Advertisement

ಪಕ್ಷನಿಷ್ಠೆ ತೋರಿ, ಇಲ್ಲವೇ ಹೊರಹೋಗಿ

05:34 PM Nov 25, 2020 | Mithun PG |

ಬೀದರ(ಬಸವಕಲ್ಯಾಣ): ಚುನಾವಣೆ ಟಿಕೆಟ್‌ ಆಕಾಂಕ್ಷಿಗಳು ವೈಯಕ್ತಿಕ ಆಸೆಯಿಂದ ಹೊರಬಂದು ಪಕ್ಷ ಪರ ನಿಷ್ಠೆಯನ್ನು ತೋರಿಸಿ. ಇಲ್ಲವಾದರೆ ಕಾಂಗ್ರೆಸ್‌ ಪಕ್ಷ ನಾಶ ಆಗುತ್ತದೆ. ಇದಕ್ಕೆ ಅವಕಾಶ ಕೊಡಬೇಡಿ. ಅಗೌರವ ತೋರುವವರು ಪಕ್ಷ ಬಿಟ್ಟು ಹೊರ ಹೋಗಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಎಚ್ಚರಿಕೆ ನೀಡಿದರು.

Advertisement

ಬಸವಕಲ್ಯಾಣದ ಎಂಎಂ ಬೇಗ್‌ ಕಲ್ಯಾಣ ಮಂಟಪದಲ್ಲಿ ಉಪ ಚುನಾವಣೆ ಹಿನ್ನೆಲೆ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸುವುದು ಪ್ರತಿಯೊಬ್ಬರು ಹಕ್ಕು. ಎಲ್ಲ ಆಕಾಂಕ್ಷಿಗಳು ಅರ್ಹರೆ. ಆದರೆ, ಟಿಕೆಟ್‌ ಸಿಗುವುದು ಒಬ್ಬರಿಗೆ ಮಾತ್ರ. ಟಿಕೆಟ್‌ ವಿಷಯದಲ್ಲಿ ಯಾವುದೇ ಜಾತಿ ಅಥವಾ ಶಿಫಾರಸ್ಸಿಗೆ ನಾನು ಬಗ್ಗಲ್ಲ. ಹಿರಿಯ ಮುಖಂಡರು, ಆಯ್ಕೆ ಸಮಿತಿಯೊಂದಿಗೆ ಚರ್ಚಿಸಿ ಒಮ್ಮತ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಹೇಳಿದರು.

ಟಿಕೆಟ್‌ಗಾಗಿ ಆಕಾಂಕ್ಷಿಗಳ ಪೈಪೋಟಿ ಸಹಜ. ಪ್ರತಿಯೊಬ್ಬರಿಗೂ ಅಭ್ಯರ್ಥಿ ಆಗಬೇಕೆಂಬ ಆಸೆ ಇರುತ್ತದೆ. ಆದರೆ, ಪಕ್ಷ ಅಂತ ಬಂದಾಗ ಎಲ್ಲರೂ ನಿಷ್ಠೆಯಿಂದ ಕೆಲಸ ಮಾಡಬೇಕು. ಪಕ್ಷ ವಹಿಸುವ ಜವಾಬ್ದಾರಿಯನ್ನು ಕಾಂಗ್ರೆಸ್‌ ಅಭ್ಯರ್ಥಿ ಪರ ಮತಗಳ ಮೂಲಕ ಲೀಡ್‌ ತಂದುಕೊಡಬೇಕು. ಇದರಿಂದ ನಾಯಕತ್ವ ಬೆಳೆಯುತ್ತದೆ ಮತ್ತು ನಂತರ ಅಧಿಕಾರ ಮನೆ ಬಾಗಿಲಿಗೆ ಹುಡುಕಿಕೊಂಡು ಬರುತ್ತದೆ ಎಂದು ಸಲಹೆ ನೀಡಿದರು.

ಬಸವಕಲ್ಯಾಣ ಉಪ ಚುನಾವಣೆ ಭಗವಂತನ ಲೀಲೆ. ಕ್ಷೇತ್ರದಲ್ಲಿ ಜನ ನಾಯಕರು ಎನಿಸಿಕೊಂಡಿದ್ದ ದಿ| ಶಾಸಕ ಬಿ. ನಾರಾಯಣರಾವ್‌ ಅವರು ಕಾರ್ಯಕರ್ತರಿಗೆ ಯಾವುದೇ ಕಳಂಕ ತರದೇ ದೇವರ ಪಾದ ಸೇರಿದ್ದು, ಶ್ರೀ ಸಾಮಾನ್ಯನ ಮನಸ್ಸಿನಲ್ಲಿ ಅಜರಾಮರಾಗಿ ಉಳಿದಿದ್ದಾರೆ. ಅವರಿಂದ ಖಾಲಿಯಾಗಿರುವ ಸ್ಥಾನವನ್ನು ಮತ್ತೆ ತುಂಬಬೇಕಿದೆ. ಅದಕ್ಕಾಗಿ ಕಾರ್ಯಕರ್ತರು ಒಗ್ಗಟ್ಟಾಗಿ ಪಕ್ಷವನ್ನು ಗೆಲ್ಲಿಸಬೇಕಿದೆ ಎಂದು ಕರೆ ನೀಡಿದರು.

ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ ಮಾತನಾಡಿ, ದಿ| ನಾರಾಯಣರಾವ್‌ ಒಬ್ಬ ಜನಪರ ನಾಯಕರಾಗಿದ್ದರು. ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಅವರ ಸ್ಥಾನವನ್ನು ತುಂಬಿ ಜನರ ಸೇವೆ ಮಾಡಲು ಜನರು ಆಶೀರ್ವದಿಸಬೇಕಿದೆಎಂದು ಹೇಳಿದರು.

Advertisement

ಶಾಸಕ ಅಜಯಸಿಂಗ್‌ ಮಾತನಾಡಿ, ಕಾಂಗ್ರೆಸ್‌ ಜಾತ್ಯತೀತ ಸಿದ್ಧಾಂತ, ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಪಕ್ಷ. ಬಸವಕಲ್ಯಾಣ ಬಸವಣ್ಣನ ಕರ್ಮ ಭೂಮಿ. ಈ ನೆಲದಲ್ಲಿ ಹಣ ಇನ್ನಾವುದೇ ಆಮಿಷ್ಯದ ಮೂಲಕ ಚುನಾವಣೆ ಗೆಲ್ಲುವುದು ಬಿಜೆಪಿಗೆ ಅಸಾಧ್ಯ. ಅರ್ಹ, ಸರ್ವ ಸಮ್ಮತ ಅಭ್ಯರ್ಥಿ ಆಯ್ಕೆ ಆಗಲಿದ್ದು, ಎಲ್ಲರೂ ಭಿನ್ನಾಭಿಪ್ರಾಯ ಮರೆತು ಗೆಲುವಿಗೆ ಶ್ರಮಿಸಬೇಕಿದೆ ಎಂದರು.

ಶಾಸಕ ರಹೀಮ್‌ ಖಾನ್‌ ಮಾತನಾಡಿ, ದಿ| ನಾರಾಯಣರಾವ್‌ ಬಡವರ ಶಾಸಕರಾಗಿದ್ದರು. ಬಸವಕಲ್ಯಾಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ ಬದಲಾವಣೆ ಮಾಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗೆ ಪ್ರತಿಯೊಬ್ಬರು ಸಾಥ್‌ ನೀಡಬೇಕು ಎಂದು ಮನವಿ ಮಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಶರಣಪ್ರಕಾಶ ಪಾಟೀಲ, ರಾಜಶೇಖರ ಪಾಟೀಲ, ಎಂಎಲ್‌ ಸಿಗಳಾದ ವಿಜಯಸಿಂಗ್‌, ಅರವಿಂದ ಅರಳಿ, ಚಂದ್ರಶೇಖರ ಪಾಟೀಲ, ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿ ದತ್ತು ಮೂಲಗೆ, ಪ್ರಮುಖರಾದ ಬಸವವಾಜ ಬುಳ್ಳಾ, ಸಯೀದ್‌ ಅಹ್ಮದ್‌, ತಿಪ್ಪಣ್ಣ ಕಮ್ಮಕನೂರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next