Advertisement

ಬೆಳೆಗೆ ಕರಡಿ ಕಾಟ; ರೈತರ ಪರದಾಟ

10:34 AM Jun 08, 2019 | Suhan S |

ಕೊಪ್ಪಳ: ಜಿಲ್ಲೆಯಲ್ಲಿ ಮೊದಲೇ ಬರದ ಭೀಕರತೆ ಹೆಚ್ಚಾಗುತ್ತಿದೆ. ಅಲ್ಲಲ್ಲಿ ನೀರಾವರಿ ಪ್ರದೇಶದಲ್ಲಿನ ಬೆಳೆಯನ್ನಾದರೂ ಉಳಿಸಿಕೊಂಡು ಉಪ ಜೀವನ ನಡೆಸಬೇಕು ಎನ್ನುವ ರೈತರನ್ನು ವನ್ಯ ಮೃಗಗಳ ಹಾವಳಿ ಕಂಗೆಡಸಿದೆ. ಒಂದೆಡೆ ಜಿಂಕೆ. ಕೃಷ್ಣ ಮೃಗಗಳ ಕಾಟವಿದ್ದರೆ, ಇನ್ನೊಂದೆಡೆ ಕರಡಿಗಳ ಹಾವಳಿ ಮಿತಿ ಮೀರಿದೆ. ರಾತ್ರಿ ಬೆಳೆ ರಕ್ಷಣೆಗೆ ರೈತರು ಕಟ್ಟಿಗೆ ಹಿಡಿದು ಓಡಾಡುವಂತಹ ಸ್ಥಿತಿ ಎದುರಾಗಿದೆ.

Advertisement

ಹೌದು. ತಾಲೂಕಿನ ಇರಕಲ್ಗಡಾ ಹೋಬಳಿ ವ್ಯಾಪ್ತಿಯ ಚಾಮಲಾಪುರ, ಚಿಲಕಮುಕ್ಕಿ, ಕೊಡದಾಳ, ಗೋಸಲದೊಡ್ಡಿ, ಮೆತಗಲ್, ಹಿರೇಸೂಳಿಕೇರಿ, ಚಿಕ್ಕಸೂಳಿಕೇರಿ, ಹೊಸೂರು ಸೇರಿದಂತೆ ಇತರೆ ಭಾಗದಲ್ಲಿ ಹಲವು ವರ್ಷಗಳಿಂದ ಕರಡಿ ಉಪಟಳ ಹೆಚ್ಚಾಗಿದೆ. ಇದರಿಂದ ರೈತರು ಹಗಲು-ರಾತ್ರಿ ನಿದ್ದೆ ಮಾಡದಂತ ಸ್ಥಿತಿ ಎದುರಾಗಿದೆ.

ಮೊದಲೇ ಜಿಲ್ಲೆಯಲ್ಲಿ ಮಳೆಯ ಕೊರತೆಯಾಗಿದ್ದು, ಬೋರ್‌ವೆಲ್ ನೀರು ಬತ್ತಿ ಹೋಗುತ್ತಿವೆ. ಇದರಿಂದ ರೈತರಿಗೆ ದಿಕ್ಕೆ ತಿಳಿಯದಂತಾಗಿದ್ದು, ಅಲ್ಪ ನೀರಿನಲ್ಲಿಯೇ ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆ ಉಳಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಈ ಭಾಗದಲ್ಲಿ ಕಲ್ಲಂಗಡಿ ಸೇರಿದಂತೆ ಇತರೆ ಬೆಳೆ ಬೆಳೆದ ರೈತರು ಹಗಲು, ರಾತ್ರಿ ಹದ್ದಿನಂತೆ ಕಾಯಬೇಕಾಗಿದೆ. ಸಮೀಪದಲ್ಲೇ ಇರುವ ಕರೆಕಲ್ ಎನ್ನುವ ಗುಡ್ಡದಲ್ಲಿ ಕರಡಿಗಳಿವೆ. ಈ ಮೊದಲು ರೈತರ ಜಮೀನಿನಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಬರದ ಪರಿಸ್ಥಿತಿಯಿಂದ ಗುಡ್ಡದಲ್ಲಿ ನೀರಿನ ಅಭಾವ ಹಾಗೂ ಆಹಾರಕ್ಕಾಗಿ ಎಲ್ಲೆಡೆ ಅಲೆದಾಡುತ್ತಿದ್ದು, ರೈತರ ಜಮೀನಿನಲ್ಲಿ ಸುತ್ತಾಡಿ ಅನ್ನದಾತನಲ್ಲಿ ಆತಂಕ ಮೂಡಿಸುತ್ತಿವೆ.

ಬೆಳೆ ರಕ್ಷಣೆಗಾಗಿ ಗಸ್ತು: ಇಲ್ಲಿನ ರೈತರು ಬೆಳೆ ರಕ್ಷಣೆಗಾಗಿ ನಿತ್ಯ ರಾತ್ರಿ ಹೊಲಗಳಲ್ಲಿ ಗಸ್ತು ತಿರುಗಲೇ ಬೇಕಾಗಿದೆ. ಸ್ವಲ್ಪ ನಿರ್ಲಕ್ಷ ್ಯ ವಹಿಸಿದರೂ ಬೆಳೆ ಹಾಳಾಗುತ್ತದೆ. ಕರಡಿ ಗುಂಪು ಬೆಳೆ ತಿನ್ನಲ್ಲ. ಆದರೆ ಹೊಲದಲ್ಲಿ ಸುತ್ತಾಡಿ ಹಾಳು ಮಾಡುತ್ತವೆ. ಎಲ್ಲೆಂದರಲ್ಲಿ ಬೆಳೆ ಚೆಲ್ಲಾಪಿಲ್ಲಿ ಮಾಡುತ್ತವೆ ಎನ್ನುವ ವೇದನೆ ರೈತರಲ್ಲಿ ಕಾಡುತ್ತಿದೆ. ಕರಡಿಗಳ ಉಪಟಳಕ್ಕೆ ಸಾಕು ಸಾಕಾಗಿ ಹೋಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇತ್ತೀಚೆಗೆ ಜಾನುವಾರು ಹಾಗೂ ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿವೆ ಎನ್ನುತ್ತಿದೆ ಇಲ್ಲಿನ ರೈತ ಸಮೂಹ.

ಕೈಯಲ್ಲಿ ಬಡಿಗೆ, ಬ್ಯಾಟರಿ: ಹೊಲಗಳಿಗೆ ರಾತ್ರಿ ಹೊತ್ತು ಒಬ್ಬರೆ ಹೋಗುವಂತಿಲ್ಲ. ಕೈಯಲ್ಲಿ ಬಡಿಗೆ, ಬ್ಯಾಟರಿ ಹಿಡಿದು ನಾಲ್ಕೈದು ಜನರು ಸೇರಿ ಗುಂಪು ಗುಂಪಾಗಿ ಹೋಗಬೇಕು. ಜೊತೆಗೆ ಬೆಂಕಿ ಪೊಟ್ಟಣವೂ ಇರಬೇಕು. ನಮ್ಮ ಗುಂಪು ನೋಡಿದರೆ ಕರಡಿ ಹಿಂಡು ದೂರ ಓಡಿ ಹೋಗುತ್ತವೆ. ಒಬ್ಬರೆ ಇದ್ದರೆ ನಮ್ಮ ಮೇಲೆಯೇ ದಾಳಿ ಮಾಡುವುದು ಗ್ಯಾರಂಟಿ. ಹಲಗು-ರಾತ್ರಿ ಹೊಲದಲ್ಲಿ ಕಾಲ ಕಳೆಯಬೇಕಿದೆ ಎನ್ನುತ್ತಿದ್ದಾರೆ ರೈತರು.

Advertisement

ಒಂದೆಡೆ ಜಿಂಕೆ, ಇನ್ನೊಂದಡೆ ಕರಡಿ: ಯಲಬುರ್ಗಾ ಹಾಗೂ ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿಯಲ್ಲಿ ಪ್ರತಿ ವರ್ಷವೂ ಜಿಂಕೆ ಹಾವಳಿ ಹೆಚ್ಚಾಗಿದ್ದರೆ, ಇರಕಲ್ಗಡಾ ಹೋಬಳಿ ಭಾಗದಲ್ಲಿ ಕರಡಿ ಕಾಟ ವೀಪರಿತವಾಗಿದೆ. ಇತ್ತೀಚೆಗೆ ಕರಡಿಗಳು ಜಾನುವಾರು ಸೇರಿದಂತೆ ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸುತ್ತಿವೆ. ಈ ಹಿಂದೆ ಹಲವು ಜನರು ಕರಡಿ ದಾಳಿಗೆ ತುತ್ತಾಗಿ ಆಸ್ಪತ್ರೆ ಸೇರಿದ ಉದಾಹರಣೆಗಳೂ ಇವೆ. ಇನ್ನೂ ಗಂಗಾವತಿ ಭಾಗದಲ್ಲಿ ಚಿರತೆಗಳ ಕಾಟವೂ ಅಧಿಕವಿದೆ. ಬೆಳೆ ರಕ್ಷಣೆಗಾಗಿ ಹೊಲದಲ್ಲಿ ಹೋರಾಟ ಮಾಡುವ ಅನ್ನದಾತನಿಗೆ ರಕ್ಷಣೆ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ. ಕರಡಿಗಳ ಸೆರೆ ಹಿಡಿದು ರೈತರು, ಜಾನುವಾರು ಹಾಗೂ ರಕ್ಷಣೆ ಮಾಡಬೇಕಿದೆ.

•ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next