ಧಾರವಾಡ: ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಜನ ಕಲಾವಿದರಿದ್ದು, ಅವರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಸಮಾಜ ಮಾಡಬೇಕಿದೆ ಎಂದು ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಹೇಳಿದರು.
ಕವಿಸಂನಲ್ಲಿ ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ಅವರ 50ನೇ ಜನ್ಮದಿನದ ಪ್ರಯುಕ್ತ ಕಲಾ ಸಂಗಮ ಹಾಗೂ ಕಲ್ಮೇಶ್ವರ ಕಲಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಕಷ್ಟು ಜನರಲ್ಲಿ ಅದ್ಭುತ ಕಲೆಗಳಿರುತ್ತವೆ. ಆದರೆ, ಅವುಗಳಿಗೆ ಪ್ರೋತ್ಸಾಹ ಸಿಗದೇ ಸ್ಥಳೀಯವಾಗಿ ಅವರ ಕಲೆ ಕಮರಿ ಹೋಗುತ್ತದೆ. ಸಮಾಜ ಅವರಿಗೆ ಅವಕಾಶ ನೀಡುವ ಮೂಲಕ ಪ್ರತಿಭಾ ಪುರಸ್ಕಾರ ಮಾಡಬೇಕು. ಜಿಲ್ಲೆ, ರಾಜ್ಯ, ಹೊರ ರಾಜ್ಯ ಹಾಗೂ ಹೊರ ದೇಶಗಳಲ್ಲಿ ಕಲೆಗಳ ಪ್ರದರ್ಶನ ಆಗಬೇಕು ಎಂದರು.
ಉತ್ತರ ಕರ್ನಾಟಕದ ಭಾಷೆಯಲ್ಲಿಯೇ ಕಲೆ ಇದೆ. ಅದನ್ನು ಸರಿಯಾಗಿ ಬಳಸಿಕೊಂಡರೆ ಎಲ್ಲರೂ ಅತ್ಯುತ್ತಮ ಕಲಾವಿದರಾಗಬಹುದು. ಮಹಾದೇವ ಸತ್ತಿಗೇರಿ ಸೇರಿದಂತೆ ಬಹುತೇಕ ಹಾಸ್ಯ ಕಲಾವಿದರು ಉತ್ತರ ಕರ್ನಾಟಕದವರೇ ಎನ್ನುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಮಹಾದೇವ ಸತ್ತಿಗೇರಿ ಜೊತೆಗೆ ಅವರ ತಾಯಿ ಸುಮಿತ್ರ ಮತ್ತು ಪತ್ನಿ ಸುಮಂಗಲಾ ಅವರನ್ನು ಸನ್ಮಾನಿಸಲಾಯಿತು. ಕವಿಸಂ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ, ಸವದತ್ತಿ ಎಪಿಎಂಸಿ ಉಪಾಧ್ಯಕ್ಷ ರಾಮಚಂದ್ರ ಶೆಟ್ಟರ, ಹೋಟೆಲ್ ಉದ್ದಿಮೆದಾರ ಸದದೇವ ನಿಗದಿ ಮಾತನಾಡಿದರು. ಕಿರಣ ಸಿದ್ದಾಪೂರ, ನಾಗರಾಜ್ ಇದ್ದರು. ಪಾಲಿಕೆ ಮಾಜಿ ಸದಸ್ಯ ಸುಭಾಸ ಶಿಂಧೆ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ಮಹಾಂತೇಶ ಹಡಪದ, ಮಲ್ಲಪ್ಪ ಹೊಂಗಲ ಹಾಗೂ ಶರಣು ಯಮನೂರ ಹಾಸ್ಯ ಚಟಾಕಿಗಳನ್ನು ಹಾರಿಸಿದರು. ಮಾರ್ತಾಂಡಪ್ಪ ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾ ಸಂಗಮದ ಪ್ರಭು ಹಂಚಿನಾಳ ನಿರೂಪಿಸಿದರು. ಕಲ್ಮೇಶ್ವರ ಕಲಾ ಸಂಸ್ಥೆಯ ವೀರನಗೌಡ ಸಿದ್ದಾಪುರ ವಂದಿಸಿದರು.