Advertisement

Be prepared for anything: ಸಿಎಂ ಸಿದ್ದರಾಮಯ್ಯಗೆ ದಿಲ್ಲಿ ಸಂದೇಶ?

12:15 AM Aug 25, 2024 | Team Udayavani |

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಅಭಯ ನೀಡಿದೆ. ಕಾನೂನು ಹೋರಾಟ ಖಾತ್ರಿ ಹೌದಾದರೂ “ಎಲ್ಲ ಬಗೆಯ ಸನ್ನಿವೇಶ’ಗಳನ್ನು ಎದುರಿಸುವುದಕ್ಕೆ ಸಿದ್ಧರಾಗಿ ಇರಿ ಎಂಬ ಸಲಹಾರೂಪದ ಎಚ್ಚರಿಕೆಯನ್ನೂ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

Advertisement

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌ ಹಾಗೂ ರಣದೀಪ್‌ ಸಿಂಗ್‌ ಸುಜೇìವಾಲಾ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರಾಜ್ಯದಿಂದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಮಾತ್ರ ಉಪಸ್ಥಿತರಿದ್ದರು. ಕಾನೂನು ಹೋರಾಟದಲ್ಲಿ ಎದುರಾಗಬಹುದಾದ ಸವಾಲುಗಳ ಬಗ್ಗೆ ಹೈಕಮಾಂಡ್‌ ಈ ಸಂದರ್ಭದಲ್ಲಿ ಸೂಕ್ಷ್ಮ ಎಚ್ಚರಿಕೆಯನ್ನು ನೀಡಿದೆ ಎನ್ನಲಾಗಿದೆ.

“ನೀವು ನಡೆಸುವ ಕಾನೂನು ಹೋರಾಟದಲ್ಲಿ ಪಕ್ಷದ ಹೈಕಮಾಂಡ್‌ ಜತೆಗಿರುತ್ತದೆ. ಅದು ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಯಾವುದೇ ಆಗಿರಬಹುದು. ಆದರೆ ಈ ಹೋರಾಟದ ಸಂದರ್ಭದಲ್ಲಿ ಎದುರಾಗಬಹುದಾದ ಸವಾಲುಗಳ ಬಗ್ಗೆಯೂ ನೀವು ಎಚ್ಚರದಿಂದ ಇರಬೇಕು. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಝಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೂರೇನ್‌ ಪ್ರಕರಣಗಳು ಯಾವ ಹಂತಕ್ಕೆ ಹೋಗಿದ್ದವು ಎಂಬ ದೃಷ್ಟಾಂತ ನಮ್ಮ ಮುಂದೆ ಇದೆ. ಆದರೆ ಈ ಮಾದರಿಯನ್ನೇ ಕಾಂಗ್ರೆಸ್‌ ಅನುಸರಿಸುತ್ತದೆ ಎಂದು ಭಾವಿಸಬೇಕಿಲ್ಲ. ಈ ಎರಡೂ ಪಕ್ಷಗಳು ಮತ್ತು ಕಾಂಗ್ರೆಸ್‌ ನಡುವೆ ಸ್ವರೂಪ ಹಾಗೂ ಫ‌ಲಿತಾಂಶಗಳ ದೃಷ್ಟಿಯಿಂದ ವ್ಯತ್ಯಾಸಗಳಿವೆ. ಹೀಗಾಗಿ ಭವಿಷ್ಯದಲ್ಲಿ ಎದುರಾಗುವ ಕಾನೂನು ಹೋರಾಟದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಿ. ನೀವು ಇರಿಸುವ ಹೆಜ್ಜೆ ಅನ್ಯರಿಗೆ ಕಾಂಗ್ರೆಸ್‌ ವಿರುದ್ಧದ ರಾಜಕೀಯ ಹೋರಾಟಕ್ಕೆ ಅಸ್ತ್ರವಾಗಕೂಡದು ಎಂದು ಸಲಹಾ ರೂಪದ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ಭವಿಷ್ಯದಲ್ಲಿ ಚುನಾವಣೆ ಇದೆ
ಈ ಚರ್ಚೆ ಸಂದರ್ಭದಲ್ಲಿ ಸದ್ಯದಲ್ಲೇ ನಾಲ್ಕು ರಾಜ್ಯಗಳಿಗೆ ಎದುರಾಗುವ ಚುನಾವಣೆಯ ಬಗ್ಗೆಯೂ ಪ್ರಸ್ತಾವಿಸಲಾಗಿದೆ. ಜಮ್ಮು-ಕಾಶ್ಮೀರ, ಹರಿಯಾಣ, ಝಾರ್ಖಂಡ್‌ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ಗೆ ಇವೆಲ್ಲವೂ ರಾಷ್ಟ್ರೀಯ ದೃಷ್ಟಿಯಿಂದ ತೀರಾ ಮಹತ್ವದ್ದಾಗಿವೆ. ಕರ್ನಾಟಕದ ವಿದ್ಯಮಾನಗಳ ಕಾರಣದಿಂದ ಈ ರಾಜ್ಯಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಿಮ್ಮ ಮೇಲೆ ಇದೆ ಎಂದು ಹೈಕಮಾಂಡ್‌ ಪಾಠ ಮಾಡಿದೆ ಎನ್ನಲಾಗಿದೆ. ಹೀಗಾಗಿ ಆಗಸ್ಟ್‌ 29ರಂದು ರಾಜ್ಯ ಹೈಕೋರ್ಟ್‌ನಲ್ಲಿ ಪ್ರಕಟವಾಗುವ ತೀರ್ಪು ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಸಿದ್ದುಗೆ ವರಿಷ್ಠರ ಸಂದೇಶ ಏನು?
ನೀವು ನಡೆಸುವ ಯಾವುದೇ ಹಂತದ ಕಾನೂನು ಹೋರಾಟದಲ್ಲಿ ಹೈಕಮಾಂಡ್‌ ಜತೆಗಿರಲಿದೆ.
ಭವಿಷ್ಯದಲ್ಲಿ ಎದುರಾಗುವ ಕಾನೂನು ಸವಾಲುಗಳ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು.
ಕೇಜ್ರಿವಾಲ್‌, ಹೇಮಂತ್‌ ಸೊರೇನ್‌ ಪ್ರಕರಣದಲ್ಲಿ ಏನೇನಾಯಿತು ಎನ್ನುವುದು ಗೊತ್ತೇ ಇದೆ.
ಕೇಜ್ರಿವಾಲ್‌, ಸೊರೇನ್‌ ಮಾರ್ಗ ವನ್ನು ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಅನುಸರಿಸುವುದು ಕಷ್ಟ.
ನೀವು ಇಡುವ ಹೆಜ್ಜೆ ಬೇರೆಯವರಿಗೆ ಕಾಂಗ್ರೆಸ್‌ ವಿರುದ್ಧದ ಹೋರಾಟಕ್ಕೆ ಅಸ್ತ್ರವಾಗಬಾರದು.

Advertisement

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ ?
ಕಾಂಗ್ರೆಸ್‌ ಮೂಲಗಳ ಪ್ರಕಾರ ಸಚಿವ ಸಂಪುಟ ಪುನಾರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಹೀಗಾಗಿ ಸದ್ಯಕ್ಕೆ ಈ ಬೆಳವಣಿಗೆ ನಡೆಯುವ ಸಾಧ್ಯತೆ ಕಡಿಮೆ ಎಂಬ ವಿಶ್ವಾಸ ವ್ಯಕ್ತಪಡಿಸಿವೆ.

ಮುಡಾ ಪ್ರಕರಣ ಬಗ್ಗೆ ದಿಲ್ಲಿಯಲ್ಲಿ ಹೈಕಮಾಂಡ್‌ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಜತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮತ್ತು ವಿಪಕ್ಷಗಳ ನಡೆ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಅವರ ಗಮನಕ್ಕೆ ತರಲಾಗಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next