Advertisement

ನಿಯೋಜಿತ ಸಿಬ್ಬಂದಿಗೆ ಜವಾಬ್ದಾರಿಯಿರಲಿ: ಸೈಯಿದಾ

03:54 PM Jul 19, 2019 | Team Udayavani |

ಕೊಪ್ಪಳ: ಬೆಳೆ ಅಂದಾಜು ಸಮೀಕ್ಷೆ ಕಾರ್ಯಕ್ಕೆ ನೇಮಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಎಡಿಸಿ ಸೈಯಿದಾ ಅಯಿಷಾ ಬೆಳೆ ಕಟಾವು ಕಾರ್ಯಕರ್ತ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್ನಲ್ಲಿ ತಾಲೂಕು ಮಟ್ಟದ ಹಾಗೂ ಗ್ರಾಪಂ ಮಟ್ಟದ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಬೆಳೆ ಕಟಾವು ಪ್ರಯೋಗಗಳ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿರ್ಲಕ್ಷ್ಯ ಬೇಡ: ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಪಂರಾ ಇಲಾಖೆಗಳು ಹಂತ ಹಂತವಾಗಿ ಕಾರ್ಯನಿರ್ವಹಿಸುತ್ತಿವೆ. ಸಮೀಕ್ಷೆ ಕಾರ್ಯವು ರೈತರಿಗೆ ಬೆಳೆ ವಿಮೆ ಸೇರಿದಂತೆ ಸರ್ಕಾರದ ಇತರ ಯೋಜನೆಗಳಿಗೆ ಪೂರಕವಾಗಿರುವುದರಿಂದ ಈ ಕಾರ್ಯಕ್ಕೆ ನೇಮಿಸಿದ ಅಧಿಕಾರಿಗಳು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಕೃಷಿ ಇಲಾಖೆಯಿಂದ ಬಿಡುಗಡೆಯಾದ ತಂತ್ರಾಂಶ ಬಳಸಿಕೊಂಡು ವಿಮಾ ಅಧಿಕಾರಿಗಳೊಂದಿಗೆ ನಿಯಮಾನುಸಾರ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಯಾವುದೇ ನಿರ್ಲಕ್ಷ್ಯ ತೋರಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ: ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನ ಎಂ. ಶೇಖ್‌ ಮಾತನಾಡಿ, 2016-17ನೇ ಸಾಲಿನಿಂದ ತಂತ್ರಾಂಶ ಆಧಾರಿತ ಬೆಳೆ ಸಮೀಕ್ಷೆ ನಡೆಯುತ್ತಿದೆ. ಅಧಿಕಾರಿಗಳು ಈ ತಂತ್ರಾಂಶ ಕುರಿತು ಸಂಪೂರ್ಣ ತಿಳಿದು ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಬೆಳೆ ಸಮೀಕ್ಷೆಯ ಎಲ್ಲ ಹಂತದ ಪ್ರಕ್ರಿಯೆ ಕುರಿತು ತಂತ್ರಾಂಶದಲ್ಲಿ ಮಾಹಿತಿಯಿದೆ. ಅದರನುಸಾರ ಕಟಾವಿನ ವೇಳೆ ವಿವಿಧ ಹಂತಗಳ ಛಾಯಾಚಿತ್ರ ಮತ್ತು ವಿಡಿಯೋ ಮಾಡುವುದು ಕಡ್ಡಾಯ. ಒಂದೇ ತೆರನಾದ ಛಾಯಚಿತ್ರ ಇರದಂತೆ ಎಚ್ಚರ ವಹಿಸಿ. ಇದರಿಂದ ವಿಮಾ ಕಂಪನಿ ಆಕ್ಷೇಪಣೆ ನಿರ್ವಹಿಸಲು ಸಹಾಯಕವಾಗುತ್ತದೆ ಎಂದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಮಾತನಾಡಿ, ಬೆಳೆ ಸಮೀಕ್ಷೆ ತಂತ್ರಾಂಶವು ವರ್ಷದಿಂದ ವರ್ಷಕ್ಕೆ ಉನ್ನತೀಕರಣಗೊಳ್ಳುತ್ತಿದೆ. ಅದಕ್ಕೆ ತಕ್ಕಂತೆ ಅಧಿಕಾರಿಗಳು ತಂತ್ರಾಂಶದ ಹೊಸ ಕಾರ್ಯಶೈಲಿ ಅರಿತು ಬೆಳೆ ಅಂದಾಜು ವಿಮೆ ಸಮೀಕ್ಷೆ ನಡೆಸಬೇಕು. ಬೆಳೆ ವಿಮೆಯ ಲಾಭವನ್ನು ಜಿಲ್ಲೆಯ ರೈತರಿಗೆ ಒದಗಿಸಬೇಕು ಎಂದರು.

Advertisement

ಈಗಾಗಲೇ ಸಮೀಕ್ಷಾ ಅಧಿಕಾರಿಗಳಿಗೆ ಒದಗಿಸಲಾದ ಯೋಜನಾ ಪಟ್ಟಿಯಲ್ಲಿ ನೀಡಲಾದ ಬೆಳೆಗಳ ಸಮೀಕ್ಷೆ ಮಾತ್ರ ಮಾಡಬೇಕು. ನೀರಾವರಿ ಮತ್ತು ಮಳೆ ಆಶ್ರಿತ ಬೆಳೆ ಇದ್ದರೆ ಆಯಾ ಬೆಳೆಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು. ಪ್ರತಿ ಪ್ರಯೋಗಕ್ಕೂ ಮೂಲ ಸರ್ವೆ ನಂಬರ್‌ ಸೇರಿದಂತೆ ಹೆಚ್ಚುವರಿಯಾಗಿ ಅದಕ್ಕೆ 4 ಸರ್ವೆ ನಂಬರ್‌ ಅಪಲೋಡ್‌ ಮಾಡಬೇಕು. ಆಯ್ಕೆಯಾದ ಸರ್ವೆ ನಂಬರಿನ ರೈತರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಕಟಾವಿನ ದಿನಾಂಕ ಮತ್ತು ಸಮಯವನ್ನು ಒಂದು ದಿನ ಮುಂಚಿತವಾಗಿ ವಿಮಾ ಕಂಪನಿ ಅಧಿಕಾರಿಗಳಿಗೆ ತಿಳಿಸಬೇಕು ಎಂದರು.

ಕನ್ನಡದಲ್ಲಿ ಇಲಾಖೆ ತಂತ್ರಾಂಶ: ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಮಾತನಾಡಿ, ಇಲಾಖೆ ತಂತ್ರಾಂಶ ಸಂಪೂರ್ಣ ಕನ್ನಡ ಭಾಷೆಯಲ್ಲಿದೆ. ಇದು ಸಮೀಕ್ಷೆ ಕಾರ್ಯಕ್ಕೆ ಸಹಕಾರಿಯಾಗಿದೆ. ನಮೂನೆ-1 ಮತ್ತು 2ರಲ್ಲಿ ಡಿಸಿ ಆದೇಶದಂತೆ ಕಡ್ಡಾಯವಾಗಿ ಸಮೀಕ್ಷೆಗೆ ನೇಮಿಸಿದ ಮೂಲ ಕಾರ್ಯಕರ್ತರೇ ತಂತ್ರಾಂಶದಲ್ಲಿ ಭರ್ತಿ ಮಾಡಬೇಕು ಹಾಗೂ ಕ್ಷೇತ್ರ ಭೇಟಿಗೆ ಮೂಲ ಕಾರ್ಯಕರ್ತರೇ ಖುದ್ದು ಹಾಜರಾಗಬೇಕು. ಪ್ರಸಕ್ತ ವರ್ಷ ಏಐಸಿ ವಿಮಾ ಕಂಪನಿಯು ಬೆಳೆ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದು, ಆ ಕಂಪನಿ ಅಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಿ ಬೆಳೆ ಕಟಾವು ದಿನ ಅವರನ್ನು ಹಾಜರಿರುವಂತೆ ನೋಡಿಕೊಳ್ಳಬೇಕು ಎಂದರು.

ಕಾರ್ಯಾಗಾರದಲ್ಲಿ ಕೃಷಿ ಇಲಾಖೆಯಿಂದ ಬೆಳೆ ಕಟಾವಿಗೆ ಸಂಬಂಧಿಸಿದ ಕಿಟ್‌ಗಳನ್ನು ವಿತರಿಸಲಾಯಿತು. ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್‌ ಆಗಮಿಸಿ ಬೆಳೆ ಕಟಾವು ಕಾರ್ಯಕರ್ತರಿಗೆ ಬೆಳೆ ಕಟಾವು ಕಿಟ್ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next