Advertisement
ಸುಮನಾ, ಪ್ರವೀಣ ಮತ್ತು ನಳಿನಿ ಮೂವರು ಮಕ್ಕಳು. ಅಮ್ಮನೇ ಬೀಡಿ ಕಟ್ಟಿ ಈ ಮೂವರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದರು. ಆದರೆ, ಮಕ್ಕಳು ಒಂದೊಂದೇ ತರಗತಿ ದಾಟಿ ದೊಡ್ಡ ತರಗತಿಗೆ ತೆರಳುವಾಗ ಖರ್ಚುಗಳು ಹೆಚ್ಚಾಗುತ್ತವೆ. ಅದರಲ್ಲಿಯೂ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವುದು ಎಂದರೆ ಬಡವರ ಪಾಲಿಗೆ ಕಷ್ಟದ ಕೆಲಸವೇ. ಸುಮನಾ ಅದಾಗಲೇ ಅಮ್ಮನಿಗೆ ಬೀಡಿ ಕಟ್ಟುವುದರಲ್ಲಿ ನೆರವಾಗುತ್ತಿದ್ದಳು. ಅವಳಿಗೆ ನೂಲು ಹಾಕುವುದು ಮತ್ತು ಎಲೆ ಕತ್ತರಿಸುವುದು ತಿಳಿದಿತ್ತು. ನಾಲ್ಕನೆಯ ತರಗತಿಯ ಫಲಿತಾಂಶ ಬಂದ ಮೇಲೆ ಸುಮನಾ ಒಂದೆರಡು ತಿಂಗಳು ಬೀಡಿ ಕಟ್ಟುವುದನ್ನೂ ಕಲಿತಳು. ಐದನೆಯ ತರಗತಿಗೆ ಶಾಲೆಗೆ ಹೋಗುವ ಬದಲು ಬೀಡಿ ಬ್ರಾಂಚ್‌ನಲ್ಲಿ ಹೊಸ ಪಾಸ್‌ಪುಸ್ತಕ ತೆರೆದು, ತನ್ನದೇ ಆದ ನಂಬರ್ ಅನ್ನೂ ಪಡೆಯುವುದು ಸಾಧ್ಯವಾಯಿತು. ಅಮ್ಮನ ಜವಾಬ್ದಾರಿಯನ್ನು ತನ್ನ ಹೆಗಲಿಗೆ ತೆಗೆದುಕೊಂಡ ಸುಮನಾ, ತಮ್ಮ ಪ್ರವೀಣನಿಗೆ ಬಿಎಡ್ ಓದಿಸಿದರೆ, ನಳಿನಿಗೆ ನರ್ಸಿಂಗ್ ಓದಿಸುವವರೆಗೂ ಬೀಡಿ ಕಟ್ಟುತ್ತಲೇ ಇದ್ದಳು.
ಬೀಡಿಯ ಹಿನ್ನೆಲೆಯಲ್ಲಿಯೇ ತಮ್ಮ ಬಾಲ್ಯದ ಬದುಕನ್ನು ಕಟ್ಟಿಕೊಂಡವರು ಮೂಡಬಿದಿರೆ ವಿಧಾನಸಭಾಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್. “ಪ್ರಕಾರ ಸುಮಾರು 30 ವರ್ಷಗಳ ಹಿಂದೆ ಕರಾವಳಿಯಲ್ಲಿ ಭತ್ತದ ಕೃಷಿಯ ಹೊರತಾಗಿ ಬೇರೆ ದುಡಿಮೆಯ ಅವಕಾಶಗಳು ಇರಲಿಲ್ಲ. ಗೋಡಂಬಿಯ ಕಾರ್ಖಾನೆ ಮತ್ತು ಹೆಂಚಿನ ಕಾರ್ಖಾನೆಯ ಕೆಲಸಗಳಷ್ಟೇ ಬದಲಿ ಆದಾಯ ನೀಡುತ್ತಿದ್ದವು. ಆದರೆ, ಮಹಿಳೆಯರಿಗೆ ಮನೆಯಲ್ಲಿಯೇ ಬೀಡಿಕಟ್ಟುವ ಅವಕಾಶವು ಎಷ್ಟೋ ಮನೆಗಳಲ್ಲಿ ಹಸಿವನ್ನು ನೀಗಿಸಿದೆ’ ಎಂದು ಬಾಲ್ಯ ನೆನಪಿಸಿಕೊಂಡು ಹೇಳುತ್ತಾರೆ.
Related Articles
Advertisement
ಹಿರಿಯ ರಾಜಕಾರಣಿ, ರಾಜ್ಯದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಬೀಡಿ ಉದ್ಯಮದಲ್ಲಿ ತೊಡಗಿಸಿಕೊಂಡ ಕುಟುಂಬದ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಪರಿಚಯಿಸಿದವರು. “ಹಿಂದೆಲ್ಲ ಬೀಡಿ ಕಟ್ಟುವವರಿಗೆ ಪಿಎಫ್ ಆಗಲಿ, ಇಎಸ್‌ಐ ಸೌಲಭ್ಯವಾಗಲಿ ಇರಲಿಲ್ಲ. ಅಂಥ ಸಂದರ್ಭದಲ್ಲಿಯೂ ಮನೆಯ ಕಷ್ಟಗಳನ್ನು ನಿಭಾಯಿಸಲು ಎಷ್ಟೋ ಹೆಂಗಸರು ಈ ಉದ್ಯಮವನ್ನು ಅವಲಂಬಿಸಿದ್ದರು. ಮೂಡುಬಿದಿರೆಯಲ್ಲಿ, ಕಾರ್ಕಳದಲ್ಲಿ ಬೀಡಿ ಕಟ್ಟುತ್ತ ಘನತೆಯಿಂದ ಜೀವನ ಮಾಡಿದ ಅನೇಕ ಮಹಿಳೆಯರನ್ನು ನಾನು ಚಿಕ್ಕಂದಿನಲ್ಲಿ ನೋಡಿದ್ದೇನೆ. ಮನೆಯ ಕೆಲಸವನ್ನೂ ನಿರ್ವಹಿಸಿ, ಆದಾಯವನ್ನು ಗಳಿಸುವ ಅವಕಾಶ ಇದಾಗಿದ್ದರೂ, ಆರೋಗ್ಯಕ್ಕೆ ಅಷ್ಟೇನೂ ಉತ್ತಮವಾಗಿರಲಿಲ್ಲ. ಆದರೂ ನಮ್ಮ ಊರಿನ ಅನೇಕ ಮಹಿಳೆಯರು ಈ ಕಾಯಕವನ್ನು ಮಾಡಿ ತಮ್ಮ ಕುಟುಂಬವನ್ನು ಸಾಕಿ ಸಲಹಿದ್ದಾರೆ’ ಎಂದು ನೆನಪಿಸಿಕೊಂಡರು.
ಕರಾವಳಿಯಲ್ಲಿ ಹಲವಾರು ಉತ್ತಮ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿದ್ದರಿಂದ ಅನೇಕರು ಬೀಡಿಯನ್ನೇ ಆಧರಿಸಿ ಶಿಕ್ಷಣವನ್ನು ಪಡೆಯುವುದು ಸುಲಭವಾಯಿತು. ಅದೇ ಶಿಕ್ಷಣವನ್ನು ಊರುಗೋಲಾಗಿಸಿಕೊಂಡು ಬೆಂಗಳೂರು ಮತ್ತು ಮುಂಬೈಯಲ್ಲಿ ಉತ್ತಮ ಉದ್ಯೋಗ ಪಡೆಯುವುದು ಸಾಧ್ಯವಾಯಿತು. ಒಟ್ಟಿನಲ್ಲಿ ಪ್ರಸ್ತುತ ಈಗ 40ರಿಂದ 50 ವರ್ಷದೊಳಗಿನ ವಯೋಮಾನದ ಅನೇಕರ ಬದುಕಿನ ಬೀಡಿ ಆಸರೆಯಾಗಿ ಕೈ ಹಿಡಿದು ನಡೆಸಿದೆ.
ಬಿ.ಸಿ. ರೋಡ್‌ನಲ್ಲಿ ಬೀಡಿ ಕಟ್ಟುತ್ತಿರುವ ವಿಶಾಲಾಕ್ಷಿ ತಮ್ಮ 12ನೆಯ ವಯಸ್ಸಿನಲ್ಲಿಯೇ ಬೀಡಿಕಟ್ಟಲು ಕಲಿತವರು. ಈಗ 42ರ ಆಸುಪಾಸಿನಲ್ಲಿರುವ ಅವರು ಮದುವೆಯ ನಂತರವೂ ಬೀಡಿ ಕೆಲಸವನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಹತ್ತು ವರ್ಷಗಳ ಹಿಂದೆ ವಾರಪೂರ್ತಿ ಬೀಡಿ ಕೆಲಸ ಸಿಗುತ್ತಿತ್ತು. ಈಗ ಕೆಲಸವೇ ಕಡಿಮೆಯಾಗಿದೆ. ಬಾಲ್ಯದಲ್ಲಿ ಅವರು ತಮ್ಮ, ತಂಗಿಯಂದಿರನ್ನು ಓದಿಸಲು, ತಮ್ಮ ಮದುವೆಗೆ ಬೇಕಾದ ಚಿನ್ನ ಮತ್ತು ಹಣವನ್ನು ಬೀಡಿ ಕಟ್ಟುವ ಮೂಲಕ ಹೊಂದಿಸಿಕೊಂಡಿದ್ದರು. ಕುಡಿತಕ್ಕೆ ಶರಣಾದ ಅಪ್ಪ ಯಾವುದೇ ಆದಾಯವನ್ನು ಮನೆಗೆ ಕೊಡುತ್ತಿರಲಿಲ್ಲ. ಆದರೆ, ವಿಶಾಲಾಕ್ಷಿ ತಮ್ಮದೇ ದುಡಿಮೆಯನ್ನು ಪಿಗ್ಮಿಗೆ ಕಟ್ಟುವ ಮೂಲಕ ಜೋಪಾನ ಮಾಡಿಕೊಂಡು ಮದುವೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಂಡಿದ್ದನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ತಲಪಾಡಿಯಲ್ಲಿದ್ದ ತಮ್ಮ ತವರುಮನೆಯಿಂದ ಮದುವೆಯಾಗಿ ಬಂಟ್ವಾಳಕ್ಕೆ ಹೋದ ಮೇಲೆಯೂ ಅವರು ಅದೇ ಬೀಡಿಯ ಕೆಲಸವನ್ನು ಮುಂದುವರೆಸುತ್ತಿದ್ದಾರೆ. ಮದುವೆ ಸಂದರ್ಭದಲ್ಲಿ ಪ್ರಾವಿಡೆಂಟ್ ಫಂಡ್ ಹಣವೂ ನೆರವಾಗಿತ್ತು. ಇದೀಗ ಪತಿ ದುಡಿಯುತ್ತಿದ್ದರೂ, ಮನೆಯ ಜವಾಬ್ದಾರಿಯನ್ನು ತಾವೂ ವಹಿಸಿಕೊಂಡು ದುಡಿಮೆ ಮುಂದುವರೆಸಿದ್ದಾರೆ. ಆದರೆ, ಬಾಲ್ಯದಲ್ಲಿ ತಮ್ಮ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿ ಇಬ್ಬರು ತಂಗಿಯಂದಿರಿಗೆ ಓದು ಮುಂದುವರೆಸಲು ನೆರವಾಗಿದ್ದರಿಂದ ಅವರಿಬ್ಬರೂ ಇಂದು ಒಳ್ಳೆಯ ಹುದ್ದೆಯಲ್ಲಿ ಕೆಲಸ ಮಾಡುವುದು ಸಾಧ್ಯವಾಗಿದೆ. ಅವರ ತಂಗಿ ಹರಿಣಾಕ್ಷಿ ಬ್ಯಾಂಕಿನಲ್ಲಿ ಉದ್ಯೋಗ ಪಡೆದುಕೊಂಡಿದ್ದರೆ, ಕೊನೆಯ ತಂಗಿ ಸಂಗೀತಾ ಬೆಂಗಳೂರಿನಲ್ಲಿ ಐಟಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾಳೆ. ಉತ್ತಮ ಶಿಕ್ಷಣ ಪಡೆದುದರಿಂದ ಒಳ್ಳೆಯ ಕಡೆಗೆ ಮದುವೆಯಾಗಿ ತೆರಳಿದ್ದಾರೆ.
ಭೂಸುಧಾರಣೆ ಕಾಯಿದೆ ಜಾರಿಯಾಗಿ ಜಮೀನು ಕಳೆದುಕೊಂಡ ಮನೆಗಳಿಗೂ ಬೀಡಿ ಆಸರೆಯಾಗಿ ಒದಗಿ ಬಂದಿದೆ. ಮನೆಯ ಆದಾಯ ಮೂಲವಾಗಿದ್ದ ಭೂಮಿಯು ಕೈತಪ್ಪಿ ಹೋದಾಗ ಎಷ್ಟೋ ಮನೆಗಳಲ್ಲಿ ಹೆಂಗಳೆಯರು ಈ ಹೊಸ ಕಾಯಕವನ್ನು ಕಲಿಯಲು ಪ್ರಯತ್ನಿಸಿದರು. 1930ರ ಸುಮಾರಿಗೆ ದೇಶದಲ್ಲಿ ತಂಬಾಕು ಬೆಳೆಯು ವ್ಯಾಪಕವಾಗತೊಡಗಿದ್ದರಿಂದ ಬೀಡಿ ಉದ್ಯಮವೂ ಹೆಚ್ಚು ವಿಸ್ತರಿಸಿಕೊಂಡಿತು. ಗಣೇಶ್ ಬೀಡಿ, ಭಾರತ್ ಬೀಡಿ, ಟೆಲಿಫೋನ್ ಬೀಡಿ, ಪ್ರಕಾಶ್ ಬೀಡಿ, ಸಾಧು ಬೀಡಿ, ಕರ್ನಾಟಕ ಸ್ನಫ್ ಅಂಡ್ ಬೀಡಿ, ಪಿವಿಎಸ್ ಬೀಡಿ, ಆನಂದ್ ಬೀಡಿ, ಸುವಾಸಿನಿ ಬೀಡಿ, ಶುಭ ಬೀಡಿ- ಹೀಗೆ ಸುಮಾರು 30ಕ್ಕೂ ಹೆಚ್ಚು ಕಂಪೆನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ತೊಡಗಿಸಿಕೊಂಡು ಬೀಡಿ ಉದ್ಯಮವನ್ನು ವಿಸ್ತರಿಸಿಕೊಂಡವು.
ಪ್ರಸ್ತುತ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು 2 ಲಕ್ಷ ಬೀಡಿ ಕಾರ್ಮಿಕರಿದ್ದರೂ, ಅವರ ಪೈಕಿ ಶೇ. 90ರಷ್ಟು ಕಾರ್ಮಿಕರು ಮಹಿಳೆಯರು. ಕರಾವಳಿ ಜಿಲ್ಲೆಗಳ ಮಟ್ಟಿಗೆ ಮನೆಯಲ್ಲಿ ಬೀಡಿ ಕಟ್ಟುವ ಪದ್ಧತಿಯೇ ಹೆಚ್ಚಾಗಿದ್ದು, ಪ್ಯಾಕಿಂಗ್ ಮಾಡುವ ಕೆಲಸವನ್ನೂ ಮನೆಯಲ್ಲಿ ನಿರ್ವಹಿಸುವುದುಂಟು. ಆದರೆ, ಬೀಡಿ ಗುತ್ತಿಗೆ ಕೆಲಸವನ್ನು ಹೆಚ್ಚಾಗಿ ಗಂಡಸರೇ ನಿಭಾಯಿಸುತ್ತಾರೆ.
ಎರಡೂ ಜಿಲ್ಲೆಗಳಲ್ಲಿ ಸುಮಾರು 600ಕ್ಕೂ ಹೆಚ್ಚು ಬೀಡಿ ಬ್ರಾಂಚ್‌ಗಳು ಇವೆ. “ಇಂದಿನ ದಿನಮಾನದಲ್ಲಿ ಬೀಡಿಯನ್ನೇ ಅವಲಂಬಿಸಿ ಜೀವನ ಮಾಡುವುದು ಹಿಂದಿನ ಕಾಲದಷ್ಟು ಸುಲಭವಲ್ಲ’ ಎನ್ನುತ್ತಾರೆ ಮೂಡುಬಿದಿರೆಯ ಯಶೋದಾ ಸುವರ್ಣ. ಯಾಕೆಂದರೆ, ಹಿಂದಿನ ಕಾಲದಲ್ಲಿ ಅಗತ್ಯಗಳು ಕಡಿಮೆ ಇದ್ದವು. ಈಗಿನ ಅಗತ್ಯಗಳು ಹೆಚ್ಚಾಗಿವೆ. ಉಡುಪುಗಳ ಖರೀದಿಗೆ, ಬಸ್ಸಿನ ಪ್ರಯಾಣಕ್ಕೆ, ದಿನಸಿ ವಸ್ತುಗಳಿಗೆ ಬೆಲೆ ಏರಿಕೆ ಆದಂತೆ ಬೀಡಿಯ ಸಂಬಳದ ಪ್ರಮಾಣ ಏರಿಕೆ ಆಗಿಲ್ಲ. ಅಷ್ಟೇ ಅಲ್ಲ, ತಕ್ಕಮಟ್ಟಿಗೆ ಸಂಬಳ ಇದ್ದರೂ, ವಾರಪೂರ್ತಿ ಕೆಲಸವೂ ಸಿಗುವುದಿಲ್ಲ. ಇಬ್ಬರೋ, ಮೂವರೋ ಒಟ್ಟಾಗಿ ರಾತ್ರಿ ಹಗಲೆನ್ನದೇ ಬೀಡಿ ಕಟ್ಟಿದರೆ ದಿನಕ್ಕೆ 2000 ಬೀಡಿ ಕಟ್ಟುವುದು ಸಾಧ್ಯವಾಗುತ್ತದೆ. ವಾರಕ್ಕೆ ಮೂರು ಕೆಲಸ ಸಿಗುವಾಗ, ಅಬ್ಟಾ ಎಂದರೆ 6000 ಬೀಡಿಯನ್ನಷ್ಟೇ ಕಟ್ಟಬಹುದು.
ಪಿ. ವಿ. ಶೋಭಾ