಿ ಕೃಷಿ ವಿವಿ ಗುರುತಿಸಿದ್ದು, ಈ ತಳಿಯ ಮರಿ ಹಾಗೂ ಪ್ರೌಢಾವಸ್ಥೆಯ ಎರಡು ಶ್ವಾನಗಳು ಇದೀಗ ಪ್ರದರ್ಶನದಲ್ಲಿ ಗಮನ ಸೆಳೆದವು.
ಉತ್ತರ ಕರ್ನಾಟಕ ಭಾಗದಲ್ಲಿ ಅಷ್ಟೇ ಕಾಣಸಿಗುವ ಬಲು ಅಪರೂಪದ ತಳಿ ಇದಾಗಿದೆ. ಅದರಲ್ಲೂ ಕುರಿ-ಮೇಕೆ ಮೇಯಿಸಿಕೊಂಡು ಸಂಚಾರ ಮಾಡುವ ಕುರಿಗಾಹಿಗಳ ಬಳಿಯಷ್ಟೇ ಸಿಗುವ ಅಪರೂಪದ ವಿಶಿಷ್ಟ ತಳಿಯ ಶ್ವಾನವಿದು. ಇದಲ್ಲದೇ ಕುರಿ ಕಾಯುವ ಕೆಲಸ ಮಾಡುವ ಈ ಶ್ವಾನ ಕುರಿಗಾಹಿಗಳಿಗೆ ಅಚ್ಚುಮೆಚ್ಚು.
ತಳಿ ಸ್ಥಾನಮಾನ: ಹೆಸರಿಗೆ ತಕ್ಕಂತೆ ಕರಡಿಯಂತೆ ಮೈತುಂಬ ಕೇಶರಾಶಿಯಿಂದಲೇ ಗಮನ ಸೆಳೆಯುವ ಈ ಶ್ವಾನ ತಳಿಯ ಬಗ್ಗೆ ಸಂಶೋಧನೆ ಕೈಗೊಳ್ಳಲು ಕೃಷಿ ವಿವಿ ಮುಂದಾಗಿದೆ. ಈ ತಳಿಯ ವೈಶಿಷ್ಟ್ಯತೆ, ಜೀವನ ಕ್ರಮದ ಶೈಲಿ, ಗುಣಲಕ್ಷಣಗಳ ಬಗ್ಗೆ ಕೆಲವೊಂದಿಷ್ಟು ಅಧ್ಯಯನ ಕೈಗೊಂಡು, ತಳಿಯ ಸ್ಥಾನಮಾನ ಸಿಗುವಂತೆ ಮಾಡಲು ಸಂಶೋಧನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಇದಕ್ಕೆ ಅನುದಾನ ದೊರೆತ ಕೂಡಲೇ ಸಂಶೋಧನಾ ಕಾರ್ಯ ಆದಷ್ಟು ಆರಂಭಗೊಳ್ಳಲಿದೆ. ಈ ಅಧ್ಯಯನ ಕೈಗೊಂಡು ಅರ್ಜಿ ಸಲ್ಲಿಸಿದಾಗ ಈ ಶ್ವಾನಕ್ಕೂ ತಳಿಯ ಸ್ಥಾನಮಾನ ಸಿಗಲಿದೆ. ಈಗಾಗಲೇ ಮುಧೋಳ ನಾಯಿಗೆ ತಳಿ ಸ್ಥಾನ ಸಿಕ್ಕಿದ್ದು, ಧಾರವಾಡ ಕೃಷಿ ವಿವಿಯಿಂದ ಧಾರವಾಡ ಎಮ್ಮೆಗೂ ತಳಿಯ ಸ್ಥಾನಮಾನ ಲಭಿಸಿದೆ. ಇದೀಗ ದೇಸಿ ತಳಿಯಾದ ಬಲು ಅಪರೂಪದ ಕರಡಿ ನಾಯಿಗೂ ತಳಿಯ ಸ್ಥಾನಮಾನ ಸಿಗುವ ಕಾಲ ಕೂಡಿಬಂದಂತಾಗಿದೆ.
ಕುರಿಗಾಹಿಗಳ ಬಳಿಯಷ್ಟೇ ಸಿಗುವ ಅಪರೂಪದ ಕರಡಿ ನಾಯಿಗೆ ತಳಿಯ ಸ್ಥಾನಮಾನ ಸಿಗುವಂತೆ ಮಾಡಲು ಗುರುತಿಸಲಾಗಿದೆ. ಅದಕ್ಕಾಗಿ ಸಂಶೋಧನಾ ಕಾರ್ಯಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದಷ್ಟು ಬೇಗ ಇದಕ್ಕೂ ತಳಿಯ ಸ್ಥಾನಮಾನ ಸಿಗಲಿದೆ.
-ಡಾ| ಅನಿಲ್‌ಕುಮಾರ ಪಾಟೀಲ, ಮುಖ್ಯಸ್ಥರು, ಪಶು ವೈದ್ಯಕೀಯ ಆಸ್ಪತ್ರೆ, ಕೃಷಿ ವಿವಿ, ಧಾರವಾಡ
ಶಶಿಧರ್ ಬುದ್ನಿ