ಬಿ.ಜಯಶ್ರೀ…
ರಂಗಭೂಮಿಯಲ್ಲಷ್ಟೇ ಅಲ್ಲ, ಚಿತ್ರರಂಗದಲ್ಲೂ ಬಹುದೊಡ್ಡ ಹೆಸರಿದು. ಈ ಎರಡು ರಂಗದಲ್ಲೂ ತಮ್ಮದೇ ಛಾಪು ಮೂಡಿಸಿರುವ
ಹಿರಿಯ ಕಲಾವಿದೆ ಬಿ.ಜಯಶ್ರೀ ಬಹಳ ಗ್ಯಾಪ್ ಬಳಿಕ ಹೀಗೊಂದು ಚಿತ್ರದಲ್ಲಿ ನಟಿಸಿದ್ದಾರೆ. ಅದು ಚಿತ್ರದ ಪ್ರಮುಖ ಪಾತ್ರ ಅನ್ನೋದು ವಿಶೇಷ. ಕೇವಲ ನಟನೆ ಮಾತ್ರವಲ್ಲ, ಅವರು ಚಿತ್ರದಲ್ಲಿ ಎರಡು ಹಾಡುಗಳಿಗೂ ಧ್ವನಿಯಾಗಿದ್ದಾರೆ. ಹೌದು, ಬಿ.ಜಯಶ್ರೀ ಸಿನಿಮಾಗಳಲ್ಲಿ ಕಾಣಿಸಿಕೊಳ್ಳೋದು ಅಪರೂಪ. ಹಾಗೆ ಕಾಣಿಸಿಕೊಳ್ಳಬೇಕಾದರೆ, ಅವರಿಗೆ ಮೊದಲು ಕಥೆ, ಪಾತ್ರ ಮತ್ತು ಚಿತ್ರತಂಡ ಇಷ್ಟವಾಗಬೇಕು. ಆ ಎಲ್ಲಾ ಗುಣಗಳು ಇದ್ದ ಕಾರಣ, ಅವರೀಗ “ಇತ್ಯರ್ಥ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ ಎ.ಜಿ.ಶೇಷಾದ್ರಿ ನಿರ್ದೇಶಕರು. ಈಗಾಗಲೇ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ ಅನುಭವ ಎ.ಜಿ ಶೇಷಾದ್ರಿ ಅವರಿಗಿದೆ. ಇನ್ನು, ಹಲವಾರು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದು, ಸಿನಿಮಾ ಪ್ಯಾಷನ್ ಇಟ್ಟುಕೊಂಡಿರುವ ಎನ್.ಎಲ್ ಎನ್ ಮೂರ್ತಿ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರದಲ್ಲಿ
ಬಿ.ಜಯಶ್ರೀ ಅವರದು ಇಡೀ ಕಥೆಯನ್ನು ಕುತೂಹಲ ಘಟ್ಟಕ್ಕೆ ಕೊಂಡೊಯ್ಯುವ ಪಾತ್ರ ಮಾಡಿದ್ದಾರೆ ಎಂಬುದು ನಿರ್ದೇಶಕ ಎ.ಜಿ.ಶೇಷಾದ್ರಿ ಅವರ ಮಾತು. ಹಾಗೆ ಹೇಳುವುದಾದರೆ, ಚಿತ್ರದ ಕಥೆಗೆ ಮುಖ್ಯ ತಿರುವು ಸೃಷ್ಟಿಸುವ ಪಾತ್ರವಂತೆ. ಅವರಿಲ್ಲಿ ತಾಯಿಯಾಗಿಯೂ, ಆತಿಥ್ಯ ಕೊಡುವ ವೃದ್ಧೆಯಾಗಿಯೂ, ಯಾರೇ ಕಾಲು, ಕೈ ಮುರಿದುಕೊಂಡರೂ ಆ ಊರಲ್ಲಿ ನಾಟಿ ಔಷಧಿ ಕೊಡುವ ಮೂಲಕ ಗುಣಪಡಿಸುವ ಗುಣವಂತೆಯಾಗಿಯೂ ಕಾಣಿಸಿಕೊಂಡಿದ್ದಾರಂತೆ. ಚಿತ್ರದ ಕಥೆ ಸಾಗುತ್ತಲೇ ಗಾಢವಾಗಿ ಆವರಿಸಿಕೊಳ್ಳುವ ಪಾತ್ರವಾಗಿರುವುದರಿಂದ, ಅವರು ಸಾಕಷ್ಟು ಸಮಯ ಪಡೆದೇ ಚಿತ್ರದಲ್ಲಿ ತೊಡಗಿಸಿಕೊಂಡಿದ್ದರು ಎಂಬುದು ನಿರ್ದೇಶಕರ ಮಾತು.
ಇನ್ನು, ಬಿ.ಜಯಶ್ರೀ ಅವರು ಅದ್ಭುತ ಹಾಡುಗಾತಿ. “ಇತ್ಯರ್ಥ’ ಚಿತ್ರದಲ್ಲಿ ಅಭಿನಯದ ಜೊತೆ ಎರಡು ಹಾಡುಗಳಿಗೂ ಧ್ವನಿಯಾಗಿದ್ದಾರೆ. ಅವರ ಅದ್ಭುತ ನಟನೆಯಷ್ಟೇ, ಹಾಡನ್ನೂ ತಲೆದೂಗುವಂತೆ ಹಾಡಿದ್ದಾರೆ. ಅವರು ಹಾಡಿರುವ ಎರಡು ಹಾಡುಗಳು ಸಹ ಹೊಸ ರೀತಿಯಲ್ಲಿ ಮೂಡಿಬಂದಿವೆ. ಕ್ಲೈಮ್ಯಾಕ್ಸ್ ಹಂತದಲ್ಲಿ ಬರುವ “ಶಂಭೋ ಹರ ಶಿವ ಶಿವ… ಶಂಭೋ ಹರ…’ ಎಂಬ ಹಾಡು ಹಾಡಿರುವುದಲ್ಲದೆ, ಆ ಹಾಡಲ್ಲಿ ಅವರೇ ಕಾಣಿಸಿಕೊಂಡಿದ್ದಾರೆ ಎಂದು ಹೇಳುವ ನಿರ್ದೇಶಕರು, ಆ ಹಾಡು ಬಹಳ ವರ್ಷಗಳ ಕಾಲ ಗುನುಗುವಂತಹ ಹಾಡಷ್ಟೇ ಅಲ್ಲ, ಹಲವು ರಿಯಾಲಿಟಿ ಶೋ, ಡ್ಯಾನ್ಸ್ ಸ್ಪರ್ಧೆಗಳಲ್ಲೂ ಫೇವರೇಟ್ ಚಾಯ್ಸ ಆಗಿ ಉಳಿದುಕೊಳ್ಳುವಂತಹ ಹಾಡು ಎನ್ನುತ್ತಾರೆ.
ಬಿ.ಜಯಶ್ರೀ ಅವರು “ಇತ್ಯರ್ಥ’ ಚಿತ್ರ ಒಪ್ಪಿಕೊಂಡಾಗ ಅವರು ರಾಜ್ಯ ಸಭೆ ಸದಸ್ಯೆಯಾಗಿದ್ದರಂತೆ. ಬಿಝಿ ನಡುವೆಯೂ, ಕಥೆ, ಪಾತ್ರ ಇಷ್ಟವಾಗಿದ್ದರಿಂದಲೇ ಅವರು ಡೇಟ್ ಕೊಟ್ಟು ಕೆಲಸ ಮಾಡಿದ್ದಾರೆ. ಅವರ ಭಾಗದ ಚಿತ್ರೀಕರಣ ಸುಮಾರು 10 ದಿನಗಳ ಕಾಲ ನಡೆದಿದ್ದು, ಚಿತ್ರದ ದ್ವಿತಿಯಾರ್ಧ ಅವರೇ ಜೀವನಾಡಿ ಎನ್ನುವ ನಿರ್ದೇಶಕರು, ಸದ್ಯಕ್ಕೆ “ಇತ್ಯರ್ಥ’ ಚಿತ್ರ ಈಗ ಸೆನ್ಸಾರ್‌ಗೆ ಹೋಗಲು ಸಜ್ಜಾಗುತ್ತಿದೆ. ಆ ಬಳಿಕ ಬಿಡುಗಡೆಯಾಗಲಿದೆ. ಇದೊಂದು ರೊಮ್ಯಾನ್ಸ್, ಥ್ರಿಲ್ಲರ್, ಹಾರರ್, ಸಸ್ಪೆನ್ಸ್, ಕಾಮಿಡಿ, ಸೆಂಟಿಮೆಂಟ್, ಎಮೋಷನಲ್ ಹೊಂದಿರುವ ಚಿತ್ರ. ಚಿತ್ರದಲ್ಲಿ ಮೋಹನ್ ಮತ್ತು ನವೀನ್ ಕೃಷ್ಣ ನಾಯಕರಾದರೆ, ಮುಂಬೈ ಮೂಲದ ಖುಷಿ ಮುಖರ್ಜಿ ನಾಯಕಿಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ರಮೇಶ್ ಪಂಡಿತ್, ಶ್ರೀನಿವಾಸ ಪ್ರಭು, ಅರವಿಂದ ರಾವ್, “ಬೆನಕ’ ಪವನ್ ಇತರರು ನಟಿಸಿದ್ದಾರೆ. ಮೋಹನ್ ಇಲ್ಲಿ ನಟನೆ ಜೊತೆ ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದಾರೆ. ಹಿರಿಯ ಛಾಯಾಗ್ರಾಹಕ ಡಿ.ಪ್ರಸಾದ್ ಬಾಬು ಛಾಯಾಗ್ರಹಣ ಮಾಡಿದ್ದಾರೆ. ಗೌತಮ್ ಶ್ರೀವತ್ಸ ಆರು ಹಾಡುಗಳಿಗೆ ಸಂಗೀತ ನೀಡಿದ್ದಾರೆ.