ಹುಣಸೂರು: ಸ್ಪಧಾತ್ಮಕ ಪರೀಕ್ಷೆ ಎದುರಿಸಲು ಗ್ರಂಥಾಲಯದಲ್ಲಿ ದೊರೆಯವ ಪುಸ್ತಕ ಹಾಗೂ ಇನ್ನಿತರೆ ಸೌಲಭ್ಯ ಬಳಸಿಕೊಳ್ಳಬೇಕೆಂದು ಕೆ.ಆರ್.ಪೇಟೆ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಗ್ರಂಥಪಾಲಕಿ ಡಾ.ಬಿ.ಪ್ರಮೋದಿನಿ ಸೂಚಿಸಿದರು.
ನಗರದ ಡಿ.ಡಿ.ಅರಸ್ ಕಾಲೇಜಿನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವತಿಯಿಂದ ಆಯೋಜಿಸಿದ್ದ ಗ್ರಂಥಪಾಲಕರ ದಿನದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವ್ಯಾಟ್ಸಪ್, ಟ್ವಿಟ್ಟರ್‌ಗಳಿಂದಾಗಿ ಪುಸ್ತಕ ಓದುವ ಅಭ್ಯಾಸವೇ ನಾಶವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿ, ಗ್ರಂಥಾಲಯಗಳು ವಿದ್ಯಾಸಂಸ್ಥೆಗಳ ಹೃದಯಗಳಿದ್ದಂತೆ ಎಂದರು.
ಮೊಬೈಲ್ ಮೂಲಕ ಸಂದೇಶ ಕಳಿಸುವಾಗ ಸಂಕ್ಷಿಪ್ತ ರೂಪಗಳನ್ನು ಬಳಸುವುದರಿಂದ ಭಾಷಾ ಬಳಕೆ ವಿರೂಪಗೊಳ್ಳುತ್ತಿದೆ. ಓದುವಾಗ ಇರಬೇಕಾದ ಭಂಗಿ, ಓದುವ ಸಮಯ, ಓದುವ ರೀತಿ ಹೀಗೆ ವಿವಿಧ ಮಜಲುಗಳನ್ನು ಅರಿತು ಶಿಕ್ಷಣಾಭ್ಯಾಸ ಮಾಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ವೆಂಕಟೇಶಯ್ಯ, ಅಗತ್ಯ ಮಾಹಿತಿಗಳ ಕೋಶ ಗ್ರಂಥಾಲಯವಾಗಿದ್ದು, ಇಲ್ಲಿ ಸಾಕಷ್ಟು ಪುಸ್ತಕಗಳಿದ್ದು, ಬಳಸಿಕೊಳ್ಳಿರೆಂದರು. ಸಂಚಾಲಕ ಗ್ರಂಥಪಾಲಕ ಜಗದೀಶ್, ಗ್ರಂಥಾಲಯದ ಪಿತಾಮಹರಾದ ಡಾ.ರಂಗನಾಥನ್ ಅವರು ಗ್ರಂಥಾಲಯಕ್ಕೆ ನೀಡಿರುವ ಕೊಡುಗೆ ಬಗ್ಗೆ ವಿವರಿಸಿದರು.
ನಂತರ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಿಂದ “ವಿಸ್ಮಯ ವಿಶ್ವ’ ಎಂಬ ಸಂಶೋಧನಾ ಗೋಡೆ ಪತ್ರಿಕೆ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಂಶೋಧನಾ ಮತ್ತು ಸಂಶೋಧನಾ ಅಭಿವೃದ್ಧಿ ಸಮಿತಿ ಸಂಚಾಲಕಿ ಡಾ. ಕನಕಮಾಲಿನಿ, ಕುಮಾರಿ, ಶಾಜಿಯ, ಅಶ್ವಿನಿ, ಕುಮಾರಿ, ಅಂಕಿತಾ ಮಾತನಾಡಿದರು. ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.