Advertisement
ವಾಡಿಕೆಯಂತೆ ಅಕ್ಟೋಬರ್ ಕೊನೆಗೆ ಹಿಂಗಾರಿನ ಶೀತಗಾಳಿ, ಮಳೆ ಶುರುವಾಗಿದೆ. ಮನೆಯ ಹೊರಗಿರಲಿ, ಮನೆಯೊಳಗೂ ಚಳಿ ಶುರುವಾಗಿದ್ದು, ಬೆಳಗೆದ್ದು ನೆಲದ ಮೇಲೆ ಕಾಲಿಟ್ಟೊಡನೆ ಕಾಲಿಗೆ ತಣ್ಣನೆಯ ಸ್ಪರ್ಶದ ಅರಿವಾಗುತ್ತದೆ. ಪ್ರಾಯದವರಿಗೆ ಇದು ದೊಡ್ಡ ವಿಷಯವಲ್ಲದಿದ್ದರೂ, ಅಂಬೆಗಾಲಿಡುವ ಸಣ್ಣ ಮಕ್ಕಳಿಗೆ, ನಿಧಾನವಾಗಿ ನಡೆದಾಡುವ ವಯಸ್ಸಾದವರಿಗೆ, ಗರ್ಭಿಣಿಯರಿಗೆ ಖಂಡಿತ ಕಿರಿಕಿರಿಯ ವಿಷಯ. ಇಷ್ಟೇ ಅಲ್ಲ, ಆರೋಗ್ಯದ ದೃಷ್ಟಿಯಿಂದಲೂ ಇಷ್ಟೊಂದು ಚಳಿ ಒಳ್ಳೆಯದಲ್ಲ. ಇಂಥ ದಿನಗಳಲ್ಲಿ ಎಲ್ಲರೂ “ತಲೆಯನ್ನು ತಂಪಾಗಿಯೂ, ಪಾದವನ್ನು ಬೆಚ್ಚಗೂ’ ಇಟ್ಟುಕೊಳ್ಳುವುದು ಉತ್ತಮ. ಹಾಗಾಗಿ, ಕಾಲಕೆಳಗಿನ ನೆಲಹಾಸನ್ನು ಬೆಚ್ಚಗಿಡಲು ಕೆಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ.
ಮಣ್ಣಿಗೆ ತಾಗಿದಂತೆ ನೆಲ ಮಹಡಿಗಳಿರುವ ಕಾರಣ, ಈ ತೇವಾಂಶ ನೆಲ ಹಾಸಿನ ಪದರಗಳಲ್ಲಿ ಆವಿಯಾಗುತ್ತಿದ್ದಂತೆ, ಅಲ್ಲಿನ ಶಾಖವನ್ನೆಲ್ಲ ಹೀರಿ, ಥಂಡಿಹೊಡೆಯುವಂತೆ ಮಾಡುತ್ತದೆ. ಹೀಗೆ ಶಾಖ ಕಳೆದುಕೊಂಡ ನೆಲಹಾಸನ್ನು ನಮ್ಮ ಕಾಲು ಸ್ಪರ್ಶಿಸಿದಾಗ, ನಮಗೆ ಶೀತದ ಅನುಭವ ಆಗುತ್ತದೆ. ಹಾಗಾಗಿ, ನಾವು ಮನೆಯನ್ನು ಕಟ್ಟುವಾಗ ಕಡೇಪಕ್ಷ ಒಂದೂವರೆಯಿಂದ ಎರಡು ಅಡಿ ಎತ್ತರಕ್ಕೆ ನೆಲಮಹಡಿಯನ್ನು ಕಟ್ಟಿದರೆ, ನೀರು ಮಣ್ಣಿನ ಮೂಲಕ ಮೇಲೇರಿ, ನಮಗೆ ಶೀತದ ಅನುಭವ ಆಗುವುದು ತಪ್ಪುತ್ತದೆ. ನೆಲ ಹಾಸಿನ ಫಿನಿಶ್
ಸಾಮಾನ್ಯವಾಗಿ ಫ್ಲೋರ್ ನುಣ್ಣಗೆ ಪಾಲೀಶ್ ಮಾಡಿದಷ್ಟೂ ಹೆಚ್ಚು ತಂಪೆನಿಸುತ್ತದೆ. ಜೊತೆಗೆ ನೆಲಹಾಸು ಹೆಚ್ಚು ನುಣುಪಾಗಿದ್ದಷ್ಟೂ ಕಾಲು ಜಾರುವುದು ಕೂಡ ಹೆಚ್ಚಾಗಿರುತ್ತದೆ. ಆದುದರಿಂದ ನೆಲಹಾಸನ್ನು ಆಯ್ಕೆ ಮಾಡುವಾಗ, ತೀರಾ ಪಾಲೀಶ್ ಆಗಿರುವುದನ್ನು ಆಯ್ಕೆ ಮಾಡದೆ ಸ್ವಲ್ಪ ತರಿತರಿಯಾಗಿರುವುದನ್ನು ಸೆಲೆಕ್ಟ್ ಮಾಡಿಕೊಳ್ಳುವುದು ಉತ್ತಮ. ಇತ್ತೀಚಿನ ದಿನಗಳಲ್ಲಿ “ಮ್ಯಾಟ್ ಫಿನಿಶ್’ ಅಂದರೆ “ನೇಯ್ದಚಾಪೆ’ ಅಷ್ಟಲ್ಲದಿದ್ದರೂ ಒಂದು ಮಟ್ಟಕ್ಕೆ ತರಿತರಿಯಾಗಿರುವ ಹಾಗೆಯೇ ಜಾರದಿರುವ ನೆಲಹಾಸುಗಳು ಮಾರುಕಟ್ಟೆಗೆ ಬಂದಿವೆ. ಅವು ಈಗ ಸಾಕಷ್ಟು ಜನಪ್ರಿಯವಾಗಿವೆ. ಇವುಗಳನ್ನು ಬಳಸಿ ನೆಲಹಾಸು ಬೆಚ್ಚಗಿರುವಂತೆ ಮಾಡಬಹುದು.
Related Articles
ಚಳಿಗಾಲದಲ್ಲಿ ನಾವಿರುವ ಪ್ರದೇಶಕ್ಕೆ ಸೂರ್ಯನ ಕಿರಣಗಳು ದಕ್ಷಿಣದಿಂದ ಸುಮಾರು 54 ಡಿಗ್ರಿಯಷ್ಟು ಕೆಳಕೋನದಲ್ಲಿ ದಿನವಿಡೀ ಬೀಳುತ್ತಿರುತ್ತವೆ. ಅಂದರೆ ನೀವು ಕಿಟಕಿಯ ಪರದೆಯನ್ನು ತೆರೆದಿಟ್ಟರೆ ಸೂರ್ಯ ಕಿರಣಗಳು ಮನೆಯೊಳಗೆ ನಾಲ್ಕಾರು ಅಡಿ ಒಳಗೆ ಬಂದು, ಸ್ವಾಭಾಕವಾಗೇ ನೆಲದ ಮೇಲೆ ಬಿದ್ದು, ಅದನ್ನು ಬೆಚ್ಚಗಾಗಿಸುತ್ತದೆ. ಒಮ್ಮೆ ನೆಲಹಾಸು ಕೆಲವು ಗಂಟೆಗಳ ಕಾಲ ಬೆಚ್ಚಗಾದರೆ, ಅದು ಬೆಳಗಿನ ಹೊತ್ತು ಮಾತ್ರವಲ್ಲದೆ, ಇಡೀ ರಾತ್ರಿಯೂ ಬೆಚ್ಚಗಿರುತ್ತದೆ. ಆದುದರಿಂದ ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿಡಲು ದಕ್ಷಿಣ ದಿಕ್ಕಿನಿಂದ ದಿನವಿಡೀ ಸೂರ್ಯ ಕಿರಣಗಳು ಒಳಬರುವಂತೆ ಮನೆಯನ್ನು ವಿನ್ಯಾಸ ಮಾಡಿಸಬೇಕು.
Advertisement
ದಕ್ಷಿಣಕ್ಕೆ ತೆರೆದಿಡಿವಿನ್ಯಾಸ ಮಾಡುವಾಗ ಮನೆಯ ದಕ್ಷಿಣ ದಿಕ್ಕಿನಲ್ಲಿ ಸಾಕಷ್ಟು ತೆರೆದ ಸ್ಥಳ ಇರುವಂತೆ ನೋಡಿಕೊಳ್ಳಬೇಕು. ಚಳಿಗಾಲದಲ್ಲಿ ಸೂರ್ಯನ ಕಿರಣಗಳು ಕೆಳಕೋನದಿಂದ ದಕ್ಷಿ$ಣದಿಕ್ಕಿನಿಂದ ಮನೆಯನ್ನು ಪ್ರವೇಶಿಸುವುದರಿಂದ, ತೆರೆದ ಸ್ಥಳ ಇದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ. ಸಣ್ಣ ನಿವೇಶನಗಳಲ್ಲಿ ಒಂದೆರಡು ಅಡಿ ಓಪನ್ ಸ್ಪೇಸ್ ಇದ್ದರೂ ದೊಡ್ಡ ನಿವೇಶನಗಳಲ್ಲಿ ನಾಲ್ಕಾರು ಅಡಿ ತೆರೆದ ಸ್ಥಳ ಇದ್ದರೆ, ಮನೆಯೊಳಗೆ ಸಾಕಷ್ಟು ಸೂರ್ಯನ ಶಾಖವನ್ನು ಆಹ್ವಾನಿಸಬಹುದು. ಸೂರ್ಯನ ಕಿರಣಗಳನ್ನು ದಕ್ಷಿಣದಿಂದ ಮನೆಯೊಳಗೆ ಬಿಟ್ಟುಕೊಳ್ಳಲು, ನಾವು ದೊಡ್ಡ ದೊಡ್ಡ ಕಿಟಕಿಗಳನ್ನು ದಕ್ಷಿಣದ ಗೋಡೆಗಳಲ್ಲಿ ಇಟ್ಟುಕೊಳ್ಳುವುದು ಅನಿವಾರ್ಯ. ದಕ್ಷಿಣದಲ್ಲಿ ದೊಡ್ಡ ಕಿಟಕಿಗಳಿದ್ದರೂ ಬೇಸಿಗೆಯಲ್ಲಿ ತೊಂದರೆ ಆಗುವುದಿಲ್ಲ. ನೆಲಹಾಸಿನಲ್ಲಿ ವೈವಿಧ್ಯತೆ
ಕೆಲ ನೆಲಹಾಸುಗಳು ಕಾಲಿಗೆ ಜುಮ್ ಎಂದೆನಿಸುವಷ್ಟು ತಂಪೆನಿಸಿದರೆ ಕೆಲವೊಂದು ಬೆಚ್ಚಗಿನ ಅನುಭವ ನೀಡುತ್ತವೆ. ಸಾಮಾನ್ಯವಾಗಿ ಅಮೃತಶಿಲೆ- ಮಾರ್ಬಲ್ ಕಾಲಿಗೆ ತಂಪೆನಿಸುತ್ತದೆ. ನಿಮಗೆ ಅಮೃತಶಿಲೆಯನ್ನೇ ಉಪಯೋಗಿಸಬೇಕು ಎಂದಿದ್ದಲ್ಲಿ ನೀವು ಕಡೇಪಕ್ಷ ಬೆಡ್ ರೂಮ್ ಹಾಗೂ ದಿನದ ಬಹುಸಮಯ ಕಳೆಯುವ ಲಿವಿಂಗ್ ಇಲ್ಲವೇ ಅಡಿಗೆ ಮನೆಗೆ ಒಂದಷ್ಟು ಸೂರ್ಯ ರಶ್ಮಿ ನೇರವಾಗಿ ಪ್ರವೇಶಿಸುವಂತೆ ನೋಡಿಕೊಂಡರೆ, ಆಗ ಚಳಿಗಾಲದಲ್ಲಿಯೂ ಬೆಚ್ಚಗಿರಲು ಸಾಧ್ಯ. ಹೇಳಿ ಕೇಳಿ ಮರದ ನೆಲಹಾಸು ಬೆಚ್ಚಗಿರುತ್ತದೆ. ಮರ ದುಬಾರಿಯಾದ ಕಾರಣ, ಇತ್ತೀಚಿನ ದಿನಗಳಲ್ಲಿ ಇವುಗಳು ಸಣ್ಣ ಸಣ್ಣ ಟೈಲ್ಸ್ ಮಾದರಿಯಲ್ಲಿ ಲಭ್ಯವಿದ್ದು, ಮೊದಲೇ ಫಿನಿಶ್ ಆಗಿಯೂ ಬರುವುದರಿಂದ, ಬರಿ ಗಮ್ ಹಾಕಿ ಈಗಿರುವ ನೆಲದ ಮೇಲೆಯೇ ಅಂಟಿಸಬಹುದು! ಉಳಿದ ನೆಲಹಾಸುಗಳಿಗೆ ಹೋಲಿಸಿದರೆ ವುಡನ್ ಫ್ಲೋರ್ ಮೇಂಟನೆನ್ಸ್ ಮಾಡುವುದು ಸ್ವಲ್ಪ ಕಷ್ಟ. ಮರ ಸೆರಾಮಿಕ್, ವೆಟ್ರಿಫೈಡ್ ಇಲ್ಲವೇ ಸಿಮೆಂಟ್ ಆಧರಿಸಿದ ನೆಲಹಾಸುಗಳಿಗೆ ಹೋಲಿಸಿದರೆ ಹೆಚ್ಚು ಗಡಸುತನವನ್ನು ಹೊಂದಿಲ್ಲದ ಕಾರಣ, ಬಳಸುವಾಗ ಹಾಗೂ ಹಾಕುವಾಗ ಸ್ವಲ್ಪ ಎಚ್ಚರದಿಂದ ಇರಬೇಕು. ಮರಕ್ಕೆ ಪಾಲೀಶ್ ಅನಿವಾರ್ಯವಾಗಿದ್ದು, ಇದು ಹೋದಾಗಲೆಲ್ಲ ಮರು ಪಾಲೀಶ್ ಮಾಡುವುದೂ ಇದ್ದೇ ಇರುತ್ತದೆ. ಆದರೆ ಇತರೆ ವಸ್ತುಗಳಿಗೆ ಹೋಲಿಸಿದರೆ, ಮರದ ನೆಲಹಾಸು ಆರೋಗ್ಯದ ದೃಷ್ಟಿಯಿಂದ ಉತ್ತಮ. ಋತು ಬದಲಾಗುವುದು ಕಾಲನಿಯಮ, ಚಳಿಗಾಲದಲ್ಲಿ ಬೆಚ್ಚಗಿರುವಂತೆ ಮನೆಯನ್ನು ವಿನ್ಯಾಸ ಮಾಡಿಕೊಂಡರೆ ಹತ್ತಾರು ವರ್ಷ ನಾವು ಆರಾಮವಾಗಿರುವುದರ ಜೊತೆಗೆ ಆರೋಗ್ಯವಾಗಿಯೂ ಇರಬಹುದು! ಹೆಚ್ಚಿನ ಮಾತಿಗೆ ಫೋನ್ 98441 32826 – ಆರ್ಕಿಟೆಕ್ಟ್ ಕೆ ಜಯರಾಮ್