ಇಲ್ಲಿ ಎಲ್ಲವೂ ಶಾಶ್ವತವಲ್ಲ. ಸದಾ ಸಮತ್ವದಲ್ಲಿರುವ ಗಣಿತವೂ ಅಲ್ಲ. ಬದುಕುವ ಭರವಸೆ ಇದ್ದರಷ್ಟೇ ಇಲ್ಲಿ ಗೆಲುವು ಸಾಧ್ಯ. ನಮ್ಮೊಳಗೆ ಆತ್ಮವಿಶ್ವಾಸದ ಬೆಂಕಿ ಜಾಗೃತವಾಗಿರದೇ ಹೋದ ಪಕ್ಷ ಇಲ್ಲಿ ಯಾವ ಸಾಧನೆಯೂ ಅಸಾಧ್ಯ. ಇನ್ನೂ ಸರಳವಾಗಿ ಹೇಳುವುದಾದರೆ ನಮ್ಮಲ್ಲಿ ನಾವು ನಂಬಿಕೆ ಹೊಂದಿದಲ್ಲಿ ಮಾತ್ರವೇ ನಿರೀಕ್ಷಿತ ಗುರಿ ನಮ್ಮದಾಗುವುದು ಸಾಧ್ಯ.
ಒಂದೂರಿನಲ್ಲಿ ಒಬ್ಬ ರೈತನಿದ್ದ. ಅವನಿಗೆ ಮೂವರು ಗಂಡು ಮಕ್ಕಳು. ಮಕ್ಕಳು ಬೆಳೆದು ವಿದ್ಯಾವಂತರಾಗುತ್ತಾರೆ. ಮದುವೆಯ ವಯಸ್ಸಿಗೂ ಬರುತ್ತಾರೆ.
ಮೂರು ಮಕ್ಕಳಿಗೂ ರೈತ ಮದುವೆಯನ್ನೂ ಮಾಡುತ್ತಾನೆ. ರೈತನಿಗೆ ತನ್ನ ಮೂವರು ಸೊಸೆಯಂದಿರಲ್ಲಿ ಹೆಚ್ಚು ಬುದ್ಧಿವಂತರು ಎಂದು ತಿಳಿದು, ಅವರಿಗೆ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿ ಕೊಡುವ ಆಸೆ. ಅದಕ್ಕಾಗಿ ಆತ ಒಂದು ಉಪಾಯವನ್ನು ಮಾಡುತ್ತಾನೆ.
ಒಂದು ದಿನ ರೈತ ತನ್ನ ಮೂವರು ಸೊಸೆಯರನ್ನು ಕೆರದು ಅವರ ಕೈಗೆ ಸಮ ಪ್ರಮಾಣದ ಭತ್ತದ ಕಾಳುಗಳನ್ನು ನೀಡುತ್ತಾನೆ ಮತ್ತು ತಾನು ಯಾತ್ರೆ ಮುಗಿಸಿ ಬರುವಲ್ಲಿಯವರೆಗೆ ಅದನ್ನು ಸಂರಕ್ಷಣೆ ಮಾಡುವಂತೆ ತಿಳಿಸುತ್ತಾನೆ.
ಮಾವ ಹೋದ ತತ್‌ಕ್ಷಣವೇ ಮೊದಲನೇ ಸೊಸೆ ಮಾವ ಕೇಳಿದಾಗ ಭತ್ತ ಚೀಲದಿಂದ ತೆಗೆದುಕೊಟ್ಟರಾಯಿತು ಎಂದುಕೊಂಡು ಕೊಟ್ಟ ಕಾಳುಗಳನ್ನು ತಿಂದು ಬಿಡುತ್ತಾಳೆ. ಇನ್ನು ಎರಡನೇ ಸೊಸೆ ಅದನ್ನು ಕಟ್ಟಿ ಜೋಪಾನವಾಗಿ ತೆಗೆದಿರಿಸುತ್ತಾಳೆ. ಆದರೆ ಮೂರನೆ ಸೊಸೆ ಭತ್ತದ ಕಾಳುಗಳನ್ನು ಬಿತ್ತಿ ಬಂದ ಪೈರುಗಳನ್ನು ತೆಗೆದಿರಿಸುತ್ತಾಳೆ. ಹೀಗೆ ಕೆಲವು ತಿಂಗಳುಗಳು ಕಳೆಯುತ್ತವೆ.
ಯಾತ್ರೆಗೆ ಹೋದ ಮಾವ ಹಿಂದಿರುಗಿ ಬಂದು ಕೊಟ್ಟ ಕಾಳುಗಳನ್ನು ಏನು ಮಾಡಿದಿರಿ ಎಂದು ಸೊಸೆಯಂದಿರಲ್ಲಿ ಪ್ರಶ್ನಿಸುತ್ತಾನೆ. ಅವರು ಅದನ್ನು ಬಳಕೆ ಮಾಡಿದ ರೀತಿಯನ್ನು ಕೇಳಿ ಕೊನೆಯ ಸೊಸೆಗೆ ಮನೆಯ ಜವಾಬ್ದಾರಿ ನೀಡುವುದು ಸೂಕ್ತ ಎಂಬ ತೀರ್ಮಾನಕ್ಕೆ ಬರುತ್ತಾನೆ.
ಈ ಕಥೆಯ ಸಾರವಿಷ್ಟೇ ಯಾವುದೋ ಒಂದು ಜವಾಬ್ದಾರಿಯನ್ನು ನಮ್ಮ ಹೆಗಲಿಗೇರಿಸಿದ ಪಕ್ಷದಲ್ಲಿ ನಾವದನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದರಲ್ಲಿಯೇ ನಾವು ನಿರೀಕ್ಷಿತ ಗುರಿಯನ್ನು ಹೇಗೆ ತಲುಪಬಹುದು ಎಂಬ ಅಂಶ ಅಡಗಿದೆ.
- ಭುವನಾಬಾಬು ಪುತ್ತೂರು