Advertisement

ಹೂಡಿಕೆಗೂ ಮುನ್ನ ಸಣ್ಣದ್ದೊಂದು ಎಚ್ಚರಿಕೆಯಿರಲಿ…

09:21 AM May 14, 2019 | Hari Prasad |

ಇಂದು ಯಾವುದೇ ಕಂಪನಿ ಮಾರುಕಟ್ಟೆಯಲ್ಲಿನ ಉಳಿದೆಲ್ಲ ಯೋಜನೆಗಳಿಗಿಂತ ಕೊಂಚ ಹೆಚ್ಚೇ ಲಾಭವನ್ನು ನೀಡುವುದಾಗಿ ಭರವಸೆಯನ್ನಿತ್ತರೆ, ಅಂಥ ಕಂಪನಿಯ ಉದ್ದೇಶದೆಡೆಗೆ ಸಣ್ಣದೊಂದು ಅನುಮಾನ ನಿಮಗೆ ಮೂಡಲೇಬೇಕು. ದಶಕಗಳಿಂದ ಹಣಕಾಸಿನ ಕ್ಷೇತ್ರದಲ್ಲಿರುವ, ಸರಕಾರವೇ ಬೆನ್ನೆಲುಬಾಗಿ ನಿಂತಿರುವ ಕಂಪನಿಗಳಿಗೂ ಕೊಡಲಾಗ­ದಷ್ಟು ಹೂಡಿಕೆಯ ಲಾಭವನ್ನು, ಕಂಡುಕೇಳರಿಯದ ಕಂಪನಿಯಿಂದ ಕೊಡಲು ಸಾಧ್ಯವೇ ಎನ್ನುವ ಸಣ್ಣ ತರ್ಕವೊಂದು ನಿಮ್ಮಲ್ಲಿ ಅರಳಬೇಕು.

Advertisement

ಇತ್ತೀಚೆಗೆ ಸಾಮಾಜಿಕ ಜಾಲತಾಣ­ಗಳಲ್ಲಿ ಚಿಟ್‌ ಫ‌ಂಡ್‌ ಹಗರಣ­ವೊಂದರ ವೀಡಿಯೊ ಹರಿದಾಡುತ್ತಿತ್ತು. ಒಡಿಶಾ ರಾಜ್ಯಕ್ಕೆ ಸಂಬಂಧಪಟ್ಟ ಹಗರಣದ ಕುರಿತಾದ ಈ ವೀಡಿಯೋದಲ್ಲಿ ಮೋಸಗಾರ ಕಂಪನಿಯೊಂದು ಜನಸಾಮಾನ್ಯರಿಗೆ ತನ್ನ ಕಂಪನಿಯಲ್ಲಿ ಹಣ ಹೂಡುವಂತೆ ಆಮೀಷವೊಡ್ಡಿದೆ. ಕನಿಷ್ಠ ಎರಡು ಲಕ್ಷದಷ್ಟು ಹಣವನ್ನು ಕಂಪನಿಯ ಯೋಜನೆಯೊಂದರಲ್ಲಿ ತೊಡಗಿಸಿದರೆ ತಿಂಗಳಿಗೆ ಹತ್ತು ಪ್ರತಿ ಶತದಷ್ಟು ಬಡ್ಡಿಯನ್ನು ನೀಡುವುದಾಗಿ ತಿಳಿಸಿದ ಕಂಪನಿಯವರ ಆಮಿಷಕ್ಕೆ ಮರುಳಾದ ಜನರು, ಪೈಪೋಟಿಗೆ ಬಿದ್ದು ಹಣ ಹೂಡಿದ್ದಾರೆ.

ತನ್ನ ಪೂರ್ವ ನಿರ್ಧಾರಿತ ನಿಯಮದಂತೆ ಮೊದಲ ತಿಂಗಳ ಇಪ್ಪತ್ತು ಸಾವಿರ ರೂಪಾಯಿಗಳನ್ನು ಹೂಡಿಕೆದಾರರ ಕೈಗಿಟ್ಟ ಕಂಪನಿ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ಎರಡನೇ ತಿಂಗಳ ಹೊತ್ತಿಗೆ ಕಂಪನಿಯಲ್ಲಿ ಹಣ ಹೂಡಲು ಜನಸಾಗರವೇ ಹರಿದು ಬಂದಿದೆ. ದುರದೃಷ್ಟವೆಂದರೆ, ಎರಡನೇ ತಿಂಗಳ ಕೊನೆಯ ವಾರಕ್ಕೆ ಕಂಪನಿ ತನ್ನ ಬಳಿಯಿದ್ದ ಹೂಡಿಕೆದಾರರ ನೂರಾರು ಕೋಟಿ ರೂಪಾಯಿಗಳಷ್ಟು ಹಣವೆನ್ನೆತ್ತಿಕೊಂಡು ರಾತ್ರೋರಾತ್ರಿ ಪರಾರಿಯಾಗಿದೆ.

ಇದೊಂದೇ ಹಗರಣದಲ್ಲಿ ಸರಿ ಸುಮಾರು ಆರು ಲಕ್ಷದಷ್ಟು ಜನರು ದುಡ್ಡು ಕಳೆದುಕೊಂಡಿರಬಹುದೆಂದು ಅಂದಾಜಿಸಲಾಗುತ್ತಿದೆ.ಆದರೆ ವಿಷಯ ಅದಲ್ಲ. ಈ ಮೋಸಗಾರ ಕಂಪನಿಯಲ್ಲಿ ಹಣ ಹೂಡಿದವರ ಪಟ್ಟಿಯನ್ನು ನೋಡಲಾಗಿ ಅಲ್ಲಿ ಅನಕ್ಷರಸ್ಥರಿಗಿಂತ ವಿದ್ಯಾವಂತರ ಸಂಖ್ಯೆಯೇ ಜಾಸ್ತಿ­ಯಿದ್ದಂತಿದೆ. ಮೋಸ ಹೋದವರ ಪೈಕಿ ಇಂಜಿನಿಯರುಗಳು, ಲಾಯರ್‌ಗಳು, ವೈದ್ಯರ ಸಂಖ್ಯೆಗೂ ಕೊರತೆ ಏನಿಲ್ಲ.

ಮೋಸ ಹೋದವರೆಲ್ಲ ಬುದ್ಧಿ ವಂತರೇ ಎಲ್ಲವನ್ನು ಬಲ್ಲ ಅಕ್ಷರಸ್ಥರೇ ಹೀಗೆ ಹಣದ ಆಮಿಷಕ್ಕೊಳಗಾಗುವುದು ದೊಡ್ಡ ದುರಂತವೇ ಸರಿ. ಇದೇ ಯೋಜನೆಯನ್ನು ಒಮ್ಮೆ ಸುಮ್ಮನೇ ವಿಶ್ಲೇಷಿಸಿ ನೋಡಿ. ಕಂಪನಿಯವನು ತಿಂಗಳಿಗೆ ಹತ್ತು ಎಂದರೆ ವಾರ್ಷಿಕವಾಗಿ ನೂರಿಪ್ಪತ್ತು ಪ್ರತಿಶತದಷ್ಟು ಭಾರಿ ಲಾಭ ಕೊಡುತ್ತೇನೆಂದಾಗ ನಿಜಕ್ಕೂ ಇದು ಪ್ರಾಯೋಗಿಕವಾಗಿ ಸಾಧ್ಯವಾ..? ಸಾಧ್ಯವೆಂದಾದರೆ ಕಂಪನಿಯ ಲಾಭದ ಮೂಲವೆಲ್ಲಿದೆ..? ಎನ್ನುವಂಥಹ ಪ್ರಶ್ನೆಗಳು ವಿದ್ಯಾವಂತರ ಮನಸ್ಸಿನಲ್ಲಿಯೂ ಮೂಡದೇ ಹೋಗಿದ್ದು ನಿಜಕ್ಕೂ ದುರದೃಷ್ಟಕರ.

Advertisement

ಯಾವುದೇ ಹೊಸ ಯೋಜನೆಯಲ್ಲಿ ಹಣ ತೊಡಗಿಸು­ವುದಕ್ಕೂ ಮೊದಲು ಯೋಜನೆಯ ಪೂರ್ತಿ ಮಾಹಿತಿಯನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕ. ಕೇವಲ ಯೋಜನೆಯ ಮಾಹಿತಿಯಲ್ಲದೇ ಯೋಜನೆಯನ್ನು ಹೊರತಂದ ಕಂಪನಿಯ ಹೆಸರು, ಕಂಪನಿಯ ಆರ್ಥಿಕ ಸ್ಥಿತಿಗತಿಗಳ ಹಿನ್ನೆಲೆಯನ್ನೂ ಸಾಧ್ಯವಾದಷ್ಟು ತಿಳಿದುಕೊಳ್ಳುವುದು ಉತ್ತಮ. ಸಧ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಉಳಿತಾಯ ಯೋಜನೆಗಳ ಮಟ್ಟಿಗೆ ಹೇಳುವುದಾದರೆ ಸರಿಸುಮಾರು ಆರರಿಂದ ಎಂಟು ಪ್ರತಿಶತದಷ್ಟು ಬಡ್ಡಿದರ ಅಪೇಕ್ಷಾರ್ಹ.

ಸಹಕಾರಿ ಬ್ಯಾಂಕುಗಳಲ್ಲಿನ ಯೋಜನೆಗಳಲ್ಲಿ ಹತ್ತರಿಂದ ಹನ್ನೆರಡು ಪ್ರತಿಶತದಷ್ಟು ಬಡ್ಡಿದರ ಸಿಗಬಹುದಾ­ದರೂ ಅವುಗಳ ಆರ್ಥಿಕ ಧೃಡತೆಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ದೀರ್ಘಾವಧಿಯ ಹಣ ಹೂಡಿಕೆ ಅಪಾಯಕಾರಿಯಾದೀತು. ಅಂಚೆ ಕಚೇರಿಯ ಯೋಜನೆಗಳಲ್ಲಿಯೂ ಹೂಡಿಕೆಯ ಮೇಲೆ ಏಳರಿಂದ ಎಂಟು ಪ್ರತಿಶತದವರೆಗಿನ ವಾರ್ಷಿಕ ಬಡ್ಡಿದರ ಪಡೆಯಲು ತೊಂದರೆ ಇಲ್ಲ.

ಹೆಣ್ಣುಮಕ್ಕಳ ಭವಿಷ್ಯದ ದೃಷ್ಟಿಯಿಂದ ಹೊರತಂದಿರುವ ಸುಕನ್ಯಾ ಸಮೃದ್ಧಿ ಯೋಜನೆಯಡಿ, ವಾರ್ಷಿಕ ಎಂಟು ಪ್ರತಿಶತಕ್ಕಿಂತ ಕೊಂಚ ಹೆಚ್ಚು ಬಡ್ಡಿದರದ ನಿರೀಕ್ಷೆ­ಯಿದೆ. ಇದಲ್ಲದೆ ಬ್ಯಾಂಕು, ಅಂಚೆ ಕಚೇರಿಗಳ ಯೋಜನೆಯಡಿ ಹಿರಿಯ ನಾಗರೀಕರಿಗೆ, ಜನ ಸಾಮಾನ್ಯರಿಗಿಂತ ಅರ್ಧ ಪರ್ಸೆಂಟಿನಷ್ಟು ಹೆಚ್ಚು ಬಡ್ಡಿದರವನ್ನೊದಗಿಸುವ ಸೌಲಭ್ಯಗಳಿವೆ ಎನ್ನುವುದು ಗಮನಾರ್ಹ.

ಹಲವು ಯೋಜನೆಗಳಿವೆ
ಆರ್ಥಿಕ ಅಪಾಯಗಳ ಬಗ್ಗೆ ತಲೆಕೆಡಿಸಿಕೊಳ್ಳುವ, ಸುರಕ್ಷತೆಗೆ ಹೆಚ್ಚು ಒತ್ತುಕೊಡುವ, ಕಡಿಮೆಯಾದರೂ ಸರಿ ಒಂದು ಪೂರ್ವ ನಿರ್ಧಾರಿತ ಮೊತ್ತವನ್ನು ಸಮೀಪ ಭವಿಷ್ಯದಲ್ಲಿ ನಿರೀಕ್ಷಿಸುವವರಿಗೆ ಮೇಲಿನ ಯೋಜನೆಗಳು ಪ್ರಯೋಜನಕಾರಿ­ಯಾಗಬಲ್ಲವು. ಉಳಿದಂತೆ, ಹೂಡಿಕೆಯಲ್ಲಿ ಕೊಂಚ ರಿಸ್ಕ್ ತೆಗೆದುಕೊಂಡು ಹೆಚ್ಚಿನ ಲಾಭ ನಿರೀಕ್ಷಿಸುವವರಿಗೆ ಶೇರು ಮಾರ್ಕೆಟ್‌ನ ನೇರ ಹೂಡಿಕೆಗಳು, ಮ್ಯೂಚುವಲ್ ಫ‌ಂಡ್ಸ್‌ನ ಯೋಜನೆಗಳು, ಚಿನ್ನದ ಮೇಲಿನ ಹೂಡಿಕೆಯಂಥ ತರಹೇವಾರಿ ಯೋಜನೆಗಳಿವೆ.

ನೇರ ಹೂಡಿಕೆಯಲ್ಲಿ ಲಾಭ ಹೆಚ್ಚಿರಬಹು­ದಾದರೂ ಮಾರು­ಕಟ್ಟೆಯ ಏರಿಳಿತಕ್ಕನುಗುಣವಾಗಿ ಅಪಾರ ನಷ್ಟದ ಅಪಾಯವೂ ಇಲ್ಲದಿಲ್ಲ. ಚಿನ್ನದ ಹೂಡಿಕೆಯ ಬಗ್ಗೆ ಹೇಳುವುದಾದರೆ ಮೇಲ್ನೋಟಕ್ಕೆ ಕಾಣುವಷ್ಟು ಆಕರ್ಷಕ ಲಾಭ ಅದಕ್ಕಿಲ್ಲವೆನ್ನು ವುದು ತಜ್ಞರ ಅಭಿಮತ. ಕಳೆದ ದಶಕದಲ್ಲಿ ಚಿನ್ನದ ಹೂಡಿಕೆಯ ಮೇಲಿನ ಸರಾಸರಿ ಲಾಭ ಆರು ಪ್ರತಿಶತಕ್ಕಿಂತಲೂ ಕಡಿಮೆ. ಇವುಗಳಿಗೆ ಹೋಲಿಸಿದರೆ ಮ್ಯೂಚವಲ್ ಫ‌ಂಡ್ಸ್‌ನ ಹೂಡಿಕೆ ಹೆಚ್ಚು ಲಾಭದಾಯಕವೆನ್ನುವುದು ಬಲ್ಲವರ ಅಂಬೋಣ.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಮ್ಯೂಚವಲ್ ಫ‌ಂಡ್ಸ್‌ ಹೂಡಿಕೆಯ ಸರಾಸರಿ ಲಾಭಾಂಶ ಶೇಕಡಾ ಹದಿನೈದಕ್ಕಿಂತಲೂ ಹೆಚ್ಚು ಎನ್ನುವುದು ಪರಿಣಿತರ ಅಭಿಪ್ರಾಯ. ಈ ಎಲ್ಲ ಯೋಜನೆಗಳು ಅಲ್ಪಾವಧಿಯ ಹೂಡಿಕೆಗೂ ಲಭ್ಯವಿವೆಯಾ­ದರೂ ಅಲ್ಪಾವಧಿಯಲ್ಲಿ ಮಾರುಕಟ್ಟೆಗಳ ಏರಿಳಿತ ಹೆಚ್ಚಿರುವು­ದರಿಂದ ನಷ್ಟದ ಸಾಧ್ಯತೆಗಳು ಇಲ್ಲದಿಲ್ಲ. ದೀರ್ಘ‌ವಧಿಯ ಹೂಡಿಕೆಯಲ್ಲಿ ಮಾತ್ರ ಅದ್ಭುತ ಲಾಭವನ್ನು ತಂದುಕೊಡಬಲ್ಲ ಯೋಜನೆಗಳಿವು ಎಂಬುದನ್ನು ನೆನಪಿಟ್ಟುಕೊಂಡರೆ ಒಳ್ಳೆಯದು.

ತಕ್ಷಣ ನಂಬಬಾರದು
ಪ್ರಸ್ತುತ ಯಾವುದೇ ಕಂಪನಿ ಮಾರುಕಟ್ಟೆಯಲ್ಲಿನ ಉಳಿದೆಲ್ಲ ಯೋಜನೆಗಳಿಗಿಂತ ಕೊಂಚ ಹೆಚ್ಚೇ ಎನ್ನುವಷ್ಟು ಮೊತ್ತದ ಲಾಭವನ್ನು ನೀಡುವುದಾಗಿ ಭರವಸೆಯನ್ನಿತ್ತರೆ ಅಂಥ ಕಂಪನಿಯ ಉದ್ದೇಶದೆಡೆಗೆ ಸಣ್ಣದೊಂದು ಅನುಮಾನ ನಿಮಗೆ ಮೂಡಲೇಬೇಕು. ದಶಕಗಳಿಂದ ಹಣಕಾಸಿನ ಕ್ಷೇತ್ರದಲ್ಲಿರುವ, ಸರಕಾರವೇ ಬೆನ್ನೆಲುಬಾಗಿ ನಿಂತಿರುವ ಕಂಪನಿಗಳಿಗೂ ಕೊಡಲಾಗದಷ್ಟು ಹೂಡಿಕೆಯ ಲಾಭವನ್ನು ಕಂಡುಕೇಳರಿಯದ ಕಂಪನಿಯಿಂದ ಕೊಡಲು ಸಾಧ್ಯವೇ ಎನ್ನುವ ಸಣ್ಣ ತರ್ಕವೊಂದು ನಿಮ್ಮಲ್ಲಿ ಅರಳಬೇಕು. ಇಲ್ಲವಾದರೆ ನಿಮ್ಮ ಕಷ್ಟಾರ್ಜಿತ ಕ್ಷಣಮಾತ್ರದಲ್ಲಿ ಕಂಡವರ ಪಾಲಾದೀತು ಎಚ್ಚರ.

— ಗುರುರಾಜ ಕೊಡ್ಕಣಿ ಯಲ್ಲಾಪುರ

Advertisement

Udayavani is now on Telegram. Click here to join our channel and stay updated with the latest news.

Next