Advertisement

ವಿಪತ್ತು ನಿರ್ವಹಣೆಗೆ ಸದಾ ಸನ್ನದ್ಧರಾಗಿರಿ

09:42 AM May 20, 2019 | Suhan S |

ಹಾಸನ: ಜಿಲ್ಲೆಯಲ್ಲಿ ಎದುರಾಗಬಹುದಾದ ವಿವಿಧ ರೀತಿಯ ಅಪಾಯಗಳನ್ನು ಮೊದಲೇ ಗುರುತಿಸಿ ಅತ್ಯಂತ ವ್ಯವಸ್ಥಿತ ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸಿ ಸದಾ ಸನ್ನದ್ಧವಾಗಿರಬೇಕು ಎಂದು ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಸಂಪನ್ಮೂಲಾಧಿಕಾರಿ ಪರಮೇಶ್‌ ಅವರು ಸಲಹೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಿದ್ದ ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆ 2005ರ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಅಪಾಯ ಸಂಭವಿಸಿದ ನಂತರ ಕಾರ್ಯ ಪ್ರವೃತ್ತರಾಗುವುದಕ್ಕಿಂತ ಮೊದಲೇ ಮುಂಜಾಗ್ರತೆ ವಹಿಸುವುದು ಸೂಕ್ತ ಎಂದರು.

ಪ್ರತಿಯೊಂದು ಇಲಾಖೆ ಪಾತ್ರ ಪ್ರಮುಖ: ಜಿಲ್ಲಾ ಮಟ್ಟದ ಪ್ರಕೃತಿ ವಿಕೋಪ ನಿರ್ವಹಣಾ ಸಮಿತಿಗೆ ಜಿಲ್ಲಾಧಿಕಾರಿಯವರು ಅಧ್ಯಕ್ಷರಾಗಿದ್ದು, ಪ್ರಮುಖ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಪ್ರತಿಯೊಂದು ಇಲಾಖೆ ಜವಾಬ್ದಾರಿ ಪಾತ್ರ ನಿರ್ವಹಿಸಬೇಕಾಗುತ್ತದೆ ಎಂದ ಪರಮೇಶ್‌ ಅವರು, ಪ್ರತಿಯೊಂದು ಜಿಲ್ಲೆ ಯಲ್ಲೂ ಸಂಭವನೀಯ ಅಪಾಯಗಳು ಭಿನ್ನವಾಗಿರ ಬಹುದು. ಆದರೆ ಅವುಗಳನ್ನು ಸೂಕ್ಷ್ಮವಾಗಿ ಮೊದಲೇ ಗ್ರಹಿಸಿ ಅವುಗಳ ತಡೆ, ನಿಯಂತ್ರಣ, ನಿರ್ವಹಣೆಗೆ ಯೋಜನೆ ರೂಪಿಸಿ ಜೊತೆಗೆ ತಂಡಗಳ ಮುಖ್ಯಸ್ಥರನ್ನು ಗುರುತಿಸಿ ಕರ್ತವ್ಯ ನಿಯೋಜಿಸ ಬೇಕಾಗುತ್ತದೆ ಎಂದು ಹೇಳಿದರು.

ಅಪಾಯಕಾರಿ ಸ್ಥಳಗಳನ್ನು ಗುರುತಿಸಿ: ಜಿಲ್ಲೆಯ ಭೌಗೋಳಿಕ ನಕ್ಷೆಯನ್ನು ಗೂಗಲ್ ಮ್ಯಾಪ್‌ ಮೂಲಕ ಪಡೆದು ಅದರಲ್ಲಿ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಭೌಗೋಳಿಕ ಸಂಚಾರ ನಿಗದಿ ಮಾಡಬೇಕು. ಮಲೆನಾಡು ಪ್ರದೇಶಗಳಲ್ಲಿ ಹೊರಗಿನಿಂದ ಬಂದು ಜಮೀನು ಖರೀದಿಸಿ ವಾಣಿಜ್ಯ ಚಟುವಟಿಕೆ ನಡೆಸು ವವರ ಬಗ್ಗೆಯೂ ನಿಗಾವಹಿಸಬೇಕು ಎಂದು ಅವರು ಹೇಳಿದರು.

ಪೂರ್ವ ಸಿದ್ಧತೆ ಅಗತ್ಯ: ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಮಾತನಾಡಿ, ಪ್ರಾಕೃತಿಕ ವಿಕೋಪಗಳ ನಿಯಂತ್ರಣ ಮತ್ತು ನಿರ್ವಹಣೆ ಎಲ್ಲಾ ಇಲಾಖೆಗಳ ಜವಾಬ್ದಾರಿಯಾಗಿದೆ. ತರಬೇತಿಯಲ್ಲಿ ನೀಡುವ ಮಾಹಿತಿಯನ್ನು ಗಮನಿಸಿ ತಮ್ಮ ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಪೂರ್ವ ತಯಾರಿ ನಡೆಸಬೇಕು. ಪ್ರತಿಯೊಂದು ಇಲಾಖೆಯೂ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ತಾವು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಪಟ್ಟಿಮಾಡಿ ಅಧೀನ ಸಿಬ್ಬಂದಿಗಳಿಗೆ ಸೂಕ್ತ ಮಾಹಿತಿ ಹಾಗೂ ತರಬೇತಿ ನೀಡಬೇಕು. ಸಂಭವನೀಯ ಅಪಾಯಗಳನ್ನು ಗುರುತಿಸಿ ಕೊಳ್ಳಬೇಕು ಎಂದರು.

Advertisement

ಭೂಗರ್ಭ ತಜ್ಞರು ತಮ್ಮ ಮನವಿ ಮೇರೆಗೆ ಸಕಲೇಶಪುರ ತಾಲೂಕಿಗೆ ಆಗಮಿಸಿದ್ದು ಅಪಾಯಕಾರಿ ಯಾಗಿರುವ ಸ್ಥಳಗಳನ್ನು ಪರಿಶೀಲಿಸುತ್ತಿದ್ದಾರೆ. ವಿವಿಧ ಇಲಾಖಾ ಅಧಿಕಾರಿಗಳು ಅವರನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಖಾಸಗಿ ವ್ಯಕ್ತಿಗಳ ನಿರ್ಲಕ್ಷ್ಯ ಅಥವಾ ಅವರ ಅಸಡ್ಡೆ ಕಾರಣದಿಂದ ಪ್ರಾಕೃತಿಕ ಹಾನಿ ಹಾಗೂ ಇತರರಿಗೆ ತೊಂದರೆಯಾದಲ್ಲಿ ಅದಕ್ಕೆ 6 ವ್ಯಕ್ತಿಗಳನ್ನು ಹೊಣೆ ಗಾರರನ್ನಾಗಿ ಮಾಡಬೇಕಾಗಿದ್ದು, ತಹಶೀಲ್ದಾರರು ಈ ಬಗ್ಗೆ ಗಮನ ಹರಿಸಬೇಕು ಎಂದರು. ಎಲ್ಲಾ ತಾಲೂಕುಗಳ ತಹಶೀಲ್ದಾರರು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next