Advertisement

ಚೌತಿ ವೇಳೆ ಮೈತುಂಬಾ ಇರಲಿ ಎಚ್ಚರ

10:29 PM Sep 06, 2021 | Team Udayavani |

ಕೊರೊನಾ ಮೂರನೇ ಅಲೆ ಎಚ್ಚರಿಕೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಅಳೆದು ತೂಗಿ ಗಣೇಶೋತ್ಸವಕ್ಕೆ ಒಪ್ಪಿಗೆ ನೀಡಿದೆ. ಈ ಸಂದರ್ಭದಲ್ಲಿ ಕೆಲವೊಂದು ಷರತ್ತುಗಳನ್ನು ವಿಧಿಸಿ, ಇವುಗಳನ್ನು ಪಾಲಿಸಲೇಬೇಕು ಎಂಬ ನಿಯಮಗಳನ್ನೂ ಹಾಕಿದೆ. ಒಂದು ಲೆಕ್ಕಾಚಾರದಲ್ಲಿ ಗಣೇಶೋತ್ಸವಕ್ಕೆ ಒಪ್ಪಿಗೆ ಸಿಕ್ಕಿದ್ದು, ಉತ್ತಮವಾದ ನಿರ್ಧಾರವೇ ಸರಿ.

Advertisement

ಕೊರೊನಾ ಬಂದ ಮೇಲೆ ಜನ, ದೈಹಿಕವಾಗಿಯಷ್ಟೇ ಅಲ್ಲದೇ ಮಾನಸಿಕವಾಗಿಯೂ ನಲುಗಿದ್ದಾರೆ. ಇಂಥ ಸಂದರ್ಭದಲ್ಲಿ ಹಬ್ಬ-ಹರಿದಿನಗಳು ಒಂದಷ್ಟು ನೆಮ್ಮದಿ ನೀಡಬಹುದು. ಈ ಕಾರಣದಿಂದ ರಾಜ್ಯದ ಜನತೆಯ ಒತ್ತಾಸೆ ಮೇರೆಗೆ ಸರಕಾರ ಒಪ್ಪಿಗೆ ನೀಡಿದೆ. ಆದರೆ ಈ ಒಪ್ಪಿಗೆಯನ್ನು ದುರುಪಯೋಗಪಡಿಸಿಕೊಳ್ಳದೇ, ನಮ್ಮದೇ ಇತಿಮಿತಿಯೊಳಗೆ ಹಬ್ಬ ಮಾಡಬೇಕಾದದ್ದೂ ಜನರ ಕರ್ತವ್ಯವಾಗಿದೆ.

ಗಣೇಶೋತ್ಸವ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ವೇಳೆಯಲ್ಲಿ ಮೆರವಣಿಗೆ ಮಾಡದೇ ಇರುವುದು, ಡಿಜೆ ಅಥವಾ ಸಂಗೀತ, ನೃತ್ಯ, ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಕೊಡದೇ ಇರುವುದು ಒಂದು ಲೆಕ್ಕಾಚಾರದಲ್ಲಿ ಕೆಲವು ವರ್ಗದವರ ಅಸಮಾಧಾನಕ್ಕೂ ಕಾರಣವಾದರೂ, ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವೆಂಬಂಥ ಸ್ಥಿತಿ ಇದೆ. ಒಂದು ವೇಳೆ ಮೆರವಣಿಗೆಗಳಿಗೆ, ಸಂಗೀತ, ಡಿಜೆ ಕಾರ್ಯಕ್ರಮಗಳಿಗೆ ಒಪ್ಪಿಗೆ ಕೊಟ್ಟರೆ, ಜನ ಗುಂಪಾಗಿ ಸೇರಿ ಕೊರೊನಾ ಹರಡುವಿಕೆಗೆ ಕಾರಣವಾಗುತ್ತದೆ ಎಂಬ ಆತಂಕವೂ ಸರಕಾರಕ್ಕೆ ಇದೆ. ಹೀಗಾಗಿಯೇ ಇಂಥ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಿಲ್ಲ.

ಅದೇ ರೀತಿ ವಾರ್ಡ್‌ಗೊಂದು, ಹಳ್ಳಿಗಳಲ್ಲಿ ಸ್ಥಳೀಯಾಡಳಿತಗಳ ನಿರ್ಧಾರದಂತೆ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ. ಜತೆಗೆ ಮಹಾನಗರ ಪ್ರದೇಶಗಳಲ್ಲಿ ಗಣೇಶೋತ್ಸವ ಸಮಿತಿಗಳು ಪೂರ್ವಾನುಮತಿ ಪಡೆದಿರಬೇಕು ಎಂಬ ಷರತ್ತು ವಿಧಿಸಲಾಗಿದೆ. ಹೀಗಾಗಿ ಗಣೇಶ ಪ್ರತಿಷ್ಠಾಪನಾ ಸಮಿತಿಗಳು, ಯಾವುದೇ ನಿಯಮ ಮೀರದೇ ಸ್ಥಳೀಯಾಡಳಿತಗಳ ಅನುಮತಿ ಪಡೆದೇ ಗಣೇಶ ಪ್ರತಿಷ್ಠಾನೆಗೆ ಕ್ರಮ ತೆಗೆದುಕೊಳ್ಳಬೇಕು.

ಸದ್ಯ ರಾಜ್ಯದಲ್ಲಿ ಕೊರೊನಾ ಹತೋಟಿಯಲ್ಲಿದೆ. ಕೊರೊನಾ ಹೆಚ್ಚಾಗಿಲ್ಲ, ಹೀಗಾಗಿ ನಾವು ಹೇಗೆ ಬೇಕಾದರೂ ಹಬ್ಬ ಮಾಡುತ್ತೇವೆ ಎಂಬ ಹುಂಬತನ ಯಾರಲ್ಲೂ ಬರಬಾರದು. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಹೇಳಿದಂತೆ, ಕೊರೊನಾ ಮೂರನೇ ಅಲೆ ಮನೆ ಬಾಗಿಲಲ್ಲೇ ಇದೆ. ಅದು ಯಾವಾಗ ಬರುತ್ತದೆ ಎಂಬ ಖಚಿತತೆ ಇಲ್ಲ. ಒಂದು ವೇಳೆ ನಾವು ಮೈಮರೆತರೆ ಈಗಲೇ ಅದು ಮನೆ ಪ್ರವೇಶಿಸಬಹುದು. ಹೀಗಾಗಿ ನಾವು ಎಚ್ಚರಿಕೆಯಿಂದ ಇರಬೇಕಾದದ್ದು ಈ ಸಂದರ್ಭದಲ್ಲಿ ಅನಿವಾರ್ಯವೇ ಆಗಿದೆ.

Advertisement

ಗಣೇಶೋತ್ಸವಕ್ಕೆ ಒಪ್ಪಿಗೆ ಸಿಕ್ಕಿರುವುದರಿಂದ ಜನತೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬಹುದು. ಕೊರೊನಾ ನಿಯಮಗಳನ್ನು ಪಾಲಿಸಿಕೊಂಡು ಯಾವ ರೀತಿ ಹಬ್ಬ ಆಚರಿಸಿಕೊಳ್ಳಬಹುದು ಎಂಬ ಬಗ್ಗೆ ಗಣೇಶೋತ್ಸವ ಸಮಿತಿಗಳೂ ಚರ್ಚಿಸಿಕೊಂಡು ಹೆಜ್ಜೆ ಇಡಬಹುದು. ಇಲ್ಲಿ ಬದುಕು ಮತ್ತು ಕೊರೊನಾ ನಿಯಂತ್ರಣ ಎರಡೂ ನಮ್ಮ ಕೈಯಲ್ಲೇ ಇವೆ. ಇದನ್ನು ಅರಿತುಕೊಂಡೇ ಎಲ್ಲೂ ಮೈ ಮರೆಯಬಾರದು. ಒಂದು ವೇಳೆ ಈಗ ಮೈಮರೆತರೆ ಏನಾಗಬಹುದು ಎಂಬುದಕ್ಕೆ ಕೇರಳದ ಓಣಂ ಅನಂತರ ಆಗಿರುವ ಸ್ಥಿತಿಯೇ ನಮ್ಮ ಕಣ್ಮುಂದೆ ಇದೆ. ಹೀಗಾಗಿ ಮೈಮರೆಯದೇ ಹಬ್ಬ ಆಚರಿಸುವುದು ಮುಖ್ಯ.

Advertisement

Udayavani is now on Telegram. Click here to join our channel and stay updated with the latest news.

Next