Advertisement

ಬೀಚ್‌, ಪ್ರಾಕೃತಿಕ ವಿಕೋಪ ತಡೆಗೆ ಗೃಹರಕ್ಷಕ ದಳ ಸಿಬಂದಿ

03:39 PM Jul 05, 2023 | Team Udayavani |

ಉಡುಪಿ: ಮಳೆಗಾಲದ ಮುನ್ನೆಚ್ಚರಿಕೆ ಕ್ರಮವಾಗಿ ಬೀಚ್‌ ಹಾಗೂ ವಿವಿಧ ಇಲಾಖೆಗಳಿಗೆ ಗೃಹರಕ್ಷಕ ದಳದ ಸಿಬಂದಿಯನ್ನು ನಿಯೋಜಿಸಲಾಗಿದೆ.

Advertisement

ಪಡುಬಿದ್ರಿ, ಕಾಪು, ಮಲ್ಪೆ, ಮರವಂತೆ, ಬೈಂದೂರು ಸೋಮೇಶ್ವರ ಬೀಚ್‌ಗಳಲ್ಲಿ ತಲಾ 2 ಮಂದಿ ಗೃಹರಕ್ಷಕದಳದ ಸಿಬಂದಿ ಬೆಳಗ್ಗೆ 7ರಿಂದ ಮಧ್ಯಾಹ್ನ 2 ಹಾಗೂ ಮಧ್ಯಾಹ್ನ 2ರಿಂದ ರಾತ್ರಿ 8 ಗಂಟೆಯವರೆಗೆ ಪಾಳಿಯಲ್ಲಿ ಕರ್ತವ್ಯ ನಿರತರಾಗಿದ್ದಾರೆ. ಜೂನ್‌ನಿಂದ ಆಗಸ್ಟ್‌ವರೆಗೆ ಸಮುದ್ರ ತೀರದಲ್ಲಿ ಗೃಹರಕ್ಷಕ ದಳದ ಸಿಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಅಗತ್ಯವಿದ್ದರೆ ಇದನ್ನು ಮುಂದೂಡಿಕೆ ಮಾಡುವ ಸಾಧ್ಯತೆಗಳಿವೆ.

ಪ್ರವಾಸಿಗರಿಗೆ ಎಚ್ಚರಿಕೆ
ಮಳೆಗಾಲದಲ್ಲಿ ಕಡಲತೀರದಲ್ಲಿ ಹೆಚ್ಚಿನ ಅನಾಹುತಗಳನ್ನು ತಡೆಗಟ್ಟುವ ಸಲುವಾಗಿ ಹೋಂ ಗಾರ್ಡ್ಸ್‌ ಸಿಬಂದಿ ಪ್ರವಾಸಿಗರಿಗೆ ಎಚ್ಚರಿಕೆ ಮೂಡಿಸುವ ಕೆಲಸ ಮಾಡಲಿದ್ದಾರೆ. ಅಪಾಯಕಾರಿ ಸ್ಥಳಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸವೂ ನಡೆಯುತ್ತಿದೆ. ಅಲ್ಲದೆ ಚಂಡಮಾರುತ, ವಿಪರೀತ ಗಾಳಿ ಇರುವ ಸಂದರ್ಭದಲ್ಲಿ ಕಡಲತೀರದಲ್ಲಿ ಸೂಚನೆ ನೀಡುವ ಕೆಲಸ ಮಾಡಲಿದ್ದಾರೆ.

ವಿವಿಧ ಪರಿಕರಗಳು
ತಹಶೀಲ್ದಾರ್‌ ಅವರಿಂದ ಮಂಜೂರುಗೊಂಡ 2 ರಬ್ಬರ್‌ ಬೋಟ್‌ಗಳು ಪಡುಬಿದ್ರಿ ಹಾಗೂ ಬ್ರಹ್ಮಾವರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇರಿಸಲಾಗಿದೆ. ಇದರಲ್ಲಿ ತಲಾ 7 ಮಂದಿ ಯಂತೆ ಸಿಬಂದಿ ನಿಯೋಜಿಸಲಾಗಿದೆ. ಓಬಿ ಯಂತ್ರ, ಪೆಡಲ್‌, ಹಗ್ಗ, ಸರ್ಚ್‌ ಲೈಟ್‌ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ.

ವಿವಿಧ ಇಲಾಖೆಯಲ್ಲಿ ಹೋಂ ಗಾರ್ಡ್ಸ್‌
ಜಿಲ್ಲಾಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಪೊಲೀಸ್‌ ಇಲಾಖೆಯಲ್ಲಿ 82, ಜಿಲ್ಲಾ ಕಾರಾಗೃಹದಲ್ಲಿ 5, ಆರ್‌ಟಿಓದಲ್ಲಿ 5, ಪ್ರವಾಸೋದ್ಯಮ ಇಲಾಖೆಯಲ್ಲಿ 10, ಎನ್‌ಸಿಸಿ ಮಣಿಪಾಲ ಹಾಗೂ ಉಡುಪಿ ಘಟಕದಲ್ಲಿ ತಲಾ 2, ಕೆಎಸ್ಸಾರ್ಟಿಸಿ ಉಡುಪಿ ಹಾಗೂ ಕುಂದಾಪುರದಲ್ಲಿ 3 ಮಂದಿ ಹೋಂ ಗಾರ್ಡ್‌ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು 250 ಮಂದಿ ಸಿಬಂದಿ ವಿವಿಧೆಡೆ ಕರ್ತವ್ಯ ನಿರ್ವಹಿಸಿ ಕೊಂಡಿದ್ದು, ರಕ್ಷಣ ಕಾರ್ಯಾಚರಣೆಗೆ ಸನ್ನದ್ಧರಾಗಿದ್ದಾರೆ.

Advertisement

ಗೃಹರಕ್ಷಕ ದಳ ಸನ್ನದ್ಧ
ಜಿಲ್ಲಾಡಳಿತದ ಸೂಚನೆಯ ಮೇರೆಗೆ ಮಳೆಗಾಲದ ಮುನ್ನೆಚ್ಚರಿಕೆ ಸಲುವಾಗಿ ಬೀಚ್‌ಗಳಲ್ಲಿ ಹೋಂ ಗಾರ್ಡ್ಸ್‌ ಗಳನ್ನು ನೇಮಕ ಮಾಡಲಾಗಿದೆ. ಆಗಸ್ಟ್‌ವರೆಗೆ ಇವರು ಕರ್ತವ್ಯ ನಿರ್ವಹಿಸಲಿದ್ದು, ಅಗತ್ಯವಿದ್ದರೆ ಈ ಸೇವೆಯನ್ನು ಮತ್ತಷ್ಟು ವಿಸ್ತರಿಸಲು ಉದ್ದೇಶಿಸಲಾಗಿದೆ.ಪ್ರಕೃತಿ ವಿಕೋಪಗಳು ಉಂಟಾದಲ್ಲಿ ಎದುರಿಸಲು ಗೃಹರಕ್ಷಕ ದಳ ಜಿಲ್ಲಾಡಳಿತದೊಂದಿಗೆ ಸದಾ ಸಿದ್ಧವಿದೆ.
-ಡಾ| ಪ್ರಶಾಂತ್‌ ಶೆಟ್ಟಿ,
ಜಿಲ್ಲಾ ಸಮಾದೇಷ್ಟರು, ಗೃಹರಕ್ಷಕ ದಳ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next