Advertisement

ಸ್ಮರಣೀಯವಾಗಲಿ ಸಿಎಂ ಗ್ರಾಮವಾಸ್ತವ್ಯ

01:21 PM Mar 04, 2022 | Team Udayavani |

ಸುರಪುರ: ತಾಲೂಕಿನ ದೇವತ್ಕಲ್‌ ಗ್ರಾಮದಲ್ಲಿ ಮಾ.19ರಂದು ಹಮ್ಮಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅವಿಸ್ಮರಣೀಯವಾಗಲಿದ್ದು, ಅದ್ಧೂರಿ ಸಮಾರಂಭದ ಯಶಸ್ವಿಗೆ ಎಲ್ಲ ಇಲಾಖೆ ಅಧಿಕಾರಿಗಳು ಸಹಕರಿಸಬೇಕೆಂದು ಶಾಸಕ ರಾಜುಗೌಡ ತಿಳಿಸಿದರು.

Advertisement

ಇಲ್ಲಿಯ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಸಿಎಂ ಗ್ರಾಮ ವಾಸ್ತವ್ಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೋಟ್ಯಂತರ ವೆಚ್ಚದ ವಿವಿಧ ಕಾಮಗಾರಿಗಳ ಅಡಿಗಲ್ಲು ಮತ್ತು ಉದ್ಘಾಟನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಮಾರಂಭವು ಅಚ್ಚುಕಟ್ಟಾಗಿ ನಡೆಸಲು ವಿವಿಧ ಸಮಿತಿ ರಚಿಸಲಾಗಿದೆ. ಎಲ್ಲ ಇಲಾಖೆ ಅಧಿಕಾರಿಗಳು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ತಾಕೀತು ಮಾಡಿದರು.

ಸಿಎಂ ಗ್ರಾಮ ವಾಸ್ತವ್ಯದ ಕಾರ್ಯಕ್ರಮದ ಜೊತೆಗೆ ಕಂದಾಯ ಸಚಿವ ಆರ್‌. ಅಶೋಕ್‌ ಅವರು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಸಾರ್ವಜನಿಕರ ಕೆಲಸಗಳನ್ನು ಪೂರ್ತಿಗೊಳಿಸಿ ಅನುಕೂಲ ಮಾಡಿಕೊಡಬೇಕು ಎಂದು ನಿರ್ದೇಶನ ನೀಡಿದರು.

ಸಮಾರಂಭದಲ್ಲಿ ಸಾರ್ವಜನಿಕರಿಗೆ ಆಸನ, ಕುಡಿವ ನೀರು ಮತ್ತು ಊಟದ ವ್ಯವಸ್ಥೆ ಅಸ್ತವ್ಯಸ್ತ ಆಗಬಾರದು. ಜಿಲ್ಲಾಧಿಕಾರಿಗಳು ಈಗಾಗಲೇ ಸಮಿತಿ ರಚನೆ ಮಾಡಿ ಜವಾಬ್ದಾರಿಗಳನ್ನು ನಿರ್ವಹಿಸಲು ಸೂಚಿಸಿದ್ದಾರೆ. ಆ ರೀತಿಯಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲನೆ ಮಾಡಬೇಕು. ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇದ್ದರೆ ಟ್ಯಾಂಕರ್‌ ನೀರು ಸರಬರಾಜು ಮಾಡುವಂತೆ ಕಟ್ಟುನಿಟ್ಟಾಗಿ ಸೂಚಿಸಿದರು.

ಸುರಪುರ ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ, ಹುಣಸಗಿ ತಹಶೀಲ್ದಾರ್‌ ಅಶೋಕ ಸುರಪುರಕರ್‌, ತಾಪಂ ಆಡಳಿತಾಧಿಕಾರಿ ಅಬೀದ್‌, ತಾಪಂ ಇಒ ಅಮರೇಶ, ಹುಣಸಗಿ ತಾಲೂಕಾ ಪಂಚಾಯಿತಿ ಇಒ ಪ್ರಕಾಶ ದೇಸಾಯಿ ವೇದಿಕೆಯಲ್ಲಿದ್ದರು. ಜಿಲ್ಲಾ ಮತ್ತು ತಾಲೂಕು ಮಟ್ಟದ ಅನುಷ್ಠಾನಾಧಿಕಾರಿಗಳಿದ್ದರು.

Advertisement

ಸುಮಾರು 705 ಕೋಟಿ ವೆಚ್ಚದ ಬೂದಿಹಾಳ-ಪೀರಾಪುರ ಏತ ನೀರಾವರಿ, ಪಿಡಬ್ಲೂ Âಡಿ ಇಲಾಖೆಯ 70 ಕೋಟಿ ವೆಚ್ಚದ 28 ಕಾಮಗಾರಿಗಳು, ಜಿಪಂನ 11.70 ಕೋಟಿ ವೆಚ್ಚದ 6 ಕಾಮಗಾರಿಗಳು, ಸಣ್ಣ ನೀರಾವರಿ ಇಲಾಖೆಯ 4 ಅಡಿಗಲ್ಲು 7.11 ಕೋಟಿ ಮೊತ್ತ, ಜೆಸ್ಕಾಂನ 8 ಕಾಮಗಾರಿ, ಜೆಜೆಎಂನ 50 ಲಕ್ಷ ಕಾಮಗಾರಿ, ಚೌಡೇಶ್ವರಿಹಾಳ ರಸ್ತೆ ಕಾಮಗಾರಿಗೆ ಅಡಿಗಲ್ಲು ನೆರವೇರಲಿದೆ. 12.26 ಕೋಟಿಯ ಬೆಳಕು ಯೋಜನೆ, ನಾರಾಯಣಪುರ, ಹುಣಸಗಿ ಪಿಯುಸಿ ಕಾಲೇಜು, ಬಿಸಿಎಂ ಇಲಾಖೆ 2 ಕಟ್ಟಡ, ಕಕ್ಕೇರಾ ಆಸ್ಪತ್ರೆ, ಹುಣಸಗಿ ರೈತ ಸಂಪರ್ಕ ಕೇಂದ್ರ ಉದ್ಘಾಟನೆ ನಡೆಯಲಿದೆ. ಹುಣಸಗಿ ಆಶ್ರಯ ಯೋಜನೆ 13 ಎಕರೆ ನಿವೇಶನ ಮಂಜೂರು, 41 ತ್ರಿಚಕ್ರ ವಾಹನ, ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ 150 ಲ್ಯಾಪ್‌ ಟ್ಯಾಪ್‌ ವಿತರಣೆ ನಡೆಯಲಿದೆ.

ಯಾವ್ಯಾವ ಇಲಾಖೆಯಲ್ಲಿ ಏನೆಲ್ಲ ಸೌಲಭ್ಯಗಳಿವೆ ಎಂಬುದು ಸಾರ್ವಜನಿಕರ ಗಮನಕ್ಕೆ ಬರಬೇಕು. ಈ ನಿಟ್ಟಿನಲ್ಲಿ ತೋಟಗಾರಿಕೆ, ಕೃಷಿ, ಸಿಡಿಪಿಒ ಇನ್ನಿತರ ಇಲಾಖೆಯವರು ಸ್ವಾಲ್‌ ಹಾಕಿ ಜನರಿಗೆ ಮಾಹಿತಿ ನೀಡಬೇಕು. ಸಾವಯವ ಕೃಷಿ, ಮೀನು ಸಾಕಾಣಿಕೆ ಬಗ್ಗೆ ತಿಳಿಸಬೇಕು. ಸರಕಾರದ ಪ್ರತಿಯೊಂದು ಯೋಜನೆಗಳು ಜನರಿಗೆ ಗೊತ್ತಾಗಬೇಕು ಎಂಬುದು ನಮ್ಮ ಉದ್ದೇಶ. -ರಾಜುಗೌಡ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next