Advertisement

ಪ್ರಯಾಣಿಕರ ಜತೆ ಸೌಜನ್ಯಯುತವಾಗಿ ವರ್ತಿಸಿ: ಕಮಿಷನರ್‌ ಸಲಹೆ

11:57 PM Jul 19, 2019 | mahesh |

ಮಹಾನಗರ: ನಗರದ ಸಿಟಿ ಬಸ್‌ಗಳಲ್ಲಿ ಕಂಡಕ್ಟರ್‌ಗಳು ಸಾರ್ವಜನಿಕ ಪ್ರಯಾಣಿಕರ ಜತೆ ಸೌಹಾರ್ದದಿಂದ ನಡೆದುಕೊಳ್ಳಬೇಕು, ಚಿಲ್ಲರೆ ಹಣ ಬಾಕಿ ಕೊಡಬೇಕಿದ್ದರೆ ಅದನ್ನು ಪಾವತಿಸಿ ಸೌಜನ್ಯದಿಂದ ವರ್ತಿಸಬೇಕು; ಈ ನಿಟ್ಟಿನಲ್ಲಿ ಬಸ್‌ ಮಾಲಕರು ತಮ್ಮ ಸಿಬಂದಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್ ಸೂಚಿಸಿದ್ದಾರೆ.

Advertisement

ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಸಾರ್ವ ಜನಿಕರ ದೂರುಗಳಿಗೆ ಸ್ಪಂದಿಸಿ ಅವರು ಮಾತನಾಡಿದರು.

ಕೆಲವು ಖಾಸಗಿ ಸಿಟಿ ಬಸ್‌ಗಳಲ್ಲಿ ಕಂಡಕ್ಟರ್‌ಗಳು ಬಾಕಿ ಚಿಲ್ಲರೆ ಹಣ ಪಾವತಿ ಮಾಡುತ್ತಿಲ್ಲ; ವಿದ್ಯಾರ್ಥಿಗಳು ಚಿಲ್ಲರೆ ಕೊಡದಿದ್ದರೆ ಅವರಿಗೆ ರಿಯಾಯಿತಿ ದರ ಸೌಲಭ್ಯ ನೀಡಲು ನಿರಾಕರಿಸುವ ಕಂಡಕ್ಟರ್‌ಗಳು ಪೂರ್ತಿ ಟಿಕೆಟ್ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರು ನೀಡಿದರು.

ಬೆಂದೂರ್‌ನ ಮರ್ಕರಹಿಲ್ ಪ್ರದೇಶದಲ್ಲಿ ಸೊಳ್ಳೆ ಮತ್ತು ಬೀದಿ ನಾಯಿ ಹಾವಳಿ ಜಾಸ್ತಿಯಾಗಿದೆ ಎಂದು ನಾಗರಿಕರೊಬ್ಬರು ದೂರು ನೀಡಿದರು. ಈ ಬಗ್ಗೆ ಮಹಾನಗರ ಪಾಲಿಕೆಯ ಗಮನಕ್ಕೆ ತರಲಾಗುವುದು ಎಂದು ಆಯುಕ್ತರು ತಿಳಿಸಿದರು.

ದೇರಳಕಟ್ಟೆಯಲ್ಲಿ ಆಟೋ ರಿಕ್ಷಾ ಚಾಲಕರು ಪ್ರಯಾಣ ದರಕ್ಕೆ ಸಂಬಂಧಿಸಿ ಏಕರೂಪದ ನೀತಿ ಅನುಸರಿಸುತ್ತಿಲ್ಲ; ಒಬ್ಬೊ ಬ್ಬರು ಒಂದೊಂದು ರೀತಿಯ ದರ ವಸೂಲಿ ಮಾಡುತ್ತಿದ್ದಾರೆ. ಆದ್ದರಿಂದ ಆಟೋ ದರ ಪಟ್ಟಿಯನ್ನು ಪ್ರಕಟಿಸಬೇಕು ಎಂದು ನಾಗರಿಕ ರೊಬ್ಬರು ಒತ್ತಾಯಿಸಿದರು. ಈ ಬಗ್ಗೆ ಸಾರಿಗೆ ಅಧಿಕಾರಿಗಳ ಜತೆ ಚರ್ಚಿಸಿ ರಿಕ್ಷಾ ಬಾಡಿಗೆ ದರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಆಯುಕ್ತರು ವಿವರಿಸಿದರು.

Advertisement

ಮಾರ್ಗ ಬದಲಿಸಿ ಬಸ್‌ ಸಂಚಾರ
ಎರಡು ದಿನಗಳಿಂದ ಬೆಳಗ್ಗೆ ,ಸಂಜೆ ಹೊತ್ತು ಕೆಲವು ಬಸ್‌ಗಳು ಬಲ್ಮಠ- ಅಥೇನಾ ಆಸ್ಪತ್ರೆ ಮಾರ್ಗದಲ್ಲಿ ಸಂಚರಿಸುತ್ತಿರುವುದರಿಂದ ಪಾದಚಾರಿಗಳಿಗೆ, ಶಾಲಾ ಮಕ್ಕಳಿಗೆ ಅನನುಕೂಲ ಆಗಿದೆ ಎಂದು ಮಹಿಳೆ ಯೊಬ್ಬರು ದೂರು ನೀಡಿದರು. ಈ ಬಗ್ಗೆ ಪೊಲೀಸ್‌ ಸಿಬಂದಿಯನ್ನು ನೇಮಿಸಿ ಈ ಮಾರ್ಗದಲ್ಲಿ ಬಸ್‌ ಸಂಚರಿಸುವುದನ್ನು ನಿಯಂತ್ರಿಸಲಾಗುವುದು ಎಂದರು.

ಮೂಡುಬಿದಿರೆಯ ಓರ್ವ ಭೂ ಮಾಲಕರು ಅವರ ಮನೆ ಬಿಟ್ಟು ಬೇರೆ ಮನೆಗೆ ಕೆಲಸಕ್ಕೆ ಹೋಗಬಾರದು ಎಂಬುದಾಗಿ ತಾಕೀತು ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಕೂಲಿ ಕಾರ್ಮಿಕರೊಬ್ಬರು ಕರೆ ಮಾಡಿ ತಿಳಿಸಿದರು. ಈ ಕುರಿತಂತೆ ಸ್ಥಳೀಯ ಪೊಲೀಸರನ್ನು ಕಳುಹಿಸಿ ಸಮಸ್ಯೆ ಪರಿಹಾರಕ್ಕೆ ಯತ್ನಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.

ಸ್ಟೇಟ್ ಬ್ಯಾಂಕ್‌ನಿಂದ ಮರೋಳಿ ಮಾರ್ಗವಾಗಿ ಪಡೀಲ್- ಅಡ್ಯಾರ್‌ಗೆ ಸಂಚರಿಸುತಿದ್ದ ಖಾಸಗಿ ಸಿಟಿ ಬಸ್‌ 6 ತಿಂಗಳಿಂದ ಓಡಾಡುತ್ತಿಲ್ಲ; ಇದರಿಂದ ಶಾಲಾ ಮಕ್ಕಳಿಗೆ ಸಮಸ್ಯೆಯಾಗಿದೆ ಎಂದು ಇಬ್ಬರು ನಾಗರಿಕರು ದೂರಿದರು. ಈ ಕುರಿತಂತೆ ಬಸ್‌ ಮಾಲಕರ ಸಂಘ, ಸಾರಿಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಆಯುಕ್ತರು ತಿಳಿಸಿದರು.

ಜೋಕಟ್ಟೆಯಲ್ಲಿ ಸರಕಾರ ನಿವೇಶನ ಹಂಚಿಕೆ ಮಾಡಿದ್ದು, ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ನಾಗರಿಕರೊಬ್ಬರು ದೂರು ನೀಡಿದರು. ಈ ವಿಚಾರದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಆಯುಕ್ತರು ಉತ್ತರಿಸಿದರು.

ಬಂಟ್ವಾಳದ ಟೋಲ್ ಕೇಂದ್ರ ಇರುವಲ್ಲಿ ರಸ್ತೆ ಗುಂಡಿ ನಿರ್ಮಾಣವಾಗಿದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಸಂದೀಪ್‌ ಪಾಟೀಲ್ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಗಮನಕ್ಕೆ ತರಲಾಗುವುದು ಎಂದರು.

ಇದು 121ನೇ ಫೋನ್‌ ಇನ್‌ ಕಾರ್ಯಕ್ರಮವಾಗಿದ್ದು, ಒಟ್ಟು 30 ಕರೆಗಳು ಬಂದವು. ಕೆನರಾ ಬಸ್‌ ಮಾಲಕರ ಸಂಘದ ಧ್ಯಕ್ಷ ರಾಜವರ್ಮ ಬಲ್ಲಾಳ್‌, ಡಿಸಿಪಿಗಳಾದ ಹನುಮಂತರಾಯ ಮತ್ತು ಲಕ್ಷ್ಮೀ ಗಣೇಶ್‌, ಎಸಿಪಿಗಳಾದ ಮಂಜುನಾಥ ಶೆಟ್ಟಿ ಮತ್ತು ವಿನಯ್‌ ಎ. ಗಾಂವ್‌ಕರ್‌, ಟ್ರಾಫಿಕ್‌ ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲ, ಮೋಹನ್‌ ಕೊಟ್ಟಾರಿ, ಗುರುದತ್ತ ಕಾಮತ್‌, ಸಬ್‌ ಇನ್‌ಸ್ಪೆಕ್ಟರ್‌ ಪೂವಪ್ಪ ಎಚ್.ಎಂ., ಆರ್‌.ಕೆ. ಗವಾರ್‌, ಎಎಸ್‌ಐ ಪಿ. ಯೋಗೇಶ್ವರನ್‌, ಹೆಡ್‌ಕಾನ್‌ಸ್ಟೆಬಲ್ ಪುರುಷೋತ್ತಮ ಉಪಸ್ಥಿತರಿದ್ದರು.

ಬಿಜೈ ವೃತ್ತ- ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮಾರ್ಗದಲ್ಲಿ ಸ್ಪೀಡ್‌ ಬ್ರೇಕರ್‌ ಅಳವಡಿಸಬೇಕು ಎಂದು ಸಾರ್ವಜನಿಕರೊಬ್ಬರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸಿಪಿ ಮಂಜುನಾಥ ಶೆಟ್ಟಿ, ಇಲ್ಲಿ ಸ್ಪೀಡ್‌ ಬ್ರೇಕರ್‌ ಮಂಜೂರು ಆಗಿದೆ ಎಂದು ತಿಳಿಸಿದರು. ಆದಷ್ಟು ಬೇಗನೆ ಸ್ಪೀಡ್‌ ಬ್ರೇಕರ್‌ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಆಯುಕ್ತರು ಟ್ರಾಫಿಕ್‌ ಪೊಲೀಸರಿಗೆ ಸೂಚಿಸಿದರು.

ಪ್ರಮುಖ ದೂರುಗಳು
– ಪೊಲೀಸ್‌ ಕಂಟ್ರೋಲ್ ರೂಮ್‌ನಲ್ಲಿ ಸಾರ್ವಜನಿಕರ ಕರೆಗೆ ತತ್‌ಕ್ಷಣ ಸ್ಪಂದಿಸುತ್ತಿಲ್ಲ. – ನಗರದ ಜಂಕ್ಷನ್‌ಗಳಲ್ಲಿ ಅಳವ ಡಿಸಿದ ಸಿಗ್ನಲ್ ವ್ಯವಸ್ಥೆ ಅವೈಜ್ಞಾನಿಕ.
– ಬಿಜೈ ಮ್ಯೂಸಿಯಂ ಬಸ್‌ ತಂಗುದಾಣದಲ್ಲಿ ಬಸ್‌ ಶೆಲ್ಟರ್‌ ನಿರ್ಮಿಸಿ.
– ಮಿಲಾಗ್ರಿಸ್‌ ಜಂಕ್ಷನ್‌ನಲ್ಲಿ ಆಟೋ ಚಾಲಕರು ಫುಟ್ಪಾತ್‌ ಬ್ಲಾಕ್‌ ಮಾಡುತ್ತಿದ್ದಾರೆ.
– ಮಂಗಳೂರು- ಕತ್ತಲ್ಸಾರ್‌ (ಬಜಪೆ) ಮಧ್ಯೆ ಸಂಚರಿಸುವ ಸಿಟಿ ಬಸ್‌ (ನಂ. 47ಸಿ) ಎರಡು ಟ್ರಿಪ್‌ಗ್ಳಲ್ಲಿ ಮಾತ್ರ ಕತ್ತಲ್ಸಾರ್‌ಗೆ ಹೋಗುತ್ತಿದ್ದು, ಉಳಿದ ಟ್ರಿಪ್‌ ಕಟ್ ಮಾಡುತ್ತಿದೆ.
– ಕುಂಟಿಕಾನ ಬಳಿ ಎ.ಜೆ. ಆಸ್ಪತ್ರೆ ಎದುರು ವಾಹನಗಳು ಅತಿ ವೇಗವಾಗಿ ಓಡಾಡುತ್ತಿವೆ. – ಮಹಾನಗರ ಪಾಲಿಕೆ ಕಚೇರಿಯ ಮಲೇರಿಯಾ ನಿಯಂತ್ರಣ ಘಟಕದ ಸಿಬಂದಿ ಕಚೇರಿಯಲ್ಲಿಯೇ ಕುಳಿತಿದ್ದು, ಸ್ಥಳ ಭೇಟಿ ಮಾಡುತ್ತಿಲ್ಲ.
– ಗೋರಿಗುಡ್ಡೆಯಲ್ಲಿ ವಾಹನಗಳನ್ನು ಪಾರ್ಕ್‌ ಮಾಡಿ ಮದ್ಯ ಸೇವಿಸುತ್ತಿದ್ದಾರೆ.
– ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರ ದೂರುಗಳ ಸ್ವೀಕಾರ ಮತ್ತು ಇತ್ಯರ್ಥ ಪಡಿಸುವಲ್ಲಿ ತಾರತಮ್ಯ ಎಸಗಲಾಗುತ್ತಿದೆ.

ಸ್ಪೀಡ್‌ ಬ್ರೇಕರ್‌ ಅಳವಡಿಸಿ

ಬಿಜೈ ವೃತ್ತ- ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮಾರ್ಗದಲ್ಲಿ ಸ್ಪೀಡ್‌ ಬ್ರೇಕರ್‌ ಅಳವಡಿಸಬೇಕು ಎಂದು ಸಾರ್ವಜನಿಕರೊಬ್ಬರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸಿಪಿ ಮಂಜುನಾಥ ಶೆಟ್ಟಿ, ಇಲ್ಲಿ ಸ್ಪೀಡ್‌ ಬ್ರೇಕರ್‌ ಮಂಜೂರು ಆಗಿದೆ ಎಂದು ತಿಳಿಸಿದರು. ಆದಷ್ಟು ಬೇಗನೆ ಸ್ಪೀಡ್‌ ಬ್ರೇಕರ್‌ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಆಯುಕ್ತರು ಟ್ರಾಫಿಕ್‌ ಪೊಲೀಸರಿಗೆ ಸೂಚಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next