ಚಾಮರಾಜನಗರ: ಮೌಲ್ಯವರ್ಧಿತ ಉತ್ಪನ್ನಗಳನ್ನು ಬೆಳೆಯಲು ಮುಂದಾದರೆ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಜಿಲ್ಲಾ ರೈತ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಹೊನ್ನೂರು ಪ್ರಕಾಶ್ ಹೇಳಿದರು.
ತಾಲೂಕಿನ ಹೊಂಡರಬಾಳುದಲ್ಲಿರುವ ಪ್ರೊ. ಎಂಡಿಎನ್ ಸ್ಮಾರಕ ಅಮೃತಭೂಮಿಯಲ್ಲಿ ಜಿಲ್ಲಾ ರೈತ ಸಂಘದಿಂದ ನಡೆದ ವಿಶ್ವ ರೈತ ನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ 84ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಮಾತನಾಡಿದ ಅವರು, ಇಂದು ಭಾರತದ ದೆಹಲಿ ಸೇರಿದಂತೆ ಆಸ್ಟ್ರೇಲಿಯಾ, ಕೆನಡಾದೇಶಗಳಲ್ಲಿ ಕೆಲವು ಕಂಪೆನಿಗಳು ನಾವು ಉಸಿರಾಡುವ ಆಮ್ಲಜನಕವನ್ನು ಮಾರಾಟ ಮಾಡುತ್ತಿವೆ. ಇದನ್ನು ಪ್ರೊ.ಎಂ.ಡಿ.ಎನ್. ಅನೇಕ ಬಾರಿ ಒತ್ತಿ ಹೇಳುತ್ತಿದ್ದರು. ಕುಡಿಯುವ ನೀರಿಗೂ ದುಡ್ಡು ಕೊಡಬೇಕಾಗುತ್ತದೆ ಎಂಬ ಅವರ ಮಾತು ಆಗಲೇ ನಿಜವಾಗಿದೆ. ಈ ಹಿನ್ನೆಲೆಯಲ್ಲಿ ಪ್ರೊ.ಎಂಡಿಎನ್ ಅವರು ಕಂಡ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎನ್ನುವ ಕನಸನ್ನು ನನಸು ಮಾಡಬೇಕಿದೆ. ಯಾರೇ ಆದರೂ ತಮ್ಮಲ್ಲಿನ ಭಿನ್ನಾಭಿಪ್ರಾಯ ಮರೆತು ಸಂಘಟನೆ ಮಾಡಲು ಮುಂದಾಗಬೇಕು ಎಂದು ಹೇಳಿದರು.
ಬೆಳೆಗೆ ಸಮರ್ಪಕ ಬೆಲೆ ಸಿಗದೇ ಕಂಗಾಲು: ಮೌಲ್ಯವರ್ಧಿತ ಉತ್ಪನ್ನಗಳನ್ನು ಬೆಳೆಯಲು ಮುಂದಾದರೆ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು. ಇಂದಿನ ದಿನಗಳಲ್ಲಿ ನಮ್ಮ ರೈತರು ಏಕ ಬೆಳೆಗೆ ಒಗ್ಗಿಕೊಂ ಡಿರುವ ಕಾರಣ ಬೆಳೆದ ಬೆಳೆಗೆ ಸಮರ್ಪಕ ಬೆಲೆ ಸಿಗದೇ ಕಂಗಾಲಾಗಿ ಆತ್ಮಹತ್ಯೆಗೆ ಈಡಾಗುವ ಸಂದರ್ಭವನ್ನು ತಂದುಕೊಂಡಿದ್ದಾರೆ. ಇದರಿಂದ ಪಾರಾಗಬೇಕಾದರೆ ಮೌಲ್ಯವರ್ಧಿತ ಉತ್ಪನ್ನಗಳಾದ ಸಾವಯವದಿಂದ ತಯಾರಾದ ಬೆಲ್ಲ, ಹಾಲಿನ ಉತ್ಪನ್ನಗಳನ್ನು ತಯಾರಿಸುಬೇಕು. ಸೊಪ್ಪಿನ ಬೆಳೆಗಳನ್ನು ಬೆಳೆಯಬೇಕು, ಅರ್ಧಎಕರೆಯಲ್ಲಿ 10 ಲಕ್ಷ ರೂ.ಗಳವರೆಗೂ ಸಂಪಾದಿಸುವ ಅವಕಾಶವಿದೆ ಎಂದು ತಿಳಿಸಿದರು.
ಸಾವಯವ ಕೃಷಿಕರ ಸಂಘ ಸ್ಥಾಪನೆಗೆ ಕ್ರಮ: ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಮಾತನಡಿ, ಕೇಂದ್ರ ಸರ್ಕಾರ ಬೀಜವಿಧೇಯಕ ಮಂಡನೆ ಮಾಡಲು ಮುಂದಾಗಿದ್ದು, ಇದು ಜಾರಿಯಾದರೆ ರೈತರು ವಿದೇಶಿ ಕಂಪನಿಗಳ ಮುಂದೆ ಬೀಜಕ್ಕಾಗಿ ಕೈಒಡ್ಡಿ ನಿಲ್ಲುವ ಪರಿಸ್ಥಿತಿ ಉಂಟಾಗಲಿದೆ. ಇದರ ವಿರುದ್ಧ ಧ್ವನಿ ಎತ್ತಬೇಕಾದರೆ ರೈತ ಸಂಘಗಳು ಸಂಘಟನಾ ಮನೋಭಾವ ಪ್ರದರ್ಶನ ಮಾಡಬೇಕು. ಅಲ್ಲದೆ, ಜಿಲ್ಲೆಯ ಹಲವೆಡೆ ಸಾವಯವ ಕೃಷಿಕರ ಸಂಘಗಳ ಸ್ಥಾಪನೆಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೈತ ಸಂಘದ ಕಾರ್ಯಕರ್ತರು ಪ್ರೊ.ಎಂಡಿಎನ್ ಅವರನ್ನು ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಈ ವೇಳೆ ‘ವಿಷಮುಕ್ತ ಚಾಮರಾಜನಗರ’ ಘೋಷಣೆ ಮಾಡಲು ತೀರ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಟೊಮೆಟೋ, ಬದನೆ, ಮೆಣಸಿನಕಾಯಿ ಹೊಸ ತಳಿಗಳ ಪ್ರದರ್ಶನ ಜನರ ಗಮನಸೆಳೆಯಿತು.
ರೈತಸಂಘದ ಪದಾಧಿಕಾರಿಗಳಾದ ಹೊನ್ನೂರು ಬಸವಣ್ಣ, ಅಂಬಳೆ ಮಹದೇವಸ್ವಾಮಿ, ಮಾಡ್ರಳ್ಳಿ ಮಹದೇವಪ್ಪ, ಗುಂಡ್ಲುಪೇಟೆ ಸಂಪತ್, ಹೆಗ್ಗವಾಡಿಪುರ ಮಹೇಶ್ ಕುಮಾರ್ ಸೇರಿದಂತೆ ವಿವಿಧ ಗ್ರಾಮಗಳ ರೈತರು ಹಾಜರಿದ್ದರು.