Advertisement

ಕೆ-ಸೆಟ್‌ ಪರೀಕ್ಷೆ ಸಫ‌ಲತೆಗಾಗಿ ತಯಾರಿ ಹೀಗಿರಲಿ

11:11 AM Feb 27, 2020 | mahesh |

ಇದು ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗುವ ಪುಟ. ಇದರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಹಲವು ಅಂಶಗಳನ್ನು ನೀಡಲಾಗುತ್ತದೆ. ಪರಿಣತರ ಸಂದರ್ಶನ ಎಲ್ಲವೂ ಇಲ್ಲಿರಲಿದೆ.

Advertisement

ನೆಟ್‌ ಪರೀಕ್ಷೆ ಪಾಸು ಮಾಡೋದು ತಪಸ್ಸೇ. ಒಂದಷ್ಟು ತಿಂಗಳುಗಳ ಕಾಲ ಎಲ್ಲ ಕನಸನ್ನು ಗಂಟು ಕಟ್ಟಿ ಅಟ್ಟಕ್ಕೆ ಎಸೆದು, ಆ ಜಾಗದಲ್ಲಿ ಪರೀಕ್ಷೆ ಪಾಸು ಮಾಡುವ ಕನಸಷ್ಟೇ ಕಾಣಬೇಕು. ಇದು ಒಂದು ರೀತಿ ಎಲ್ಲ ಪರೀಕ್ಷೆಗಳ ತಂದೆ ಇದ್ದಂತೆ. ಹಾಗಾಗಿ, ತುಸು ಕಷ್ಟವೇ ಆದರೂ ಶ್ರಮ ಹಾಕಿ ಓದಿದರೆ ಕಷ್ಟವೇನಲ್ಲ. ಈ ಪರೀಕ್ಷೆಯನ್ನು ನೆಟ್ಟಗೆ ಪಾಸ್‌ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ

ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಬೇಕು ಎನ್ನುವುದು ಅನೇಕರ ಬಾಲ್ಯದ ಗುರಿಯಾಗಿರುತ್ತದೆ. ಅಂತಹವರಿಗೆ ಇರುವ ಅವಕಾಶವೇ ಸ್ಲೆಟ್‌ ಮತ್ತು ನೆಟ್‌ ಪರೀಕ್ಷೆ. ನೆಟ್‌ ಪರೀಕ್ಷೆ ತೇರ್ಗಡೆಯಾದವರು ದೇಶದ ಯಾವ ಕಡೆಯಲ್ಲಾದರೂ ಪದವಿಗೆ ಪಾಠ ಮಾಡಲು ಅರ್ಹರಾಗುತ್ತಾರೆ. ಹಾಗೆ ಸ್ಲೆಟ್‌ (STATE LEVEL ELIGIBILITY TEST) ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಯು ರಾಜ್ಯದ ವಿಶ್ವವಿದ್ಯಾಲಯ, ಕಾಲೇಜು ಉನ್ನತ ಶಿಕ್ಷಣ ಸಂಸ್ಥೆ (ಸರಕಾರಿ ಅನುದಾನಿತ ಹಾಗೂ ಖಾಸಗಿ)ಗಳಿಗೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ಉಪನ್ಯಾಸಕ ಹುದ್ದೆಗೆ ನೇಮಕಗೊಳ್ಳಲು ಅರ್ಹತೆ ಪಡೆಯುತ್ತಾರೆ.

ಅರ್ಹತೆ ಏನು?
ಸ್ನಾತಕೋತ್ತರ ಪದವಿಯಲ್ಲಿ ಶೇ.55 (ಎಸ್‌ಸಿ/ಎಸ್‌ಟಿ-ಶೇ.50) ಅಂಕ ಗಳಿಸಿರುವ ಅಭ್ಯರ್ಥಿಗಳು ಈ ಪರೀಕ್ಷೆ ತೆಗೆದುಕೊಳ್ಳಬಹುದು. ಅಂತಿಮ ವರ್ಷದ ಸ್ನಾತಕೋತ್ತರ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳು ಸಹ ಕೆ-ಸೆಟ್‌ ಬರೆಯಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿರುವುದಿಲ್ಲ.

ತಯಾರಿ ಹೇಗೆ?
ಕೆ-ಸೆಟ್‌ ಪರೀಕ್ಷೆಗೆ ಕನಿಷ್ಠ ಆರು ತಿಂಗಳ ಗಂಭೀರ ತಯಾರಿ ಬೇಕು. ಮಾನಕ ವಿಷಯಗಳ ಪಠ್ಯಕ್ರಮ //kset.uni-mysore.ac.in/ ಜಾಲತಾಣದಲ್ಲಿಯೂ, ವಿಜ್ಞಾನ ವಿಷಯಗಳ ಪಠ್ಯಕ್ರಮ https://csirhrdg.res.in ಜಾಲತಾಣದಲ್ಲಿಯೂ ಲಭ್ಯವಿದೆ.

Advertisement

10 ಅಧ್ಯಾಯಗಳಿವೆ
2020ರ ಕೆ-ಸೆಟ್‌ ಪರೀಕ್ಷೆಯನ್ನು 41 ವಿಷಯಗಳಲ್ಲಿ ಕರ್ನಾಟಕ ರಾಜ್ಯಾದ್ಯಂತ 11 ನೋಡಲ್‌ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. ಕೆ-ಸೆಟ್‌ ಸಾಮಾನ್ಯ ಪತ್ರಿಕೆಯ ಪಠ್ಯಕ್ರಮದಲ್ಲಿ 10 ಅಧ್ಯಾಯಗಳಿವೆ. ಬೋಧನೆ ಹಾಗೂ ಸಂಶೋಧನೆಯ ಕೌಶಲ, ವಿಷಯ ಗ್ರಹಿಕೆ, ಸಂವಹನ, ಪ್ರಾಥಮಿಕ ಗಣಿತ, ತಾರ್ಕಿಕ ಚಿಂತನೆ, ದತ್ತಾಂಶ ವಿಶ್ಲೇಷಣೆ, ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ), ಅಭಿವೃದ್ಧಿ ಮತ್ತು ಪರಿಸರ, ಉನ್ನತ ಶಿಕ್ಷಣ ವ್ಯವಸ್ಥೆ- ಹೀಗೆ ವೈವಿಧ್ಯಮಯ ವಿಷಯಗಳಿರುತ್ತವೆ. ಐಚ್ಛಿಕ ವಿಷಯದ ಪಠ್ಯಕ್ರಮ ಸ್ನಾತಕೋತ್ತರ ಸಮಾನವಾಗಿದ್ದು, ಸಮಗ್ರ ಹಾಗೂ ಆಳವಾದ ಅಧ್ಯಯನ ಅಗತ್ಯ.

3-4 ಗಂಟೆ ಮೀಸಲು ಅಗತ್ಯ
ಒಂದು ವೇಳಾಪಟ್ಟಿಯನ್ನು ಹಾಕಿಕೊಂಡು ದಿನದಲ್ಲಿ ಕನಿಷ್ಠ 3-4 ಗಂಟೆಯನ್ನಾದರೂ ಅಭ್ಯಾಸಕ್ಕೆ ಮೀಸಲಿಡುವುದು ಒಳ್ಳೆಯದು. ಪರೀಕ್ಷೆ ವಸ್ತುನಿಷ್ಠ ಮಾದರಿಯದ್ದಾಗಿರುವುದರಿಂದ, ಸಣ್ಣ ಸಣ್ಣ ವಿವರಗಳಿಗೂ ಹೆಚ್ಚಿನ ಗಮನ ಕೊಡುವುದು ಮುಖ್ಯ. ಓದುತ್ತಲೇ ಪ್ರಮುಖ ವಿಷಯಗಳ ಪಟ್ಟಿ ಮಾಡಿಕೊಳ್ಳುವುದು ಕೊನೆಯ ಕ್ಷಣದ ತಯಾರಿಗೆ ಬಹಳ ಉಪಯುಕ್ತವಾಗುತ್ತದೆ. ಜತೆಗೆ 4-5 ವರ್ಷಗಳ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಅಧ್ಯಯನ ನಡೆಸುವುದರಿಂದ ಯಾವ ರೀತಿ ಪ್ರಶ್ನೆ ಕೇಳುತ್ತಾರೆ ಎನ್ನುವ ಮಾಹಿತಿ ಸಿಗುತ್ತದೆ. ಇಲ್ಲಿ ನೇರವಾಗಿ ಪ್ರಶ್ನೆ ಕೇಳುವುದಿಲ್ಲ. ಆದ್ದರಿಂದ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಗೈಡ್‌ ಪುಸ್ತಕಗಳ ಮೊರೆ ಹೋಗುವುದಕ್ಕಿಂತ ವಿಷಯಗಳನ್ನು ವಿವರವಾಗಿ ಓದಬೇಕು.

ಸಿಲೆಬಸ್‌
ಸ್ಲೆಟ್‌ ಪರೀಕ್ಷೆ 300 ಅಂಕಗಳಿಗೆ ನಡೆಯುತ್ತದೆ. ಇದರಲ್ಲಿ ಎರಡು ಪೇಪರ್‌ ಇದ್ದು, ಮೊದಲನೇ ಭಾಗದಲ್ಲಿ 100 ಅಂಕಗಳಿದ್ದರೆ ಎರಡನೇ ಭಾಗದಲ್ಲಿ 200 ಅಂಕಗಳಿರುತ್ತವೆ.

ಮೊದಲನೆ ಪತ್ರಿಕೆ
ಈ ಪತ್ರಿಕೆಯು ಅಭ್ಯರ್ಥಿಗಳ ಸಾಮಾನ್ಯ ಪತ್ರಿಕೆಯಾಗಿದ್ದು, ಸಾಮಾನ್ಯ ಜ್ಞಾನ, ಬೋಧನೆ ಹಾಗೂ ಸಂಶೋಧನೆಯ ಅಭಿರುಚಿಗೆ ಸಂಬಂಧಿಸಿರುತ್ತದೆ. ಅಭ್ಯರ್ಥಿಗಳ ಸಾಮಾನ್ಯ ತಿಳಿವಳಿಕೆಗಳನ್ನು ಗ್ರಹಿ ಸುವ ಹಾಗೂ ಯೋಚನಾ ಸಾಮರ್ಥ್ಯವನ್ನು ಅಳೆಯುವಂಥದ್ದಾಗಿರುತ್ತದೆ. ಪ್ರಶ°ಪತ್ರಿಕೆ 50 ಬಹುಸಂಖ್ಯಾ ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿದ್ದು, ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿ ಮಾಡಲಾಗಿದೆ.

ಎರಡನೇ ಪತ್ರಿಕೆ
ಅಭ್ಯರ್ಥಿಯು ಆಯ್ಕೆ ಮಾಡಿದ ವಿಷಯದ ಸಾಮಾನ್ಯ ಜ್ಞಾನದಲ್ಲಿ ಈ ಪತ್ರಿಕೆ ಇರುತ್ತದೆ. ಜತೆಗೆ ಈ ಪತ್ರಿಕೆಯಲ್ಲಿ ತಪ್ಪು ಉತ್ತರಕ್ಕೆ ಯಾವುದೇ ನಕಾರಾತ್ಮಕ ಅಂಕಗಳಿಲ್ಲ. ಇನ್ನೊಂದು ಮುಖ್ಯ ಅಂಶವೆಂದರೆ ಸ್ನಾತಕೋತ್ತರ ಪದವಿಯ ಮೂರನೇ ಮತ್ತು ನಾಲ್ಕನೇ ಸೆಮಿಸ್ಟರ್‌ನ ಸಿಲೆಬಸ್‌ನಿಂದಲೇ 50 ಅಂಕಕ್ಕಿಂತ ಅಧಿಕ ಪ್ರಶ್ನೆಗಳು ಬರುತ್ತವೆ. ಇನ್ನು ಈ ಪ್ರಶ° ಪತ್ರಿಕೆ 100 ಬಹುಸಂಖ್ಯಾ ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿದ್ದು, ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿ ಮಾಡಲಾಗಿದೆ. ನಾವು ಗಳಿಸಿದ ಅಂಕವನ್ನು ದ್ವಿಗುಣಗೊಳಿಸಿ 600 ಅಂಕಗಳಿಗೆ ಕಟ್‌ ಆಫ್ ಅಂಕಗಳನ್ನು ನಿರ್ಧರಿಸಲಾಗುತ್ತದೆ.

ಪರೀಕ್ಷಾ ಶುಲ್ಕವೆಷ್ಟು?
ಸಾಮಾನ್ಯ ವರ್ಗದ ಅಭ್ಯರ್ಥಿಳು 1,150 ರೂ., ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿಗೆ ಸೇರಿದ ಅಭ್ಯರ್ಥಿಗಳು 950 ರೂ. ಮತ್ತು ಪರಿಶಿಷ್ಟ ಜಾತಿ/ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳು 650 ರೂ. ಪರೀಕ್ಷಾ ಶುಲ್ಕ ಪಾವತಿಸಬೇಕು. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಸ್ವವಿವರ ಮತ್ತು ಶೈಕ್ಷಣಿಕ ಮಾಹಿತಿ ನೋಂದಣಿ ಮಾಡಿದ ಅನಂತರ, ಸ್ಟೇಟ್‌ ಬ್ಯಾಂಕ್‌ ಎಮ್‌ಒಪಿಎಸ್‌ (ಬಹು ಆಯ್ಕೆ ಪಾವತಿ ವ್ಯವಸ್ಥೆ) ಮೂಲಕ ಪಾವತಿ ಮಾಡಲು ಮುಂದುವರಿಯಿರಿ.

ಪಾವತಿ ಆಯ್ಕೆಗಳು
1 ಎಲ್ಲ ಬ್ಯಾಂಕ್‌ಗಳ ಇಂಟರ್‌ನೆಟ್‌ ಬ್ಯಾಂಕಿಂಗ್‌.
2 ಎಲ್ಲ ಬ್ಯಾಂಕ್‌ಗಳ ಡೆಬಿಟ್‌ ಕಾರ್ಡ್‌.
3 ಎಲ್ಲ ಬ್ಯಾಂಕ್‌ಗಳ ಕ್ರೆಡಿಟ್‌ ಕಾರ್ಡ್‌.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್‌ 4
ಪರೀಕ್ಷಾ ದಿನಾಂಕ :
ಎಪ್ರಿಲ್‌ 12

ಬಿಡುವಿಲ್ಲದ ಸಮಯದ
ನಡುವೆ ದಿನದಲ್ಲಿ ಕನಿಷ್ಠವಾದರು 2 ಗಂಟೆಗಳ ಕಾಲ ಅಧ್ಯಯನಕ್ಕಾಗಿ ಮೀಸಲಿಡಬೇಕು. ದಿನನಿತ್ಯದ ಪ್ರಚಲಿತ ವಿದ್ಯಮಾನಗಳ ಕುರಿತ ಮಾಹಿತಿಯನ್ನು ದಿನಪತ್ರಿಕೆಯಲ್ಲಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇರುವ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಪಠ್ಯಪುಸ್ತಕವನ್ನು ಮಾತ್ರವಲ್ಲದೆ ಅಧ್ಯಯನಕ್ಕೆ ಸಂಬಂಧಪಟ್ಟ ಗುರುಗಳೊಂದಿಗೆ ವಿಷಯಗಳ ಕುರಿತ ಮಾಹಿತಿಗಳನ್ನು ಸಂಗ್ರಹಿಸಬೇಕು. ಸಂಶೋಧನ ವಿಷಯಗಳ ಅಧ್ಯಯನದ ಜತೆಗೆ ಪ್ರಾಯೋಗಿಕವಾಗಿ ಸಂಶೋಧನ
ಪತ್ರಿಕೆಗಳನ್ನು ಬಳಸಬೇಕು
– ಅಶ್ವಿ‌ನಿ ಶ್ರೀಶ ನಾಯಕ್‌, ಅಧ್ಯಾಪಕಿ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next